Asianet Suvarna News Asianet Suvarna News

ಈ ವಿಚಾರದಲ್ಲಿ ಸರ್ಕಾರವನ್ನು ಟೀಕಿಸಲ್ಲ, ಬೆಂಬಲಿಸುತ್ತೇನೆಂದ ಮಾಜಿ ಸಿಎಂ ಎಚ್‌ಡಿಕೆ!

ಈ ವಿಚಾರದಲ್ಲಿ ಸರ್ಕಾರವನ್ನು ಟೀಕಿಸಲ್ಲ, ಬೆಂಬಲಿಸುತ್ತೇನೆಂದ ಮಾಜಿ ಸಿಎಂ ಕುಮಾರಸ್ವಾಮಿ!| ಎನ್‌ಡಿಆರ್‌ಎಫ್‌ ನಿಯಮದ ಬಗ್ಗೆ ತಲೆಕೆಡಿಸಿಕೊಳ್ಳದೆ ಕ್ರಮ ಕೈಗೊಳ್ಳಲು ಮಾಜಿ ಸಿಎಂ ಸಲಹೆ

Karnataka Flood relief measures HD kumaraswamy supports BJP Govt
Author
Bangalore, First Published Oct 12, 2019, 8:23 AM IST

ವಿಧಾನಸಭೆ[ಅ.12]: ರಾಜ್ಯದಲ್ಲಿ ಉಂಟಾಗಿರುವ ತೀವ್ರ ನೆರೆ ಹಾಗೂ ಪರಿಹಾರ ವೈಫಲ್ಯದ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಟೀಕೆ-ಟಿಪ್ಪಣಿ ಮಾಡದೆ ಧನಾತ್ಮಕ ಸಲಹೆ ಹಾಗೂ ಪರಿಹಾರ ಕಾರ್ಯಗಳಿಗೆ ಅಗತ್ಯವಿರುವ ಎಲ್ಲಾ ಸಹಕಾರ ನೀಡುವುದಾಗಿ ಘೋಷಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸರ್ಕಾರಕ್ಕೆ ಬೆಂಬಲ ಸೂಚಿಸಿದರು.

ನೆರೆ ಪರಿಹಾರದ ವಿಚಾರದಲ್ಲಿ ಕೆಸರೆರಚಾಟ ಮಾಡುವುದಿಲ್ಲ. ಸದನವನ್ನು ರಾಜಕೀಯ ವೇದಿಕೆಯಾಗಿ ಮಾಡಿಕೊಳ್ಳುವುದಿಲ್ಲ. ರಾಜಕೀಯ ಮಾಡಲು ಬೇರೆ ಸ್ಥಳಗಳಿವೆ. ಟೀಕೆ ಹಾಗೂ ಕೆಸರೆರಚಾಟದಿಂದ ಸಂತ್ರಸ್ತರಿಗೆ ಪರಿಹಾರ ಸಿಗುವುದಿಲ್ಲ. ಹೀಗಾಗಿ ನಾವು ಟೀಕೆಗೆ ಹೋಗದೆ ಸರ್ಕಾರಕ್ಕೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತೇವೆ ಎಂದು ಘೋಷಿಸಿದರು. ಇದಕ್ಕೆ ಜೆಡಿಎಸ್‌ ಹಾಗೂ ಆಡಳಿತ ಪಕ್ಷದ ಶಾಸಕರು ಮೇಜು ಕುಟ್ಟಿಸ್ವಾಗತಿಸಿದರು.

ನೆರೆ ರಾಷ್ಟ್ರೀಯ ವಿಪತ್ತೆಂದು ಘೋಷಿಸಿ: ಕಾಂಗ್ರೆಸ್ ಪಟ್ಟು, ಸ್ಪೀಕರ್ ನಿರಾಕರಣೆ!

ನೆರೆ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 2009ರ ಪ್ರವಾಹಕ್ಕಿಂತ 10 ಪಟ್ಟು ಅನಾಹುತ ಸಂಭವಿಸಿದೆ. ಸರ್ಕಾರದ ಬಳಿ ಹಣಕಾಸಿನ ಕೊರತೆ ಇಲ್ಲ. ಹೆಚ್ಚುವರಿ ಅನುದಾನ ಲಭ್ಯವಿರುವ ಇಲಾಖೆಗಳ 10-15 ಸಾವಿರ ಕೋಟಿ ರು. ಹಣವನ್ನು ಪರಿಹಾರ ಕಾರ್ಯಗಳಿಗೆ ವರ್ಗಾಯಿಸಿಕೊಳ್ಳಿ. ಈ ಕುರಿತು ಎಲ್ಲಾ ರೀತಿಯ ಬೆಂಬಲವನ್ನೂ ನೀಡುತ್ತೇವೆ. ಟೀಕೆಗಳಿಂದ ರಸ್ತೆಗೆ ಬಿದ್ದಿರುವ ಸಂತ್ರಸ್ತರ ಪರಿಸ್ಥಿತಿ ಸುಧಾರಿಸುವುದಿಲ್ಲ. ಪರಿಹಾರ ನೀಡುವ ವಿಳಂಬದ ಬಗ್ಗೆ ಕೇಂದ್ರ ಸರ್ಕಾರವನ್ನೂ ದೂರುವುದಿಲ್ಲ. ಎನ್‌ಡಿಆರ್‌ಎಫ್‌ ನಿಯಮಾವಳಿಯಿಂದ ಪರಿಹಾರ ನೀಡುವುದರಲ್ಲಿ ಸಮಸ್ಯೆಯಾಗುತ್ತದೆ. ಕೊಡಗು ಪ್ರವಾಹದಲ್ಲೂ ಆಗಸ್ಟ್‌ನ ಪ್ರವಾಹಕ್ಕೆ ನವೆಂಬರ್‌ ತಿಂಗಳಲ್ಲಿ ಪರಿಹಾರ ನೀಡಿದ್ದರು. ಹೀಗಾಗಿ ಎನ್‌ಡಿಆರ್‌ಎಫ್‌ ನಿಯಮಾವಳಿ ಕಿತ್ತೆಸೆದು ಪರಿಹಾರ ಕ್ರಮದಲ್ಲಿ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು.

ರಾತ್ರೋರಾತ್ರಿ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಪರಿಹಾರ ಕ್ರಮಕ್ಕಾಗಿ ಬೆಳಗಾವಿ ಜಿಲ್ಲೆಗೆ 800 ಕೋಟಿ ರು. ನೀಡಿದ್ದೀರಿ. ಬಾಗಲಕೋಟೆಗೆ 180 ಕೋಟಿ ರು. ನೀಡಿದ್ದೀರಿ. ಆದರೆ, ಹಣ ಖರ್ಚು ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಜತೆಗೆ ಪರಿಹಾರ ಅರ್ಹರಿಗೆ ಸಿಗುತ್ತಿಲ್ಲ ಎಂಬ ಸಮಸ್ಯೆಗಳನ್ನು ಬಗೆಹರಿಸಿ. ನಾನು ಈ ಸಲಹೆಗಳನ್ನು ಟೀಕೆ ಮಾಡಲು ಹೇಳುತ್ತಿಲ್ಲ. ಬದಲಿಗೆ ಸರಿಪಡಿಸಿಕೊಳ್ಳಲು ಸಲಹಾತ್ಮಕವಾಗಿ ಹೇಳುತ್ತಿದ್ದೇನೆ ಎಂದು ಸ್ಪಷ್ಟನೆಯನ್ನೂ ನೀಡಿದರು.

ಹಲವಾರು ಕಡೆ ಸಮಸ್ಯೆಗಳಿವೆ. ನಿರಾಶ್ರಿತರಿಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಶೆಡ್‌ ನಿರ್ಮಿಸಿಲ್ಲ. ಶೆಡ್‌ ನಿರ್ಮಿಸಿದ್ದರೂ ಶೆಡ್‌ಗೆ ಸ್ಥಳಾಂತರಗೊಂಡರೆ ವಸತಿ ನಿರ್ಮಾಣಕ್ಕೆ ಘೋಷಿಸಿರುವ 5 ಲಕ್ಷ ರು. ನೀಡುವುದಿಲ್ಲ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಇವುಗಳನ್ನೆಲ್ಲಾ ಬಗೆಹರಿಸಬೇಕು. ಚಂದ್ರೇಗೌಡ, ಚನ್ನಪ್ಪಗೌಡ ಎಂಬ ಇಬ್ಬರು ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಅವರಿಗೆ ಪರಿಹಾರ ನೀಡಿಲ್ಲ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಎಂದರು.

ಪರಿಹಾರ ಕಾರ್ಯಗಳಿಗೆ ನೋಡಲ್‌ ಏಜೆನ್ಸಿ ಮಾಡಿಕೊಂಡು ಕೆಲಸ ಮಾಡಿ. ಪರಿಹಾರ ಕಾರ್ಯಗಳ ಕುರಿತು ಸರ್ವಪಕ್ಷಗಳ ಸಭೆ ಮಾಡಿ ವಿರೋಧಪಕ್ಷಗಳ ಸಲಹೆ ಪಡೆಯುವಂತೆ ಸಲಹೆ ನೀಡಿದ್ದೆ. ಆದರೆ, ಮುಖ್ಯಮಂತ್ರಿಗಳು ಸಲಹೆಯನ್ನು ಸ್ವೀಕರಿಸಿಲ್ಲ. ಈಗಲಾದರೂ ಅಗತ್ಯ ಕ್ರಮ ಕೈಗೊಳ್ಳಿ. ನಾವು ಬೆಂಬಲ ಸೂಚಿಸುತ್ತೇವೆ ಎಂದರು.

‘ನಿಮ್ಮ ಮಾತು ಕೇಳಲ್ಲ.. ಕೇಳಕಾಗಲ್ಲ’ ಸಿದ್ದು ಸವಾಲು, ಸ್ಪೀಕರ್ ಕೂಲ್ ಕೂಲ್!

ಸರ್ಕಾರ ಪತನ ಹೇಳಿಕೆ ಬೇಡ:

ಈ ಸರ್ಕಾರ ಎಷ್ಟುದಿನ ನಡೆಯುತ್ತದೆ ಎಂಬ ಅನುಮಾನ ಜನರಲ್ಲಿ ಬಾರದಂತೆ ನೋಡಿಕೊಳ್ಳಿ. ಇತ್ತೀಚೆಗೆ ಬಸನಗೌಡ ಯತ್ನಾಳ್‌ ಅವರು ಇಬ್ಬರು ಕೇಂದ್ರ ಸಚಿವರು ಯಡಿಯೂರಪ್ಪ ಸರ್ಕಾರ ಪತನಗೊಳಿಸಲು ಪಿತೂರಿ ನಡೆಸಿದ್ದಾರೆ ಎಂದಿದ್ದರು. ಇಂತಹ ಅಸ್ಥಿರತೆಯ ಹೇಳಿಕೆಗಳಿಂದ ಅಧಿಕಾರಿಗಳಿಗೆ ಸರ್ಕಾರದ ಬಗ್ಗೆ ನಿರ್ಲಕ್ಷ್ಯ ಬರುತ್ತದೆ. ಇವರೂ ಇಂದಲ್ಲ ನಾಳೆ ಅಧಿಕಾರದಿಂದ ಇಳಿಯುತ್ತಾರೆ ಎಂದು ಕೆಲಸ ಮಾಡುವುದಿಲ್ಲ. ಹೀಗಾಗಿ ಇಂತಹ ಹೇಳಿಕೆಗಳ ಬಗ್ಗೆ ಎಚ್ಚರವಹಿಸಬೇಕು ಎಂದೂ ಸಲಹೆ ನೀಡಿದರು.

Follow Us:
Download App:
  • android
  • ios