ಬೆಂಗಳೂರು[ಫೆ.03]: ಭೂಗತ ಪಾತಕಿ ರವಿ ಪೂಜಾರಿ ಬಂಧನವು ಸಮ್ಮಿಶ್ರ ಸರ್ಕಾದ ಯಶಸ್ಸು ಎಂಬ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ‘ಅಣ್ಣಾ ಕುಮಾರಣ್ಣ, ರವಿ ಪೂಜಾರಿಯನ್ನು ಬಂಧಿಸಿದ್ದು ನಾವೇ ಎಂದು ಕೀರ್ತಿ ಪಡೆಯುವ ಮೊದಲು ಕಂಪ್ಲಿ ಶಾಸಕ ಗಣೇಶ್‌ ಅವರನ್ನು ಬಂಧಿಸಿ ನಿಮ್ಮ ಪೌರುಷ ತೋರಿಸಿ’ ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

ಸೆನೆಗಲ್‌ನಲ್ಲಿ ಭೂಗತ ಪಾತಕಿ ರವಿ ಪೂಜಾರಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಅದರ ಯಶಸ್ಸನ್ನು ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಿದ್ದಾರೆ. ಉಗ್ರಗಾಮಿ ಬಿನ್‌ಲಾಡೆನ್‌ನನ್ನು ಅಮೆರಿಕ ಹತ್ಯೆ ಮಾಡಿದ್ದರ ಯಶಸ್ಸನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಪಡೆದುಕೊಂಡಂತೆ ಈಗ ರವಿ ಪೂಜಾರಿಯನ್ನು ಸೆನೆಗಲ್‌ ಪೊಲೀಸರು ಬಂಧಿಸಿದ್ದರ ಯಶಸ್ಸನ್ನು ಕುಮಾರಸ್ವಾಮಿ ಪಡೆದುಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.

ಆನಂದ್‌ ಸಿಂಗ್‌ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಗಣೇಶ್‌ರನ್ನು ಸರ್ಕಾರ ಬಂಧಿಸಿಲ್ಲ. ಮೊದಲು ಎಚ್ಚರಕೊಂಡು ಕರ್ನಾಟಕದಲ್ಲಿ ಅಪರಾಧಗಳನ್ನು ನಿಯಂತ್ರಿಸಬೇಕು. ಸರ್ಕಾರ ನಡೆಸುವುದು ಎಂದರೆ ಸಿನಿಮಾ ನಿರ್ಮಿಸಿದಂತೆ ಅಲ್ಲ ಎಂದೂ ಕಿಡಿಕಾರಿದೆ.