ಬೆಂಗಳೂರು(ಮೇ.03): ರಾಜ್ಯದಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿ ತೊಡಗಿರುವ ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ಪೊಲೀಸ್‌ ಅಧಿಕಾರಿಗಳು ಅಥವಾ ಸಿಬ್ಬಂದಿ ಕೊರೋನಾ ಸೋಂಕಿನಿಂದ ಮೃತಪಟ್ಟರೆ 30 ಲಕ್ಷ ರು. ಪರಿಹಾರ ನೀಡಲು ರಾಜ್ಯ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ.

ಟ್ವೀಟ್‌ ಬಗ್ಗೆ ವಿವಾದವೇಕೆ: ಐಎಎಸ್‌ ಅಧಿಕಾರಿ ಮೊಹ್ಸಿನ್‌!

ಕೊರೋನಾ ಸಾಂಕ್ರಾಮಿಕ ರೋಗ ತಡೆಗಟ್ಟುವ ಸಂಬಂಧ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಎ, ಬಿ ಹಾಗೂ ಸಿ ವರ್ಗಗಳಾಗಿ ವಿಂಗಡಿಸಿದ್ದು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು, ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಗಳು, ಗೃಹರಕ್ಷಕ ದಳ ಸಿಬ್ಬಂದಿ, ಪೌರರಕ್ಷಣಾ ದಳ ಸಿಬ್ಬಂದಿ, ಅಗ್ನಿಶಾಮಕ ದಳ ನೌಕರರು, ಅಧಿಕಾರಿಗಳು, ಬಂದೀಖಾನೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರು, ಸ್ವಚ್ಛತಾ ಕಾರ್ಮಿಕರು, ಇವರ ವಾಹನಗಳ ಚಾಲಕರು, ಲೋಡರ್‌ಗಳು ಕೊರೋನಾ ಸೋಂಕಿನಿಂದ ಮೃತಪಟ್ಟರೆ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯ ಮಾರ್ಗಸೂಚಿಯಂತೆ 30 ಲಕ್ಷ ರು. ಪರಿಹಾರ ನೀಡಲಾಗುವುದು. ಈ ಮೂಲಕ ಕೆಲಸದಲ್ಲಿರುವವರ ಮನೋಸ್ಥೈರ್ಯ ಹೆಚ್ಚಿಸಲು ಸರ್ಕಾರವು ಹಣಕಾಸು ಮಂಜೂರಾತಿ ನೀಡಿದೆ.

ಈ ಮೊದಲು ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಂತೆ ಈ ಸಿಬ್ಬಂದಿ ಕೊರೋನಾ ಸೋಂಕಿನಿಂದ ಮೃತರಾದರೆ 50 ಲಕ್ಷ ರು. ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ 30 ಲಕ್ಷ ರು. ಪರಿಹಾರಕ್ಕೆ ಸರ್ಕಾರ ಅನುಮೋದನೆ ನೀಡಿದೆ.