ಉಡುಪಿಯ ಅರೆವೈದ್ಯಕೀಯ ಕಾಲೇಜಿನ ಶೌಚಾಲಯದೊಳಗೆ ವಿಡಿಯೋ ಚಿತ್ರೀಕರಣ ವಿಚಾರವು ದೇಶವ್ಯಾಪಿ ಚರ್ಚೆಗೆ ಕಾರಣವಾಗಿದೆ. ಆದರೆ, ವಿಡಿಯೋ ಮಾಡಿದ ವಿದ್ಯಾರ್ಥಿನಿಯರನ್ನು ಇನ್ನೂ ಬಂಧಿಸಿಲ್ಲ ಎಂದ ಎನ್‌.ರವಿಕುಮಾರ್‌ 

ಬೆಂಗಳೂರು(ಜು.29): ರಾಜ್ಯದ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ಅಸಭ್ಯ ದೃಶ್ಯ ಚಿತ್ರೀಕರಣ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಆಗ್ರಹಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ಅರೆವೈದ್ಯಕೀಯ ಕಾಲೇಜಿನ ಶೌಚಾಲಯದೊಳಗೆ ವಿಡಿಯೋ ಚಿತ್ರೀಕರಣ ವಿಚಾರವು ದೇಶವ್ಯಾಪಿ ಚರ್ಚೆಗೆ ಕಾರಣವಾಗಿದೆ. ಆದರೆ, ವಿಡಿಯೋ ಮಾಡಿದ ವಿದ್ಯಾರ್ಥಿನಿಯರನ್ನು ಇನ್ನೂ ಬಂಧಿಸಿಲ್ಲ ಎಂದರು.

ಉಡುಪಿ ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ಕೇಸ್: ಆರೋಪಿಗಳ ವಿರುದ್ಧ ದುರ್ಬಲ ಸೆಕ್ಷನ್ ದಾಖಲು..?

ಈ ಪ್ರಕರಣವು ತಮಾಷೆಯ ವಿಚಾರವಲ್ಲ. ಬೆಡ್‌ ರೂಂ, ಶೌಚಾಲಯ ಹಾಗೂ ಬಾತ್‌ರೂಂನಲ್ಲಿ ಯಾರೂ ವಿಡಿಯೋ ಮಾಡುವುದಿಲ್ಲ. ಉಡುಪಿ ಘಟನೆಯ ಆರೋಪಿಗಳನ್ನು ಕರ್ನಾಟಕ ಸರ್ಕಾರ ಯಾಕೆ ಬಂಧಿಸಿಲ್ಲ? ಇದರಲ್ಲೂ ತುಷ್ಟೀಕರಣ ನೀತಿ ಅನುಸರಿಸಲಾಗುತ್ತಿದೆಯೇ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.

‘ತಮಾಷೆಗಾಗಿ ವಿಡಿಯೋ ಮಾಡಿ ಡಿಲೀಟ್‌ ಮಾಡಿದ್ದಾರೆ. ಇದು ಮಕ್ಕಳಾಟವೆಂದು ರಾಜ್ಯದ ಗೃಹ ಸಚಿವರು ಹೇಳಿದ್ದಾರೆ. ಇದು ಮಕ್ಕಳಾಟವೇ? ಹೆದರಿಸುವುದು ಮಕ್ಕಳಾಟವೇ? ರಾಜ್ಯದ ಅಭಿವೃದ್ಧಿ ಹಾಗೂ ಮಹಿಳಾ ಸುರಕ್ಷತೆ ಬಗ್ಗೆ ಸರಕಾರಕ್ಕೆ ಗಾಂಭೀರ್ಯತೆ ಇಲ್ಲ’ ಎಂದು ಟೀಕಿಸಿದರು.

ಜುಲೈ 18ರಂದು ಘಟನೆ ಬೆಳಕಿಗೆ ಬಂದಿದೆ. ಬಿಜೆಪಿ ಪ್ರತಿಭಟನೆ ಬಳಿಕ 26ರಂದು ಎಫ್‌ಐಆರ್‌ ಮಾಡಿದ್ದಾರೆ. ಅಗೆದಷ್ಟೂವಿಚಾರ ಆಳಕ್ಕೆ ಹೋಗುತ್ತಿದೆ. ಈ ಥರದ ಘಟನೆ ಆರೇಳು ತಿಂಗಳಿಂದ ನಡೆಯುತ್ತಿದೆ ಎಂದು ಕಾಲೇಜು ವಿದ್ಯಾರ್ಥಿನಿಯರೇ ಹೇಳುತ್ತಿದ್ದಾರೆ. ಇದರ ಹಿಂದೆ ದೊಡ್ಡ ಜಾಲ ಇದೆ. ಅದು ಪಿಎಫ್‌ಐ ಇದೆಯೋ, ಜಿಹಾದಿ ಸಂಘಟನೆಗಳಿವೆಯೇ ಎಂಬುದರ ಬಗ್ಗೆ ತನಿಖೆ ಮಾಡಬೇಕು. ವಿಡಿಯೋ ರೆಕಾರ್ಡ್‌ ಆದ ಮೊಬೈಲನ್ನು ಹುಡುಗರು ಒಯ್ಯುತ್ತಿದ್ದರೆಂಬ ಮಾಹಿತಿ ಸಿಕ್ಕಿದೆ. ವಿಡಿಯೋ ಪಡೆಯಲು ಬರುತ್ತಿದ್ದ ಹುಡುಗರು ಯಾರು? ಪಿಎಫ್‌ಐ ಜಾಲದ ಅನೇಕ ಮಹಿಳೆಯರೂ ಇದರಲ್ಲಿ ಇರುವುದಾಗಿ ಗೊತ್ತಾಗುತ್ತಿದೆ. ಸಮಗ್ರ ತನಿಖೆಗಾಗಿ ಎನ್‌ಐಎ ತನಿಖೆಗೆ ಶಿಫಾರಸು ಮಾಡಬೇಕು ಎಂದು ರವಿಕುಮಾರ್‌ ಒತ್ತಾಯಿಸಿದರು. ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹಾಗೂ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್‌ ಉಪಸ್ಥಿತರಿದ್ದರು.