ಬೆಂಗಳೂರು (ಸೆ.10):  ರಾಜ್ಯದಲ್ಲಿ ನೆರೆಯಿಂದ 8,071 ಕೋಟಿ ರು. ಅಂದಾಜು ಹಾನಿಯಾಗಿದ್ದು, ಎಸ್‌ಡಿಆರ್‌ಎಫ್‌ ನಿಯಮಗಳ ಅನ್ವಯ 628.7 ಕೋಟಿ ರು. ಅನುದಾನ ಮಾತ್ರ ಬರುತ್ತದೆ. ಇದು ಸಾಕಾಗುವುದಿಲ್ಲ. ಈ ಬಾರಿ ಹೆಚ್ಚುವರಿ ಹಣ ಬಿಡುಗಡೆ ಮಾಡುವಂತೆ ಕೇಂದ್ರದ ನೆರೆ ಅಧ್ಯಯನ ತಂಡಕ್ಕೆ ಮನವಿ ಮಾಡಿದ್ದೇವೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

ಅಲ್ಲದೆ, ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಉಂಟಾಗುತ್ತಿರುವ ನೆರೆ ಹಾನಿ ನಿಯಂತ್ರಿಸಲು ಪ್ರವಾಹ ಮುನ್ಸೂಚನೆ ಹಾಗೂ ಪ್ರತಿಕ್ರಿಯೆಗಾಗಿ ಸಮಗ್ರ ವ್ಯವಸ್ಥೆ (ಇಂಟಿಗ್ರೇಟೆಡ್‌ ಫ್ಲಡ್‌ ಫೋರ್‌ಕಾಸ್ಟಿಂಗ್‌ ಅಂಡ್‌ ರೆಸ್ಪಾನ್ಸ್‌ ಸಿಸ್ಟಂ) ಮಾಡಬೇಕು. ಜತೆಗೆ ಪಶ್ಚಿಮಘಟ್ಟಪ್ರದೇಶದಲ್ಲಿ ಭೂ ಕುಸಿತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟದಲ್ಲಿ ಭೂ-ಕುಸಿತ ಅಪಾಯದ ಮ್ಯಾಪಿಂಗ್‌ ಮತ್ತು ತ್ವರಿತ ಎಚ್ಚರಿಕೆ ನೀಡುವ ವ್ಯವಸ್ಥೆ ಸ್ಥಾಪಿಸಲು ರಾಷ್ಟ್ರೀಯ ವಿಪತ್ತು ನಿಯಂತ್ರಣ ಕಾರ್ಯಕ್ರಮದ ಅಡಿ ಯೋಜನೆ ರೂಪಿಸಬೇಕು ಎಂದು ರಾಜ್ಯ ಸರ್ಕಾರದ ಪರವಾಗಿ ಕೇಂದ್ರದ ತಂಡಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿದರು.

ರಾಜ್ಯದ ವಿವಿಧ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೆರೆ ಅಧ್ಯಯನ ನಡೆಸಿದ ಕೇಂದ್ರದ ತಂಡದೊಂದಿಗೆ ಬುಧವಾರ ವಿಕಾಸಸೌಧದಲ್ಲಿ ಸಭೆ ನಡೆಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಆಗಸ್ಟ್‌ 4ರಿಂದ 8ನೇ ಹಾಗೂ 15ರಿಂದ 18ರವರೆಗೆ ರಾಜ್ಯದಲ್ಲಿ ತೀವ್ರ ಮಳೆ ಉಂಟಾಗಿತ್ತು. ಅತಿವೃಷ್ಟಿಯಿಂದ ರಾಜ್ಯದ 23 ಜಿಲ್ಲೆಗಳ 130 ತಾಲೂಕುಗಳನ್ನು ಪ್ರವಾಹಪೀಡಿತ ತಾಲೂಕುಗಳಾಗಿ ಘೋಷಿಸಲಾಗಿತ್ತು. ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಕೆ.ವಿ. ಪ್ರತಾಪ್‌ ಅವರ ನೇತೃತ್ವದಲ್ಲಿ ಮೂರು ತಂಡಗಳು ಮಂಗಳವಾರ ಕೊಡಗು, ಬೆಳಗಾವಿ, ಧಾರವಾಡ, ಬಾಗಲಕೋಟೆ, ಗದಗ ಸೇರಿ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಪ್ರವಾಹದಿಂದ ಉಂಟಾಗಿರುವ ಹಾನಿ ಬಗ್ಗೆ ಅಧ್ಯಯನ ನಡೆಸಿದೆ. ಈ ವೇಳೆ ನಮ್ಮ ಅಧಿಕಾರಿಗಳು ಸಾಥ್‌ ನೀಡಿದ್ದು ಸ್ಥಳೀಯ ಜಿಲ್ಲಾಧಿಕಾರಿಗಳು ನೆರೆ ಹಾನಿಯ ಫೋಟೊಗಳನ್ನು ಒದಗಿಸಿದ್ದಾರೆ. ತಂಡಗಳು 200-300 ಕಿ.ಮೀ. ಪ್ರವಾಸ ಮಾಡಿ ಅಧ್ಯಯನ ನಡೆಸಿವೆ. ಪ್ರತಿ ಕಡೆ 1 ಗಂಟೆಗೂ ಹೆಚ್ಚು ಸಮಯ ಅಧ್ಯಯನ ನಡೆಸಿದ್ದಾರೆ. ಈ ವೇಳೆ ಒಂದು ಕಡೆ ಮಾತ್ರ ಗಲಾಟೆ ಆಗಿದೆ ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಅನುದಾನಕ್ಕೆ ಬೇಡಿಕೆ:

ಸೋಮವಾರ ಕೇಂದ್ರ ಅಧ್ಯಯನ ತಂಡದೊಂದಿಗೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ರಾಜ್ಯದಲ್ಲಿ ನೆರೆಯಿಂದ 8,071 ಕೋಟಿ ರು. ನಷ್ಟಉಂಟಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಎಸ್‌ಡಿಆರ್‌ಎಫ್‌ (ರಾಜ್ಯ ವಿಪತ್ತು ಪರಿಹಾರ ನಿಧಿ) ಅಡಿ 628 ಕೋಟಿ ರು. ಮಾತ್ರ ಅನುದಾನ ಬರುತ್ತದೆ. ರಾಜ್ಯವು ಸಂಪೂರ್ಣ ಮನೆ ಹಾನಿಗೆ 5 ಲಕ್ಷ ರು. ನೆರವು ನೀಡುತ್ತಿದೆ. ಜತೆಗೆ ಭಾಗಶಃ ಹಾನಿಗೆ 3 ಲಕ್ಷ ರು., ಸ್ವಲ್ಪ ಹಾನಿಗೆ 50 ಸಾವಿರ ರು. ಪರಿಹಾರ ನೀಡುತ್ತಿದೆ. ಹೀಗಾಗಿ ಹೆಚ್ಚುವರಿ ಅನುದಾನಕ್ಕೆ ಮನವಿ ಮಾಡಿದ್ದೇವೆ ಎಂದರು.

 ನೆರೆಯಿಂದ ಆದ ಹಾನಿ ಪ್ರಮಾಣ

ಕೃಷಿ ಬೆಳೆ: 3.31 ಲಕ್ಷ ಹೆಕ್ಟೇರ್‌

ತೋಟಗಾರಿಕೆ ಬೆಳೆ- 32,976 ಹೆಕ್ಟೇರ್‌

ಪ್ಲಾಂಟೇಷನ್‌ ಬೆಳೆ - 38,620 ಹೆಕ್ಟೇರ್‌

ಮನೆ ಹಾನಿ - 10,978

ರಸ್ತೆಗಳು - 14,182 ಕಿ.ಮೀ.

ಸೇತುವೆಗಳು - 1,268

ಕೆರೆಗಳು - 360

ಸರ್ಕಾರಿ ಕಟ್ಟಡಗಳು - 3,168