ಅನಧಿಕೃತ ಬಡಾವಣೆಗಳಿಗೆ ಕಡಿವಾಣ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಇ-ಖಾತಾ ವಿತರಣೆ ಕುರಿತು ಅಧಿಕಾರಿಗಳೊಂದಿಗೆ ನಡೆದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಈ ಬಗ್ಗೆ ಚರ್ಚಿಸಿದ ಸಿಎಂ, ಮೂರು ತಿಂಗಳೊಳಗೆ ಅನಧಿಕೃತ ಬಡಾವಣೆಗಳಿಗೆ 'ಬಿ ಖಾತಾ' ನೀಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದ್ದಾರೆ.
ಬೆಂಗಳೂರು (ಫೆ.18): ಅನಧಿಕೃತ ಬಡಾವಣೆಗಳು ನಗರ ಹಾಗೂ ಪಟ್ಟಣ ಪಾಲಿಕೆ ವ್ಯಾಪ್ತಿ ಮತ್ತು ಹಳ್ಳಿಗಳಲ್ಲೂ ಇವೆ. ಇವೆಲ್ಲಕ್ಕೂ ನಾವು ಅಂತ್ಯ ಹಾಡುತ್ತಿದ್ದೇವೆ. ಇನ್ನು ಮುಂದೆ ಅನಧಿಕೃತ ಬಡಾವಣೆಗಳಿಗೆ ರಾಜ್ಯದಲ್ಲಿ ಅವಕಾಶ ಇಲ್ಲ. ಕಾಯ್ದೆ ಮೂಲಕ ಅನಧಿಕೃತ ಬಡಾವಣೆಗಳಿಗೆ ಅಂತ್ಯ ಹಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯದ ಮಹಾನಗರಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ನೀಡುವ ಕುರಿತು ಅಧಿಕಾರಿಗಳೊಂದಿಗೆ ನಡೆಸಿದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಧಿಕೃತ ಬಡಾವಣೆಗಳ ವಿರುದ್ಧ ಸಮರ ಸಾರಿದ್ದಾರೆ. ಅನಧಿಕೃತ ಬಡಾವಣೆಗಳಿಂದ ಕಂದಾಯ ಬರುತ್ತಿಲ್ಲ, ಪರಿಣಾಮ ಜನರಿಗೆ ನಾಗರಿಕ ಸವಲತ್ತುಗಳೂ ಸಿಗುತ್ತಿಲ್ಲ, ಸ್ಥಳೀಯ ಸಂಸ್ಥೆಗಳಿಗೆ ಆದಾಯವೂ ಬಂದ್ ಆಗಿದೆ. ಇವೆಲ್ಲಾ ಅನಾನುಕೂಲಗಳಿಗೂ ಅಂತ್ಯ ಹಾಡಬೇಕಿದೆ ಎಂದರು.
ಕಂದಾಯ ಕಟ್ಟದಿರುವುದರಿಂದ ಇಷ್ಟೆಲ್ಲಾ ಸಮಸ್ಯೆಗಳಾಗಿವೆ. ಒಂದು ಬಾರಿ, ಇದೊಂದು ಬಾರಿ 'ಬಿ ಖಾತಾ' ಕೊಟ್ಟು ಅಂತ್ಯ ಹಾಡುತ್ತೇವೆ. 3 ತಿಂಗಳುಗಳ ಒಳಗೆ ಅಭಿಯಾನ ನಡೆಸಿ ಪೂರ್ಣಗೊಳಿಸಬೇಕು. ಅನಧಿಕೃತ ಬಡಾವಣೆಗಳು ಮತ್ತೆ ತಲೆ ಎತ್ತಿದರೆ ಜಿಲ್ಲಾಧಿಕಾರಿ, ಮುಖ್ಯಾಧಿಕಾರಿ, ನಗರ ಯೋಜನಾ ಅಧಿಕಾರಿಗಳು ಜವಾಬ್ದಾರಿಯಾಗಲಿದ್ದಾರೆ. ಸಂಬಂಧಿಸಿದ ಅಧಿಕಾರಿಯ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇನೆ ಎಂದು ಎಚ್ಚರಿಕೆಯನ್ನು ರವಾನಿಸಿದರು.
ಇದನ್ನೂ ಓದಿ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೋಟದಲ್ಲಿ ಭರದಿಂದ ಸಾಗಿದ ಭೂ ಒತ್ತುವರಿ ಸರ್ವೇ ಕಾರ್ಯ
ಮಧ್ಯವರ್ತಿಗಳಿಗೆ, ಬ್ರೋಕರ್ ಗಳಿಗೆ ತಕ್ಷಣ ಗೇಟ್ ಪಾಸ್ ಕೊಟ್ಟು ಕಳಿಸಿ. ಕಾಯ್ದೆಯ ದೂರದೃಷ್ಟಿಯನ್ನು ಅಧಿಕಾರಿಗಳು ಸ್ಪಷ್ಟವಾಗಿ, ಖಚಿತವಾಗಿ ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಇನ್ನೆಲ್ಲೂ ಅನಧಿಕೃತ ಬಡಾವಣೆಗಳು, ರೆವಿನ್ಯೂ ಬಡಾವಣೆಗಳು ತಲೆ ಎತ್ತಬಾರದು. ಅನಧಿಕೃತ, ರೆವಿನ್ಯೂ ಬಡಾವಣೆಗಳಲ್ಲಿ ಸೈಟು, ಮನೆ ಕಟ್ಟಿರುವವರಿಗೆ ತೊಂದರೆ ಆಗಬಾರದು. ಒಟ್ಟಾರೆಯಾಗಿ ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಲು ಒಂದು ಬಾರಿ ಪರಿಹಾರ ಕೊಟ್ಟಿದ್ದೇವೆ. ಮತ್ತೆ ಎಲ್ಲೂ ಅನಧಿಕೃತ ಬಡಾವಣೆಗಳು ತಲೆಎತ್ತಬಾರದು ಎಂದು ಖಡಕ್ ವಾರ್ನಿಂಗ್ ನೀಡಿದರು.
