ಕರ್ನಾಟಕ ವಿಧಾನಸಭೆಯಲ್ಲಿ ಅಶಿಸ್ತಿನ ಆಧಾರದ ಮೇಲೆ ಅಮಾನತುಗೊಂಡಿದ್ದ 18 ಬಿಜೆಪಿ ಶಾಸಕರ ಅಮಾನತು ಆದೇಶವನ್ನು ಸ್ಪೀಕರ್ ಯು.ಟಿ. ಖಾದರ್ ಹಿಂಪಡೆದಿದ್ದಾರೆ. ವಿಪಕ್ಷ ನಾಯಕರ ಮನವಿ ಮೇರೆಗೆ ಸಿಎಂ, ಡಿಸಿಎಂ, ಕಾನೂನು ಮತ್ತು ಸಂಸದೀಯ ಸಚಿವರೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬೆಂಗಳೂರು (ಮೇ 25): ಕರ್ನಾಟಕ ವಿಧಾನಸಭೆಯಲ್ಲಿ ಅಶಿಸ್ತಿನ ಆಧಾರದ ಮೇಲೆ ಅಮಾನತುಗೊಂಡಿದ್ದ ಭಾರತೀಯ ಜನತಾ ಪಕ್ಷದ (ಬಿಜೆಪಿ) 18 ಶಾಸಕರ ಅಮಾನತು ಆದೇಶವನ್ನು ಸ್ಪೀಕರ್ ಯು.ಟಿ. ಖಾದರ್ ಅವರು ಹಿಂಪಡೆದಿರುವುದು ರಾಜಕೀಯವಾಗಿ ಮಹತ್ವದ ಬೆಳವಣಿಗೆಯಾಗಿದೆ. ಈ ಕುರಿತು ಸ್ಪೀಕರ್ ಕಚೇರಿದಿಂದ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಲಾಗಿದೆ.

ಕಳೆದ ಅಧಿವೇಶನದ ಅವಧಿಯಲ್ಲಿ ಸಭಾದ್ಯಕ್ಷರ ಪೀಠದ ಆದೇಶವನ್ನು ಲೆಕ್ಕಿಸದೇ ಸದನದ ಕಾರ್ಯಕಲಾಪಗಳಿಗೆ ಅಡ್ಡಿಯುಂಟು ಮಾಡುತ್ತಾ, ಅಶಿಸ್ತಿನಿಂದ ಹಾಗೂ ಅಗೌರವದಿಂದ ನಡೆದುಕೊಂಡಿದ್ದರಿಂದ ಮಾನ್ಯ ವಿಧಾನಸಭಾ ಸದಸ್ಯರಾದ ದೊಡ್ಡನಗೌಡ ಹೆಚ್. ಪಾಟೀಲ್, (ವಿರೋಧ ಪಕ್ಷದ ಮುಖ್ಯ ಸಚೇತಕರು), ಡಾ. ಅಶ್ವಥನಾರಾಯಣ್ ಸಿ.ಎನ್., ಎಸ್.ಆರ್. ವಿಶ್ವನಾಥ್, ಬಿ.ಎ. ಬಸವರಾಜ, ಎಂ.ಆರ್. ಪಾಟೀಲ್, ಚನ್ನಬಸಪ್ಪ (ಚೆನ್ನಿ), ಬಿ. ಸುರೇಶ್‌ಗೌಡ, ಉಮಾನಾಥ್ ಎ. ಕೋಟ್ಯಾನ್, ಶರಣು ಸಲಗರ, ಡಾ.ಶೈಲೇಂದ್ರ ಬೆಲ್ದಾಳೆ, ಸಿ.ಕೆ. ರಾಮಮೂರ್ತಿ, ಯಶಪಾಲ್ ಎ. ಸುವರ್ಣ, ಬಿ.ಪಿ. ಹರೀಶ್, ಡಾ. ಭರತ್‌ ಶೆಟ್ಟಿ ವೈ., ಮುನಿರತ್ನ, ಬಸವರಾಜ್ ಮತ್ತಿಮೂಡ್, ಧೀರಜ್ ಮುನಿರಾಜು ಮತ್ತು ಡಾ. ಚಂದ್ರು ಲಮಾಣಿ ಅವರುಗಳನ್ನು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳ ನಿಯಮ 348ರ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ದಿನಾಂಕ: 21.03.2025ರಿಂದ 6 ತಿಂಗಳುಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತ್ತುಗೊಳಿಸಲಾಗಿತ್ತು.

ಈ ಆದೇಶ ಹಿಂಪಡೆಯಲು ವಿಪಕ್ಷ ನಾಯಕರು ಮನವಿ ಮಾಡಿದ್ದರು. ಈ ಮೇರೆಗೆ ಸಿಎಂ, ಡಿಸಿಎಂ, ಕಾನೂನು ಮತ್ತು ಸಂಸದೀಯ ಸಚಿವರೊಂದಿಗೆ ಚರ್ಚೆ ಮಾಡಿ ಅಮಾನತು ಹಿಂಪಡೆಯುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಸ್ಪೀಕರ್ ಹೊರಡಿಸಿದ ನೋಟಿಸ್‌ನ ಪ್ರಕಾರ, ಈ 18 ಶಾಸಕರಿಗೆ ವಿಧಿಸಲಾಗಿದ್ದ ಅಮಾನತು, ಸಭಾಂಗಣ ಪ್ರವೇಶ ನಿರ್ಬಂಧ, ಸಮಿತಿಗಳ ಸಭೆಗಳಲ್ಲಿ ಭಾಗವಹಿಸಲು ವಿಧಿಸಿದ್ದ ನಿರ್ಬಂಧ ಸೇರಿದಂತೆ ಎಲ್ಲಾ ಷರತ್ತುಗಳನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿದೆ. ಈ ಮೂಲಕ ಶಾಸಕರು ಮತ್ತೆ ತಮ್ಮ ಶಾಸನೋಚಿತ ಹಕ್ಕುಗಳನ್ನು ಬಳಸಿಕೊಳ್ಳಲು ಅವಕಾಶ ಸಿಕ್ಕಿದೆ.

ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ ವಿಧಾನಸಭಾ ವಿರೋಧಪಕ್ಷದ ನಾಯಕ ಆರ್. ಅಶೋಕ್ ಅವರು, 'ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಚನಾತ್ಮಕ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲು ಮತ್ತು ಶಾಸಕರು ತಮ್ಮ ಕ್ಷೇತ್ರದ ಜನಪ್ರತಿನಿಧಿಗಳಾಗಿ ತಮ್ಮ ಸಂವಿಧಾನದತ್ತ ಕರ್ತವ್ಯಗಳನ್ನು ಪೂರೈಸಲು ತೊಂದರೆ ಉಂಟುಮಾಡಿದ್ದ ಶಾಸಕರ ಅಮಾನತು ನಿರ್ಣಯವನ್ನು ಹಿಂತೆಗೆದುಕೊಳ್ಳಬೇಕು ಎಂಬ ನಮ್ಮ ಆಗ್ರಹವನ್ನು ಮನ್ನಿಸಿ, 18 ಶಾಸಕರ ಆಮಾನತು ಆದೇಶವನ್ನು ಹಿಂಪಡೆದಿರುವ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಧನ್ಯವಾದಗಳು. ಶಾಸಕರ ಹಕ್ಕನ್ನು ಪುನಃಸ್ಥಾಪಿಸುವ ಕಳೆದ ಎರಡು ತಿಂಗಳ ಈ ಹೋರಾಟದಲ್ಲಿ ತಾಳ್ಮೆ, ಸಂಯಮ, ಶಿಸ್ತಿನಿಂದ ಸಹಕಾರ ನೀಡಿದ ಎಲ್ಲ 18 ಶಾಸಕರು ಮತ್ತು ಪಕ್ಷದ ಮುಖಂಡರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ' ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

Scroll to load tweet…