ನಾಡಗೀತೆಗೆ ಅವಮಾನ: ಕ್ರಮಕ್ಕೆ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಆಗ್ರಹ
ರಾಷ್ಟ್ರಕವಿ ಕುವೆಂಪು ಅವರನ್ನು ನಿಂದಿಸಿ, ನಾಡಗೀತೆಯನ್ನು ತಿರುಚಿ ಬರೆದವರ ವಿರುದ್ಧ ಸರ್ಕಾರ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹಿಸಿದೆ.
ಬೆಂಗಳೂರು (ಮೇ.31): ರಾಷ್ಟ್ರಕವಿ ಕುವೆಂಪು ಅವರನ್ನು ನಿಂದಿಸಿ, ನಾಡಗೀತೆಯನ್ನು ತಿರುಚಿ ಬರೆದವರ ವಿರುದ್ಧ ಸರ್ಕಾರ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ಅವರು, ರಾಷ್ಟ್ರಕವಿ ಕುವೆಂಪು ಅವರ ಕುರಿತು ಅವಹೇಳನಕಾರಿ ಮಾತು ಆಡಿರುವ ಬಗ್ಗೆ ಹಾಗೂ ನಾಡಗೀತೆಯನ್ನು ತಿರುಚಿ ಬರೆದಿರುವ ಕುರಿತು ಮಾಧ್ಯಮಗಳಲ್ಲಿ ಓದುವ, ಹೀನಾಯ ಸ್ಥಿತಿ ತಲುಪಿರುವುದು ಅತ್ಯಂತ ಖೇದದ ಸಂಗತಿಯಾಗಿದೆ.
ರಾಮಕೃಷ್ಣ ಪರಮಹಂಸರ, ವಿವೇಕಾನಂದರ ಚಿಂತನೆಗಳನ್ನು ಆದರ್ಶವನ್ನಾಗಿಸಿಕೊಂಡು, ಸಾಹಿತ್ಯದಲ್ಲಿ ಆಧ್ಯಾತ್ಮಿಕತೆಯನ್ನು ಸರಳವಾಗಿ, ಎಲ್ಲರೂ ಅರ್ಥ ಮಾಡಿಕೊಳ್ಳುವ ಹಾಗೆ ರಚಿಸಿದ ಮಹಾಕವಿಯ ಕುರಿತು ನಿಂದನೆ ಮಾಡಿರುವುದು ವೈಯಕ್ತಿಕವಾಗಿ ಹಾಗೂ ಕಸಾಪ ಅಧ್ಯಕ್ಷನಾಗಿ ಖಂಡಿಸುತ್ತೇನೆ ಎಂದಿದ್ದಾರೆ. ಕುವೆಂಪು ವಿರಚಿತ ‘ಜಯಭಾರತ ಜನನಿಯ ತನುಜಾತೆ’ ಗೀತೆಯನ್ನು 1971ರಲ್ಲಿ ರಾಷ್ಟ್ರಕವಿ ಕುವೆಂಪು ಅವರ ಸಮ್ಮತಿ ಪಡೆದು ಪರಿಷತ್ತು ನಾಡಗೀತೆಯನ್ನಾಗಿ ತನ್ನ ಎಲ್ಲ ಕಾರ್ಯಕ್ರಮಗಳಲ್ಲೂ ಹಾಡಿಸುತ್ತಿತ್ತು. ಭಾರತದ ಅಖಂಡತೆಯನ್ನೂ, ಭಾವೈಕ್ಯತೆಯನ್ನೂ ಎತ್ತಿ ಹಿಡಿಯುವ ಇಂತಹ ಅಪರೂಪದ ಗೀತೆಯನ್ನು ಪರಿಷತ್ತು ನಾಡಗೀತೆಯಾಗಿ ಆರಿಸಿತು.
ಸಾಹಿತ್ಯ ಸಮ್ಮೇಳನಕ್ಕೆ ಕೆನಡಾ ಸಂಸದ ಚಂದ್ರ ಆರ್ಯಗೆ ಆಹ್ವಾನ: ಡಾ.ಮಹೇಶ್ ಜೋಶಿ
2004ರ ಜ.6ರಂದು ಕರ್ನಾಟಕ ನಾಡಗೀತೆಯನ್ನಾಗಿ ನಿಗದಿಪಡಿಸಿ ಆದೇಶ ಹೊರಡಿಸಿತು. ಇಂತಹ ನಾಡಗೀತೆಗೆ ಅವಮಾನ ಮಾಡುವುದನ್ನು ಸಹಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಕುರಿತು ಅವಹೇಳನಕಾರಿ ಮಾತುಗಳನ್ನು ಆಡಿರುವ ಹಾಗೂ ನಾಡಗೀತೆಯನ್ನು ತಿರುಚಿ ಬರೆದವರನ್ನು ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ. ಪರಿಷತ್ತಿನ ಖಂಡನೆಗೆ ಎಲ್ಲ ಘಟಕಗಳು ಒಮ್ಮತದಿಂದ ಬೆಂಬಲವನ್ನು ಸೂಚಿಸಿವೆ ಎಂದು ತಿಳಿಸಿದ್ದಾರೆ. ಕುವೆಂಪು ಅವರನ್ನು ನಿಂದಿಸಿದವರ ಹಾಗೂ ನಾಡಗೀತೆಯನ್ನು ತಿರುಚಿ ಬರೆದವರ ಮೇಲೆ ಕ್ರಮಕೈ ಗೊಳ್ಳುವಂತೆ ಆದಿಚುಂಚನಗಿರಿ ಮಠದ ಶ್ರೀಗಳ ಪತ್ರಕ್ಕೆ ಮುಖ್ಯಮಂತ್ರಿಗಳು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿರುವುದು ಸ್ವಾಗತಾರ್ಹ.
ವಿಜಯಪುರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ನೃತ್ಯ, ಮಹೇಶ್ ಜೋಶಿ ಆಕ್ರೋಶ..!
ಕಸಾಪ ವಿಶೇಷ ಸಭೆಯಲ್ಲಿ ಕೋಲಾಹಲ: ಕಾಗಿನೆಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಸರ್ವ ಸದಸ್ಯರ ಸಭೆ ಮತ್ತು ಮಹಾಸಭೆಯಲ್ಲಿ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ನಿಬಂಧನೆಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಏಕಪಕ್ಷೀಯ ನಿರ್ಣಯ ಕೈಗೊಂಡಿದ್ದಾರೆಂದು ಕೆಲವರು ಆರೋಪಿಸಿದ ಹಿನ್ನಲೆ ಸಭೆಯಲ್ಲಿ ಕೋಲಾಹಲ ನಡೆಯಿತು. ಮಾತ್ರವಲ್ಲದೇ ಪರಸ್ಪರ ವಾಗ್ವಾದಗಳು ನಡೆದವು. ಈ ವೇಳೆ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರ ವಿರುದ್ಧ ಧಿಕ್ಕಾರ ಕೂಗಿದ್ದು, ಕೆಲವರ ಮೇಲೆ ಹಲ್ಲೆಯ ಪ್ರಯತ್ನವು ಸಹ ನಡೆಯಿತು. ಇನ್ನು ಕೆಲವರು ಸಭಾಂಗಣದ ಮುಂಭಾಗದಲ್ಲಿ ಧರಣಿ ಸಹ ನಡೆಸಿದರು. ಈ ಸಮಯದಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದರು.