Asianet Suvarna News Asianet Suvarna News

ಕಸಾಪ ಎಲೆಕ್ಷನ್‌ಗೆ ಈಗ ಇತಿಹಾಸದಲ್ಲೇ ಹೆಚ್ಚು ಮತ!

ಕಳೆದ ಬಾರಿ 1.87 ಲಕ್ಷ ಮಂದಿಗೆ ಮತದಾನದ ಅರ್ಹತೆ| ಈ ಬಾರಿ 3 ಲಕ್ಷಕ್ಕೂ ಹೆಚ್ಚು ಮಂದಿಗೆ ಅವಕಾಶ| ಇಷ್ಟು ಮತದಾರರು ಇದೇ ಮೊದಲು| ಮಾರ್ಚ್‌ ಬಳಿಕ ಚುನಾವಣೆ| ಅಧ್ಯಕ್ಷ ಹುದ್ದೆ ರೇಸ್‌ನಲ್ಲಿ ಸೋಮಶೇಖರ್‌, ಮಹದೇವ ಪ್ರಕಾಶ್‌, ಚನ್ನೇಗೌಡ, ರಾಮೇಗೌಡ, ಮಾಲಿ ಪಾಟೀಲ್‌| 
 

Three Lakh Voters Caste Vote to Kannada Sahitya Parishat Election grg
Author
Bengaluru, First Published Oct 19, 2020, 11:10 AM IST

ಸಂಪತ್‌ ತರೀಕೆರೆ

ಬೆಂಗಳೂರು(ಅ.19):  ಶತಮಾನ ಪೂರೈಸಿರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ 2021ರ ಮಾರ್ಚ್‌ ನಂತರ ನಡೆಯಲಿರುವ ಚುನಾವಣೆಯಲ್ಲಿ ಮೊದಲ ಬಾರಿಗೆ ಬರೋಬ್ಬರಿ ಮೂರು ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ!

ಐದು ವರ್ಷಗಳ ಹಿಂದೆ (2016ರ ಫೆಬ್ರವರಿ 28) ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚುನಾವಣೆಯಲ್ಲಿ 30 ಜಿಲ್ಲೆಗಳು, 5 ಗಡಿನಾಡು ಘಟಕಗಳು ಒಟ್ಟು ಸೇರಿ ಸುಮಾರು 1.87 ಲಕ್ಷ ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದರು. ಇದೀಗ ಎಲ್ಲ ಘಟಕಗಳಲ್ಲಿ ಹೊಸದಾಗಿ 1.24 ಲಕ್ಷಕ್ಕೂ ಹೆಚ್ಚು ಮಂದಿ ನೋಂದಣಿಯಾಗಿದ್ದು, ಹೀಗೆ ಒಟ್ಟು 3,25,098 ಸದಸ್ಯರು ಸದಸ್ಯತ್ವ ಪಡೆದಂತಾಗಿದೆ. ಸಾಹಿತ್ಯ ಪರಿಷತ್ತಿಗೆ ಇಷ್ಟು ಸಂಖ್ಯೆಯ ಜನರು

ಸದಸ್ಯರಾಗಿರುವುದು ಇತಿಹಾಸದಲ್ಲಿ ಇದೇ ಮೊದಲು.

ಕಸಾಪ ಬೈಲಾ ಪ್ರಕಾರ ಚುನಾವಣೆ ಘೋಷಣೆಯಾದ ದಿನದಿಂದ ಮೂರು ವರ್ಷಗಳ ಮೊದಲು ಸದಸ್ಯತ್ವ ಪಡೆದವರಿಗೆ ಮಾತ್ರ ಮತದಾನಕ್ಕೆ ಅವಕಾಶವಿದೆ. ಹಾಗಾಗಿ 2018ರಲ್ಲಿ ಸದಸ್ಯತ್ವ ಪಡೆದ ಸದಸ್ಯರಲ್ಲಿ ಹಲವರು ಮತದಾನಕ್ಕೆ ಅರ್ಹರಾಗಲಿದ್ದು, 2021ರ ಮಾರ್ಚ್‌ ನಂತರ ಚುನಾವಣೆ ನಡೆದರೆ ಅಂದಾಜು 3 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಮೂಲಗಳು ಮಾಹಿತಿ ನೀಡಿವೆ.

ಕನ್ನಡ ವಚನ ಸಾಹಿತ್ಯ ಕನ್ನಡದ ದೊಡ್ಡ ಶಕ್ತಿ: ಮನು ಬಳಿಗಾರ್‌

ಜಿಲ್ಲಾವಾರು ಸದಸ್ಯರು (2019ರ ಮಾ.31ರ ವರದಿ ಪ್ರಕಾರ):

ಬೆಂಗಳೂರು- 37,200, ಕೋಲಾರ-10,050, ಬೀದರ್‌-12,823, ಚಿತ್ರದುರ್ಗ-6,852, ಶಿವಮೊಗ್ಗ- 9,193, ಬಳ್ಳಾರಿ-12,734, ರಾಯಚೂರು-6,147, ದಾವಣಗೆರೆ- 13,386, ಮೈಸೂರು- 13,454, ತುಮಕೂರು-12,472, ಕೊಪ್ಪಳ-8,973, ಚಾಮರಾಜ ನಗರ- 4,734, ಮಂಡ್ಯ- 24,455, ಹಾಸನ- 13,395, ಕೊಡಗು- 2,418, ಚಿಕ್ಕಮಗಳೂರು- 8,004, ದಕ್ಷಿಣ ಕನ್ನಡ- 4,575, ಬೆಳಗಾವಿ- 26,861, ಬಾಗಲಕೋಟೆ- 9,087, ಗದಗ- 6,116, ಉತ್ತರ ಕನ್ನಡ 4,850, ಉಡುಪಿ- 1,984, ವಿಜಯಪುರ- 10,208, ಧಾರವಾಡ- 5,917, ಹಾವೇರಿ- 8,636, ಕಲಬುರ್ಗಿ- 16,645, ಬೆಂಗಳೂರು ಗ್ರಾಮಾಂತರ- 7,468, ಚಿಕ್ಕಬಳ್ಳಾಪುರ- 6,914, ರಾಮನಗರ- 9,695, ಯಾದಗಿರಿ- 4,975 ಮತ್ತು ಗಡಿನಾಡ ಘಟಕಗಳಾದ ಮಹಾರಾಷ್ಟ್ರ- 789, ಕೇರಳ- 528, ತಮಿಳುನಾಡು- 461, ಆಂಧ್ರಪ್ರದೇಶ- 2230, ಗೋವಾ- 435 ಮತ್ತು ಇತರೆ ರಾಜ್ಯ-ದೇಶಗಳಲ್ಲಿ 205 ಮಂದಿ ಸದಸ್ಯರಿದ್ದಾರೆ. ದಾತೃ ವರ್ಗ- 35, ಪೋಷಕ ಸದಸ್ಯರು 37, ಸಂಸ್ಥೆಗಳ ಸದಸ್ಯರು-153 ಹೀಗೆ ಒಟ್ಟು 3,25,098 ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ.

ಬಳಿಗಾರ್‌ ಅಧಿಕಾರಾವಧಿ ಮುಕ್ತಾಯ

2021ರ ಮಾರ್ಚ್‌ 3ಕ್ಕೆ ಕಸಾಪ ಹಾಲಿ ಅಧ್ಯಕ್ಷ ಡಾ.ಮನು ಬಳಿಗಾರ್‌ ಅವರ ಅಧಿಕಾರಾವಧಿ ಮುಕ್ತಾಯವಾಗುತ್ತಿರುವ ಬೆನ್ನಲ್ಲೇ ಚುನಾವಣಾ ಚಟುವಟಿಕೆಗಳು ಗರಿಗೆದರಿವೆ. ನಿವೃತ್ತ ಐಎಎಸ್‌ ಅಧಿಕಾರಿ ಡಾ.ಸಿ.ಸೋಮಶೇಖರ್‌, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್‌, ಕನ್ನಡಪರ ಕೆಲಸಗಳಲ್ಲಿ ನಿರಂತರವಾಗಿ ತೊಡಗಿರುವ ಕಸಾಪ ಹಾಲಿ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಸಿ.ಕೆ.ರಾಮೇಗೌಡ ಹಾಗೂ ಕೊಪ್ಪಳದ ಶೇಖರ್‌ಗೌಡ ಮಾಲಿ ಪಾಟೀಲ್‌ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‌ನ ಕೇಂದ್ರ ಅಧ್ಯಕ್ಷರು, 30 ಜಿಲ್ಲಾಧ್ಯಕ್ಷರು, 4 ಗಡಿನಾಡ ಘಟಕಗಳ ಅಧ್ಯಕ್ಷರು ಸೇರಿದಂತೆ 35 ಸ್ಥಾನಗಳಿಗೆ ಮಾರ್ಚ್‌ ನಂತರ ಚುನಾವಣೆ ನಡೆಯಲಿದೆ. ಪರಿಷತ್ತಿನ ಬೈಲಾ ಪ್ರಕಾರ ಹಾಲಿ ಅಧ್ಯಕ್ಷರ ಅಧಿಕಾರಾವಧಿ ಮುಕ್ತಾಯವಾಗುವ ಮೂರು ತಿಂಗಳ ಮೊದಲು ಪರಿಷತ್ತು ಚುನಾವಣೆ ನಡೆಸುವಂತೆ ಸಹಕಾರ ಇಲಾಖೆಗೆ ಪತ್ರ ಬರೆಯಬೇಕಿದೆ. ಹಾಗಾಗಿ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌ ಅವರು ನವೆಂಬರ್‌ನಲ್ಲಿ ಪತ್ರ ಬರೆದು ಚುನಾವಣೆ ನಡೆಸುವಂತೆ ಕೋರುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಚುನಾವಣಾ ಪ್ರಚಾರ ಭರಾಟೆ ಜೋರಾಗಿದೆ.
 

Follow Us:
Download App:
  • android
  • ios