ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತುವ ಬಿಜೆಪಿ ಕಾರ್ಯಕರ್ತರ ಪರವಾಗಿ ಬಿಜೆಪಿ ನಾಯಕರ ನಿಯೋಗವು ಧ್ವನಿ ಎತ್ತಿದೆ.

ಬೆಂಗಳೂರು (ಸೆ.06): ಕಾಂಗ್ರೆಸ್‌ ಸರ್ಕಾರದ ನಡೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡುವ ಬಿಜೆಪಿ ಕಾರ್ಯಕರ್ತರ ಪರವಾಗಿ ಕೊನೆಗೂ ಬಿಜೆಪಿ ನಿಯೋಗ ನಿಂತುಕೊಂಡಿದೆ.ಉಡುಪಿ ಕಾಲೇಜಿನ ಹಿಂದೂ ವಿದ್ಯಾರ್ಥಿನಿಯರ ವಿಡಯೋ ಪ್ರಕರಣಕ್ಕೆ ಸಂಬಂಧಿಸದಂತೆ ಕ್ರಮ ಕೈಗೊಳ್ಳದ ಸಿಎಂ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡಿದ್ದ ಶಕುಂತಲಾ ನಟರಾಜನ್‌ ಪರವೂ ಬಿಜೆಪಿ ನಿಯೋಗ ಧ್ವನಿ ಎತ್ತಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಕಾರ್ಯಪ್ರವೃತ್ತರಾಗಿರುವವರ ವಿರುದ್ಧ ಪೊಲೀಸರು ದೂರು ದಾಖಲಿಸದೇ, ನೋಟಿಸ್‌ ನೀಡದೇ ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ಈ ಹಿಂದೆ ಉಡುಪಿ ಕಾಲೇಜು ಹಿಂದೂ ಹುಡುಗಿಯರ ಬಗ್ಗೆ ಕ್ರಮ ಕೈಗೊಳ್ಳದ ಸಿಎಂ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ಶಕುಂತಲಾ ನಟರಾಜ್‌ ಅವರನ್ನು ಯಾವುದೇ ಸೂಚನೆ ನೀಡದೇ ವಿಚಾರಣೆ ಮಾಡಲಾಗಿತ್ತು. ಈ ಬಗ್ಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌, ಶಾಸಕ ರವಿಸುಬ್ರಹ್ಮಣ್ಯ ಹಾಗೂ ಮಾಜಿ ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌ ಅವರು ರಾಜ್ಯ ಪೊಲೀಸ್‌ ಮಹಾನಿರ್ದೇಶಕರನ್ನು ಭೇಟಿ ಮಾಡಿ, ಕಾನೂನಾತ್ಮಕವಾಗಿ ನಡೆದುಕೊಳ್ಳುವಂತೆ ತಾಕೀತು ಮಾಡಿದ್ದಾರೆ.

ಉಡುಪಿ ಕಾಲೇಜು ವಿಡಿಯೋ ವಿವಾದ ವಿರುದ್ಧ ಪೋಸ್ಟ್: ಬಿಜೆಪಿ ಕಾರ್ಯಕರ್ತೆ ಶಕುಂತಲಾ ಬಂಧನ

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಎಂಎಲ್‌ಸಿ ರವಿಕುಮಾರ್ ಅವರು, ಇತ್ತೀಚೆಗೆ ಮಾಧ್ಯಮದ ಮೇಲೆ ಕೇಸ್ ಗಳನ್ನ ಹಾಕ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು, ಸೋಷಿಯಲ್ ಮೀಡಿಯಾ ಆ್ಯಕ್ಟಿವಿಟಿ ಇರೋರ ಮೇಲೆ ಕೇಸ್ ಹಾಕ್ತಿದಾರೆ. ನೊಟೀಸ್ ಕೊಡದೆ, ಎಫ್ಐಆರ್ ಮಾಡದೆ ಒಂದು ದಿನ, ಎರಡು ದಿನ ಸ್ಟೇಷನ್ ನಲ್ಲಿ ಕೂರಿಸ್ತಿದಾರೆ. ಸಿಎಂ ವಿರುದ್ಧ ಪೋಸ್ಟ್‌ ಮಾಡಿದ್ದಾರೆಂಬ ಉದ್ದೇಶದಿಂದ ಶಕುಂತಲಾ ಎಂಬಾಕೆಯನ್ನ ಬೆಳಗ್ಗೆನೇ ಕರ್ಕೊಂಡ್ ಬಂದು ಮಧ್ಯಾಹ್ನದವರೆಗೆ ವಿಚಾರಣೆ ಮಾಡಿದ್ದರು ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮತ್ತೊಂದೆಡೆ ಹಾಸನದಿಂದ ನಾಲ್ವರನ್ನ ಕರೆ ತಂದು ವಿಚಾರಣೆ ಮಾಡಿದ್ದರು. ಚಿತ್ತಾಪುರದಲ್ಲೂ ಮಣಿಕಂಠರ ವಿರುದ್ಧ ದೂರು ದಾಖಲಿಸಿ ಕಾಟ ಕೊಡಲಾಗ್ತಿದೆ. ಇದು ಪೊಲೀಸರ ದೌರ್ಜನ್ಯ ನಡೀತಿದೆ ಅನ್ನಿಸ್ತಿದೆ. ನಾನು‌ ನೇರವಾಗಿ ಪೊಲೀಸರ ಮೇಲೆ ಆರೋಪ ಮಾಡಲ್ಲ. ಸರ್ಕಾರದ ಒತ್ತಡದಿಂದ ಮಾಡಲಾಗ್ತಿದೆ. ಕಾನೂನು ಮೂಲಕ ಏನು ಮಾಡಬೇಕು ಅದನ್ನ ಮಾಡಲಿ. ಫೋನ್ ಮಾಡಿ ಕಾಟ ಕೊಡೋದು, ಅನಧಿಕೃತವಾಗಿ ಕರೆಸೋದು ಈ ರೀತಿ ಮಾಡ್ತಿದಾರೆ. ಏನೇ ಇದ್ದರೂ ನೊಟೀಸ್ ಕೊಡಲಿ, ಪಕ್ಷ ಉತ್ತರ ನೀಡುತ್ತದೆ. ಜೊತೆಗೆ ಸುದ್ದಿ ಹಾಕಿರುವ ಮಾಧ್ಯಮದವರಿಗೂ ಕರೆ ಮಾಡಿ ಪೊಲೀಸರು ಹೆದರಿಸ್ತಿದ್ದಾರೆ. ಈ ಬಗ್ಗೆ ಡಿಜಿ ಜೊತೆ ಚರ್ಚೆ ಮಾಡಿ ಸರಿಪಡಿಸೋಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು. 

ಮಂಗಳೂರು: ಭಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ದಾಳಿ!

ಬಿಜೆಪಿ ಕಾರ್ಯಕರ್ತರನ್ನು ಭಯೋತ್ಪಾದಕ ರೀತಿ ನೋಡಲಾಗ್ತಿದೆ: ಈ ಕುರಿತು ಮಾತನಾಡಿದ ಶಾಸಕ ರವಿ ಸುಬ್ರಹ್ಮಣ್ಯ ಅವರು, ಬಿಜೆಪಿಯ ಸೋಷಿಯಲ್ ಮೀಡಿಯಾ ಆಕ್ಟಿವಿಸ್ಟ್ ಗಳ ಮೇಲೆ ಕೇಸ್ ಹಾಕ್ತಿದ್ದಾರೆ. ಭಯೋತ್ಪಾದಕರ ರೀತಿ ಇವರನ್ನ ನೋಡಲಾಗ್ತಿದೆ. ಪೊಲಿಟಿಕಲ್ ಪಾರ್ಟಿಯ ಕಾರ್ಯಕರ್ತನ ಫ್ರೀಡಂ ಆಫ್ ಸ್ಪೀಚ್ ಕಿತ್ತುಕೊಳ್ಳಲಾಗ್ತಿದೆ. ಸೂಚನೆ ನೋಟಿಸ್ ಇಲ್ಲದೆ ರಾತ್ರೋರಾತ್ರಿ ಕರೆದುಕೊಂಡು ಬರ್ತಿದ್ದಾರೆ. ಒಂದು ದಿನ, ಎರಡು ದಿನ ಎಲ್ಲಿ ಇಟ್ಟಿರ್ತಾರೊ ಗೊತ್ತಿಲ್ಲ. ರಾಜಕಾರಣವನ್ನ ರಾಜಕಾರಣದ ಮೂಲಕವೇ ಹೆದರಿಸಬೇಕು. ಡಿಜಿಯವರಿಗೆ ಮನವಿ ಮಾಡಲಾಗಿದೆ. ಇದಕ್ಕೆ ಆಸ್ಪದ ಕೊಡದಂತೆ ಡಿಜಿಯವರಿಗೆ ಮನವಿ ಕೊಡಲಾಗಿದೆ. ಬಿಜೆಪಿ ಈ ವಿಚಾರವಾಗಿ ಹೋರಾಟದ ಹಂತಕ್ಕೆ ಹೋಗೋದಕ್ಕೆ ಅವಕಾಶ ಕೊಡಬೇಡಿ ಅಂತಾ ಡಿಜಿಯವರಿಗೆ ತಿಳಿಸಿದ್ದೇವೆ ಎಂದು ಹೇಳಿದರು.

ರಾತ್ರೋ ರಾತ್ರಿ ಬಂದು ಟೆರರಿಸ್ಟ್‌ ರೀತಿ ಅರೆಸ್ಟ್‌ ಮಾಡ್ತಾರೆ: ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಮಾತನಾಡಿ, ಎನ್ ಸಿಆರ್ , ಬೇಲಬಲ್ ಕೇಸ್ ಗಳಲ್ಲಿ ನಮ್ಮವರನ್ನ ಕರೆದು ತರ್ತಿದ್ದಾರೆ. ಸಿಸಿಬಿ, ಸಿಐಡಿ ಇರೋದು ದೊಡ್ಡ ಕೇಸ್ ಗಳ ತನಿಖೆ ಮಾಡೋಕೆ. ಆದರೆ, ತಡರಾತ್ರಿಯಲ್ಲಿ ಬಂದು ಟೆರರಿಸ್ಟ್ ಗಳನ್ನ ಅರೆಸ್ಟ್ ಮಾಡುವಂತೆ ಕರ್ಕೊಂಡು ಹೋಗ್ತಿದ್ದಾರೆ. ಸಿಆರ್ ಪಿಸಿ ಅಡಿಯಲ್ಲಿ ಸೂಕ್ತವಾದ ತನಿಖೆ ನಡೆಸುವಂತೆ ಸುತ್ತೋಲೆ ಹೊರಡಿಸುವುದಾಗಿ ಡಿಜಿಪಿ ಹೇಳಿದ್ದಾರೆ ಎಂದು ತಿಳಿಸಿದರು.