ಗಲಭೆ ಕೇಸ್‌ ಹಿಂಪಡೆದರೆ ಹೋರಾಟ, ಗಲಭೆಕೋರರನ್ನು ಅಮಾಯಕರು ಎನ್ನುವುದು ಅಪಾಯಕಾರಿ, ಬೊಮ್ಮಾಯಿ, ಯತ್ನಾಳ್‌, ಸುನಿಲ್‌, ರವಿ ಆಕ್ರೋಶ

ಬೆಂಗಳೂರು(ಜು.27): ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದ ಗಲಭೆ ಪ್ರಕರಣಗಳನ್ನು ಹಿಂಪಡೆಯಲು ಪರಿಶೀಲಿಸುವ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಟಿಪ್ಪಣಿಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪ್ರಕರಣಗಳ ಆರೋಪಿಗಳನ್ನು ಅಮಾಯಕರು ಎನ್ನುವ ಪರಿಸ್ಥಿತಿಗೆ ಬಂದಿರುವುದು ನಿಜಕ್ಕೂ ಅಪಾಯಕಾರಿ ಎಂದು ಹರಿಹಾಯ್ದಿದೆ. ಅಲ್ಲದೇ, ಗಲಭೆಕೋರರ ಪ್ರಕರಣ ಹಿಂಪಡೆದರೆ ತೀವ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ವಿ.ಸುನಿಲ್‌ಕುಮಾರ್‌, ಸಿ.ಟಿ.ರವಿ, ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ರವಿಕುಮಾರ್‌ ಸೇರಿದಂತೆ ಇತರರು ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಬೊಮ್ಮಾಯಿ ಮಾತನಾಡಿ, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಸೇರಿದಂತೆ ಇತರೆಡೆಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ದಂಗೆ ಎದ್ದವರ ರಕ್ಷಣೆಗೆ ಸರ್ಕಾರ ಮುಂದಾಗಿರುವುದು ರಾಜ್ಯದ ಜನತೆಗೆ ಮಾಡುವ ದ್ರೋಹವಾಗಿದೆ. ಅಲ್ಲದೇ, ದಲಿತ ಶಾಸಕನ ಮನೆ ಸುಟ್ಟವರ ರಕ್ಷಣೆ ಮಾಡುವುದು ಕಾಂಗ್ರೆಸ್‌ನ ದಲಿತ ವಿರೋಧಿ ನೀತಿಯಾಗಿದೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಪ್ರಕರಣ ಬಹಳ ಗಂಭೀರವಾಗಿದ್ದು, ಪ್ರಕರಣದಲ್ಲಿ ಪೊಲೀಸ್‌ ಠಾಣೆ, ಪೊಲೀಸ್‌ ವಾಹನಗಳು, ಕಾಂಗ್ರೆಸ್‌ ಶಾಸಕನ ಮನೆ ಸುಟ್ಟಿದ್ದಾರೆ. ಇದು ರಾಜ್ಯ ಸರ್ಕಾರದ ವಿರುದ್ಧದ ದಂಗೆಯಾಗಿದೆ. ಎನ್‌ಐಎ ತನಿಖೆ ನಡೆಸುತ್ತಿರುವ ಈ ಪ್ರಕರಣವನ್ನು ಹೇಗೆ ವಾಪಸ್‌ ಪಡೆಯಲಾಗುತ್ತದೆ? ಮುಖ್ಯಮಂತ್ರಿಗಳಿಗೂ ಕೆಲವು ಸಂಘಟನೆಗಳು ಪ್ರಕರಣಗಳನ್ನು ವಾಪಸ್‌ ಪಡೆಯುವಂತೆ ಒತ್ತಡ ಹೇರುತ್ತಿವೆ ಎಂಬ ಮಾಹಿತಿ ಇದೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಸ್ಪಷ್ಟನಿಲುವಿನೊಂದಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಕಿ ಹಚ್ಚಿದವರ ಬೆನ್ನಿಗೆ ನಿಂತರಾ ಡಿಸಿಎಂ ಡಿಕೆಶಿ? ಪ್ರಭಾವಿ ಸಚಿವರ ಆಪ್ತರ ರಕ್ಷಣೆಗೆ ಮುಂದಾಯ್ತಾ ಸರ್ಕಾರ..?

ಮುಸ್ಲಿಮರ ಓಲೈಕೆ- ಯತ್ನಾಳ:

ಟ್ವೀಟ್‌ ಮೂಲಕ ಆಕ್ರೋಶ ಹೊರಹಾಕಿರುವ ಶಾಸಕ ಯತ್ನಾಳ, ಈ ಹಿಂದೆ ಇವರದ್ದೇ ಸರ್ಕಾರ ಇದ್ದಾಗ ಪಿಎಫ್‌ಐ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ವಾಪಸ್‌ ಪಡೆದು ರಾಜ್ಯದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಲು ಪ್ರಚೋದನೆ ನೀಡಿದ್ದರು. ಯಾರದ್ದೋ ಕೃಪೆಯಿಂದ ಕಾಂಗ್ರೆಸ್‌ ಸರ್ಕಾರ ಬಂದಿದೆ ಎಂದು ಹೇಳಿದ್ದ ಗೃಹ ಸಚಿವರು, ಈಗ ಮುಸ್ಲಿಮರನ್ನು ಓಲೈಸಲು ಈ ಹುಚ್ಚು ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಟೀಕಿಸಿದ್ದಾರೆ.

ಸುನಿಲ್‌ ಕುಮಾರ್‌ ಮಾತನಾಡಿ, ಗಲಭೆ ಪ್ರಕರಣಗಳನ್ನು ವಾಪಸ್‌ ಪಡೆಯುವ ತೀರ್ಮಾನ ಖಂಡನೀಯವಾದುದು. ಯಾವುದೇ ಕಾರಣಕ್ಕೂ ಪ್ರಕರಣಗಳನ್ನು ವಾಪಸ್‌ ಪಡೆಯಬಾರದು. ಸರ್ಕಾರ ಮುಸ್ಲಿಂ ಓಲೈಕೆಗಾಗಿ ಸಂವಿಧಾನಬಾಹಿರವಾಗಿ ವರ್ತಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ಕರ್ನಾಟಕದ ಪೊಲೀಸರು ಆಳುವ ಸರ್ಕಾರದ ಆಳುಗಳಂತೆ ವರ್ತಿಸುವುದಕ್ಕೆ ಮುನ್ನ ಅಂದು ನಡೆದ ಬೀಭತ್ಸ ಘಟನೆಯನ್ನು ನೆನಪು ಮಾಡಿಕೊಳ್ಳಬೇಕು. ಉಗ್ರ ಮನಸ್ಥಿತಿಯನ್ನು ವ್ಯಕ್ತಿಗಳಿಗೆ ಅಮಾಯಕರ ಪಟ್ಟಕಟ್ಟಿದೇಶವನ್ನು ಸಿರಿಯಾ ಮಾಡುತ್ತೀರಾ ಎಂದು ಕಿಡಿಕಾರಿದ್ದಾರೆ.

ಸಿ.ಟಿ.ರವಿ ಮಾತನಾಡಿ, ಗಲಭೆ ಪ್ರಕರಣಗಳ ಆರೋಪಿಗಳನ್ನು ಅಮಾಯಕರು ಎನ್ನುವುದು ದೇಶದ ಸಮಗ್ರತೆಗೆ ಧಕ್ಕೆಯಾಗಿದ್ದು, ಇಂತಹ ಮಾನಸಿಕತೆಯನ್ನು ಖಂಡಿಸುತ್ತೇನೆ. ಉಗ್ರ ಚಟುವಟಿಕೆಯಲ್ಲಿ ತೊಡಗಿರುವ ಆರೋಪಿಗಳನ್ನು ರಕ್ಷಣೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ವಿಧಾನಪರಿಷತ್‌ ಸದಸ್ಯ ರವಿಕುಮಾರ್‌ ಮಾತನಾಡಿ, ಗಲಭೆ ಪ್ರಕರಣವು ನ್ಯಾಯಾಲಯದಲ್ಲಿದೆ. ಇಂತಹ ಸಂದರ್ಭದಲ್ಲಿ ಪ್ರಕರಣ ವಾಪಸ್‌ ಪಡೆಯಲು ಸಾಧ್ಯವಿಲ್ಲ. ರಾಜ್ಯ ಸರ್ಕಾರವು ತುಷ್ಟೀಕರಣದ ಪರಮೋಚ್ಚ ಸರ್ಕಾರ ಎಂದು ಟೀಕಿಸಿದರು.

ಕಾಂಗ್ರೆಸ್‌, ಗಲಭೆ ಕೇಸ್‌ನ ಆರೋಪಿಗಳನ್ನು ಕೈಬಿಡಲು ಹೊರಟಿದೆ; ಸಂಸದ ತೇಜಸ್ವಿ ಸೂರ್ಯ

ಹೋರಾಟದ ಎಚ್ಚರಿಕೆ ನೀಡಿದ ಕಟೀಲ್‌:

ಗಲಭೆಕೋರರ ಪ್ರಕರಣಗಳನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದು ಅವರನ್ನು ಬಿಡುಗಡೆ ಮಾಡಿದರೆ ತೀವ್ರ ಹೋರಾಟ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್‌ ಸರ್ಕಾರವು ತುಷ್ಟೀಕರಣ ರಾಜಕಾರಣ, ಮತಬ್ಯಾಂಕ್‌ ರಾಜಕೀಯ ಮಾಡುತ್ತಿದೆ. ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಘಟನೆಯಲ್ಲಿ ದಲಿತ ಶಾಸಕರ ಮನೆ ಸುಟ್ಟು ಹಾಕಲಾಗಿದೆ. ಅಂತಹ ಆರೋಪಿಗಳನ್ನು ಬಿಡುಗಡೆ ಮಾಡುವ ಕುರಿತು ಪರಿಶೀಲನೆ ನಡೆಸಲು ಮುಂದಾಗಿರುವುದು ಖಂಡನೀಯ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.