Asianet Suvarna News Asianet Suvarna News

24,000 ಪೇದೆಗಳ ನೇಮಕಕ್ಕೆ ಇಂಗ್ಲಿಷ್‌, ಹಿಂದೀಲಿ ಪರೀಕ್ಷೆ: ಕನ್ನಡಿಗರ ಆಕ್ರೋಶ

ಕನ್ನಡದಲ್ಲಿ ಏಕೆ ಪರೀಕ್ಷೆ ನಡೆಸುತ್ತಿಲ್ಲ? ಇದು ಹಿಂದಿ ಭಾಷಿಕರನ್ನೇ ಹೆಚ್ಚಾಗಿ ನೇಮಕ ಮಾಡಿಕೊಳ್ಳಲು ನಡೆಸಿರುವ ಹುನ್ನಾರ ಎಂದು ಆಕ್ಷೇಪ ವ್ಯಕ್ತಪಡಿಸಿದ ಕನ್ನಡಿಗರು

Kannadigas Outrage for English Hindi Test for Recruitment of Constables
Author
First Published Oct 29, 2022, 6:30 AM IST

ಬೆಂಗಳೂರು(ಅ.29):  ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ವಿವಿಧ ಭದ್ರತಾ ಪಡೆಗಳಲ್ಲಿ 24 ಸಾವಿರಕ್ಕೂ ಹೆಚ್ಚು ಕಾನ್ಸ್‌ಟೇಬಲ್‌ಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಲಿಖಿತ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಲು ಅವಕಾಶ ನೀಡಲಾಗಿದೆ. ಇದಕ್ಕೆ ಕನ್ನಡಪರ ಸಂಘಟನೆಗಳಿಂದ ವ್ಯಾಪಕ ವಿರೋಧ, ಆಕ್ರೋಶ ವ್ಯಕ್ತವಾಗಿದೆ. 10ನೇ ತರಗತಿಯ ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಿರುವ ಈ ಪರೀಕ್ಷೆಯಲ್ಲಿ ಕೇವಲ ಎಸ್‌ಎಸ್‌ಎಲ್‌ಸಿ ಪಾಸಾದವರು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಬೇಕು ಅಂದರೆ ಹೇಗೆ ಸಾಧ್ಯ? ಕನ್ನಡದಲ್ಲಿ ಏಕೆ ಪರೀಕ್ಷೆ ನಡೆಸುತ್ತಿಲ್ಲ? ಇದು ಹಿಂದಿ ಭಾಷಿಕರನ್ನೇ ಹೆಚ್ಚಾಗಿ ನೇಮಕ ಮಾಡಿಕೊಳ್ಳಲು ನಡೆಸಿರುವ ಹುನ್ನಾರ ಎಂದು ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವಂತೆ ಈಗಾಗಲೇ ರಾಜ್ಯದ ಎಲ್ಲ ಸಂಸದರಿಗೆ ಮನವಿ ನೀಡಿದ್ದೇವೆ. ಅವರೆಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಒಂದು ವೇಳೆ ಕೊಟ್ಟಭರವಸೆಯಂತೆ ನಡೆದುಕೊಳ್ಳದಿದ್ದರೆ ಸಂಸದರ ಮನೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಉತ್ತರಕನ್ನಡ: ಯುಪಿ ಮೂಲದ ಬ್ಯಾಂಕ್‌ ಮ್ಯಾನೇಜರ್‌ಗೆ ಕನ್ನಡ ಕಲಿಯುವಂತೆ ಕರವೇ ಎಚ್ಚರಿಕೆ

ಸಂಸದ ತೇಜಸ್ವಿ ಸೂರ್ಯ ನಮ್ಮ ಮನವಿಗೆ ಓಗೊಟ್ಟು ಸಂಬಂಧಿಸಿದ ಕೇಂದ್ರ ಸಚಿವರೊಂದಿಗೆ ಚರ್ಚಿಸಿದ್ದಾರೆ. ಮತ್ತೊಬ್ಬ ಸಂಸದರಾದ ಪಿ.ಸಿ.ಮೋಹನ್‌ ಅವರು ಕರವೇ ಕಚೇರಿಗೇ ಬಂದು ನಮ್ಮ ಮನವಿ ಸ್ವೀಕರಿಸಿ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಕನ್ನಡಿಗರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ. ಅದೇ ರೀತಿ ಇನ್ನೂ ಹಲವು ಸಂಸದರಿಗೆ ಈ ಸಂಬಂಧ ಮನವಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರದ ನೇಮಕಾತಿಗೆ ಆಯೋಗವೊಂದನ್ನು ನೋಡಲ್‌ ಏಜೆನ್ಸಿಯಾಗಿ ನೇಮಿಸಿರುವುದರಿಂದ ಇಂತಹ ಸಮಸ್ಯೆಗಳಾಗುತ್ತಿವೆ. ಅದನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಏನಿದು ವಿವಾದ?

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದ (ಎಸ್‌ಎಸ್‌ಸಿ) ಮೂಲಕ 2023ರ ಜನವರಿಯಲ್ಲಿ ನಡೆಯಲಿರುವ 24,369 ಸಿಎಪಿಎಫ್‌ಎಸ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ 10ನೇ ತರಗತಿಯ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ನ.30 ಕೊನೆಯ ದಿನ.

ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ ನೀರು; ಸೂಕ್ತ ವ್ಯವಸ್ಥೆ ಕಲ್ಪಿಸದ ಅಧಿಕಾರಿಗಳ ವಿರುದ್ಧ ಕರವೇ ಪ್ರತಿಭಟನೆ

ಆದರೆ, ಕನ್ನಡ ಸೇರಿದಂತೆ ಯಾವುದೇ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅಭ್ಯರ್ಥಿಗಳಿಗೆ ಅವಕಾಶ ನೀಡಿಲ್ಲ. ಕೇವಲ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದ ಹಿಂದಿ ಆಡಳಿತ ಭಾಷೆಯಾಗಿ ಹೋಂದಿರುವ ರಾಜ್ಯಗಳ ಅಭ್ಯರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ದಕ್ಷಿಣ ಭಾರತದ ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಕನ್ನಡ ಸಂಘಟನೆಗಳು ಆಕ್ಷೇಪಿಸಿವೆ.

ಪ್ರಾದೇಶಿಕ ಭಾಷೆ ನಿರ್ಲಕ್ಷ್ಯ: ಕನ್ನಡಿಗರ ಕಿಡಿ

ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವಂತೆ ಈಗಾಗಲೇ ರಾಜ್ಯದ ಎಲ್ಲ ಸಂಸದರಿಗೆ ಮನವಿ ನೀಡಿದ್ದೇವೆ. ಅವರೆಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಒಂದು ವೇಳೆ ಕೊಟ್ಟಭರವಸೆಯಂತೆ ನಡೆದುಕೊಳ್ಳದಿದ್ದರೆ ಸಂಸದರ ಮನೆ ಪ್ರತಿಭಟನೆ ನಡೆಸಬೇಕಾಗುತ್ತದೆನ ಅಂತ ಕರವೇ ಅಧ್ಯಕ್ಷ  ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ. 
 

Follow Us:
Download App:
  • android
  • ios