ಬೆಂಗಳೂರು :  ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂಬ ಹವಣಿಕೆಯಲ್ಲಿರುವ ಬಿಜೆಪಿ ಪಾಲಿಗೆ ಈ ಐದು ಕ್ಷೇತ್ರಗಳ ಉಪಚುನಾವಣೆ ಮಹತ್ವದ್ದು.

ಒಟ್ಟಾರೆ ಪಕ್ಷಕ್ಕೆ ಹೋಲಿಸಿದರೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ಪಕ್ಷದ ಹಿರಿಯ ಮುಖಂಡ ಬಿ.ಶ್ರೀರಾಮುಲು ಅವರಿಗೆ ಈ ಉಪಚುನಾವಣೆಯ ಫಲಿತಾಂಶ ವೈಯಕ್ತಿಕ ಪ್ರತಿಷ್ಠೆಯ ವಿಚಾರವಾಗಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರು ತಮ್ಮ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿಕೊಳ್ಳುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಿದೆ. ಅದೇ ರೀತಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಶ್ರೀರಾಮುಲು ಅವರು ತಮ್ಮ ಸಹೋದರಿ ಜೆ.ಶಾಂತಾ ಅವರನ್ನು ಗೆಲ್ಲಿಸಿಕೊಳ್ಳುವ ಮೂಲಕ ತಮ್ಮ ವಿರುದ್ಧ ಮುಗಿಬಿದ್ದಿರುವ ಕಾಂಗ್ರೆಸ್‌ ನಾಯಕರಿಗೆ ಉತ್ತರ ನೀಡಬೇಕಿದೆ.

ಹೀಗಾಗಿ, ಬಿಜೆಪಿಯ ಇತರ ನಾಯಕರಿಗೆ ಹೋಲಿಸಿದರೆ ಯಡಿಯೂರಪ್ಪ ಮತ್ತು ಶ್ರೀರಾಮುಲು ಅವರಿಬ್ಬರು ಮಾತ್ರ ಈ ಚುನಾವಣೆಯನ್ನು ಗಂಭೀರವಾಗಿ ಸ್ವೀಕರಿಸಿ ಕೊನೆಯ ಕ್ಷಣದವರೆಗೂ ಪ್ರಯತ್ನ ನಡೆಸಿದ್ದರು. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಒಟ್ಟಾಗಿ ಚುನಾವಣೆ ಎದುರಿಸುವುದರಿಂದ ಅವುಗಳ ವಿರುದ್ಧ ಗೆಲ್ಲುವುದು ಸುಲಭದ ಮಾತೇನಲ್ಲ. ಆಡಳಿತದಲ್ಲಿರುವ ಪಕ್ಷಗಳಿಗೆ ಉಪಚುನಾವಣೆಯಲ್ಲಿ ಹೆಚ್ಚು ಗೆಲುವು ಒಲಿಯುವುದು ಹಿಂದಿನ ಉಪಚುನಾವಣೆಗಳನ್ನು ಗಮನಿಸಿದರೆ ಕಂಡು ಬರುತ್ತದೆ. ಆದರೂ ಒಂದು ವೇಳೆ ಶಿವಮೊಗ್ಗ ಮತ್ತು ಬಳ್ಳಾರಿ ಕ್ಷೇತ್ರಗಳಲ್ಲಿ ಸೋತಲ್ಲಿ ಪಕ್ಷದ ಹೈಕಮಾಂಡ್‌ ದೃಷ್ಟಿಯಲ್ಲಿ ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರ ಸಾಮರ್ಥ್ಯದ ಬಗ್ಗೆ ತುಸು ಅನುಮಾನ ಮೂಡುವುದಂತೂ ನಿಶ್ಚಿತ.

ಈ ಚುನಾವಣೆಯ ಸೋಲು ಗೆಲುವಿನ ಮೇಲೆ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷರಾಗಿರುವ ಯಡಿಯೂರಪ್ಪ ಅವರ ಬಲ ನಿರ್ಧಾರವಾಗಲಿದೆ. ಗೆದ್ದರೆ ಯಡಿಯೂರಪ್ಪ ಅವರೇ ಮಾತೇ ಮುಂದಿನ ಚುನಾವಣೆಯಲ್ಲೂ ನಡೆಯುತ್ತದೆ. ಒಂದು ಸ್ಥಾನವನ್ನೂ ಬಿಜೆಪಿ ಗೆಲ್ಲದಿದ್ದರೆ ಯಡಿಯೂರಪ್ಪ ಅವರ ಓಟಕ್ಕೆ ಬ್ರೇಕ್‌ ಬೀಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂಬ ಮಾತು ಬಿಜೆಪಿ ಪಾಳೆಯದಿಂದ ಕೇಳಿಬರುತ್ತಿದೆ.