ಸೆ.28 ಕರ್ನಾಟಕ ಬಂದ್ : ಹಲವು ಸೇವೆ ವ್ಯತ್ಯಯ. ಎಚ್ಚರ
ರಾಜ್ಯದಲ್ಲಿ ಜಾರಿಗೆ ತಂದ ಭೂ ಸುಧಾಕರಣ ಕಾಯ್ದೆ ತಿದ್ದು ಪಡಿ ಮಸೂದೆ ವಿರೋಧಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಅತ್ಯಂತ ಬಿಗಿಯಾದ ಹೋರಾಟ ನಡೆಯಲಿದೆ.
ಬೆಂಗಳೂರು (ಸೆ.27): ನಾಡಿನ ರೈತರ ವಿರೋಧ ಹಾಗೂ ಹೋರಾಟ ಲೆಕ್ಕಿಸದೆರಾಜ್ಯ ಸರ್ಕಾರ ಭೂ ಸುಧಾರಣಾ ತಿದ್ದುಪಡಿ ಮತ್ತು ಎಪಿಎಂಸಿ ತಿದ್ದುಪಡಿ ಮಸೂದೆಗಳಿಗೆ ಶಾಸನಸಭೆಯ ಅನುಮೋದನೆ ಪಡೆದಿದೆ ಎಂದು ಆರೋಪಿಸಿ ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಸೆ.28ರ ಸೋಮವಾರ ನಡೆಯಲಿದೆ.
"
ಕಳೆದ ಐದು ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಅದಕ್ಕೆ ಕಿವಿಗೊಡದೆ ಮಸೂದೆಗಳಿಗೆ ಅನುಮೋದನೆ ಪಡೆದಿರುವುದರಿಂದ ಕ್ರುದ್ಧರಾಗಿರುವ ಸಂಘಟನೆಗಳು ಕರ್ನಾಟಕ ಬಂದ್ ನಂತರ ಈ ಹೋರಾಟವನ್ನು ರಾಜ್ಯದ ಪ್ರತಿ ಹಳ್ಳಿಗೆ ಒಯ್ಯಲು ತೀರ್ಮಾನಿಸಿವೆ. ಜತೆಗೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ‘ಕಂಡಲ್ಲಿ ಘೇರಾವ್’ ಆಂದೋಲನ ಮೂಲಕ ಹೋರಾಟವನ್ನು ತೀವ್ರಗೊಳಿಸುವ ಸೂಚನೆ ನೀಡಿವೆ.
ವಿರೋಧದ ನಡುವೆಯೂ ಕರ್ನಾಟಕ ಭೂಸುಧಾರಣೆ ತಿದ್ದುಪಡಿ ವಿಧೇಯಕ ಅಂಗೀಕಾರ! .
ಶನಿವಾರ ವಿಧಾನಸಭೆಯಲ್ಲಿ ಈ ವಿಧೇಯಕಗಳು ಅನುಮೋದನೆ ಪಡೆಯುತ್ತಿದ್ದಂತೆಯೇ ತಾವು ಧರಣಿ ನಡೆಸುತ್ತಿದ್ದ ಫ್ರೀಡಂ ಪಾರ್ಕ್ನಲ್ಲೇ ತುರ್ತು ಸುದ್ದಿಗೋಷ್ಠಿ ನಡೆಸಿದ ಐಕ್ಯ ಸಮಿತಿ ಸದಸ್ಯರಾದ ಬಡಗಲಪುರ ನಾಗೇಂದ್ರ, ಕುರುಬೂರು ಶಾಂತಕುಮಾರ್, ಕೋಡಿಹಳ್ಳಿ ಚಂದ್ರಶೇಖರ್, ಗುರುಪ್ರಸಾದ್ ಕೆರಗೋಡು, ಮಾರುತಿ ಮಾನ್ಪಡೆ, ಡಾ. ಪ್ರಕಾಶ್ ಕಮ್ಮರಡಿ ಮೊದಲಾದ ನಾಯಕರು ಈ ಘೋಷಣೆ ಮಾಡಿದರು.
"
ಇನ್ಮುಂದೆ ಯಡಿಯೂರಪ್ಪ ಅವರನ್ನು ರೈತರ ಮಗ ಎಂದು ಕರೆಯುವುದಿಲ್ಲ. ಕಾರ್ಪೊರೇಟ್ ಕಂಪನಿಗಳ ದತ್ತು ಪುತ್ರ ಎಂಬ ಬಿರುದು ನೀಡುತ್ತೇವೆ. ತಾವೊಬ್ಬ ರೈತರ ಮಗ ಎಂದು ಹೇಳಿ, ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ತಾವು ತಮ್ಮ ಆತ್ಮಸಾಕ್ಷಿಗೆ ಬದ್ಧವಾಗಿ ಕೆಲಸ ಮಾಡಿ ಎಂದು ಶುಕ್ರವಾರದ ಮಾತುಕತೆ ವೇಳೆ ಅವರಿಗೆ ಪರಿಪರಿಯಾಗಿ ಮನವಿ ಮಾಡಿದ್ದೆವು. ಆದರೆ, ಕೊನೆಗೂ ಅವರು ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ರೈತರ ಜೀವನ ಸರ್ವನಾಶಕ್ಕೆ ನಿರ್ಧರಿಸಿ ಕಾರ್ಪೊರೇಟ್ ಕಂಪನಿಗಳ ಪರ ಎಂಬುದನ್ನು ಬಿಜೆಪಿ ಸರ್ಕಾರ ಸಾಬೀತುಪಡಿಸಿದೆ. ಪ್ರಜಾಸತ್ತಾತ್ಮಕ ವಿಧಾನವನ್ನೂ ಅನುಸರಿಸದೆ ಸರ್ವಾಧಿಕಾರಿ ಧೋರಣೆಯಿಂದ ರೈತರು, ಕಾರ್ಮಿಕರು, ದಲಿತರ ಮರಣ ಶಾಸನಗಳನ್ನು ಅಂಗೀಕರಿಸಿ ಜನರ ವಿಶ್ವಾಸಕ್ಕೆ ದ್ರೋಹ ಬಗೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂದ್‌ಗೆ 40 ಸಂಘಟನೆಗಳ ಬೆಂಬಲ
ರೈತ, ಕಾರ್ಮಿಕ, ದಲಿತ ವಿರೋಧಿ ಮಸೂದೆಗಳನ್ನು ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಸೆ.28ಕ್ಕೆ ಕರೆ ನೀಡಲಾಗಿರುವ ರಾಜ್ಯ ಬಂದ್‌ಗೆ 40ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದ್ದು, ಬಂದ್ ಸಂಪೂರ್ಣ ಯಶಸ್ವಿಯಾಗಲಿದೆ ಎಂದು ಐಕ್ಯ ಹೋರಾಟ ಸಮಿತಿ ಸದಸ್ಯರು ತಿಳಿಸಿದ್ದಾರೆ.
ಸರ್ಕಾರ ಮಸೂದೆಗಳನ್ನು ಹಿಂಪಡೆಯಬಹುದು ಎಂದು ಅಧಿವೇಶನ ಮುಗಿಯುವ ಕೊನೆ ಕ್ಷಣದವರೆಗೂ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆ ನಿರೀಕ್ಷೆ ಹುಸಿಯಾಗಿದೆ. ಹಾಗಾಗಿ ಸೋಮವಾರ ರಾಜ್ಯ ಬಂದ್ ನಡೆಸುವುದು ನಿಶ್ಚಿತವಾಗಿದೆ. ಬಂದ್ ದಿನ ಬೆಳಗ್ಗೆ 10 ಗಂಟೆಗೆ ಟೌನ್ ಹಾಲ್ ಬಳಿ ರೈತ, ಕಾರ್ಮಿಕ, ದಲಿತ ಸೇರಿದಂತೆ ಅನೇಕ ಸಂಘಟನೆಗಳ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಸಮಾವೇಶಗೊಳ್ಳಲಿದ್ದು, ಅಲ್ಲಿಂದ ಫ್ರೀಡಂ ಪಾರ್ಕ್ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದೇವೆ ಎಂದು ಐಕ್ಯ ಸಮಿತಿ ಸದಸ್ಯ ಕುರುಬೂರು ಶಾಂತಕುಮಾರ್ ತಿಳಿಸಿದರು.
ಬಂದ್‌ಗೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿಬಣ), ಓಲಾ, ಊಬರ್, ಆಟೋ, ಟ್ಯಾಕ್ಸಿ ಮಾಲಿಕರು, ಚಾಲಕರ ಸಂಘ, ತರಕಾರಿ ಮತ್ತು ಹಣ್ಣು ಸಗಟು ವರ್ತಕರ ಸಂಘ, ರಾಜ್ಯ ಬೀದಿ ಬದಿ ವ್ಯಾಪಾರಿಗಳ ಸಂಘ, ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ (ಎಐಟಿಯುಸಿ), ಸೋಷಿಯಲ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ-ಕಮ್ಯುನಿಸ್ಟ್), ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ, ವಕೀಲರ ಸಂಘ ಸೇರಿದಂತೆ 40ಕ್ಕೂ ಹೆಚ್ಚು ಸಂಘಟನೆಗಳು ಸಂಪೂರ್ಣ ಬೆಂಬಲ ಘೋಷಿಸಿವೆ ಎಂದರು.
1 ಲಕ್ಷ ಕೋಟಿ ಹಗರಣದ ಅನುಮಾನ:
ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿಗೂ ಮೊದಲೇ ಸರ್ಕಾರ ಮೂಲ ಕಾಯ್ದೆ ಉಲ್ಲಂಘಿಸಿದ್ದ 13,400 ಅಕ್ರಮ ಭೂ ಖರೀದಿ ಪ್ರಕರಣಗಳನ್ನು ಏಕಾಏಕಿ ಕೈಬಿಟ್ಟಉದ್ದೇಶವೇನು? ಭೂ ಮಾಫಿಯಾ ಜೊತೆ ಕೈಜೋಡಿಸಿ 1 ಲಕ್ಷ ಕೋಟಿ ರು.ನಷ್ಟುಹಗರಣ ನಡೆದಿರುವ ಅನುಮಾನಗಳಿವೆ. ಈಗ ಕಾಯ್ದೆ ತಿದ್ದುಪಡಿ ಮೂಲಕ ಅಧಿಕೃತವಾಗಿ ಕೃಷಿ ಭೂಮಿ ಬಲಾಡ್ಯರ ಪಾಲು ಮಾಡಲು ಹೊರಟಿದೆ. ಸರ್ಕಾರ ಶಾಸನ ಸಭೆಯಲ್ಲಿ ಮಸೂದೆಗಳಿಗೆ ಒಪ್ಪಿಗೆ ಪಡೆದಿರಬಹುದು, ಆದರೆ ಅದನ್ನು ಜಾರಿಗೊಳಿಸಲು ಬಿಡುವುದಿಲ್ಲ. ಈ ವಿಷಯವನ್ನು ಜನರ ಮುಂದಿಟ್ಟು ಜನ ಸಂಗ್ರಾಮ ರೂಪಿಸುತ್ತೇವೆ ಎಂದು ಐಕ್ಯ ಹೋರಾಟ ಸಮಿತಿ ಸದಸ್ಯರು ಇದೇ ವೇಳೆ ಸರ್ಕಾರಕ್ಕೆ ಎಚ್ಚರಿಸಿದರು.