ಬೆಂಗಳೂರು (ಮಾ.30):  ಬಳ್ಳಾರಿ ಮಹಾನಗರ ಪಾಲಿಕೆ ಸೇರಿದಂತೆ 10 ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ಮತ್ತು ಎರಡು ಪಟ್ಟಣ ಪಂಚಾಯಿತಿಗೆ ನಡೆಯಲಿರುವ ಉಪಚುನಾವಣೆಯ ವೇಳಾ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದ್ದು, ಏ.27ರಂದು ಮತದಾನ ನಡೆಯಲಿದೆ.

ಬಳ್ಳಾರಿ ಮಹಾನಗರ ಪಾಲಿಕೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಮತ್ತು ಹಾಸನ ಜಿಲ್ಲೆಯ ಬೇಲೂರು ಪುರಸಭೆ, ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಕೊಡಗು ಜಿಲ್ಲೆಯ ಮಡಿಕೇರಿ, ಬೀದರ್‌ ನಗರಸಭೆ ಹಾಗೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ , ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯಿತಿಗೆ ಸಾರ್ವತ್ರಿಕ ಚುನಾವಣೆ ಮತ್ತು ಹಾವೇರಿ ಜಿಲ್ಲೆಯ ಹಿರೇಕೆರೂರ, ಬೀದರ್‌ ಜಿಲ್ಲೆಯ ಹಳ್ಳಿಖೇಡ ಪಟ್ಟಣ ಪಂಚಾಯಿತಿಗೆ ಉಪಚುನಾವಣೆ ಘೋಷಣೆ ಮಾಡಲಾಗಿದೆ.

ಮುಂದಿನ ಚುನಾವಣೆಯಲ್ಲಿ ಡಿಕೆಶಿಯನ್ನು ಸೋಲಿಸುವುದಾಗಿ ಜಾರಕಿಹೊಳಿ ಪಣ!

ಏ.8ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಏ.15ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಏ.16ರಂದು ನಾಮಪತ್ರಗಳ ಪರಿಶೀಲನೆ, ಏ.19ರಂದು ಉಮೇದುವಾರಿಕೆ ವಾಪಸ್‌ ಪಡೆಯಲು ಕೊನೆಯ ದಿನವಾಗಿದೆ. ಏ.27ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಅಗತ್ಯಬಿದ್ದರೆ ಏ.29ರಂದು ಮರು ಮತದಾನ ನಡೆಸಲಾಗುತ್ತದೆ. ಏ.30ರಂದು ಮತ ಎಣಿಕೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.

ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು ಆಯೋಗ ನಿಗದಿಗೊಳಿಸಿದ್ದು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂರು ಲಕ್ಷ ರು. ನಗರ ಸಭೆ ವ್ಯಾಪ್ತಿಯಲ್ಲಿ ಎರಡು ಲಕ್ಷ ರು., ಪುರಸಭೆ ವ್ಯಾಪ್ತಿಯಲ್ಲಿ 1.50 ಲಕ್ಷ ರು. ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಲಕ್ಷ ರು. ಮಿತಿಗೊಳಿಸಲಾಗಿದೆ.