ಇಂದು ರಾಜ್ಯ ಬಂದ್| ಕೃಷಿ ಮಸೂದೆಗೆ ವಿರೋಧ| ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ವಹಿವಾಟು ಸ್ಥಗಿತ| ಬಸ್, ರೈಲು, ಸರ್ಕಾರಿ ಕಚೇರಿ, ಹೋಟೆಲ್ ಬಂದ್ ಇಲ್ಲ| ಕ್ಯಾಬ್, ಮಾರುಕಟ್ಟೆಸ್ಥಗಿತ
ಬೆಂಗಳೂರು(ಸೆ.28): ರೈತರ ಹೋರಾಟ ಲೆಕ್ಕಿಸದೆ ಕೃಷಿ ಮಸೂದೆ, ಭೂ ಸುಧಾರಣೆ ಹಾಗೂ ಎಪಿಎಂಸಿ ತಿದ್ದುಪಡಿ ಮಸೂದೆಗಳ ಜಾರಿಗೆ ಹೊರಟಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕ್ರಮ ಖಂಡಿಸಿ ರೈತ, ಕಾರ್ಮಿಕ, ದಲಿತ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಕರೆ ನೀಡಿರುವ ಸೋಮವಾರದ ಕರ್ನಾಟಕ ಬಂದ್‌ಗೆ ಪ್ರಮುಖ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಸೇರಿದಂತೆ ನಾಡಿನ ಅನೇಕ ಸಂಘಟನೆಗಳು ಬೆಂಬಲ ಘೋಷಿಸಿವೆ.
ಸೋಮವಾರ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಬಂದ್‌ಗೆ ಕರೆ ನೀಡಲಾಗಿದ್ದು, ಈ ವೇಳೆ ಹಾಲು, ಪತ್ರಿಕೆ, ಆಂಬ್ಯುಲೆನ್ಸ್ ಸೇರಿದಂತೆ ಅಗತ್ಯ ಸೇವೆಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ಆಟೋ ಟ್ಯಾಕ್ಸಿ ಚಾಲಕರ ಸಂಘ ಬಂದ್‌ಗೆ ಬೆಂಬಲ ನೀಡಿರುವುದರಿಂದ ಖಾಸಗಿ ಸಾರಿಗೆ ಸೌಲಭ್ಯದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ಬಂದ್ ಇದ್ದರೂ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮತ್ತು ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದು ಸರ್ಕಾರ ಘೋಷಿಸಿದೆ. ಇನ್ನು, ರಾಜ್ಯ ಹೋಟೆಲ್ ಮಾಲಿಕರ ಸಂಘ, ಪೆಟ್ರೋಲ್ ಬಂಕ್, ಜ್ಯುವೆಲರಿ ಅಸೋಸಿಯೇಷನ್, ಖಾಸಗಿ ಬಸ್ ಚಾಲಕರ ಸಂಘ, ಬಾರ್ ಅಂಡ್ ರೆಸ್ಟೋರೆಂಟ್ ಮಾಲಿಕರ ಸಂಘ ಸೇರಿ ಇತರೆ ಕೆಲವು ಸಂಘಟನೆಗಳು ಬಂದ್‌ಗೆ ನೈತಿಕ ಬೆಂಬಲವನ್ನಷ್ಟೇ ಘೋಷಿಸಿದ್ದು, ಎಂದಿನಂತೆ ಇವುಗಳು ಕಾರ್ಯನಿರ್ವಹಿಸಲಿವೆ. ಹಾಗಾಗಿ ರೈತರ ಪ್ರತಿಭಟನೆ ಶಾಂತಿಯುತವಾಗಿರದೆ ಹೋರಾಟದ ಸ್ವರೂಪ ತೀವ್ರಗೊಂಡು ವಿಕೋಪಕ್ಕೆ ತಿರುಗಿದರೆ ಮಾತ್ರ ಸರ್ಕಾರಿ ಸಾರಿಗೆ ಸೌಲಭ್ಯ ಸೇರಿದಂತೆ ಇತರೆ ಸೇವೆಗಳಲ್ಲೂ ವ್ಯತ್ಯಯ ಉಂಟಾಗಬಹುದು.
40ಕ್ಕೂ ಹೆಚ್ಚು ಸಂಘಗಳ ಬೆಂಬಲ:
ಇನ್ನು ಬಂದ್ ವೇಳೆ ನಡೆಯುವ ಹೋರಾಟದ ರೂಪರೇಷೆಗಳ ಬಗ್ಗೆ ಮಾಹಿತಿ ನೀಡಿರುವ ರೈತ, ಕಾರ್ಮಿಕ, ದಲಿತ ಸಂಘಟನೆಗಳ ಐಕ್ಯ ಸಮಿತಿ ಸದಸ್ಯರಾದ ಬಡಗಲಪುರ ನಾಗೇಂದ್ರ, ಕುರುಬೂರು ಶಾಂತಕುಮಾರ್, ಕೋಡಿಹಳ್ಳಿ ಚಂದ್ರಶೇಖರ ಮತ್ತಿತರರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ಮಸೂದೆಗಳನ್ನು ಜಾರಿಗೊಳಿಸುತ್ತಿರುವುದನ್ನು ವಿರೋಧಿಸಿ ಸ್ವಯಂ ಪ್ರೇರಿತವಾಗಿ ರಾಜ್ಯ ಬಂದ್‌ಗೆ ಕರೆ ನೀಡಿದ್ದೇವೆ. ಐಕ್ಯ ಸಮಿತಿಯ ಈ ಬಂದ್‌ಗೆ 40ಕ್ಕೂ ಹೆಚ್ಚು ಸಂಘಟನೆಗಳು, ಪ್ರತಿಪಕ್ಷಗಳೂ ಕೂಡ ಬೆಂಬಲ ನೀಡಿವೆ. ಈ ಬಂದ್ ಬೆಂಬಲಿಸಿ ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿ, ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತೆ ನಾಡಿನ ಜನರಲ್ಲಿ ಮನವಿ ಮಾಡುತ್ತೇವೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಬಂದ್ ಯಶಸ್ವಿಯಾಗುವ ವಿಶ್ವಾಸವಿದೆ ಎಂದು ಹೇಳಿದರು.
ಟೌನ್‌ಹಾಲ್‌ನಿಂದ ಬೃಹತ್ ಮೆರವಣಿಗೆ:
ಸೋಮವಾರ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಐಕ್ಯ ಸಮಿತಿ ಬಂದ್‌ಗೆ ಕರೆ ನೀಡಿದ್ದು, ಬೆಳಗ್ಗೆಯಿಂದಲೇ ರೈತ, ಕಾರ್ಮಿಕ, ದಲಿತ ಸಂಘಟನೆಗಳು ರೈತ ವಿರೋಧಿ ಮಸೂದೆಗಳನ್ನು ಕೈಬಿಡುವಂತೆ ಆಗ್ರಹಿಸಿ ಎಲ್ಲೆಡೆ ಪ್ರತಿಭಟನೆ ನಡೆಸಲಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಟೌನ್‌ಹಾಲ್ ಬಳಿ ಸಾವಿರಾರು ಸಂಖ್ಯೆಯಲ್ಲಿ ರೈತರು ಹಾಗೂ ಇತರೆ ಸಂಘಟನೆಗಳ ಕಾಯಕರ್ತರು ಬೆಳಗ್ಗೆ 10 ಗಂಟೆ ವೇಳೆಗೆ ಸಮಾವೇಶಗೊಂಡು 11.30ರಿಂದ ಫ್ರೀಡಂ ಪಾರ್ಕ್ವರೆಗೆ ಬೃಹತ್ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸುತ್ತೇವೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರೂ ಆದ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಐಕ್ಯ ಸಮಿತಿಯಡಿ ಬರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ), ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ಕೃಷಿ ಕಾರ್ಮಿಕರ ಸಂಘ, ದಲಿತ ಸಂಘರ್ಷ ಸಮಿತಿ, ಹಿಂದ್ ಮಜದೂರ್ ಕಿಸಾನ್ ಪಂಚಾಯತ್, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಆಶಾ ಜನ ಶಕ್ತಿ ಸಂಘ ಸೇರಿದಂತೆ 9 ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರತಿಭಟನೆಗೆ ಅನುಮತಿ ಇಲ್ಲ: ಪೊಲೀಸ್
ರೈತ ಸಂಘಟನೆಗಳು ಸೇರಿದಂತೆ ಯಾವುದೇ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಸೋಮವಾರ ಬೆಂಗಳೂರಿನಲ್ಲಿ ಪ್ರತಿಭಟನೆ, ಮೆರವಣಿಗೆ ನಡೆಸಲು ನಮ್ಮ ಅನುಮತಿಯನ್ನೇ ಕೇಳಿಲ್ಲ. ಹಾಗಾಗಿ ನಾವು ಯಾರಿಗೂ ಅನುಮತಿಯನ್ನೂ ನೀಡಿಲ್ಲ. ಅನುಮತಿ ಇಲ್ಲದೆ ಪ್ರತಿಭಟನೆ, ಮೆರವಣಿಗೆಗೆ ಯಾರೇ ಮುಂದಾದರೂ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ.
ಆದರೆ, ಪೊಲೀಸರ ಹೇಳಿಕೆ ತಿರಸ್ಕರಿಸಿರುವ ರೈತ ಸಂಘಟನೆಗಳು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಪ್ರತಿಭಟನಾಕಾರರಿಂದ ಶಾಂತಿಯುತ ಪ್ರತಿಭಟನೆಗೆ ಸಹಿ ಪಡೆದುಕೊಳ್ಳಲಾಗಿದೆ. ಶಾಂತಿಯುತ ಪ್ರತಿಭಟನೆಗೆ ಎಲ್ಲರಿಗೂ ಹಕ್ಕಿದೆ. ಸರ್ಕಾರ ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಸಿದೆ. ಇದಕ್ಕೆ ನಾವು ಬಗ್ಗುವುದಿಲ್ಲ. ನಾವು ಪ್ರತಿಭಟನೆ ನಡೆಸುವುದು ಶತಃಸಿದ್ಧ. ಪೊಲೀಸರು ನಮ್ಮ ವಿರುದ್ಧ ಕ್ರಮ ಕೈಗೊಳ್ಳುವುದಾದರೆ ಕೈಗೊಳ್ಳಲಿ ಎಂದು ಹೇಳಿವೆ.
ಕರವೇ ರೈಲು ತಡೆ, ಮೆಜೆಸ್ಟಿಕ್‌ನಲ್ಲಿ ಬಸ್ ತಡೆ
ಬಂದ್ ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಸೋಮವಾರ ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಿ ರೈಲು ತಡೆ ಚಳವಳಿ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೆ, ಸುಮ್ಮನಹಳ್ಳಿ ಸೇರಿದಂತೆ ವಿವಿಧೆಡೆ ಪ್ರತಿಭಟನೆ, ಕರವೇ ಮಹಿಳಾ ಘಟಕದ ಕಾರ್ಯಕರ್ತರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ವಿವಾದಿತ ಮಸೂದೆಗಳನ್ನು ವಾಪಸ್ ಪಡೆಯಲು ಆಗ್ರಹಿಸಲಿದ್ದಾರೆ. ಮತ್ತೊಂದೆಡೆ ಕನ್ನಡಪರ ಚಳವಳಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮೆಜೆಸ್ಟಿಕ್‌ನಲ್ಲಿ ಬಸ್ ತಡೆದು ಪ್ರತಿಭಟನೆ ನಡೆಯಲಿದೆ.
ಬಂದ್‌ಗೆ ಯಾವ್ಯಾವ ಸಂಘಟನೆಗಳ ಬೆಂಬಲ?
ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ), ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿಬಣ), ಕನ್ನಡ ಚಳವಳಿ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟ, ಕನ್ನಡ ಸೇನೆ, ನಿರ್ಮಾಪಕ ಸಾ.ರಾ.ಗೋವಿಂದು ನೇತೃತ್ವದ ಡಾ.ರಾಜ್ ಅಭಿಮಾನಿಗಳ ಬಳಗ, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ, ಓಲಾ, ಊಬರ್, ಆಟೋ, ಟ್ಯಾಕ್ಸಿ ಮಾಲಿಕರು ಮತ್ತು ಚಾಲಕರ ಸಂಘ, ತರಕಾರಿ ಮತ್ತು ಹಣ್ಣು ಸಗಟು ವರ್ತಕರ ಸಂಘ, ರಾಜ್ಯ ಬೀದಿ ಬದಿ ವ್ಯಾಪಾರಿಗಳ ಸಂಘ, ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ (ಎಐಟಿಯುಸಿ), ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ), ಸೋಷಿಯಲ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ-ಕಮ್ಯುನಿಸ್ಟ್), ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ, ಬಂಡಾಯ ಸಾಹಿತ್ಯ ಸಂಘಟನೆ, ಬೆಂಗಳೂರು ಗ್ರಾಮಾಂತರ ವಕೀಲರ ಸಂಘ, ಕೆಲ ಎಪಿಎಂಸಿ, ಮಾರುಕಟ್ಟೆಗಳ ವರ್ತಕರ ಸಂಘ ಸೇರಿದಂತೆ 40ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಸಂಪೂರ್ಣ ಬೆಂಬಲ ಘೊಷಿಸಿವೆ.
ರೈತ ವಿರೋಧಿ ಮಸೂದೆಗಳ ಜಾರಿ ಮೂಲಕ ಅವರ ಜೀನವ ನಾಶ ಮಾಡಲು ಹೊರಟಿರುವ ಸರ್ಕಾರ ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಬಿಡದೆ ಹತ್ತಿಕ್ಕುವ ಪ್ರಯತ್ನ ನಡೆಸಿದೆ. ಪ್ರತಿಭಟನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನ ಹಕ್ಕು. ಯಾರ ಅಪ್ಪಣೆ ಕೇಳಿ ಖಾರ ಅರೆಯಬೇಕಿಲ್ಲ. ನಮ್ಮ ಹೋರಾಟ ನಾವು ಮಾಡುತ್ತೇವೆ. ಪೊಲೀಸರು ಅವರ ಪ್ರಯತ್ನ ಅವರು ಮಾಡಲಿ.
- ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ
ಸೋಮವಾರದ ಕರ್ನಾಟಕ ಬಂದ್‌ಗೆ ರೈತರು, ಕನ್ನಡಪರ, ಜನಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಮಹಿಳಾ ಸಂಘಟನೆಗಳು, ಜಾಯಿಂಟ್ ಕಮಿಟಿ ಆಫ್ ಟ್ರೇಡ್ ಯೂನಿಯನ್ ಸೇರಿ 40ಕ್ಕೂ ಹೆಚ್ಚು ಸಂಘಟನೆಗಳ ಕಾರ್ಯಕರ್ತರು ಬೆಂಬಲಿಸಿದ್ದು, ಬಂದ್ ಸಂಪೂರ್ಣ ಯಶಸ್ವಿಯಾಗುವ ನಿರೀಕ್ಷೆ ಇದೆ. ನಮ್ಮ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ.
- ಕುರುಬೂರು ಶಾಂತಕುಮಾರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ
ಪ್ರತಿಯೊಬ್ಬ ಚಾಲಕನೂ ರೈತನ ಮಗನೇ. ಜೀವನಕ್ಕಾಗಿ ನಾವು ಚಾಲಕ ವೃತ್ತಿಯಲ್ಲಿದ್ದರೂ ನಮ್ಮ ತಂದೆ, ಅಣ್ಣ ತಮ್ಮಂದಿರು ಕೃಷಿ ಮಾಡುತ್ತಿದ್ದಾರೆ. ಹಾಗಾಗಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಇದ್ದರೂ ರೈತರ ಬಂದ್‌ಗೆ ನಮ್ಮ ಸಂಪೂರ್ಣ ಬೆಂಬಲ ನೀಡುತ್ತೇವೆ. ಸೆ.28ರಂದು ಓಲಾ, ಊಬರ್ ವಾಹನಗಳು ಬೀದಿಗಿಳಿಯುವುದಿಲ್ಲ.
- ತನ್ವೀರ್, ಓಲಾ ಊಬರ್ ಟ್ಯಾಕ್ಸಿ ಚಾಲಕ ಮತ್ತು ಮಾಲಿಕರ ಸಂಘದ ಅಧ್ಯಕ್ಷ
ರೈತ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿ ಸೋಮವಾರ ಬೀದಿ ಬದಿ ವ್ಯಾಪಾರ ಸ್ಥಗಿತಗೊಳಿಸಲಾಗುವುದು. ಸರ್ಕಾರ ರೈತರ ಹೋರಾಟಕ್ಕೆ ಸ್ಪಂದಿಸಿ ವಿವಾದಿತ ಮಸೂದೆಗಳನ್ನು ಕೈಬಿಡಬೇಕು.
- ರಂಗಸ್ವಾಮಿ, ರಾಜ್ಯ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ
ರೈತರ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ. ಆದರೆ, ಈ ಬಾರಿ ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿದ್ದೇವೆ. ಹೀಗಾಗಿ ಬಂದ್‌ಗೆ ನಮ್ಮ ಸಂಘಟನೆ ನೈತಿಕ ಬೆಂಬಲ ವ್ಯಕ್ತಪಡಿಸುತ್ತದೆ. ಸೋಮವಾರ ಬಾರ್ ಅಂಡ್ ರೆಸ್ಟೋರೆಂಟ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
- ಕರುಣಾಕರ ಹೆಗಡೆ, ಬಾರ್ ಅಂಡ್ ರೆಸ್ಟೋರೆಂಟ್ ಮಾಲಿಕರ ಸಂಘದ ಉಪಾಧ್ಯಕ್ಷ
ಕೊರೋನಾ ಲಾಕ್‌ಡೌನ್‌ನಿಂದ ಈಗಾಗಲೇ ಹೋಟೆಲ್ ಉದ್ಯಮ ನಷ್ಟದಲ್ಲಿದೆ. ಒಂದೂಕಾಲು ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಬಂದ್‌ಗೆ ಬೆಂಬಲ ನೀಡಿದರೆ ಇನ್ನಷ್ಟುಹೊಡೆತ ಬೀಳುತ್ತದೆ. ಹಾಗಾಗಿ ರೈತ ಸಂಘಟನೆಗಳು ಕರೆಕೊಟ್ಟಿರುವ ಬಂದ್‌ಗೆ ನಮ್ಮದು ನೈತಿಕ ಬೆಂಬಲ ಮಾತ್ರ. ಎಂದಿನಂತೆ ಹೋಟೆಲ್‌ಗಳು ತೆರೆದಿರುತ್ತವೆ.
- ಪಿ.ಸಿ.ರಾವ್, ಬೆಂಗಳೂರು ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ
ಏನಿರುತ್ತೆ?
ಹಾಲು, ಪತ್ರಿಕೆ, ಆಂಬ್ಯುಲೆನ್ಸ್ ಸೇರಿದಂತೆ ಅಗತ್ಯ ವಸ್ತುಗಳು. ಆಸ್ಪತ್ರೆಗಳು, ಸರ್ಕಾರಿ ಕಚೇರಿ, ಬ್ಯಾಂಕ್, ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ರೈಲು, ಮೆಟ್ರೋ ರೈಲು, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ಖಾಸಗಿ ಬಸ್ಸು
ಏನಿರಲ್ಲ?
ಓಲಾ, ಊಬರ್, ಆಟೋ, ಟ್ಯಾಕ್ಸಿ, ಎಪಿಎಂಸಿ-ಮಾರುಕಟ್ಟೆ(ಕೆಲವೆಡೆ), ಬೀದಿ ಬದಿ ವ್ಯಾಪಾರ
ಬಂದ್ ಕೈಬಿಡಿ: ಸಿಎಂ ಮನವಿ
ಬೆಂಗಳೂರು: ರೈತರಿಗೆ ಯಾವುದೇ ಕಾರಣಕ್ಕೂ ಮಸೂದೆಯಿಂದ ಅನ್ಯಾಯವಾಗುವುದಿಲ್ಲ. ರೈತರು ಬಂದ್ ಕೈಬಿಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮನವಿ ಮಾಡಿದ್ದಾರೆ.
ದ.ಕ., ಉಡುಪಿ, ಕೊಡಗಲ್ಲಿ ಬಂದ್ ಇಲ್ಲ
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಬಂದ್‌ಗೆ ನೈತಿಕ ಬೆಂಬಲ ಘೋಷಿಸಲಾಗಿದೆ. ಆದರೆ ವ್ಯಾಪಾರ ವಹಿವಾಟು ಸ್ಥಗಿತಗೊಳ್ಳದೆ ಎಂದಿನಂತೆ ನಡೆಯಲಿದೆ.
