ಬೆಂಗ​ಳೂರು :  ರಾಜ್ಯ ಸಮ್ಮಿಶ್ರ ಸರ್ಕಾ​ರದ ಸ್ಥಿರತೆ ಮೇಲೆ ಪರೋಕ್ಷ ಪ್ರಭಾವ ಬೀರುವ ನಿರೀಕ್ಷೆ ಹುಟ್ಟಿ​ಸಿ​ರುವ ಉಪ ಚುನಾ​ವ​ಣೆಯ ಫಲಿ​ತಾಂಶದ ಬಗ್ಗೆ ಕಾಂಗ್ರೆ​ಸ್‌​ನಲ್ಲಿ ಭಾರಿ ನಿರೀಕ್ಷೆ ಹಾಗೂ ತಳ​ಮಳ ಹುಟ್ಟಿ​ಕೊಂಡಿ​ದೆ.

ಮೂರು ಲೋಕ​ಸಭೆ ಹಾಗೂ ಎರಡು ವಿಧಾ​ನ​ಸಭಾ ಕ್ಷೇತ್ರ​ಗ​ಳಿಗೆ ನಡೆದ ಉಪ ಚುನಾ​ವ​ಣೆ​ಯಲ್ಲಿ ಕಾಂಗ್ರೆಸ್‌ ತಾನೂ ಸ್ಪರ್ಧಿ​ಸಿ​ರುವ ಜಮ​ಖಂಡಿ ವಿಧಾ​ನ​ಸಭಾ ಕ್ಷೇತ್ರ ಹಾಗೂ ಬಳ್ಳಾರಿ ಲೋಕ​ಸಭಾ ಕ್ಷೇತ್ರದ ಉಪ ಚುನಾ​ವ​ಣೆ​ಯಲ್ಲಿ ಗೆಲ್ಲುವ ವಿಶ್ವಾ​ಸ​ವನ್ನು ಹೊಂದಿದೆ. ಅದೇ ರೀತಿ ಮಿತ್ರ​ಪ​ಕ್ಷ​ವಾದ ಜೆಡಿ​ಎಸ್‌ ರಾಮ​ನ​ಗ​ರ ವಿಧಾ​ನ​ಸಭಾ ಕ್ಷೇತ್ರ ಹಾಗೂ ಮಂಡ್ಯ ಲೋಕ​ಸಭಾ ಕ್ಷೇತ್ರ​ದಲ್ಲಿ ಗೆಲ್ಲುವ ನಿರೀ​ಕ್ಷೆ​ಯನ್ನು ಹೊಂದಿದೆ. ಶಿವ​ಮೊಗ್ಗ ಲೋಕ​ಸಭಾ ಕ್ಷೇತ್ರದ ಫಲಿ​ತಾಂಶ ಮಾತ್ರ ಮೈತ್ರಿ ಕೂಟಕ್ಕೆ ವಿರುದ್ಧ ಹೋಗ​ಬ​ಹುದು ಎಂದೇ ಕಾಂಗ್ರೆಸ್‌ ನಾಯ​ಕರು ಹೇಳು​ತ್ತಾರೆ.

ಅರ್ಥಾತ್‌ ಐದು ಕ್ಷೇತ್ರ​ಗಳ ಉಪ ಚುನಾ​ವ​ಣೆ​ಯಲ್ಲಿ ಕಾಂಗ್ರೆ​ಸ್‌-ಜೆಡಿ​ಎಸ್‌ ಮೈತ್ರಿ ಕೂಟ ನಾಲ್ಕ​ರಲ್ಲಿ ಗೆಲ್ಲುವ ಹಾಗೂ ಒಂದು ಕ್ಷೇತ್ರ​ದಲ್ಲಿ ಬಿಜೆಪಿ ಗೆಲ್ಲ​ಬ​ಹುದು ಎಂಬ ನಿರೀ​ಕ್ಷೆ​ಯನ್ನು ಕಾಂಗ್ರೆಸ್‌ ನಾಯ​ಕರು ಹೊಂದಿ​ದ್ದಾರೆ. ಕುತೂ​ಹ​ಲ​ಕಾರಿ ಸಂಗ​ತಿ​ಯೆಂದರೆ, ಜೆಡಿ​ಎಸ್‌ ಕಣ​ದ​ಲ್ಲಿ​ರುವ ಮಂಡ್ಯ ಹಾಗೂ ರಾಮ​ನ​ಗರ ಕ್ಷೇತ್ರ​ಗಳಲ್ಲಿ ಗೆಲ್ಲುವ ಬಗ್ಗೆ ಕಾಂಗ್ರೆಸ್‌ ನಾಯ​ಕ​ರಿಗೆ ಗಟ್ಟಿವಿಶ್ವಾ​ಸ​ವಿದೆ. ಆದರೆ, ಇಷ್ಟೇ ಆತ್ಮ​ವಿ​ಶ್ವಾಸ ಕಾಂಗ್ರೆಸ್‌ ಸ್ಪರ್ಧಿ​ಗಳು ಕಣ​ದ​ಲ್ಲಿ​ರುವ

ಬಳ್ಳಾರಿ ಹಾಗೂ ಜಮ​ಖಂಡಿ ಕ್ಷೇತ್ರ​ದ ಬಗ್ಗೆ ಇಲ್ಲ. ಈ ಕ್ಷೇತ್ರ ಕಾಂಗ್ರೆಸ್‌ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ನಾಯ​ಕರು ಹೇಳು​ತ್ತಾರೆ. ಆದರೆ, ಶೇ. 100ರಷ್ಟುಆತ್ಮ​ವಿ​ಶ್ವಾಸ ನಾಯ​ಕ​ರಲ್ಲಿ ಕಾಣು​ತ್ತಿಲ್ಲ.

ಜಮ​ಖಂಡಿ ವಿಧಾ​ನ​ಸಭಾ ಕ್ಷೇತ್ರ​ದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆನಂದ್‌ ನ್ಯಾಮಗೌಡ ಅವರ ಗೆಲ್ಲುವ ವಿಶ್ವಾ​ಸ​ವನ್ನು ಕಾಂಗ್ರೆಸ್‌ ನಾಯ​ಕರು ಹೊಂದಿ​ದ್ದಾರೆ. ಆದರೆ, ಈ ಕ್ಷೇತ್ರ​ದಲ್ಲಿ ಭಾರಿ ಪೈಪೋಟಿ ಇತ್ತು ಎಂಬು​ದನ್ನು ಒಪ್ಪಿ​ಕೊ​ಳ್ಳು​ತ್ತಾರೆ. ದಿ. ಸಿದ್ದು​ನ್ಯಾ​ಮ​ಗೌಡ ಅವರು ಪ್ರತಿ​ನಿ​ಧಿ​ಸಿದ್ದ ಈ ಕ್ಷೇತ್ರ​ದಲ್ಲಿ ಅವರ ಪುತ್ರ​ನಿಗೆ ಟಿಕೆಟ್‌ ನೀಡಿ​ರು​ವು​ದ​ರಿಂದ ಅನು​ಕಂಪ ಕಾಂಗ್ರೆಸ್‌ ಪರ​ವಾಗಿ ಕೆಲಸ ಮಾಡಿದೆ ಎಂದು ಹೇಳು​ತ್ತಾರೆ. ಇದೇ ವೇಳೆ ಬಿಜೆ​ಪಿಯ ಶ್ರೀಕಾಂತ್‌ ಪಾಟೀಲ್‌ ಅವರು ಕಳೆದ ಎರಡು ಚುನಾ​ವ​ಣೆ​ಗ​ಳಲ್ಲಿ ಸೋಲುಂಡಿ​ರು​ವುದು ಹಾಗೂ ಇದು ತಮ್ಮ ಕಡೆಯ ಚುನಾ​ವಣೆ ಎಂದು ಅನು​ಕಂಪ ಗಿಟ್ಟಿ​ಸುವ ತಂತ್ರ ಅನು​ಸ​ರಿ​ಸಿ​ದ್ದರು. ಇದ​ರಿಂದ ಕ್ಷೇತ್ರ​ದಲ್ಲಿ ಅನು​ಕಂಪದ ಪೈಪೋಟಿ ನಿರ್ಮಾ​ಣ​ವಾ​ಗಿ​ತ್ತು. ಹೀಗಾಗಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲು​ತ್ತಾರೆ ಎಂಬ ವಿಶ್ವಾ​ಸ​ವನ್ನು ಕಾಂಗ್ರೆಸ್‌ ನಾಯ​ಕರು ಹೊಂದಿ​ದ್ದರೂ ಶೇ. 100ರಷ್ಟುಗೆಲುವು ಖಚಿತ ಎಂಬ ಗಟ್ಟಿವಿಶ್ವಾಸ ವ್ಯಕ್ತ​ಪ​ಡಿ​ಸು​ವು​ದಿ​ಲ್ಲ.

ಈ ಕ್ಷೇತ್ರ​ದಲ್ಲಿ ಕಾಂಗ್ರೆಸ್‌ ಗೆದ್ದರೆ ಅದರ ಶ್ರೇಯಸ್ಸು ಸಹ​ಜ​ವಾ​ಗಿಯೇ ಅಲ್ಲಿ ಹೆಚ್ಚು ಪ್ರಚಾರ ನಡೆ​ಸಿದ ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಹಾಗೂ ಕ್ಷೇತ್ರದ ಉಸ್ತು​ವಾರಿ ಹೊಣೆ ಹೊತ್ತಿದ್ದ ಉಪ ಮುಖ್ಯಮಂತ್ರಿ ಡಾ. ಜಿ. ಪರ​ಮೇ​ಶ್ವರ್‌ ಅವರಿಗೆ ಸಲ್ಲು​ತ್ತದೆ. ಅಕ​ಸ್ಮಾತ್‌ ಫಲಿ​ತಾಂಶ ಉಲ್ಟಾಹೊಡೆದರೆ ಸಹ​ಜ​ವಾ​ಗಿಯೇ ಈ ಇಬ್ಬರು ನಾಯ​ಕ​ರಿಗೆ ಹಿನ್ನಡೆಯಾಗು​ತ್ತದೆ.

ಸರ್ಕಾ​ರದ ಮೇಲೆ​ ವ್ಯತಿ​ರಿಕ್ತ ಪರಿ​ಣಾ​ಮ:  ನಾಯ​ಕರ ಮೇಲಿನ ಪರಿ​ಣಾ​ಮ​ಕ್ಕಿಂತ ಜಮ​ಖಂಡಿ ಕ್ಷೇತ್ರ​ದಲ್ಲಿ ಕಾಂಗ್ರೆಸ್‌ ಒಂದು ಪಕ್ಷ ಸೋಲುಂಡರೆ ಇದು ಬಿಜೆ​ಪಿಗೆ ನೈತಿಕ ಗೆಲುವಾಗಿ ಪರಿ​ಣ​ಮಿ​ಸ​ಲಿದ್ದು, ಅದು ಮೈತ್ರಿ ಕೂಟ ಸರ್ಕಾ​ರದ ಮೇಲೂ ಪರಿ​ಣಾಮ ಬೀರುವ ಸಾಧ್ಯತೆಗಳಿ​ವೆ.

ಬಿಜೆಪಿ ಈ ಕ್ಷೇತ್ರ​ದಲ್ಲಿ ಗೆದ್ದರೆ ಭವಿ​ಷ್ಯ​ದಲ್ಲಿ ಅದು ಆಪ​ರೇ​ಷನ್‌ ಕಮ​ಲಕ್ಕೆ ಮುಂದಾ​ಗ​ಬ​ಹುದು ಎಂಬ ಭೀತಿಯೂ ಕಾಂಗ್ರೆಸ್‌ ನಾಯ​ಕ​ರಿಗೆ ಇದೆ. ಕಾಂಗ್ರೆ​ಸ್‌ನ ಕೆಲ ಭಿನ್ನ​ಮ​ತೀ​ಯರು ಸದ್ಯಕ್ಕೆ ಸುಮ್ಮ​ನಿ​ದ್ದರೂ, ಉಪ ಚುನಾ​ವ​ಣೆ​ಯಲ್ಲಿ ಮೈತ್ರಿ​ಕೂ​ಟ​ವೇ​ನಾ​ದರೂ ಭಾರಿ ಹಿನ್ನಡೆ ಅನು​ಭ​ವಿ​ಸಿ​ದರೆ ಅವರು ಬಿಜೆಪಿ ಪರ ನಿಲ್ಲ​ಬ​ಹುದು ಎಂಬ ಆಶಂಕೆ ಇದೆ.

ಇನ್ನು ಬಳ್ಳಾರಿ ಲೋಕ​ಸಭಾ ಕ್ಷೇತ್ರ​ದಲ್ಲಿ ವಿ.ಎಸ್‌ ಉಗ್ರಪ್ಪ ಅವ​ರು ಈ ಬಾರಿ ಭಾರಿ ಸ್ಪರ್ಧೆ ನೀಡಿದ್ದು, ಕಾಂಗ್ರೆಸ್‌ ಈ ಕ್ಷೇತ್ರ​ದಲ್ಲಿ ಗೆಲ್ಲುವ ಭಾರಿ ನಿರೀ​ಕ್ಷೆ​ಯನ್ನು ಹೊಂದಿದೆ. ಕ್ಷೇತ್ರದ ಶಾಸ​ಕರು ಒಗ್ಗೂಡಿ ಕೆಲಸ ಮಾಡಿ​ರು​ವುದು ಹಾಗೂ ಪ್ರಭಾವಿ ಸಚಿವ ಡಿ.ಕೆ.ಶಿವ​ಕು​ಮಾರ್‌ ತಮ್ಮ ಸಂಪೂರ್ಣ ಸಾಮ​ರ್ಥ್ಯ​ವನ್ನು ಈ ಚುನಾ​ವ​ಣೆಗೆ ಧಾರೆಯೆರೆ​ದಿ​ರು​ವು​ದರ ಪರಿ​ಣಾಮ ಬಿಜೆ​ಪಿಗೆ ಇಲ್ಲಿ ಕಾಂಗ್ರೆಸ್‌ ಭರ್ಜರಿ ಪೈಪೋಟಿ ನೀಡಿದೆ. ಈ ಲೋಕ​ಸಭಾ ಕ್ಷೇತ್ರ​ದಲ್ಲಿ ಕಾಂಗ್ರೆಸ್‌ ಗೆದ್ದರೆ ಸಹ​ಜ​ವಾ​ಗಿಯೇ ಅದು ಉಗ್ರಪ್ಪ ಹಾಗೂ ಶಿವ​ಕು​ಮಾರ್‌ ಅವ​ರಿಗೆ ಭಾರಿ ಶಕ್ತಿ ತುಂಬು​ತ್ತದೆ. ವಿಶೇ​ಷ​ವಾಗಿ ಪಕ್ಷ​ದಲ್ಲಿ ಕೆಲ ನಾಯ​ಕರ ವಿರೋ​ಧದ ನಡು​ವೆಯೂ ಉಗ್ರಪ್ಪ ಅವ​ರಿಗೆ ಟಿಕೆಟ್‌ ದೊರೆ​ಯು​ವಂತೆ ಮಾಡು​ವಲ್ಲಿ ಹಾಗೂ ಪ್ರಚಾ​ರ​ದಲ್ಲಿ ಪ್ರಮುಖ ಪಾತ್ರ ವಹಿ​ಸಿ​ರುವ ಶಿವ​ಕು​ಮಾರ್‌ ಅವ​ರಿಗೆ ಪಕ್ಷದ ಮಟ್ಟ​ದಲ್ಲಿ ದೊಡ್ಡ ಶಕ್ತಿ ಕೊಡು​ತ್ತದೆ. ಅಕ​ಸ್ಮಾತ್‌ ಸೋಲುಂಡರೆ ಸಹ​ಜ​ವಾ​ಗಿಯೇ ಶಿವ​ಕು​ಮಾರ್‌ ಅವ​ರಿಗೆ ಹಿನ್ನ​ಡೆ​ಯಾ​ಗು​ತ್ತದೆ.