ಹುಬ್ಬಳ್ಳಿ[ಡಿ.18]: ಮಾಜಿ ಮುಖ್ಯಮಂತ್ರಿ ಹಾಗೂ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರ 64ನೇ ಜನ್ಮ ದಿನವನ್ನು ಅಭಿಮಾನಿಗಳು, ಕಾರ್ಯಕರ್ತರು ವಿಜೃಂಭಣೆಯಿಂದ ಆಚರಿಸಿದರು. ಶೆಟ್ಟರ್‌ ತಮ್ಮ ನಿವಾಸದಲ್ಲಿ ಸರಳವಾಗಿ ಕೇಕ್‌ ಕತ್ತರಿಸುವ ಮೂಲಕ ಜನ್ಮದಿನ ಆಚರಿಸಿಕೊಂಡರೆ, ಅವರ ಅಭಿಮಾನಿಗಳು ರೋಗಿಗಳಿಗೆ ಹಾಲು ಹಣ್ಣು ವಿತರಣೆ ಸೇರಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿದರು.

ಹುಬ್ಬಳ್ಳಿಯ ಬದಾಮಿ ಕಾಲೋನಿಯಲ್ಲಿರುವ ಸ್ವಗೃಹದಲ್ಲಿ ಮಂಗಳವಾರ ಬೆಳಗ್ಗೆ ಜಗದೀಶ್‌ ಶೆಟ್ಟರ್‌ ಹಾಗೂ ಪತ್ನಿ ಶಿಲ್ಪಾ ಶೆಟ್ಟರ್‌ ಕೇಕ್‌ ಕತ್ತರಿಸಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಶಂಕರಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ ಸೇರಿದಂತೆ ಹಲವು ಮುಖಂಡರು, ಪಕ್ಷದ ಕಾರ್ಯಕರ್ತರು, ಸ್ನೇಹಿತರು ಅವರನ್ನು ಭೇಟಿಯಾಗಿ ಪುಷ್ಪಗುಚ್ಛ ನೀಡಿ ಮುಂದಿನ ದಿನಗಳಲ್ಲಿ ಇನ್ನಷ್ಟುಎತ್ತರದ ಹುದ್ದೆಗೇರಿ ಜನಸೇವೆ ಮಾಡುವಂತಾಗಲಿ ಎಂದು ಅವರಿಗೆ ಶುಭ ಹಾರೈಸಿದರು.

ಜನ್ಮದಿನದ ನಿಮಿತ್ತವಾಗಿ ನಗರದ ಬೈಲಪ್ಪನಗರದಲ್ಲಿರುವ ಐಎಂಎ ಹಾಸ್ಪಿಟಲ್‌ ಹಾಗೂ ಜೆಪಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾದವರಿಗೆ, ಕೃತಕ ಕೈಕಾಲು ಜೋಡಿಸಿಕೊಂಡವರಿಗೆ ಅಭಿಮಾನಿಗಳು ಹಣ್ಣು ಹಂಪಲು ವಿತರಣೆ ಮಾಡಿದರು. ವಿಶ್ವೇಶ್ವರ ನಗರ ಕಲ್ಯಾಣಮಂಟಪ ನ್ಯಾಸ್‌ ಟ್ರಸ್ಟ್‌ ವತಿಯಿಂದ ವಿಶ್ವನಾಥ ಮಂದಿರದಲ್ಲಿ ಜಗದೀಶ್‌ ಶೆಟ್ಟರ್‌ ಅವರನ್ನು ಸನ್ಮಾನಿಸಿ ಶುಭ ಕೋರಲಾಯಿತು. ವಿಶ್ವಕನ್ನಡ ಬಳಗದ ಸದಸ್ಯರು ಸಹ ಶೆಟ್ಟರ್‌ ಅವರಿಗೆ ಮೈಸೂರು ಪೇಟಾ, ಶಾಲು ತೊಡಿಸಿ ಸನ್ಮಾನಿಸಿದರು.