ಬಳ್ಳಾರಿ[ಜ.12]: ಐತಿಹಾಸಿ ಹಂಪಿಯ ಸ್ಮಾರಕಗಳ ರಕ್ಷಣೆಯ ವಿಚಾರವಾಗಿ ಡಾ.ಚಿದಾನಂದಮೂರ್ತಿಯವರ ಬದ್ಧತೆ ಪ್ರಶ್ನಾತೀತವಾಗಿತ್ತು. ಈ ಬಗ್ಗೆ ಸರಾಗವಾಗಿ ದನಿಯೆತ್ತಿದ್ದ ಅವರು ಒಂದು ಹಂತದಲ್ಲಿ ತನ್ನ ಮಾತಿಗೆ ಮನ್ನಣೆ ಸಿಗುತ್ತಿಲ್ಲ ಎಂಬ ನೋವಿನಲ್ಲಿ ಹೊಳೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೂಡ ನಡೆದಿತ್ತು.

ಇದು ನಡೆದಿದ್ದು 1998ರ ಆಗಸ್ಟ್‌ನಲ್ಲಿ. ಆ ಸಂದರ್ಭದಲ್ಲಿ ನೀರಿ ನಲ್ಲಿ ಮುಳುಗುತ್ತಿದ್ದ ಚಿಮೂ ಅವರನ್ನು ಹೊಳೆಯಲ್ಲಿ ಮೀನು ಹಿಡಿಯುತ್ತಿದ್ದವರು ರಕ್ಷಿಸಿ ಮೇಲೆ ತಂದಿದ್ದರು. ಹೊಟ್ಟೆಯಲ್ಲಿ ನೀರು ಹೆಚ್ಚಾಗಿ ಚಿಮೂ ಆರೋಗ್ಯದಲ್ಲಿ ಏರುಪೇರಾದಾಗ ಅವರನ್ನು ರಕ್ಷಿಸಿದ ಸ್ಥಳೀಯ ಕರೀಮ್‌ಸಾಬ್ ಎಂಬ ಯುವಕ ಆಸ್ಪತ್ರೆಗೆ ದಾಖಲಿಸಿ, ಜೀವ ಉಳಿಸಿದ್ದರು. ಕರೀಮ್‌ಸಾಬ್ ಹಂಪಿ ವಿರೂಪಾಕ್ಷ ದೇವಸ್ಥಾನ ಬಳಿ ಬದುಕು ಕಟ್ಟಿಕೊಂಡಿದ್ದ ಪಕ್ಕೀರಪ್ಪ ಮದೀನಾಬಿ ಎಂಬುವರ ಮಗ.

ಕೆಲ ಕನ್ನಡಪರ ಹೋರಾಟಗಾರರರು ಪ್ರಚಾರ ಪ್ರಿಯರು : ಚಿಮೂ

ಸದ್ಯ ಹಂಪಿ ಕನ್ನಡ ವಿವಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿರುವ ಕರೀಮ್, ಚಿದಾನಂದಮೂರ್ತಿ ಬಗ್ಗೆ ಸಾಕಷ್ಟು ತಿಳಿದಿದ್ದರು. ಹೀಗಾಗಿ ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಶುಶ್ರೂಷೆ ಮಾಡಿಸಿದ್ದರು. ಚಿಮೂ ಅವರು ನಂತರದಲ್ಲಿ ನಾಡಿನ ಹಿತಕ್ಕಾಗಿ ಜಲಪ್ರವೇಶ ಮಾಡಿದ್ದಾಗಿ ಕಿರುಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.