ಭೂಮಿ ಹಿಂಪಡೆಯಲು ಸಚಿವ ಸಂಪುಟ ಉಪಸಮಿತಿ ಒಪ್ಪಿಗೆ ಕಾಂಕ್ರೀಟ್‌ ರಸ್ತೆ ನಿರ್ಮಿಸಿಲ್ಲ, ರಸ್ತೆ ನಿರ್ಮಾಣದಲ್ಲೂ ಲೋಪ ಷರತ್ತಿಗೆ ನೈಸ್‌ ಒಪ್ಪದಿದ್ದರೆ ಜಾಗ ಕೊಟ್ಟಿದ್ದ ರೈತರಿಗೆ ಭೂಮಿ ವಾಪಸ್‌   

ಬೆಂಗಳೂರು(ಏ.26): ರಸ್ತೆಗಾಗಿ ನೈಸ್‌ ಸಂಸ್ಥೆಗೆ ನೀಡಿರುವ ಹೆಚ್ಚುವರಿ ಭೂಮಿಯನ್ನು ಹಿಂಪಡೆಯಲು ಸಚಿವ ಸಂಪುಟ ಉಪಸಮಿತಿ ಸಭೆಯು ಒಪ್ಪಿಗೆ ನೀಡಿದ್ದು, ನವೆಂಬರ್‌ ತಿಂಗಳೊಳಗೆ ಭೂಮಿ ಪಡೆಯಲು ತೀರ್ಮಾನಿಸಲಾಗಿದೆ.ಸೋಮವಾರ ವಿಧಾನಸೌಧದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌, ಕಂದಾಯ ಸಚಿವ ಆರ್‌.ಅಶೋಕ್‌ ಹಾಗೂ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ನೈಸ್‌ ರಸ್ತೆಯಲ್ಲಿ ಕಾಂಕ್ರೀಟ್‌ ರಸ್ತೆಯಾಗಬೇಕಿತ್ತು. ಆದರೆ, ಮಾಡಿಲ್ಲ. ರಸ್ತೆಯ ಹಲವೆಡೆ 20, 30 ಮತ್ತು 60 ಅಡಿ ಉಲ್ಲಂಘನೆಯಾಗಿದೆ. ಜೊತೆಗೆ ಹಿಂದೆ ಹೆಚ್ಚುವರಿ ಭೂಮಿಯನ್ನು ನೀಡಲಾಗಿತ್ತು. ಈ ಎಲ್ಲಾ ಕಾರಣಗಳಿಂದ ಅದನ್ನು ಹಿಂಪಡೆಯಲು ಸಚಿವ ಸಂಪುಟ ಉಪಸಮಿತಿ ಒಪ್ಪಿಗೆ ನೀಡಲಾಯಿತು.

ನೈಸ್ ಸಂಸ್ಥೆ ವಿರುದ್ಧ ಮತ್ತೆ ಸಿಡಿದೆದ್ದ ಎಚ್‌ಡಿ ದೇವೇಗೌಡ, ಗಂಭೀರ ಆರೋಪ

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಸೋಮಶೇಖರ್‌, ನೈಸ್‌ ರಸ್ತೆಗೆ ಹೆಚ್ಚುವರಿಯಾಗಿ ನೀಡಿರುವ 543 ಎಕರೆ ಭೂಮಿ ವಾಪಸ್‌ ಪಡೆದುಕೊಳ್ಳಲಾಗುವುದು. 1,600 ಎಕರೆಯಷ್ಟುಭೂಮಿಯನ್ನು ವಶಪಡಿಸಿಕೊಂಡು ಟೌನ್‌ಶಿಪ್‌ ಮಾಡುತ್ತಿರುವುದು ಕಾನೂನುಬಾಹಿರವಾಗಿದೆ. ಭೂಮಿ ವಶಪಡಿಸಿಕೊಂಡು 20 ವರ್ಷವಾಗಿದೆ. ಈ ಹಿಂದೆ ನಿಗದಿಯಾದ 40 ಲಕ್ಷ ರು. ಪರಿಹಾರಕ್ಕೆ ರೈತರು ಒಪ್ಪಿಲ್ಲ. ಒಂದು ಎಕರೆಗೆ 1.60 ಕೋಟಿ ರು. ಮತ್ತು 60*40 ನಿವೇಶನ ನೀಡಬೇಕು. ರೈತರಿಗೆ ಅನ್ಯಾಯವಾಗಿದೆ. ಷರತ್ತುಗಳಿಗೆ ನೈಸ್‌ ಸಂಸ್ಥೆ ಒಪ್ಪದಿದ್ದರೆ ಭೂಮಿಯನ್ನು ರೈತರಿಗೆ ವಾಪಸ್‌ ನೀಡಲಾಗುವುದು ಅಥವಾ ಸರ್ಕಾರದ ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.

ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌ ಮಾತನಾಡಿ, ನೈಸ್‌ಗೆ ನೀಡಿರುವ 543 ಎಕರೆ ಹೆಚ್ಚುವರಿ ಭೂಮಿ ಇದೆ. 15 ದಿನದಲ್ಲಿ ಮತ್ತೊಂದು ವರದಿ ನೀಡುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಲಾಗಿದೆ. ಆ ವರದಿ ಬಂದ ಬಳಿಕ ಇನ್ನೊಂದು ಸಭೆ ನಡೆಸಿ ಇನ್ನಷ್ಟುತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕಾಂಗ್ರೆಸ್‌-ಜೆಡಿಎಸ್‌ ಪಾಪದ ಕೂಸು:
ಸಚಿವ ಆರ್‌.ಅಶೋಕ್‌ ಮಾತನಾಡಿ, ನೈಸ್‌ ವಿಚಾರವು ಕಾಂಗ್ರೆಸ್‌-ಜೆಡಿಎಸ್‌ನ ಪಾಪದ ಕೂಸು, ಈಗ ಸಾಕಷ್ಟುಸಮಸ್ಯೆ ಸೃಷ್ಟಿಮಾಡಿದೆ. ಆದಷ್ಟುಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸಲಾಗುವುದು. ಜೆಡಿಎಸ್‌ ಯೋಜನೆಯನ್ನು ನೀಡಿದರೆ, ಕಾಂಗ್ರೆಸ್‌ ಎಲ್ಲಾ ರೀತಿಯ ಒಪ್ಪಿಗೆ ನೀಡಿದೆ. ಈಗ ದೊಡ್ಡ ಹೊರೆಯಾಗಿ ಪರಿಣಮಿಸಿದೆ ಎಂದು ಹೇಳಿದರು.

ನೈಸ್‌ ರಸ್ತೆ ಗುಂಡಿ ಮುಚ್ಚಲು ಗಡುವು : ಟೋಲ್‌ ಬಗ್ಗೆಯೂ ಖಡಕ್ ಆದೇಶ

ನೈಸ್‌ ಸಂಸ್ಥೆ ತಾನು ಹೇಳಿದಂತೆ ಕಾಂಕ್ರೀಟ್‌ ರಸ್ತೆ ಮಾಡಿಲ್ಲ. ಕ್ರಾಸ್‌ ರಸ್ತೆಯಲ್ಲಿ ನಿರ್ಮಾಣ ಮಾಡಿದ ಸೇತುವೆಯಲ್ಲಿಯೂ ನಿಯಮ ಉಲ್ಲಂಘನೆ ಮಾಡಲಾಗಿದೆ. ರಸ್ತೆಯ ಹಲವೆಡೆ 20, 30 ಮತ್ತು 60 ಅಡಿಯಂತೆ ಉಲ್ಲಂಘನೆ ಮಾಡಲಾಗಿದೆ. ಹೆಚ್ಚಿನ ಭೂಮಿಯನ್ನು ಸಹ ಪಡೆದುಕೊಳ್ಳಲಾಗಿದೆ. ಎಲ್ಲವು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮಾಡಿಕೊಂಡ ಒಪ್ಪಂದಗಳು. ಹೀಗಾಗಿ ಸರ್ಕಾರ 100 ಕೋಟಿ ರು. ನೀಡಬೇಕು ಎಂಬುದಾಗಿ ನೈಸ್‌ ಹೇಳುತ್ತಿದೆ ಎಂದು ಹೇಳಿದರು.

ನೀಡಿರುವ ಹೆಚ್ಚುವರಿ ಭೂಮಿಯನ್ನು ವಾಪಸ್‌ ಪಡೆಯಲು ಉಪಸಮಿತಿ ಸಭೆ ಒಪ್ಪಿಗೆ ನೀಡಿದೆ. ನವೆಂಬರ್‌ನೊಳಗೆ ಎಲ್ಲಾ ಸಮಸ್ಯೆ ಬಗೆಹರಿಸಬೇಕು. ಮೆಟ್ರೋ ಕಾಮಗಾರಿಗೆ ನೈಸ್‌ನಿಂದ ಆಗುತ್ತಿರುವ ಸಮಸ್ಯೆಯನ್ನು ಸರಿಪಡಿಸಬೇಕಿದೆ. ಟೋಲ್‌ ಸಂಗ್ರಹ ವಿಚಾರದಲ್ಲಿ ನಿಯಂತ್ರಣ ಸರ್ಕಾರಕ್ಕೆ ಸಿಗಬೇಕು. ಇವೆಲ್ಲಾ ವಿಷಯಗಳು ಸೇರಿದಂತೆ ನೈಸ್‌ನ ಎಲ್ಲಾ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.