ಕಾರ್ಕಳ ಹಿಂದೂ ಯುವತಿ ಅತ್ಯಾಚಾರ; ದಿಟ್ಟ ಕ್ರಮಕ್ಕೆ ಪೊಲೀಸರಿಗೆ ಹೆಬ್ಬಾಳ್ಕರ್ ಸೂಚನೆ
ಕಾರ್ಕಳದಲ್ಲಿ ನಡೆದ ಯುವತಿಯ ಅಪಹರಣ ಹಾಗೂ ಅತ್ಯಾಚಾರ ಪೈಶಾಚಿಕ ಕೃತ್ಯವಾಗಿದ್ದು, ಅತ್ಯಂತ ಖಂಡನೀಯ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಉಡುಪಿ (ಆ.26): ಕಾರ್ಕಳದಲ್ಲಿ ನಡೆದ ಯುವತಿಯ ಅಪಹರಣ ಹಾಗೂ ಅತ್ಯಾಚಾರ ಪೈಶಾಚಿಕ ಕೃತ್ಯವಾಗಿದ್ದು, ಅತ್ಯಂತ ಖಂಡನೀಯ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಈ ಪ್ರಕರಣದಲ್ಲಿ ದಿಟ್ಟ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇದರ ಹಿಂದೆ ಯಾರೇ ಇದ್ದರೂ ಮುಲಾಜಿಲ್ಲದೇ ಬಂಧಿಸಲಾಗುವುದು ಎಂದು ಸಚಿವೆ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಯಾರೇ ಆಗಲಿ, ಯಾವುದೇ ಧರ್ಮದವರೇ ಆಗಲಿ ತಪ್ಪು ಮಾಡಿದರೆ, ತಕ್ಕ ಶಿಕ್ಷೆ ನೀಡುವುದಕ್ಕೆ ನಮ್ಮ ಪೊಲೀಸರಿಗೆ ಯಾವುದೇ ಹಿಂಜರಿಕೆಯಿಲ್ಲ ಎಂದವರು ಹೇಳಿದ್ದಾರೆ.
ಮುಂದೆ ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರಕಳಿಸದಂತೆ ಮುನ್ನಚ್ಚರಿಕೆ ವಹಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ. ಅದರಂತೆ ಜಿಲ್ಲಾಡಳಿತ ಸಂತ್ರಸ್ತೆಗೆ ಮಾನಸಿಕ ಧೈರ್ಯ ನೀಡಿದ್ದು, ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವಂತೆ ಒತ್ತಾಯ
ಮಂಗಳೂರು: ಕಾರ್ಕಳ ನಗರದಲ್ಲಿ ಯುವತಿಯನ್ನು ಅಪಹರಿಸಿ ಒತ್ತಾಯಪೂರ್ವಕವಾಗಿ ಅಮಲು ಪದಾರ್ಥ ನೀಡಿ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ನಡೆದಿದ್ದು ಪೂರ್ವಯೋಜಿತ ಷಡ್ಯಂತ್ರ. ಹಿಂದೂ ಯುವತಿಯರನ್ನು ಗುರಿಯಾಗಿಟ್ಟುಕೊಂಡು ಇಂತಹ ಕೃತ್ಯ ನಡೆಸುವ ವ್ಯವಸ್ಥಿತ ತಂಡ ಕಾರ್ಯಾಚರಿಸುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ. ಕರಾವಳಿಯಲ್ಲಿ ಡ್ರಗ್ಸ್ ಜಾಲ ವ್ಯಾಪಕವಾಗಿ ಕಾರ್ಯ ನಿರ್ವಸುತ್ತಿರುವುದಕ್ಕೆ ಇದು ಉದಾಹರಣೆ. ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಶ್ವೇತಾ ತಿಳಿಸಿದ್ದಾರೆ.
ಹಿಂದೂ ಯುವತಿ ಮೇಲೆ ನನ್ನ ಮಗ ಅತ್ಯಾಚಾರ ನಡೆಸಿದ್ದು ನನಗೆ ಗೊತ್ತಿಲ್ಲ: ಆರೋಪಿ ಅಲ್ತಾಫ್ ತಾಯಿ ಮಾತು!
ಕರಾವಳಿಯಲ್ಲಿ ಅವ್ಯಾಹತವಾಗಿ ನಡೆಯುವ ಡ್ರಗ್ಸ್ ಜಾಲ ಮಟ್ಟ ಹಾಕಲು ತಂಡ ರಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡುವುದರ ಜತೆಗೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿ ಇಂತಹ ಕೃತ್ಯ ನಡೆಸುವ ವ್ಯವಸ್ಥಿತ ತಂಡ ಇರುವ ಸಂಖ್ಯೆ ಬಲವಾಗಿದ್ದು, ಹೆತ್ತವರು ತಮ್ಮ ಮಕ್ಕಳ ಬಗ್ಗೆ ನಿಗಾ ವಹಿಸುವಂತೆ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.