ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಪ್ರಚಾರ ಚುರುಕು
ರಾಜ್ಯಾದ್ಯಂತ ಮತದಾರರ ಸಂಪರ್ಕಿಸುವ ಕೆಲಸ| ಇತರ ಅಭ್ಯರ್ಥಿಗಳಿದಲೂ ಪ್ರಚಾರ| ಮುಂದಿನ ವರ್ಷ ಮಾರ್ಚ್ 3ಕ್ಕೆ ಐದು ವರ್ಷಗಳ ಅಧಿಕಾರದ ಅವಧಿ ಮುಕ್ತಾಯ| ಅಧ್ಯಕ್ಷರ ಚುನಾವಣೆಗೆ ಇದ್ದ ಕಾನೂನು ತೊಡಕು ನಿವಾರಣೆ|

ಬೆಂಗಳೂರು(ಅ.21): ಕನ್ನಡ ಸಾಹಿತ್ಯ ಪರಿಷತ್ತು ಹಾಲಿ ಅಧ್ಯಕ್ಷರ ಅಧಿಕಾರಾವಧಿ ಮಾ.3ರಂದು ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಚಟುವಟಿಕೆಗಳು ಗರಿಗೆದರಿದ್ದು ಅಧ್ಯಕ್ಷಗಾದಿ ಆಕಾಂಕ್ಷಿಗಳು ಈಗಾಗಲೇ ಪ್ರಚಾರ ಕಾರ್ಯ ಚುರುಕುಗೊಳಿಸಿದ್ದಾರೆ.
ಪ್ರಸ್ತುತ ದೂರದರ್ಶನದ ನಿವೃತ್ತ ಹೆಚ್ಚುವರಿ ನಿರ್ದೇಶಕ ಡಾ.ಮಹೇಶ್ ಜೋಶಿ, ಕನ್ನಡಪರ ಹೋರಾಟಗಾರ ಕಸಾಪ ಹಾಲಿ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಕೊಪ್ಪಳದ ಶೇಖರ್‌ಗೌಡ ಮಾಲಿಪಾಟೀಲ್, ಸಿ.ಕೆ.ರಾಮೇಗೌಡ ಅವರು ರಾಜ್ಯಾದ್ಯಂತ ಎಲ್ಲ ಕಸಾಪ ಜಿಲ್ಲೆ, ತಾಲೂಕು ಘಟಕಗಳ ಸದಸ್ಯರನ್ನು ಸಂಪರ್ಕಿಸಿ ಒಂದು ಸುತ್ತಿನ ಪ್ರಚಾರ ಪೂರೈಸಿದ್ದು, ಎರಡನೇ ಸುತ್ತಿನ ಪ್ರಚಾರಕ್ಕೆ ಸಿದ್ಧತೆ ನಡೆಸಿದ್ದಾರೆ.
ಸ್ಪರ್ಧೆಯಲ್ಲಿರುವವರ ಪೈಕಿ ಡಾ. ಮಹೇಶ್ ಜೋಶಿ ಸಿದ್ಧತೆ ತೀವ್ರಗೊಳಿಸಿದ್ದು, ರಾಜ್ಯಾದ್ಯಂತ ಮತದಾರರನ್ನು ಸಂಪರ್ಕಿಸುವ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಅಲ್ಲದೆ, ಚುನಾವಣೆ ಪ್ರಚಾರಕ್ಕೆ ಅನುಕೂಲವಾಗುವಂತೆ ಡಾ.ಮಹೇಶ್ ಜೋಶಿ ಅವರು ಪದ್ಮನಾಭ ನಗರದಲ್ಲಿರುವ ತಮ್ಮ ನಿವಾಸದಲ್ಲೇ ಕಚೇರಿ ತೆರೆದಿದ್ದಾರೆ.
ಇದೇ ಮಾದರಿ ಅನುಸರಿಸಿರುವ ವ.ಚ.ಚನ್ನೇಗೌಡ ಅವರು ನಾಗರಬಾವಿ 2ನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಮತ್ತು ಸಿ.ಕೆ.ರಾಮೇಗೌಡ ಅವರ ಗಿರಿನಗರದ ಸ್ವನಿವಾಸದಲ್ಲಿಯೇ ಕಚೇರಿಗಳನ್ನು ತೆರೆದಿದ್ದಾರೆ. ಆದರೆ ಶೇಖರ್‌ಗೌಡ ಮಾಲಿ ಪಾಟೀಲ್ ಅವರು ಚಾಮರಾಜಪೇಟೆಯಲ್ಲಿ ಪ್ರತ್ಯೇಕ ಕಚೇರಿ ಪ್ರಾರಂಭಿಸಿದ್ದಾರೆ. ಆದರೆ ಅಧ್ಯಕ್ಷಗಿರಿ ಆಕಾಂಕ್ಷಿಗಳಾಗಿರುವ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್ ಅವರು ಕೂಡ ತೆರೆ ಮರೆಯಲ್ಲಿ ಚುನಾವಣೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೂ ಬಹಿರಂಗವಾಗಿ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.
ಕಸಾಪ ಎಲೆಕ್ಷನ್‌ಗೆ ಈಗ ಇತಿಹಾಸದಲ್ಲೇ ಹೆಚ್ಚು ಮತ!
3 ಲಕ್ಷ ಮತದಾರರು:
ಈ ಬಾರಿಯ ಚುನಾವಣೆಯಲ್ಲಿ ಬರೋಬ್ಬರಿ ಮೂರು ಲಕ್ಷ ಸದಸ್ಯರು ಮತದಾನ ಮಾಡಲಿರುವ ಹಿನ್ನೆಲೆಯಲ್ಲಿ ಚುನಾವಣೆ ಕುತೂಹಲ ಮೂಡಿಸಿದೆ. ಅಲ್ಲದೇ ಇಷ್ಟುದೊಡ್ಡ ಸಂಖ್ಯೆಯ ಮತದಾರರನ್ನು ಭೇಟಿ ಮಾಡಿ ಮತ ನೀಡುವಂತೆ ಕೋರುವುದು ಕೂಡ ಅಧ್ಯಕ್ಷಗಾದಿ ಆಕಾಂಕ್ಷಿಗಳಿಗೆ ಸವಾಲಿನ ಕೆಲಸವಾಗಿದೆ. ಹಾಗಾಗಿ ಚುನಾವಣೆ ಘೋಷಣೆಗೂ ಮುನ್ನವೇ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ.
ಮುಂದಿನ ವರ್ಷ ಮಾರ್ಚ್ 3ಕ್ಕೆ ಐದು ವರ್ಷಗಳ ಅಧಿಕಾರದ ಅವಧಿ ಮುಕ್ತಾಯವಾಗುವ ಕಾರಣ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಮೂರು ತಿಂಗಳ ಮೊದಲು ಪತ್ರ ಬರೆಯುವುದಾಗಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ್ ಅವರು ಈಗಾಗಲೇ ತಿಳಿಸಿದ್ದಾರೆ. ಹೀಗಾಗಿ ಅಧ್ಯಕ್ಷರ ಚುನಾವಣೆಗೆ ಇದ್ದ ಕಾನೂನು ತೊಡಕು ನಿವಾರಣೆಯಾಗಿದೆ. ಹಾಲಿ ಸಮಿತಿಯ ಅಧಿಕಾರವಧಿ ಮುಕ್ತಾಯದ ನಂತರ ಚುನಾವಣಾಧಿಕಾರಿ ನೇಮಕಗೊಳ್ಳಲಿದ್ದು ಚುನಾವಣಾ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ.