ಬಿಜೆಪಿ ರಾಜ್ಯಾಧ್ಯಕ್ಷರಾಗಿ ಎರಡು ವರ್ಷ ಪೂರೈಸಿರುವ ಬಿವೈ ವಿಜಯೇಂದ್ರ, ಹೈಕಮಾಂಡ್ ಸೂಚನೆಯಂತೆ ಹಿರಿಯ ನಾಯಕರ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ. ಆಂತರಿಕ ಅಸಮಾಧಾನ ಶಮನಗೊಳಿಸಿ, ಮುಂಬರುವ ಚುನಾವಣೆಗೆ ಪಕ್ಷವನ್ನು ಒಗ್ಗೂಡಿಸುವ ಪ್ರಯತ್ನವಾಗಿ ಅವರು ಪ್ರಮುಖ ನಾಯಕರ ನಿವಾಸಗಳಿಗೆ ಭೇಟಿ ನೀಡುತ್ತಿದ್ದಾರೆ.

ಬೆಂಗಳೂರು, (ನ.18): ರಾಜ್ಯಾಧ್ಯಕ್ಷರಾಗಿ ಎರಡು ವರ್ಷ ಪೂರೈಸಿರುವ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಿರಿಯರ ವಿಶ್ವಾಸ ಗಳಿಸಲು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆ ಮೂಲಕ ರಾಜ್ಯಾಧ್ಯಕ್ಷರಾಗಿ ಎರಡು ವರ್ಷ ಕಾಲ ಅಧಿಕಾರವಾಧಿಯಲ್ಲಿ ಹಿರಿಯ ನಾಯಕರಿಂದ ಬಂದ ಅಸಮಾಧಾನ ದೂರ ಮಾಡಲು, ಆತಂಕರಿಕ ಸಂಘರ್ಷ ತಡೆಯಲು ಮುಂದಾಗಿದ್ದಾರೆ.

ಹೈಕಮಾಂಡ್ ಸೂಚನೆ ಹಿನ್ನೆಲೆ ಭೇಟಿ:

ಎಲ್ಲರನ್ನು ವಿಶ್ವಾಸಕ್ಕೆ ಪಡೆಯಿರಿ ಎಂದು ಹೈಕಮಾಂಡ್ ಸೂಚನೆ ನೀಡಿರುವ ಹಿನ್ನೆಲೆ ರಾಜ್ಯ ಬಿಜೆಪಿಯ ಹಿರಿಯರ ನಾಯಕರ ನಿವಾಸಕ್ಕೆ ಬಿವೈ ವಿಜಯೇಂದ್ರ ಭೇಟಿ ನೀಡಲಾರಂಭಿಸಿದ್ದಾರೆ. ಆ ನಾಯಕರ ಹಿಂದಿನಿಂದಲೂ ವಿಜಯೇಂದ್ರರ ಮೇಲೆ ಪ್ರತ್ಯಕ್ಷ/ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು ಹೀಗಾಗಿ ಆ ನಾಯಕರ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ.

  • ಬಿಜೆಪಿ ಹಿರಿಯ ನಾಯಕರ ಮನೆಗಳಿಗೆ ಭೇಟಿ ನೀಡಿದ ವಿವರ:
  • ದೀಪಾವಳಿಗೆ ಶುಭಕೋರಲು ಮೈತ್ರಿ ನಾಯಕ ಕುಮಾರಸ್ವಾಮಿ ನಿವಾಸಕ್ಕೆ ಭೇಟಿ.
  • ಅದೇ ದಿನ ಆರ್ ಅಶೋಕ್ ನಿವಾಸಕ್ಕೆ ತೆರಳಿ ಶುಭಾಶಯ.
  • ವಿಜಯೇಂದ್ರರ ಮೇಲೆ ಸಿಟ್ಟಾಗಿದ್ದ ಎಸ್ ಆರ್ ವಿಶ್ವನಾಥ್ ನಿವಾಸಕ್ಕೆ ಭೇಟಿ.
  • ಎರಡು ದಿನಗಳ ಹಿಂದೆ ಬಸವರಾಜ್ ಬೊಮ್ಮಾಯಿ ಭೇಟಿ.
  • ಹಿರಿಯ ನಾಯಕ ಗೋವಿಂದ ಕಾರಜೋಳ ನಿವಾಸಕ್ಕೆ ಭೇಟಿ
  • ನಿನ್ನೆ ಸದಾನಂದ ಗೌಡರ ನಿವಾಸಕ್ಕೆ ಭೇಟಿ.
  • ಇಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ನಿವಾಸದಲ್ಲಿ ರಾತ್ರಿ ಭೋಜನ

ಈ ಭೇಟಿಯ ಮೂಲಕ ಪರಸ್ಪರ ಅಸಮಾಧಾನಗಳನ್ನು ಚರ್ಚಿಸಿ ದೂರ ಮಾಡುವ ಪ್ರಯತ್ನ ನಡೆದಿದೆ. ರಾಜ್ಯಾಧ್ಯಕ್ಷ ಆದಾಗಿಂದಲೂ ವಿಜಯೇಂದ್ರರ ಮೇಲೆ ಒಂದೆಲ್ಲಾ ಒಂದು ದೂರು, ಆರೋಪ ಮಾಡುತ್ತಾ ಬಂದಿದ್ದರು. ವಿಜಯೇಂದ್ರ ಹಿರಿಯರನ್ನ ಕಡೆಗಣಿಸಿದ್ದಾರೆ, ಹಿರಿಯರನ್ನ ವಿಶ್ವಾಸಕ್ಕೆ ಪಡೆದಿಲ್ಲ ಎಂಬ ಆರೋಪವೂ ಮಾಡಲಾಗಿತ್ತು. ಇದೀಗ ಅವೆಲ್ಲ ಆರೋಪಗಳನ್ನ ದೂರ ಮಾಡುವ ಪ್ರಯತ್ನವಾಗಿ ವಿಜಯೇಂದ್ರ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಒಬ್ಬೊಬ್ಬ ನಾಯಕರ ನಿವಾಸಗಳಿಗೆ ಭೇಟಿ ನೀಡುತ್ತಿದ್ದಾರೆ.

ಬಿವೈ ವಿಜಯೇಂದ್ರ ಸದ್ಯದಲ್ಲೇ ರೆಬೆಲೆ ಯತ್ನಾಳ್, ರಮೇಶ್ ಜಾರಕಿಹೊಳಿ ಭೇಟಿ?

ಬಿಹಾರ ಚುನಾವಣೆಯ ನಂತರ ರಾಜ್ಯಾಧ್ಯಕ್ಷರ ಘೋಷಣೆ ನಿರೀಕ್ಷೆಯಲ್ಲಿದ್ದು, ಈ ಭೇಟಿಗಳು ವಿಜಯೇಂದ್ರರ ಸ್ಥಾನಕ್ಕೆ ಬಲ ತುಂಬಲಿವೆಯೇ? ಯತ್ನಾಳ್, ರಮೇಶ್ ಜಾರಕಿಹೊಳಿ ಇನ್ನಿತರ ನಾಯಕರು ರೆಬೆಲ್ ಆಗಿಯೇ ಉಳಿದಿದ್ದಾರೆ. ಮುಂದಿನ ದಿನಗಳಲ್ಲಿ ರೆಬೆಲ್‌ ನಾಯಕರ ವಿಶ್ವಾಸ ಗಳಿಸುತ್ತಾರಾ? ರೆಬೆಲ್ ನಾಯಕರ ಭೇಟಿ, ಮಾತುಕತೆ ಬಳಿಕ ಪಕ್ಷದ ಐಕ್ಯತೆ ಹೊಸ ದಿಕ್ಕು ನೀಡುತ್ತದೆಯೇ? ಬಿಜೆಪಿ ವಲಯದಲ್ಲಿ ಈ ವಿಚಾರವಾಗಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಪಂಚಾಯ್ತಿ ಚುನಾವಣೆಗೆ ಮುನ್ನ ಈ ತಂತ್ರ ಯಶಸ್ವಿಯಾಗಲಿ ಎಂಬುದೇ ಎಲ್ಲರ ನಿರೀಕ್ಷೆಯಾಗಿದೆ.