ವಿಧಾನಸಭೆ[ಅ.12]: ರಾಜ್ಯದಲ್ಲಿ ಸಂಭವಿಸಿದ್ದ ಪ್ರವಾಹವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಲು ಉಭಯ ಸದನಗಳಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕು ಎಂಬ ಮಾಜಿ ಸಚಿವ ಎಚ್‌.ಕೆ. ಪಾಟೀಲ್‌ ಅವರ ಖಾಸಗಿ ವಿಧೇಯಕ ಮಂಡನೆಗೆ ಆಡಳಿತ ಪಕ್ಷದ ಸಚಿವರು ವಿರೋಧ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಕಾಂಗ್ರೆಸ್‌ ಸದಸ್ಯರು ಶುಕ್ರವಾರ ಸಂಜೆ ವಿಧಾನಸಭೆಯಿಂದ ಸಭಾತ್ಯಾಗ ಮಾಡಿದರು.

ನೆರೆ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಎಚ್‌.ಕೆ. ಪಾಟೀಲ್‌, ನೆರೆಯಿಂದ ಲಕ್ಷಾಂತರ ಮಂದಿ ಬೀದಿಗೆ ಬಿದ್ದಿದ್ದು, ಕೋಟ್ಯಂತರ ರು. ಮೌಲ್ಯದ ಆಸ್ತಿ ಹಾಗೂ ಬೆಳೆ ನಷ್ಟಉಂಟಾಗಿದೆ. 10,729 ಶಾಲೆಗಳು ಹಾನಿಗೊಳಗಾಗಿ, ವಿದ್ಯಾರ್ಥಿಗಳು ಶಾಲೆಗೂ ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. 2 ಲಕ್ಷ ಮನೆ ಹಾನಿಗೊಳಗಾಗಿ ಜನರು ಬೀದಿಗೆ ಬಿದ್ದಿದ್ದಾರೆ. ಹೀಗಿದ್ದರೂ ಕೇಂದ್ರದಿಂದ ನೆರೆ ಪರಿಹಾರಕ್ಕೆ ರಾಜ್ಯ ಸರ್ಕಾರ ಒತ್ತಾಯಿಸಿಲ್ಲ. ಹೀಗಾಗಿ 60 ದಿನಗಳ ಬಳಿಕ 1,200 ಕೋಟಿ ರು. ಘೋಷಿಸಿದ್ದರೂ, ಈವರೆಗೂ ರಾಜ್ಯಕ್ಕೆ ತಲುಪಿದ ಖಾತ್ರಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಚಾರದಲ್ಲಿ ಸರ್ಕಾರವನ್ನು ಟೀಕಿಸಲ್ಲ, ಬೆಂಬಲಿಸುತ್ತೇನೆಂದ ಮಾಜಿ ಸಿಎಂ ಎಚ್‌ಡಿಕೆ!

ಹೀಗಾಗಿ ರಾಜ್ಯದ ನೆರೆಗೆ ಉತ್ತಮ ಅನುದಾನ ದೊರೆಯುವ ನಿಟ್ಟಿನಲ್ಲಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಈ ಬಗ್ಗೆ ಹೋರಾಟ ನಡೆಸಲು ರಾಜ್ಯ ಸರ್ಕಾರ ಹಾಗೂ ವಿರೋಧಪಕ್ಷಗಳು ವಿಫಲವಾಗಿವೆ. ಕನಿಷ್ಠ ಈಗಲಾದರೂ ವಿಧನಮಂಡಲ ಉಭಯ ಸದನಗಳಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಮನವಿ ಸಲ್ಲಿಸಬೇಕು. ಇದರಿಂದ ಹೆಚ್ಚುವರಿ ಅನುದಾನ ದೊರೆಯಲಿದೆ ಎಂದು ಸಲಹೆ ನೀಡಿದರು. ಆದರೆ, ಖಾಸಗಿ ವಿಧೇಯಕ ಮಂಡನೆಗೆ ಅವಕಾಶ ನೀಡಲು ಆಕ್ಷೇಪ ವ್ಯಕ್ತಪಡಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಖಾಸಗಿ ನಿರ್ಣಯ ಮಂಡಿಸಲು ಸೂಕ್ತ ನಿಯಮಗಳಿವೆ. ಏಕಾಏಕಿ ಖಾಸಗಿ ವಿಧೇಯಕ ಮಂಡಿಸಲು ಅವಕಾಶ ನೀಡಬಾರದು. ಪ್ರಸ್ತಾಪವನ್ನು ತಿರಸ್ಕರಿಸಬೇಕು ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು.

ಇದರಿಂದ ಕೆರಳಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಖಾಸಗಿ ವಿಧೇಯಕ ಮಂಡಿಸಲು ಏಕೆ ಅವಕಾಶವಿಲ್ಲ? ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿದರೆ ಸರ್ಕಾರಕ್ಕೆ ಹೆಚ್ಚುವರಿ ಅನುದಾನ ದೊರೆಯುತ್ತದೆ. ಇದರಿಂದ ನಿಮ್ಮ ಸರ್ಕಾರಕ್ಕೇ ಅನುಕೂಲ ಆಗುತ್ತದೆ. ವಿಧೇಯಕ ಮಂಡಿಸಲು ಅವಕಾಶ ನೀಡಬೇಕು. ನಿಯಮಾವಳಿಗಳ ನೆಪದಲ್ಲಿ ಅವಕಾಶ ನೀಡದ ನಿಮ್ಮ ಕ್ರಮ ಸರಿಯಲ್ಲ ಎಂದು ಆಕ್ಷೇಪಿಸಿ ಸಭಾತ್ಯಾಗ ನಡೆಸಿದರು. ಬಳಿಕ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನವನ್ನು ಶನಿವಾರಕ್ಕೆ ಮುಂದೂಡಿದರು.

ಶೈಕ್ಷಣಿಕ ವರ್ಷವನ್ನು ಮುಂದೂಡಿ: ಎಚ್‌ಕೆ 

ಇದಕ್ಕೂ ಮೊದಲು ಮಾತನಾಡಿದ ಎಚ್‌.ಕೆ. ಪಾಟೀಲ್‌, 2009ರಲ್ಲಿ ನೆರೆ ಉಂಟಾದಾಗ ಬೆಂಗಳೂರಿನಲ್ಲಿ ಬಿ.ಎಸ್‌. ಯಡಿಯೂರಪ್ಪ ಪರಿಹಾರ ಸಂಗ್ರಹಿಸಲು ರಾರ‍ಯಲಿ ನಡೆಸಿದ್ದರು. ಈ ವೇಳೆ ಖಾಸಗಿ, ಸಾರ್ವಜನಿಕ ಸಂಸ್ಥೆಗಳು, ಸಾರ್ವಜನಿಕರು ಪ್ರವಾಹದ ರೀತಿಯಲ್ಲಿ 2,400 ಕೋಟಿ ರು. ಪರಿಹಾರವನ್ನು ನೀಡಿದ್ದರು. ಆದರೆ, ಹಣದ ಬಳಕೆಯನ್ನು ಸಮರ್ಪಕವಾಗಿ ಮಾಡಲು ಸರ್ಕಾರ ವಿಫಲವಾಯಿತು. ಹೀಗಾಗಿ ವಿಶ್ವಾಸ ಕಳೆದುಕೊಂಡಿದ್ದು, ಪ್ರಸ್ತುತ ನೆರೆ ಉಂಟಾಗಿ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳು ಮನವಿ ಮಾಡಿದರೂ ನಿರೀಕ್ಷಿತ ಪ್ರಮಾಣದಲ್ಲಿ ನೆರವು ಹರಿದುಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೆರೆಯಿಂದ 2 ಸಾವಿರ ಶಾಲೆಗಳು ಸಂಪೂರ್ಣ ಬಿದ್ದು ಹೋಗಿವೆ. 4,923 ಶಾಲೆಗಳು ಶೇ.70 ರಷ್ಟುಹಾನಿಗೊಳಗಾಗಿವೆ. 3 ಸಾವಿರಕ್ಕೂ ಹೆಚ್ಚು ಶಾಲೆಗಳು ಶೇ.60 ರಷ್ಟುಸೇರಿ ಒಟ್ಟು 10,729 ಶಾಲೆಗಳು ಹಾನಿಗೊಳಗಾಗಿವೆ. ಶಾಲಾ ಕೊಠಡಿಯೊಂದನ್ನು ನಿರ್ಮಿಸಲೇ 5 ಲಕ್ಷ ರು. ಬೇಕಾಗುತ್ತದೆ. ಆದರೆ, ಶಾಲೆ ನಿರ್ಮಾಣಕ್ಕೆ 2 ಲಕ್ಷ ರು. ನೀಡುವುದಾಗಿ ಹೇಳಿದ್ದೀರಿ. ಕೆಲವು ಶಾಲೆಗಳಲ್ಲಿ 35 ದಿನಗಳಿಂದ 61ದಿನಗಳವರೆಗೆ ತರಗತಿಯೇ ನಡೆಯುತ್ತಿಲ್ಲ. ಹೀಗಾಗಿ ಶೈಕ್ಷಣಿಕ ವರ್ಷವನ್ನು ಮುಂದೂಡಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ ಎಂದು ಒತ್ತಾಯಿಸಿದರು.

ಈ ವೇಳೆ ಸಚಿವ ಜೆ.ಸಿ. ಮಾಧುಸ್ವಾಮಿ, ಸಂಪೂರ್ಣ ಹಾಳಾಗಿರುವ ಶಾಲೆಗಳ ನಿರ್ಮಾಣಕ್ಕೆ 13.5 ಲಕ್ಷ ರು. ನೀಡಲು ಹಾಗೂ ಉಳಿದ ಶಾಲೆಗಳ ಪುನರ್‌ ನಿರ್ಮಾಣಕ್ಕೆ ವಾಸ್ತವ ಅಂದಾಜು ಸಲ್ಲಿಸುವಂತೆ ಸೂಚಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಬೇಕಿದ್ದರೆ ಬೆಳಗಾವಿಯಲ್ಲಿ ಪೊಲೀಸ್‌ ಭದ್ರತೆಯಲ್ಲಿ ಕಲಾಪ ನಡೆಸುತ್ತಿದ್ದೆವು!

ಬೆಳಗಾವಿಯಲ್ಲಿ ನಡೆಯಬೇಕಿದ್ದ ಅಧಿವೇಶನವನ್ನು ಹೆದರಿ ಬೆಂಗಳೂರಿಗೆ ಸ್ಥಳಾಂತರಿಸಿಲ್ಲ. ಬೆಳಗಾವಿಯಲ್ಲಿ ನಡೆಸುವುದಿದ್ದರೆ ಸಂತ್ರಸ್ತರ ತಡೆಯಲು ಎರಡು ಕಿ.ಮೀ. ಪೊಲೀಸ್‌ ಬಂದೋಬಸ್‌್ತ ಹಾಕಿ, 144 ಕಾಯ್ದೆಯಡಿ ನಿಷೇಧಾಜ್ಞೆ ಜಾರಿಗೆ ತಂದು ಅಧಿವೇಶನ ನಡೆಸುತ್ತಿದ್ದೆವು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಬೆಳಗಾವಿ ಸಂತ್ರಸ್ತರ ಆಕ್ರೋಶಕ್ಕೆ ಹೆದರಿ ಬೆಂಗಳೂರಿಗೆ ಅಧಿವೇಶನ ಸ್ಥಳಾಂತರಿಸಿದ್ದೀರಿ ಎಂಬ ಮಾಜಿ ಸಚಿವ ಎಚ್‌.ಕೆ. ಪಾಟೀಲ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಮಾತು ವಾಪಸು ತೆಗೆದುಕೊಳ್ಳಿ. ನಾವು ಯಾರಿಗೂ ಹೆದರಿಕೊಂಡು ಇಲ್ಲಿ ಸದನ ನಡೆಸುತ್ತಿಲ್ಲ. ಬೆಳಗಾವಿ ಜಿಲ್ಲಾಡಳಿತ ಅಧಿವೇಶನ ಸಿದ್ಧತೆಯಲ್ಲಿ ತೊಡಗಿದರೆ ಪರಿಹಾರ ಕಾರ್ಯಕ್ಕೆ ಅಡಚಣೆಯಾಗುತ್ತದೆ ಎಂಬ ಅಭಿಪ್ರಾಯದಿಂದ ಇಲ್ಲಿ ನಡೆಸುತ್ತಿದ್ದೇವೆ. ಅಲ್ಲಿನ ಸಂತ್ರಸ್ತರು, ಪ್ರತಿಭಟನೆಕಾರರರಿಗೆ ಹೆದರುವ ಅಗತ್ಯವಿಲ್ಲ. ಪ್ರತಿಭಟನೆ ಎದುರಾದರೆ ಎಲ್ಲಾ ಸರ್ಕಾರಗಳು ಮಾಡುವಂತೆ ಎರಡು ಕಿ.ಮೀ. ಪೊಲೀಸ್‌ ಬಂದೋಬಸ್‌್ತ ಹಾಕುತ್ತಿದ್ದೆವು. ಇಲ್ಲಿ ಹಾಕಿರುವ ನಿಷೇಧಾಜ್ಞೆ ಬೆಳಗಾವಿಯಲ್ಲಿ ಹಾಕಿ ಅಧಿವೇಶನ ನಡೆಸುತ್ತಿದ್ದೆವು ಎಂದು ಸ್ಪಷ್ಟಪಡಿಸಿದರು.

‘ನಿಮ್ಮ ಮಾತು ಕೇಳಲ್ಲ.. ಕೇಳಕಾಗಲ್ಲ’ ಸಿದ್ದು ಸವಾಲು, ಸ್ಪೀಕರ್ ಕೂಲ್ ಕೂಲ್!