ಬೆಂಗಳೂರು(ಜೂ.11): ಲಾಕ್‌ಡೌನ್‌ ಸಮಯದಲ್ಲಿ ದೈನಂದಿನ ಆದಾಯವಿಲ್ಲದೆ ಸಂಕಷ್ಟಅನುಭವಿಸಿದ್ದ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಘೋಷಣೆ ಮಾಡಿದ್ದ ಹಣವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಒಟ್ಟು 40 ಕೋಟಿ ರು. ಬಿಡುಗಡೆ ಮಾಡಿದೆ.

ರೈತರು, ಉದ್ಯಮಿಗಳಿಗೆ ಆರ್ಥಿಕ ನೆರವು ನೀಡಿದಂತೆ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿ ಪರಿಹಾರವಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ 5 ಸಾವಿರ ರು. ಪರಿಹಾರ ಘೋಷಣೆ ಮಾಡಿದ್ದರು. ಒಂದು ಲಕ್ಷ ಟ್ಯಾಕ್ಸಿ ಮತ್ತು ಆಟೋ ರಿಕ್ಷಾ ಚಾಲಕರು ನೋಂದಣಿ ಮಾಡಿಕೊಂಡಿದ್ದು, ಇನ್ನೂ 6.75 ಲಕ್ಷ ಆಟೋ ಮತ್ತು ಟ್ಯಾಕ್ಸಿ ಚಾಲಕರು ನೋಂದಾಯಿಸುವ ನಿರೀಕ್ಷೆ ಇದೆ. ಈ ಯೋಜನೆಗಾಗಿ 40 ಕೋಟಿ ರು. ಬಿಡುಗಡೆ ಮಾಡಿ ಸರ್ಕಾರ ಆದೇಶಿಸಿದೆ.

ಪರಿಹಾರಕ್ಕೆ 1.77 ಲಕ್ಷ ಆಟೋ, ಟ್ಯಾಕ್ಸಿ ಚಾಲಕರ ಅರ್ಜಿ!

ಕಾರ್ಮಿಕ ಇಲಾಖೆ ಮತ್ತು ಪರಿಶಿಷ್ಟಜಾತಿ ಮತ್ತು ಪಂಗಡ ಅನುದಾನದಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿ ಅನುದಾನದ ಅಗತ್ಯ ಇದ್ದರೆ ಸೂಕ್ತ ಕ್ರಮ ಕೈಗೊಂಡು ಬಿಡುಗಡೆ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕೆಲವು ಷರತ್ತುಗಳನ್ನು ಸಡಿಲಗೊಳಿಸಿ ಸಂಕಷ್ಟದಲ್ಲಿ ಸಿಲುಕಿರುವ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಪರಿಹಾರ ನೀಡಲು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದರು. ಅದರಂತೆ ಕ್ರಮ ಕೈಗೊಂಡು ಹಣ ಬಿಡುಗಡೆ ಮಾಡಲಾಗಿದ್ದು, ಹಂತಹಂತವಾಗಿ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ಖಾತೆಗೆ ಹಣ ಜಮೆಯಾಗಲಿದೆ ಎಂದು ಹೇಳಲಾಗಿದೆ.