ಬೆಂಗಳೂರು(ನ.05): ಉತ್ತರ ಪ್ರದೇಶ, ಹರ್ಯಾಣ, ಮಧ್ಯಪ್ರದೇಶದ ಬಳಿಕ ಕರ್ನಾಟಕದಲ್ಲೂ ‘ಲವ್‌ ಜಿಹಾದ್‌’ ತಡೆಗೆ ಕಾನೂನು ರೂಪಿಸುವಂತೆ ಆಡಳಿತಾರೂಢ ಬಿಜೆಪಿಯಿಂದಲೇ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿದೆ.

ಕಂದಾಯ ಸಚಿವ ಆರ್‌.ಅಶೋಕ್‌, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ಪ್ರತಾಪ್‌ ಸಿಂಹ ಅವರು ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್‌, ಲವ್‌ ಜಿಹಾದ್‌ ಕ್ರಿಮಿನಲ್‌ ಅಪರಾಧವಾಗಿದೆ. ಈ ಸಂಬಂಧ ಅಹಮದಾಬಾದ್‌ ನ್ಯಾಯಾಲಯವು ನೀಡಿರುವ ತೀರ್ಪು ಸ್ವಾಗತಾರ್ಹ. ಇದಕ್ಕೆ ಕಡಿವಾಣ ಹಾಕಬೇಕು. ಉತ್ತರ ಪ್ರದೇಶ ಸೇರಿದಂತೆ ಇತರೆ ಕೆಲ ರಾಜ್ಯಗಳು ಲವ್‌ ಜಿಹಾದ್‌ ನಿಯಂತ್ರಣಕ್ಕೆ ಕಾನೂನು ರೂಪಿಸಲು ಮುಂದಾಗುತ್ತಿರುವಂತೆ ರಾಜ್ಯದಲ್ಲಿಯೂ ಕಾನೂನು ರೂಪಿಸುವ ಸಂಬಂಧ ಚರ್ಚೆ ನಡೆಸಲಾಗುವುದು. ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.

"

ಸಿ.ಟಿ.ರವಿ ಮಾತನಾಡಿ, ರಾಜ್ಯದಲ್ಲಿ ಲವ್‌ ಜಿಹಾದ್‌ ನಿಯಂತ್ರಿಸಲು ಕಾನೂನು ಅಸ್ತ್ರ ಸಿದ್ಧಪಡಿಸಲಾಗುವುದು. ಭಾರತೀಯ ಸಮಾಜ ರಾಧಾ-ಕೃಷ್ಣರಂತೆ ಶುದ್ಧ ಪ್ರೇಮವನ್ನು ಗೌರವಿಸಿದೆ. ಆದರೆ ಶುದ್ಧ ಪ್ರೇಮದ ಜಾಗದಲ್ಲಿ ಮೋಸ, ವಂಚನೆ, ಮತಾಂತರ ಸೇರಿಕೊಂಡಾಗ, ಆ ಬಗ್ಗೆ ಎಚ್ಚರ ವಹಿಸಬೇಕಾಗಿರುವುದು ಪ್ರತಿ ಕುಟುಂಬ, ಪ್ರತಿ ವ್ಯಕ್ತಿಯ ಜವಾಬ್ದಾರಿ. ವ್ಯಕ್ತಿ, ಕುಟುಂಬವೂ ಮೈ ಮರೆತಾಗ ಸಮಾಜ ಸುಸ್ಥಿತಿಯಲ್ಲಿಡುವುದಕ್ಕೆ ಕಾನೂನಿನ ದಾರಿ ಹುಡುಕಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಚಿಂತನೆ ನಡೆಯುತ್ತಿದೆ. ಅನೇಕ ಸಂಸ್ಥೆಗಳು ಲವ್‌ ಜಿಹಾದ್‌ನ ಪರಿಣಾಮಗಳ ವರದಿಯನ್ನು ನೀಡಿದೆ. ಇದನ್ನೆಲ್ಲ ಆಧರಿಸಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ಲವ್‌ ಜಿಹಾದ್‌ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಂಸದೆ ಶೋಭಾ ಕರಂದ್ಲಾಜೆ, ಇದು ದೇಶದಲ್ಲಿ ಒಂದು ಕೋಮಿನ ಜನಸಂಖ್ಯೆ ಹೆಚ್ಚಿಸುವುದಕ್ಕೆ ನಡೆಯುತ್ತಿರುವ ಷಡ್ಯಂತ್ರ. ಲವ್‌ ಜಿಹಾದ್‌ ಪ್ರೀತಿ, ಪ್ರೇಮ, ಮದುವೆಯಾಗಿ ಉಳಿದುಕೊಂಡಿಲ್ಲ. ಇದು, ಭಯೋತ್ಪಾದಕತೆಯ ಇನ್ನೊಂದು ಮುಖ. ಲವ್‌ ಜಿಹಾದ್‌ಗೆ ಬೆಂಬಲಿಸಿ ಪ್ರಾರ್ಥನಾಲಯದಲ್ಲಿ ಭಾಷಣ ಮಾಡಿರುವ ಪ್ರಕರಣಗಳೂ ಬೆಳಕಿಗೆ ಬಂದಿದೆ. ಸಣ್ಣ ವಯಸ್ಸಿನ ಹೆಣ್ಣುಮಕ್ಕಳಿಗೆ ಹಣದ ಆಮಿಷ ತೋರಿಸಿ ‘ಲವ್‌ ಜಿಹಾದ್‌’ ಹೆಸರಿನಲ್ಲಿ ಸಮಾಜ ಪರಿವರ್ತನೆಯ ಷಡ್ಯಂತ್ರ ನಡೆಯುತ್ತಿದೆ. ನಮ್ಮ ರಾಜ್ಯದ ಹೆಣ್ಣು ಮಕ್ಕಳನ್ನು ಕೇರಳದ ಮಲಪ್ಪುರಂ ಸೇರಿ ಹಲವೆಡೆ ಕರೆದುಕೊಂಡು ಹೋಗಿ ಮತಾಂತರ ಮಾಡಲಾಗುತ್ತಿದೆ. ಇದನ್ನು ತಡೆಯಲು ರಾಜ್ಯ ಸರ್ಕಾರ ಕಾನೂನು ರೂಪಿಸಬೇಕು. ಇದಕ್ಕೂ ಮೊದಲು ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು.

ಇನ್ನು ಮಡಿಕೇರಿಯಲ್ಲಿ ಲವ್‌ ಜಿಹಾದ್‌ ತಡೆ ಕಾನೂನಿನ ಅಗತ್ಯತೆಯನ್ನು ಸಮರ್ಥಿಸಿ ಮಾತನಾಡಿದ ಪ್ರತಾಪ್‌ ಸಿಂಹ, ಮದುವೆಗೆ ಮುನ್ನ ಮತಾಂತರ ಕಡ್ಡಾಯ ಎಂದು ಒತ್ತಡ ಹೇರುವವರ ವಿರುದ್ಧ ಕಠಿಣ ಕಾನೂನು ಜಾರಿಗೆ ತರುವುದು ಅತ್ಯಗತ್ಯ ಎಂದು ಹೇಳಿದರು.