Asianet Suvarna News Asianet Suvarna News

2 ಕ್ಷೇತ್ರಗಳಲ್ಲಿ ಮಾತ್ರವೇ ಜೆಡಿಎಸ್‌ ಸ್ಪರ್ಧೆ

ರಾಜ್ಯ ಉಪ ಸಮರಕ್ಕೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಮೂರು ಲೋಕಸಭಾ ಕ್ಷೇತ್ರ, ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೈತ್ರಿಗೆ ಮುಂದಾಗಿರುವ ಜೆಡಿಎಸ್‌ ಪಕ್ಷ, ಎರಡು ಕ್ಷೇತ್ರಗಳಲ್ಲಿ ಮಾತ್ರವೇ ಸ್ಪರ್ಧೆ ಮಾಡಲು ಚಿಂತಿಸಿದ್ದು ಉಳಿದ ಮೂರು ಕ್ಷೇತ್ರಗಳನ್ನು ಕಾಂಗ್ರೆಸ್ ಗೆ  ಬಿಟ್ಟುಕೊಡಲು ತೀರ್ಮಾನಿಸಿದೆ.  

Karnataka By Poll JDS Will Contest Only 2 Constituency
Author
Bengaluru, First Published Oct 9, 2018, 8:25 AM IST

ಬೆಂಗಳೂರು :  ಮೂರು ಲೋಕಸಭಾ ಕ್ಷೇತ್ರ, ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೈತ್ರಿಗೆ ಮುಂದಾಗಿರುವ ಜೆಡಿಎಸ್‌ ಪಕ್ಷ, ಮಂಡ್ಯ ಲೋಕಸಭಾ ಕ್ಷೇತ್ರ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಿ ಇನ್ನುಳಿದ ಶಿವಮೊಗ್ಗ, ಬಳ್ಳಾರಿ ಲೋಸಕಸಭಾ ಕ್ಷೇತ್ರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಬಯಸಿದೆ.

ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ನೇತೃತ್ವದಲ್ಲಿ ಮಂಗಳವಾರ ಸಭೆ ನಡೆಯಲಿದ್ದು, ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಜೊತೆಗೆ ಪಕ್ಷದ ನೂತನ ಪದಾಧಿಕಾರಿಗಳ ನೇಮಕ ಕುರಿತಂತೆಯೂ ಚರ್ಚೆ ನಡೆಯುವ ನಿರೀಕ್ಷೆಯಿದೆ.

ಎರಡು ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಸಂಬಂಧಿಸಿದಂತೆ ರಾಮನಗರದಲ್ಲಿ ಜೆಡಿಎಸ್‌ ಮತ್ತು ಜಮಖಂಡಿಯಲ್ಲಿ ಕಾಂಗ್ರೆಸ್‌ ಸ್ಪರ್ಧಿಸುವುದು ಬಹುತೇಕ ನಿರ್ಧಾರವಾಗಿತ್ತು. ದರೆ, ಮೂರು ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯೇ ಸ್ಪರ್ಧಿಸಬೇಕು ಎಂಬ ನಿಲುವು ಹೊಂದಿರುವ ದೇವೇಗೌಡರು ಬಳ್ಳಾರಿಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವ ಉದ್ದೇಶ ಹೊಂದಿದ್ದರು. ಇದೀಗ ಶಿವಮೊಗ್ಗವನ್ನೂ ಕಾಂಗ್ರೆಸ್ಸಿಗೆ ಬಿಟ್ಟುಕೊಡುವ ಮೂಲಕ ಮೈತ್ರಿಗೆ ಧಕ್ಕೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಗೌಡರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದಕ್ಕೆ ಕಾರಣವೂ ಇದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಯುವ ನಾಯಕ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ಕಣಕ್ಕಿಳಿಸುವ ಬಗ್ಗೆ ವರಿಷ್ಠರು ಗಂಭೀರವಾಗಿ ಆಲೋಚನೆ ನಡೆಸಿದ್ದರು. ಅಲ್ಲದೇ, ಮಧು ಸಹೋದರಿ ಹಾಗೂ ನಟ ಶಿವರಾಜ್‌ಕುಮಾರ್‌ ಪತ್ನಿ ಗೀತಾ ಅವರಿಗೆ ಟಿಕೆಟ್‌ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿತ್ತು. ಆದರೆ, ಈ ಉಪಚುನಾವಣೆಗೆ ಸ್ಪರ್ಧಿಸಲು ಇಬ್ಬರೂ ಹಿಂದೇಟು ಹಾಕಿದ್ದರಿಂದ ಶಿವಮೊಗ್ಗ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವುದು ಬಹುತೇಕ ಖಚಿತವಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಮಧು ಬಂಗಾರಪ್ಪ ಅವರಿಗೆ ಶಾಸಕ ಸ್ಥಾನದ ಮೇಲೆ ಆಸಕ್ತಿ ಇದೆಯೇ ಹೊರತು ಸಂಸದ ಸ್ಥಾನದ ಮೇಲೆ ಇಲ್ಲ. ಸೊರಬ ಕ್ಷೇತ್ರದಲ್ಲಿಯೇ ಸ್ಪರ್ಧಿಸಿ ಗೆಲ್ಲಬೇಕು ಎಂಬ ಮಹತ್ವಾಕಾಂಕ್ಷಿ ಹೊಂದಿದ್ದಾರೆ. ಎಲ್ಲಿ ಸೋತಿದ್ದಾರೋ, ಅಲ್ಲಿಯೇ ಗೆಲ್ಲಬೇಕು ಎಂಬ ಭಾವನೆಯನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದಾರೆ. ಹೀಗಾಗಿ ಲೋಕಸಭೆ ಉಪಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಗೀತಾ ಶಿವರಾಜ್‌ಕುಮಾರ್‌ ಅವರು ಸಹ ಸ್ಪರ್ಧಿಸುವ ಆಸಕ್ತಿ ತೋರಿಲ್ಲ ಎಂದು ಹೇಳಲಾಗಿದೆ.

ಶಿವಮೊಗ್ಗ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರನ್ನು ಕಣಕ್ಕಿಳಿಸಿದರೆ ಜೆಡಿಎಸ್‌ ಬೆಂಬಲ ನೀಡುವ ಉತ್ಸುಕತೆಯಲ್ಲಿದೆ. ಜಿಲ್ಲಾ ಮುಖಂಡರು ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದರಿಂದ ವರಿಷ್ಠರು ಸಹ ಇದಕ್ಕೆ ಸಹಮತ ವ್ಯಕ್ತಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಂಡ್ಯದಿಂದ ಲಕ್ಷ್ಮೀ ಅಶ್ವಿನ್‌ಗೌಡ?

ರಾಮನಗರ ವಿಧಾನಸಭಾ ಕ್ಷೇತ್ರದಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡುವುದು ಖಚಿತವಾಗಿರುವುದರಿಂದ ಮಂಡ್ಯ ಲೋಕಸಭಾ ಕ್ಷೇತ್ರದಿಂದಲೂ ಕುಟುಂಬದವರನ್ನೇ ಕಣಕ್ಕಿಳಿಸಲು ಜೆಡಿಎಸ್‌ ವರಿಷ್ಠ ದೇವೇಗೌಡರು ಹಿಂಜರಿಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸ್ವಯಂ ನಿವೃತ್ತಿ ಪಡೆದಿರುವ ಐಆರ್‌ಎಸ್‌ ಅಧಿಕಾರಿ ಲಕ್ಷ್ಮೀ ಅಶ್ವಿನ್‌ ಗೌಡ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಾಗಿದೆ. ಮೂಲತಃ ನಾಗಮಂಗಲದವರಾಗಿರುವ ಲಕ್ಷ್ಮೀ ಅಶ್ವಿನ್‌ಗೌಡ ಅವರ ತಂದೆಯು ಜೆಡಿಎಸ್‌ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರವಾಗಿ ಓಡಾಟ ನಡೆಸಿ ವರಿಷ್ಠರ ಗಮನ ಸೆಳೆದಿದ್ದರು. 

ಪಕ್ಷದ ವಿರುದ್ಧ ಬಂಡಾಯ ಸಾರಿ ಕಾಂಗ್ರೆಸ್ಸಿಗೆ ವಲಸೆ ಹೋದ ಚಲುವರಾಯಸ್ವಾಮಿ ವಿರುದ್ಧ ಲಕ್ಷ್ಮೀ ಅವರನ್ನೇ ಕಣಕ್ಕಿಳಿಸುವ ಬಗ್ಗೆ ವಿಧಾನಸಭಾ ಚುನಾವಣೆಯಲ್ಲಿ ದಟ್ಟವಾಗಿ ಸುದ್ದಿ ಹಬ್ಬಿತ್ತು. ಆದರೆ, ಕಾಂಗ್ರೆಸ್ಸಿನ ಮಾಜಿ ಶಾಸಕ ಸುರೇಶ್‌ಗೌಡ ಅವರು ಜೆಡಿಎಸ್‌ಗೆ ವಲಸೆ ಬಂದಿದ್ದರಿಂದ ಅವರನ್ನೇ ಅಭ್ಯರ್ಥಿಯನ್ನಾಗಿಸಲಾಯಿತು. ಇದೀಗ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಲಕ್ಷ್ಮೀ ಅವರಿಗೆ ಟಿಕೆಟ್‌ ಒಲಿಯುವ ಸಂಭವವಿದೆ ಎಂದು ತಿಳಿದು ಬಂದಿದೆ.

Follow Us:
Download App:
  • android
  • ios