ಮದ್ಯ ಪ್ರಿಯರಿಗೆ ಶಾಕ್: ರಾಜ್ಯಾದ್ಯಂತ ಮದ್ಯ ಖರೀದಿ ಸ್ಥಗಿತವಾಗುತ್ತೆ ಯಾಕೆ ಗೊತ್ತಾ?
ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ, ಮದ್ಯ ಖರೀದಿ ಸ್ಥಗಿತಗೊಂಡು ರಾಜ್ಯದಲ್ಲಿ ಏನೆಲ್ಲಾ ಅದ್ವಾನಗಳಾಗಿತ್ತು ಅನ್ನೋದನ್ನು ನೋಡಿದ್ದೇವೆ. ಈಗ ಮತ್ತೊಮ್ಮೆ ಮದ್ಯ ಖರೀದಿ ಸ್ಥಗಿತಗೊಳಿಸುವ ಎಚ್ಚರಿಕೆ ಕೇಳಿಬಂದಿದೆ.
ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಮೇ.05): ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ, ಮದ್ಯ ಖರೀದಿ (Alcohol Purchase) ಸ್ಥಗಿತಗೊಂಡು ರಾಜ್ಯದಲ್ಲಿ (Karnataka) ಏನೆಲ್ಲಾ ಅದ್ವಾನಗಳಾಗಿತ್ತು ಅನ್ನೋದನ್ನು ನೋಡಿದ್ದೇವೆ. ಈಗ ಮತ್ತೊಮ್ಮೆ ಮದ್ಯ ಖರೀದಿ ಸ್ಥಗಿತಗೊಳಿಸುವ ಎಚ್ಚರಿಕೆ ಕೇಳಿಬಂದಿದೆ. ಈ ಬಾರಿ ಎಚ್ಚರಿಕೆ ಕೊಟ್ಟಿರುವುದು ಸರ್ಕಾರ (Government) ಅಲ್ಲ, ಬದಲಿಗೆ ಮದ್ಯ ಖರೀದಿಗಾರರೇ (Liquor Vendors) ವ್ಯವಹಾರ ಸ್ಥಗಿತ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇಷ್ಟಕ್ಕೂ ಮದ್ಯ ಖರೀದಿ ಸ್ಥಗಿತಗೊಳ್ಳುವುದು ಯಾಕೆ ಗೊತ್ತಾ? ಒಂದು ದಿನ ಮದ್ಯ ಸಿಕ್ಕಿಲ್ಲ ಅಂದ್ರೆ ಗ್ರಾಹಕರು ಕೈಕಾಲು ಬಿಡುತ್ತಾರೆ. ಗ್ರಾಹಕರು ಕೇಳಿದ ಮದ್ಯ ಸರಬರಾಜು ಮಾಡೋಕೆ ಆಗ್ತಿಲ್ಲ ಅಂದ್ರೆ ಖರೀದಿಗಾರರಿಗೂ ತಲೆನೋವು. ಅತೀ ಹೆಚ್ಚು ಮದ್ಯ ಖರೀದಿ ಆಗುವ ಏಪ್ರಿಲ್-ಮೇ ತಿಂಗಳಲ್ಲೇ ಸನ್ನದುದಾರರಿಗೆ ಸಮಸ್ಯೆ ಎದುರಾಗಿದೆ. ಸರಕಾರ ಹೊಸದಾಗಿ ಆರಂಭ ಮಾಡಿರುವ ಈ- ಇಂಡೆಂಟ್ ವ್ಯವಸ್ಥೆಯಿಂದ ಮತ್ತೆ ಖರೀದಿಗಾರರು ನಷ್ಟ ಅನುಭವಿಸುತ್ತಿದ್ದಾರೆ.
ಏನಿದು ಈ ಇಂಡೆಂಟ್ ವ್ಯವಸ್ಥೆ?: ಈ ಮೊದಲು ಖರೀದಿಗಾರರು ಮದ್ಯ ಸರಬರಾಜು ಪಡೆಯುವುದು ಸುಲಭವಾಗಿತ್ತು. ನೇರವಾಗಿ ಹೋಗಿ ಮದ್ಯ ಖರೀದಿಸಿ ಗ್ರಾಹಕರಿಗೆ ನೀಡಬಹುದಿತ್ತು. ಆದರೆ ಈಗ ಆನ್ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಏಪ್ರಿಲ್ 4ರಿಂದ ಜಾರಿಯಾಗಿರುವ ವಿನೂತನ ವ್ಯವಸ್ಥೆಗೆ ಮದ್ಯ ಖರೀದಿಗಾರರು ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ. 2011ನೇ ಇಸವಿಯಿಂದ ಮದ್ಯ ಖರೀದಿಗೆ ಬೇರೆಯದೇ ತಂತ್ರಜ್ಞಾನ ಇತ್ತು. ಹಳೆಯ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಏಪ್ರಿಲ್ ನಾಲ್ಕರಿಂದ ಹೊಸ ಪದ್ಧತಿ ಜಾರಿಯಾಗಿದೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ದೆಹಲಿಗೆ ತೆರಳಲು ಉಡುಪಿ ಪೊಲೀಸರ ಟೀಂ ರೆಡಿ
ಈ ಪದ್ಧತಿಯ ಅನುಸಾರ ವೆಬ್‌ಸೈಟಿಗೆ ಹೋಗಿ ಬೇಕಾದ ಮದ್ಯಗಳ ವಿವರವನ್ನು ಅಪ್ಲೋಡ್ ಮಾಡಬೇಕು. ಅದರಲ್ಲೂ ರಾತ್ರಿ 9 ಗಂಟೆಯಿಂದ ಬೆಳಗ್ಗೆ 9 ಗಂಟೆಯವರೆಗೆ ಮಾತ್ರ ಅಪ್ಲೋಡ್ ಮಾಡಲು ಅವಕಾಶ. ಇದೇ ಸಂದರ್ಭದಲ್ಲಿ ಸರ್ವರ್ ಕೈಕೊಟ್ಟರೆ ಕೇಳುವುದೇ ಬೇಡ. ಗ್ರಾಹಕರ ಬೇಡಿಕೆಯ ಮದ್ಯಗಳನ್ನು ಪಡೆಯಲು ಸನ್ನದುದಾರರಿಗೆ ಸಾಧ್ಯವಾಗುತ್ತಿಲ್ಲ. ನೂತನ ವ್ಯವಸ್ಥೆಯಲ್ಲಿ ಅನೇಕ ಲೋಪದೋಷಗಳಿದ್ದು, ಈ ಬಗ್ಗೆ ಇಲಾಖೆಯ ಮುಂದೆ ಕೇಳಿಕೊಂಡರೂ ಸಮಂಜಸ ಉತ್ತರ ಸಿಕ್ಕಿಲ್ಲ ಎಂದು ಮದ್ಯ ಖರೀದಿಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗ್ಡೆ ಆರೋಪಿಸಿದ್ದಾರೆ.
ನೂತನ ವ್ಯವಸ್ಥೆಗೆ ವಿರೋಧ ಯಾಕೆ?: ಸದ್ಯ ಏಪ್ರಿಲ್-ಮೇ ತಿಂಗಳಲ್ಲಿ ಮದ್ಯಕ್ಕೆ ವಿಪರೀತ ಬೇಡಿಕೆಯಿದೆ. ಅನೇಕ ಶುಭಕಾರ್ಯಗಳು, ಪಾರ್ಟಿಗಳು, ಸಂಭ್ರಮಾಚರಣೆಗಳು ನಡೆಯುವುದರಿಂದ ಗ್ರಾಹಕರ ಬೇಡಿಕೆ ಹೆಚ್ಚು. ಆದರೆ ಗ್ರಾಹಕರ ಬೇಡಿಕೆಗೆ ಸರಬರಾಜು ಆಗುವ ಮದ್ಯಕ್ಕೂ ತಾಳೆಯಾಗುವುದಿಲ್ಲ. ಜನರ ಬೇಡಿಕೆಯ ಮದ್ಯ ನೂತನ ವ್ಯವಸ್ಥೆಯಲ್ಲಿ ಸುಲಭವಾಗಿ ಸಿಗುತ್ತಿಲ್ಲ. ರಾತ್ರಿಯಿಡೀ ಕಾದು ಕುಳಿತು ಹೊಸ ಇಂಡೆಂಟ್ ಹಾಕಬೇಕು. ಪ್ರತಿದಿನ ಸರ್ವರ್ ಸಮಸ್ಯೆಯಾಗುತ್ತಿದೆ. ಬೆಳಗ್ಗೆ 9 ಗಂಟೆಗೆ ಸರಿಯಾಗಿ ಇಂಡೆಂಟ್ ಪಡೆಯುವ ವ್ಯವಸ್ಥೆ ಸ್ಥಗಿತಗೊಳ್ಳುತ್ತದೆ. ಸಂಜೆ ಸ್ವಲ್ಪ ಬೇಗ ಇಂಡೆಂಟ್ ಪಡೆಯುವ ವ್ಯವಸ್ಥೆ ಆರಂಭವಾದರೆ ಅನುಕೂಲವಾಗುತ್ತಿತ್ತು ಎನ್ನುತ್ತಾರೆ ಮಧ್ಯ ಖರೀದಿಗಾರರು.
ಮದ್ಯ ಖರೀದಿ ಸ್ಥಗಿತಕ್ಕೆ ನಿರ್ಧಾರ: 2020 -21 ನೇ ಇಸವಿಯಲ್ಲಿ ಕೊರೊನಾದಿಂದ ನಮಗೆ ನಷ್ಟವಾಗಿದೆ. ಈ ವರ್ಷ ಕೆಎಸ್‌ಬಿಸಿಎಲ್ ಕೊರೋನಾಕ್ಕಿಂತಲೂ ದೊಡ್ಡ ಹೊಡೆತ ಕೊಟ್ಟಿದೆ. ಗ್ರಾಹಕರಿಗೆ ಕೇಳಿದ ಮದ್ಯ ನೀಡಲು ಸಾಧ್ಯವಾಗುತ್ತಿಲ್ಲ ಎಂದರೆ ವ್ಯಾಪಾರ ಮಾಡುವುದು ಹೇಗೆ. ದೊಡ್ಡ ವ್ಯಾಪಾರಿಗಳಿಗೆ ಇದರಿಂದ ಯಾವುದೇ ಕಷ್ಟವಾಗುತ್ತಿಲ್ಲ, ಆದರೆ ಸಾಮಾನ್ಯ ಸನ್ನದುದಾರ ಕಂಗಾಲಾಗಿದ್ದಾನೆ. ವ್ಯವಹಾರವನ್ನೇ ಸಂಪೂರ್ಣ ಸ್ಥಗಿತಗೊಳಿಸುವ ಸ್ಥಿತಿ ಉಂಟಾಗಿದೆ. ಶೇಕಡ 80ರಷ್ಟು ಸಣ್ಣ ಸನ್ನದುದಾರರು ತೊಂದರೆ ಅನುಭವಿಸುತ್ತಿದ್ದು ಮೇ 6ನೇ ತಾರೀಖಿನಿಂದ ಹಂತಹಂತವಾಗಿ ಹೋರಾಟ ಆರಂಭಿಸಲಾಗುತ್ತಿದೆ.
ಮೇ 6ರಂದು ಗುಲ್ಬರ್ಗ ವಿಭಾಗದ ಜಿಲ್ಲೆಗಳಾದ ಬೀದರ್, ಗುಲ್ಬರ್ಗ, ರಾಯಚೂರು, ಯಾದಗಿರಿ, ಮೇ 10ರಂದು, ಹೊಸಪೇಟೆ ವಿಭಾಗದ ಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಗದಗ, ಕೊಪ್ಪಳ ಮತ್ತು ಬೆಳಗಾವಿ ವಿಭಾಗದ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ ,ಬಿಜಾಪುರ, ಧಾರವಾಡ, ಹಾವೇರಿ, ಮೇ 12ರಂದು, ಮೈಸೂರು ವಿಭಾಗದ ಜಿಲ್ಲೆಗಳಾದ ಮೈಸೂರು ,ಚಿಕ್ಕಮಗಳೂರು, ಹಾಸನ ,ಮಂಡ್ಯ ,ಮತ್ತು ಮಂಗಳೂರು ವಿಭಾಗದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ,ಉಡುಪಿ, ಉತ್ತರಕನ್ನಡ, ಮೇ 17ರಂದು- ಬೆಂಗಳೂರು ವಿಭಾಗದ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು, ಮೇ 19ರಂದು ಬೆಂಗಳೂರು ನಗರ ವಿಭಾಗದ ಕೆಎಸ್‌ಬಿಸಿಎಲ್ ಡಿಪೋಗಳಲ್ಲ ಮದ್ಯ ಖರೀದಿ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಕನ್ನಡ ನೆಲದ ಮಧ್ವಾಚಾರ್ಯರ ಜಯಂತಿ ಯಾಕಿಲ್ಲ: ದ್ವೈತ ಮತ ಅನುಯಾಯಿಗಳ ಬೇಸರ
ಹೀಗೆ ಮೇ 19 ರವರೆಗೂ ವಿವಿಧ ಜಿಲ್ಲೆಗಳಲ್ಲಿ ವಿಭಾಗವಾರು ಮದ್ಯ ಖರೀದಿ ಸ್ಥಗಿತ ಮಾಡಲಾಗುತ್ತಿದೆ. ಇಷ್ಟರ ಮೇಲೂ ಸರಕಾರ ನಮ್ಮ ಸಮಸ್ಯೆಯನ್ನು ಕಿವಿಗೆ ಹಾಕಿಕೊಳ್ಳಲಿಲ್ಲವಾದರೆ ಮೇ 19 ನೇ ತಾರೀಖಿನ ನಂತರ, ರಾಜ್ಯಾದ್ಯಂತ ಮದ್ಯ ಖರೀದಿ ಸ್ಥಗಿತ ಮಾಡಲು ತೀರ್ಮಾನಿಸಲಾಗಿದೆ.