ಸಾರಿಗೆ ಮುಷ್ಕರ ಅಂತ್ಯ: ಹೈಕೋರ್ಟ್ ಸೂಚನೆ ಬೆನ್ನಲ್ಲೇ ಚಳವಳಿ ಸ್ಥಗಿತ!
ಸಾರಿಗೆ ಮುಷ್ಕರ ಅಂತ್ಯ| ಹೈಕೋರ್ಟ್ ಸೂಚನೆ ಬೆನ್ನಲ್ಲೇ ಚಳವಳಿ ಸ್ಥಗಿತ| ಇಂದಿನಿಂದ ರಾಜ್ಯಾದ್ಯಂತ ಬಸ್ ಪುನಾರಂಭ|
ಬೆಂಗಳೂರು(ಏ.22): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 15 ದಿನಗಳಿಂದ ಸಾರಿಗೆ ನೌಕರರು ನಡೆಸುತ್ತಿದ್ದ ಮುಷ್ಕರ ಕೊನೆಗೂ ಅಂತ್ಯಗೊಂಡಿದ್ದು, ಗುರುವಾರದಿಂದ ಸಾರಿಗೆ ಬಸ್‌ಗಳು ರಾಜ್ಯಾದ್ಯಂತ ಎಂದಿನಂತೆ ರಸ್ತೆಗಿಳಿಯಲಿವೆ.
ಕೊರೋನಾ ಸಂಕಷ್ಟಇರುವ ಕಾರಣ ಮುಷ್ಕರ ಹಿಂಪಡೆಯುವಂತೆ ಮಂಗಳವಾರ ಹೈಕೋರ್ಟ್ ಮೌಖಿಕವಾಗಿ ಸೂಚಿಸಿದ ಹಿನ್ನೆಲೆಯಲ್ಲಿ ಬುಧವಾರ ಸಭೆ ನಡೆಸಿದ ಸಾರಿಗೆ ನೌಕರರ ಕೂಟದ ಮುಖಂಡರು, ಸದ್ಯ ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ಪ್ರಕರಣಗಳಿಂದ ಜನರಿಗೆ ಆಗುತ್ತಿರುವ ತೊಂದರೆ, ಸೋಂಕಿನ ವಿರುದ್ಧ ಸರ್ಕಾರ ಕೈಗೊಳ್ಳುತ್ತಿರುವ ನಿರ್ಬಂಧಗಳ ಬಗ್ಗೆ ವಿವರವಾಗಿ ಚರ್ಚಿಸಿದರು. ಜೊತೆಗೆ ಹೈಕೋರ್ಟ್ ಅಭಿಪ್ರಾಯಕ್ಕೆ ಗೌರವ ಕೊಟ್ಟು ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಲು ತೀರ್ಮಾನಿಸಿದರು.
ಸರ್ಕಾರ ಮುಷ್ಕರಕ್ಕೆ ಮಣಿಯದೆ ನೌಕರರ ವಜಾ, ಅಮಾನತು, ನೋಟಿಸ್ ನೀಡುವಂತಹ ಕಠಿಣ ಕ್ರಮಗಳನ್ನು ಆರಂಭಿಸಿದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ನೌಕರರು ಕೆಲಸಕ್ಕೆ ಬರಲಾರಂಭಿಸಿದ್ದರು. ಬುಧವಾರ ಸಂಜೆಯ ವೇಳೆಗೆ ಶೇ.60ಕ್ಕಿಂತ ಹೆಚ್ಚು ನೌಕರರು ಸ್ವಯಂ ಪ್ರೇರಿತವಾಗಿ ಸೇವೆಗೆ ಹಾಜರಾದರು. ಈ ಬೆಳವಣಿಗೆ ಬೆನ್ನಲ್ಲೇ ಸಾರಿಗೆ ನೌಕರರ ಕೂಟ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದಿರುವುದಾಗಿ ಪ್ರಕಟಿಸಿತು.
ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ಸಮಾನ ವೇತನ ನೀಡಬೇಕು, ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂಬುದು ಸೇರಿದಂತೆ ಒಟ್ಟು 10 ಬೇಡಿಕೆಗಳನ್ನು ಈಡೇರಿಸುವಂತೆ ನೌಕರರ ಕೂಟ ಮುಷ್ಕರ ಆರಂಭಿಸಿತ್ತು. ಆದರೆ ಸರ್ಕಾರ ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಹಾಗೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂಬ ಬೇಡಿಕೆಗಳ ಈಡೇರಿಕೆ ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು. ಉಳಿದ ಬೇಡಿಕೆಗಳನ್ನು ಈಗಾಗಲೇ ಜಾರಿ ತಂದಿರುವುದಾಗಿ ಹೇಳಿತ್ತು. ಆದರೆ ನೌಕರರ ಕೂಟ, ತಮ್ಮ ಅಭಿಪ್ರಾಯ ಕೇಳದೆ ಏಕಪಕ್ಷೀಯವಾಗಿ ಎಂಟು ಬೇಡಿಕೆ ಜಾರಿಗೆ ತಂದಿರುವುದಕ್ಕೆ ತಮ್ಮ ಒಪ್ಪಿಗೆ ಇಲ್ಲ ಎಂದು ಹೇಳಿ ಏ. 7ರಿಂದ ಮುಷ್ಕರ ಆರಂಭಿಸಿತ್ತು.
ಇದು ತಾತ್ಕಾಲಿಕ; ಬೇಡಿಕೆ ಈಡೇರಿಸಿ
ಹೈಕೋರ್ಟ್ ನ್ಯಾಯಾಧೀಶರ ಅಭಿಪ್ರಾಯ ಗೌರವಿಸಿ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ. ಆದರೆ ಈಗಾಗಲೇ ವಜಾಗೊಳಿಸಿದ 2100, ಅಮಾನತು ಮಾಡಿದ 2900 ಸಿಬ್ಬಂದಿಯನ್ನು ಮರಳಿ ಕೆಲಸಕ್ಕೆ ಕರೆಸಿಕೊಳ್ಳಬೇಕು. ಸರ್ಕಾರ ನಮಗೆ ನೀಡಿದ ಭರವಸೆ ಈಡೇರಿಸಬೇಕು.
- ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ
ಕೆಲಸಕ್ಕೆ ವಾಪಸ್ ಪಡೆಯಲು ಆಗ್ರಹ
ಸಾರಿಗೆ ನೌಕರರ ಮುಷ್ಕರ ವಿಚಾರದಲ್ಲಿ ಹೈಕೋರ್ಟ್ ನ್ಯಾಯಾಧೀಶರ ಅಭಿಪ್ರಾಯವನ್ನು ಗೌರವಿಸಿ ಸಾರಿಗೆ ನೌಕರರ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಡೆಯುವುದಾಗಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಗುರುವಾರದಿಂದ ಎಲ್ಲ ನಿಗಮಗಳ ಸಾರಿಗೆ ಸೇವೆ ಯಥಾಸ್ಥಿತಿಯಲ್ಲಿರಲಿದೆ. ಆದರೆ, ಮುಷ್ಕರದಲ್ಲಿ ಭಾಗವಹಿಸಿದ ನೌಕರರಲ್ಲಿ 2,100 ಜನರ ವಜಾ, 2,900 ಮಂದಿಯ ಅಮಾನತು, 7,600 ಜನರಿಗೆ ಕಾರಣ ಕೇಳಿ ನೋಟಿಸ್ ಹಾಗೂ 8,000 ನೌಕರರ ವರ್ಗಾವಣೆ ಮಾಡಲಾಗಿದೆ. ಇವರನ್ನು ಕೆಲಸಕ್ಕೆ ವಾಪಸ್ ಪಡೆಯಬೇಕು. ಡಿಸೆಂಬರ್‌ನಲ್ಲಿ ನೀಡಿದ ಭರವಸೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.