ಮಾರ್ಚ್‌ನಲ್ಲಿ  16ನೇ ಬಜೆಟ್ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ, ಗುರುವಾರದಿಂದ ಇಲಾಖಾವಾರು ಪೂರ್ವಭಾವಿ ಸಭೆ ಆರಂಭಿಸಿದ್ದಾರೆ. ಮೊದಲ ದಿನ ಒಂಬತ್ತು ಗಂಟೆಗಳ ಕಾಲ 13 ಇಲಾಖೆಗಳ ಹೊಸ ಯೋಜನೆ, ಅನುದಾನ ಬೇಡಿಕೆಗಳನ್ನು ಪರಿಶೀಲಿಸಿದರು. ನಿವಾಸದಲ್ಲೇ ಸಭೆ ನಡೆಸಿದ ಸಿಎಂ, ಸಚಿವರು ಹಾಗೂ ಅಧಿಕಾರಿಗಳಿಂದ ಪ್ರಸ್ತಾವನೆಗಳನ್ನು ಸ್ವೀಕರಿಸಿದರು. ಫೆಬ್ರವರಿ ೧೪ರವರೆಗೆ ಇಲಾಖಾವಾರು ಸಭೆಗಳು ಮುಂದುವರಿಯಲಿವೆ.

ಬೆಂಗಳೂರು (ಫೆ.7): ಕೇಂದ್ರ ಬಜೆಟ್‌ ಘೋಷಣೆ ಮುಗಿದ ಬೆನ್ನಲ್ಲೇ ರಾಜ್ಯ ಬಜೆಟ್ ಮಂಡಿಸಲು ಕಾಂಗ್ರೆಸ್ ಸರ್ಕಾರ ಭರ್ಜರಿ ಸಿದ್ದತೆ ನಡೆಸುತ್ತಿದೆ. ಮುಂದಿನ ತಿಂಗಳು ಮಾರ್ಚ್‌ನಲ್ಲಿ ದಾಖಲೆಯ 16ನೇ ಬಜೆಟ್‌ ಮಂಡಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗುರುವಾರದಿಂದ ಇಲಾಖಾವಾರು ಬಜೆಟ್‌ ಪೂರ್ವಭಾವಿ ಸಭೆ ಆರಂಭಿಸಿದ್ದಾರೆ. ಮೊದಲ ದಿನ ಒಂಬತ್ತು ಗಂಟೆಗೂ ಹೆಚ್ಚು ಕಾಲ 13 ಇಲಾಖೆಗಳಿಗೆ ಸಂಬಂಧಿಸಿದ ಹೊಸ ಯೋಜನೆಗಳ ಪ್ರಸ್ತಾವನೆ ಮತ್ತು ಅನುದಾನ ಬೇಡಿಕೆಗಳನ್ನು ಪರಿಶೀಲಿಸಿದರು.

ಸ್ನಾನಗೃಹದಲ್ಲಿ ಜಾರಿದ ಪರಿಣಾಮ ಕಂಡುಬಂದ ಮಂಡಿನೋವಿಗೆ ಚಿಕಿತ್ಸೆ ಪಡೆದ ಬಳಿಕ ವೈದ್ಯರ ಸಲಹೆಯಂತೆ ಅಧಿಕೃತ ನಿವಾಸ ಕಾವೇರಿಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ಮುಖ್ಯಮಂತ್ರಿ ಅವರು, ತಮ್ಮ ನಿವಾಸದಲ್ಲೇ ಬಜೆಟ್‌ ಪೂರ್ವಭಾವ ಸಭೆ ಶುರು ಮಾಡಿದ್ದಾರೆ.

ಜಾತಿ, ಧರ್ಮ, ಭಾಷೆ ಬಗ್ಗೆ ದ್ವೇಷದ ಮಾತಾಡಿದ್ರೆ 3 ವರ್ಷ ಜೈಲು ಶಿಕ್ಷೆ!

ಬೆಳಗ್ಗೆ 11.15ಕ್ಕೆ ಆರಂಭಗೊಂಡ ಸಭೆ ಸಂಜೆ 7.45ಕ್ಕೆ ಮುಕ್ತಾಯಗೊಂಡಿದೆ. ನಡುವೆ ಮಧ್ಯಾಹ್ನ ಅರ್ಧ ಮುಕ್ಕಾಲು ಗಂಟೆ ಊಟಕ್ಕೆ ವಿರಾಮ ನೀಡಿದ್ದು ಬಿಟ್ಟರೆ ಉಳಿದ ಸಮಯದಲ್ಲಿ ನಿಗದಿಯಾಗಿದ್ದ ಎಲ್ಲಾ 12 ಇಲಾಖೆಗಳ ಸಭೆಯನ್ನು ಒಂದರ ನಂತರ ಒಂದರಂತೆ ನಡೆಸಿ ಮುಗಿಸಿದರು.

ನಿಗದಿಯಂತೆ ಮೊದಲು ಗೃಹ ಅಥವಾ ಒಳಾಡಳಿತ ಇಲಾಖೆ, ನಂತರ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ, ಸಣ್ಣ ಕೈಗಾರಿಕೆ, ಇಂಧನ, ಕಾರ್ಮಿಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ, ವಿಶೇಷ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಸಹಕಾರ, ರೇಷ್ಮೆ, ಪಶುಸಂಗೋಪನಾ ಇಲಾಖೆಗಳಿಗೆ ಸಂಬಂಧಿಸಿದ ಸಭೆಗಳನ್ನು ನಡೆಸಿದರು.

ಗ್ಯಾರಂಟಿಗಳಿಂದಾಗಿ ಕರ್ನಾಟಕ ಸರ್ಕಾರದಲ್ಲಿ ದುಡ್ಡಿಲ್ಲ ಎಂದ ನಿರ್ಮಲಾ ವಿರುದ್ಧ ಮುಗಿಬಿದ್ದ ಕಾಂಗ್ರೆಸ್‌!

ಪ್ರತಿ ಇಲಾಖೆಗೆ ಸುಮಾರು 30 ನಿಮಿಷಗಳ ಸಮಯಾವಕಾಶ ನೀಡಲಾಗಿತ್ತು. ಡಾ.ಜಿ.ಪರಮೇಶ್ವರ್‌, ಎಂ.ಬಿ.ಪಾಟೀಲ್‌, ಸತೀಶ್‌ ಜಾರಕಿಹೊಳಿ, ಕೆ.ಜೆ.ಜಾರ್ಜ್‌, ಮಧು ಬಂಗಾರಪ್ಪ, ಕೆ.ಎಚ್‌.ಮುನಿಯಪ್ಪ, ಕೆ.ಎನ್‌.ರಾಜಣ್ಣ, ಕೆ.ವೆಂಕಟೇಶ್‌ ಸೇರಿ ಸಂಬಂಧಪಟ್ಟ ಇಲಾಖಾ ಸಚಿವರ ಸಮ್ಮುಖದಲ್ಲಿ ಉನ್ನತ ಅಧಿಕಾರಿಗಳು ತಮ್ಮ ಇಲಾಖೆಗೆ ಮುಂದಿನ ಬಜೆಟ್‌ನಲ್ಲಿ ಘೋಷಿಸಬಹುದೆಂದು ಸಿದ್ಧಪಡಿಸಿಕೊಂಡು ಬಂದಿದ್ದ ಹೊಸ ಯೋಜನೆಗಳು ಹಾಗೂ ಅವುಗಳಿಗೆ ಪೂರಕವಾದ ಅನುದಾನ, ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗಳ ಅನುಷ್ಠಾನ, ಹಾಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಬೇಕಿರುವ ಅನುದಾನ, ಬಾಕಿ ಬಿಲ್ಲುಗಳನ್ನು ನೀಡಲು ಅಗತ್ಯವಿರುವ ಹಣ ಹೀಗೆ ಅಗತ್ಯ ಪ್ರಸ್ತಾವನೆ, ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದೆ ಇಟ್ಟರು. ಇದನ್ನು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿಗಳು ಸಭೆಯಲ್ಲಿ ಹಾಜರಿದ್ದ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಪರಿಶೀಲಿಸಲು ಸೂಚನೆ ನೀಡಿದರು ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.

ಫೆ.7ರಂದೂ ಸಭೆ: 2ನೇ ದಿನವಾದ ಶುಕ್ರವಾರ ಸಮಾಜ ಕಲ್ಯಾಣ, ಯೋಜನೆ, ಕಾರ್ಯಕ್ರಮ, ಸಂಯೋಜನೆ ಹಾಗೂ ಸಾಂಖ್ಯಿಕ, ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ, ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ, ಕಂದಾಯ, ಕೃಷಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್‌, ವಸತಿ ಇಲಾಖೆಗಳಿಗೆ ಸಂಬಂಧಿಸಿದ ಬಜೆಟ್‌ ಪೂರ್ವಸಭಾವಿ ಸಭೆಯನ್ನು ಸಿಎಂ ನಡೆಸುತ್ತಿದ್ದಾರೆ. 

ಫೆ. 8 ರಂದು ಶನಿವಾರ ಬೆಳಗ್ಗೆ 11 ರಿಂದ ಸಂಜೆ 7 ಗಂಟೆವರೆಗೆ, ಫೆ.10 ರಂದು ಸೋಮವಾರ ಸಂಜೆ 4 ರಿಂದ ರಾತ್ರಿ 7.30 ವರೆಗೆ ಹಾಗೂ ಫೆ.14 ರಂದು ಸಂಜೆ 4 ರಿಂದ ಸಂಜೆ 6 ಗಂಟೆವರೆಗೆ ಸಭೆಗಳನ್ನು ಹಮ್ಮಿಕೊಂಡಿದ್ದಾರೆ. ಎಲ್ಲಾ ಸಭೆಗಳಲ್ಲಿ ಉಪ ಮುಖ್ಯಮಂತ್ರಿ, ಸಂಬಂಧಪಟ್ಟ ಇಲಾಖೆ ಸಚಿವರು, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಲಾಖೆ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಸೇರಿ ಪ್ರತಿ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಐದು ಮಂದಿ ಮೀರದಂತೆ ಭಾಗವಹಿಸಲು ಸೂಚನೆ ನೀಡಿದ್ದಾರೆ.