ಬೆಂಗಳೂರು [ಅ.09]: ಮುಂದಿನ ಒಂದು ವಾರದೊಳಗೆ ನೈಸ್‌ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ನೈಸ್‌ ಸಂಸ್ಥೆಗೆ ಗಡುವು ನೀಡಿದ್ದಾರೆ.

ಹೊಸಕೆರೆಹಳ್ಳಿ ಜಂಕ್ಷನ್‌ನಿಂದ ಸೋಂಪುರ, ಕನಕಪುರ ರಸ್ತೆ, ಬನ್ನೇರುಘಟ್ಟಜಂಕ್ಷನ್‌ ಹಾಗೂ ಹೊಸೂರು ರಸ್ತೆ ಜಂಕ್ಷನ್‌ವರೆಗೆ ಸಂಚಾರ ಮಾಡಿ ರಸ್ತೆಯನ್ನು ಸೋಮವಾರ ಪರಿಶೀಲನೆ ನಡೆಸಿದರು.

ನೈಸ್‌ ರಸ್ತೆ ಗುಂಡಿ ಬಿದ್ದಿರುವುದು, ಪ್ರವೇಶ ಮತ್ತು ನಿರ್ಗಮನ ಸ್ಥಳದಲ್ಲಿ ಟೋಲ್‌ ಪಾವತಿಗಾಗಿ ಹೆಚ್ಚಿನ ಸಮಯ ನಿಲ್ಲಬೇಕಿರುವ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಒಂದು ವಾರದೊಳಗೆ ಗುಂಡಿಗಳನ್ನು ಮುಚ್ಚುವಂತೆ ಸೂಚನೆ ನೀಡಲಾಗಿದೆ. ವಾರದ ಬಳಿಕ ಮತ್ತೊಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಒಂದು ವೇಳೆ ಗುಂಡಿಗಳು ಹಾಗೇ ಉಳಿದಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ನೈಸ್‌ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ಹಾಳಾಗಿದೆ. ಡಾಂಬರೀಕರಣ ಮಾಡಿರುವ ರಸ್ತೆಯಲ್ಲಿ ಟೋಲ್‌ ಪಡೆಯಲಾಗುತ್ತಿದೆ. ಸಂಪೂರ್ಣವಾಗಿ ಕಾಂಕ್ರೀಟ್‌ ರಸ್ತೆ ಮಾಡುವ ತನಕ ಟೋಲ್‌ ಪಡೆಯಬಾರದಿತ್ತು. ಟೋಲ್‌ ಪಡೆಯುತ್ತಿದ್ದರೂ ರಸ್ತೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಆದರೆ, ತಾಂತ್ರಿಕ ಕಾರಣಗಳಿಂದ ಕಾಂಕ್ರೀಟ್‌ ರಸ್ತೆ ಮಾಡಲು ಸಾಧ್ಯವಾಗಿಲ್ಲ. ಸಂಪೂರ್ಣವಾಗಿ ಕಾಂಕ್ರೀಟ್‌ ರಸ್ತೆ ನಿರ್ಮಿಸುವಂತೆಯೂ ಸೂಚನೆ ನೀಡಲಾಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೈಸ್‌ ರಸ್ತೆ ಪ್ರವೇಶ ಹಾಗೂ ನಿರ್ಗಮನದಲ್ಲಿ ಟೋಲ್‌ನಲ್ಲಿ ವಾಹನ ಸವಾರರು ಪ್ರವೇಶ ಪಡೆಯಲು ಹೆಚ್ಚಿನ ಸಮಯ ನಿಲ್ಲಬೇಕಿದೆ. ಟೋಲ್‌ ಪಡೆಯುವವರು ವಿನಾ ಕಾರಣ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಎಲೆಕ್ಟ್ರಾನಿಕ್‌ ಸಿಟಿ ಪ್ರವೇಶ ದ್ವಾರದಲ್ಲಿ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಸಾಕಷ್ಟುತೊಂದರೆಯಾಗುತ್ತಿದೆ. ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ. ದೂರುಗಳ ನಿವಾರಣೆಗೆ ನೈಸ್‌ ಸಂಸ್ಥೆ ಮುಖ್ಯಸ್ಥ ಅಶೋಕ್‌ ಖೇಣಿ ಅವರಿಗೆ ಸೂಚನೆ ನೀಡಲಾಗಿದೆ. ವಾಹನ ದಟ್ಟಣೆ ನಿವಾರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಹಾಗೂ ನೈಸ್‌ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅಶೋಕ್‌ ಖೇಣಿ ಅವರು ಹಾಜರಿದ್ದರು.