Asianet Suvarna News Asianet Suvarna News

ಈಗಲ್ಟನ್‌ ರೆಸಾರ್ಟ್‌ಗೆ ಸದನ ಸಮಿತಿ ಭೇಟಿ; ಪರಿಶೀಲನೆ!

ಈಗಲ್ಟನ್‌ ರೆಸಾರ್ಟ್‌ಗೆ ಸದನ ಸಮಿತಿ ಭೇಟಿ; ಪರಿಶೀಲನೆ| ಎಚ್‌ಕೆ ನೇತೃತ್ವದ ತಂಡದಿಂದ ಮಾಹಿತಿ ಸಂಗ್ರಹ

Karnataka Assembly Committee Visits To Eagleton resort
Author
Bangalore, First Published Feb 5, 2020, 10:00 AM IST | Last Updated Feb 5, 2020, 10:00 AM IST

ರಾಮನಗರ[ಫೆ.05]: ಭೂಕಬಳಿಕೆಯ ಆರೋಪದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆ ಬಿಡದಿ ಸಮೀಪ ಇರುವ ಈಗಲ್ಟನ್‌ ರೆಸಾರ್ಟ್‌ಗೆ ವಿಧಾನಸಭಾ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜಿಲ್ಲಾಧಿಕಾರಿ, ತಹಸೀಲ್ದಾರ್‌, ಕಂದಾಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

ಸಮಿತಿಯ ಅಧ್ಯಕ್ಷರಾದ ಶಾಸಕ ಎಚ್‌.ಕೆ.ಪಾಟೀಲ್‌, ಸಮಿತಿಯ ಸದಸ್ಯರು, ಮಾಜಿ ಸ್ಪೀಕರ್‌ಗಳಾದ ಕೆ.ಜಿ.ಬೋಪಯ್ಯ ಮತ್ತು ಕೆ.ಆರ್‌.ರಮೇಶ್‌ ಕುಮಾರ್‌, ಶಾಸಕರಾದ ಎ.ಟಿ.ರಾಮಸ್ವಾಮಿ ಮತ್ತು ಟಿ.ಎ.ಶರವಣ ತಂಡದಲ್ಲಿದ್ದರು.

ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಅಧ್ಯಕ್ಷ ಎಚ್‌.ಕೆ.ಪಾಟೀಲ್‌, ಈಗಲ್ಟನ್‌ ರೆಸಾರ್ಟ್‌ನ ಒಟ್ಟು ಪ್ರದೇಶ 508 ಎಕರೆ ಇದೆ. ಈ ಪೈಕಿ 208 ಎಕರೆ 33 ಗುಂಟೆ ಭೂಮಿ ಸರ್ಕಾರಕ್ಕೆ ಸೇರಿದೆ. ವ್ಯಾಜ್ಯ ಸುಪ್ರಿಂ ಕೋರ್ಟಿಗೂ ಹೋಗಿತ್ತು. ನ್ಯಾಯಾಲಯದ ಆದೇಶದಂತೆ 78 ಎಕರೆ ಭೂಮಿಗೆ ಮಾರುಕಟ್ಟೆಬೆಲೆ ಕಟ್ಟಿಕೊಡಬೇಕಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಪುಟ ಉಪಸಮಿತಿ ರಚನೆಯಾಗಿತ್ತು. ಒತ್ತುವರಿಯಾಗಿರುವ ಭೂಮಿಗೆ .980 ಕೋಟಿ ಮಾರುಕಟ್ಟೆಬೆಲೆ ನಿಗದಿ ಪಡಿಸಿ, ಪಾವತಿ ಮಾಡುವಂತೆ ನಿರ್ಣಯಿಸಲಾಗಿತ್ತು. ನಿಗದಿಪಡಿಸಿರುವ ಬೆಲೆ ಹೆಚ್ಚಾಗಿದೆ ಎಂದು ಈಗಲ್ಟನ್‌ ರೆಸಾರ್ಟ್‌ನವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ ಎಂದು ಮಾಹಿತಿ ನೀಡಿದರು.

78 ಎಕರೆ ಭೂಮಿಗೆ ಮಾತ್ರ ಕಿಮ್ಮತ್ತು:

ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ ಮಾತನಾಡಿ, ಈಗಲ್ಟನ್‌ ರೆಸಾರ್ಟ್‌ ವತಿಯಿಂದ ಒತ್ತುವರಿಯಾಗಿದ್ದ 106 ಎಕರೆ ಭೂಮಿಯ ಪೈಕಿ 28 ಎಕರೆ ಭೂಮಿ ಹಿಂದಕ್ಕೆ ಪಡೆಯಲಾಗಿದೆ. ಉಳಿದ 78 ಎಕರೆ ಭೂಮಿಗೆ ಕಿಮ್ಮತ್ತು ಕಟ್ಟಿಸಿಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ ಮಾಹಿತಿ ನೀಡಿದರು.

ಗೊಂದಲ ಮೂಡಿಸಿದ ಅಧ್ಯಕ್ಷರು, ಡಿಸಿ ಹೇಳಿಕೆ:

ಲೆಕ್ಕ ಪತ್ರ ಸಮಿತಿ ಅಧ್ಯಕ್ಷರು 208 ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ಹೇಳಿದರೆ, ಜಿಲ್ಲಾಧಿಕಾರಿಗಳು 106 ಎಕರೆ ಒತ್ತುವರಿಯಾಗಿದೆ. ಇದರಲ್ಲಿ 78 ಎಕರೆಗೆ ಕಿಮ್ಮತ್ತು ಕಟ್ಟಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಈ ಇಬ್ಬರ ಹೇಳಿಕೆಯಲ್ಲಿ ವ್ಯತ್ಯಾಸವಿರುವುದು ಸಾಕಷ್ಟುಗೊಂದಲಕ್ಕೆ ಕಾರಣವಾಗಿದೆ.

Latest Videos
Follow Us:
Download App:
  • android
  • ios