ಸಂಪತ್‌ ತರೀಕೆರೆ

ಬೆಂಗಳೂರು(ಅ.27): ಕನ್ನಡ ಸಾಹಿತ್ಯ ಪರಿಷತ್ತು(ಕಸಾಪ) ಕೇಂದ್ರ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳು ಚುನಾವಣಾ ಪ್ರಚಾರ ಚುರುಕುಗೊಳಿಸಿರುವ ಬೆನ್ನಲ್ಲೇ ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಚುನಾವಣಾ ಚಟುವಟಕೆ ಗರಿಗೆದರಿದೆ.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಇದ್ದಷ್ಟೇ ಮಹತ್ವ ಅದರ ಘಟಕವಾದ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ. ಅದಕ್ಕೆ ಕಾರಣ ಇಲ್ಲಿರುವ ಮತದಾರ ಸಂಖ್ಯೆ. ಸುಮಾರು 37,200 ಮತದಾರರನ್ನು ಈ ಜಿಲ್ಲಾ ಘಟಕ ಹೊಂದಿದೆ. ಹೀಗಾಗಿ ಕಸಾಪ ಚುನಾವಣೆ ಒಂದು ಬಗೆಯಲ್ಲಿ ಕಾವು ಹುಟ್ಟಿಸಿದ್ದರೆ, ನಗರ ಜಿಲ್ಲಾ ಘಟಕದ ಚುನಾವಣೆಯೂ ಕುತೂಹಲ ಕೆರಳಿಸಿದೆ.

ಪ್ರಸ್ತುತ ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೈಗಾರಿಕಾ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಸದ್ಬಾವನಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶಮೂರ್ತಿ, ಸಹಕಾರಿ ಕ್ಷೇತ್ರದ ದಯಾನಂದ ತಿಪ್ಪೇರುದ್ರ, ಕುವೆಂಪು ಕಲಾನಿಕೇತನ ಅಧ್ಯಕ್ಷ ಕುವೆಂಪು ಪ್ರಕಾಶ್‌, ನಲ್ಲೂರು ಪ್ರಸಾದ್‌ ಪ್ರತಿಷ್ಠಾನದ ಕಾಂತರಾಜುಪುರ ಸುರೇಶ್‌ ಅವರ ಹೆಸರುಗಳು ಚಾಲ್ತಿಯಲ್ಲಿವೆ. ಚುನಾವಣೆ ಘೋಷಣೆಗೆ ಇನ್ನೂ ಐದಾರು ತಿಂಗಳು ಇರುವುದರಿಂದ ಈ ಪಟ್ಟಿಗೆ ಇನ್ನಷ್ಟುಹೆಸರುಗಳು ಸೇರ್ಪಡೆಯಾಗುವ ಸಾಧ್ಯತೆಯೂ ಇದೆ.

ಕಸಾಪ ಎಲೆಕ್ಷನ್‌ಗೆ ಈಗ ಇತಿಹಾಸದಲ್ಲೇ ಹೆಚ್ಚು ಮತ!

2016 ಫೆ.29ರಂದು ನಡೆದಿದ್ದ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಿ ಹಾಲಿ ಅಧ್ಯಕ್ಷ ಮಾಯಣ್ಣ (4750 ಮತ) ವಿರುದ್ಧ ಕೇವಲ 561 ಮತಗಳ ಅಂತರದಿಂದ ಸೋತಿದ್ದ ಪ್ರಕಾಶಮೂರ್ತಿ (ಈ ಹಿಂದೆ 67 ಮತಗಳಿಂದ ಸೋತಿದ್ದರು) ಈ ಬಾರಿಯೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಸತತವಾಗಿ ಮೂರು ಬಾರಿ ಪ್ರಕಾಶಮೂರ್ತಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಅಂತೆಯೇ ಎಂ.ತಿಮ್ಮಯ್ಯ ಕೂಡ ಹಲವು ವರ್ಷಗಳಿಂದ ಕನ್ನಡಪರ ಹೋರಾಟದಲ್ಲಿ ತೊಡಗಿಕೊಂಡಿದ್ದು ಹಿಂದೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದರು. ಉಳಿದಂತೆ ಇತರರು ಇದೇ ಮೊದಲ ಬಾರಿಗೆ ಸ್ಪರ್ಧಾ ಕಣಕ್ಕೆ ಇಳಿಯುವ ಸಿದ್ಧತೆ ನಡೆಸಿದ್ದಾರೆ.

ಆನೇಕಲ್‌ ತಾಲೂಕನ್ನೂ ಒಳಗೊಂಡಿರುವ ನಗರ ಜಿಲ್ಲಾ ಕಸಾಪಕ್ಕೆ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರದ 37,200 ಮಂದಿ ಸದಸ್ಯರಾಗಿದ್ದು ಮತದಾನದ ಹಕ್ಕು ಪಡೆದಿದ್ದಾರೆ. ದಯಾನಂದ ತಿಪ್ಪೇರುದ್ರ ಅವರು ಸೇರಿದಂತೆ ಇತರ ಅಭ್ಯರ್ಥಿಗಳು ಮತದಾರರನ್ನು ನಿರಂತರವಾಗಿ ಸಂಪರ್ಕದಲ್ಲಿಡಲು ಸತತ ಪ್ರಚಾರ ತಂತ್ರಗಳನ್ನು ರೂಪಿಸುತ್ತಿದ್ದು, ಮೊಬೈಲ್‌ ಕರೆ, ಕರಪತ್ರ, ಎಸ್‌ಎಂಎಸ್‌, ವಾಟ್ಸಾಪ್‌ ಸಂದೇಶ, ಸಮಾಲೋಚನಾ ಸಭೆಗಳು, ಬೆಂಬಲಿಗರ ಸಭೆ ಇತ್ಯಾದಿ ತಂತ್ರಗಳನ್ನು ಪ್ರಯೋಗಿಸುತ್ತಾ ಪ್ರಚಾರದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ಮತದಾರರ ಸಂಖ್ಯೆ ಹೆಚ್ಚಳ

2016ರಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 26,636 ಸದಸ್ಯರು ಮತದಾನ ಹಕ್ಕು ಹೊಂದಿದ್ದರು. ಇದೀಗ ಈ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು 37,200 ಸದಸ್ಯರು ಮತದಾನ ಮಾಡಲಿದ್ದಾರೆ. ಅಂದರೆ ಸುಮಾರು 10,564 ಮತಗಳು ಹೆಚ್ಚಾದಂತಾಗಿದೆ. ಆನೇಕಲ್‌ ತಾಲೂಕು ಕೂಡ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಗೆ ಬಂದಿದ್ದು ಅಲ್ಲಿನ ಸದಸ್ಯರು ಕೂಡ ಮತ ಚಲಾಯಿಸಲಿದ್ದಾರೆ. ಹಾಗಾಗಿ ಕಳೆದ ಬಾರಿಗಿಂತ ಈ ಬಾರಿ ಸುಮಾರು 11 ಸಾವಿರ ಮತಗಳು ಏರಿಕೆಯಾದಂತಾಗಿದೆ.

ಚುನಾವಣೆ ಘೋಷಣೆಯಾದ ದಿನದಿಂದ ಕಸಾಪ ಸದಸ್ಯತ್ವ ಪಡೆದ ಮೂರು ವರ್ಷಗಳಾಗಿದ್ದರೆ ಮಾತ್ರ ಮತ ಚಲಾಯಿಸುವ ಹಕ್ಕು ಲಭಿಸಲಿದೆ. ಹೀಗಾಗಿ ಚುನಾವಣೆಗೂ ಮುನ್ನ ಒಂದೆರಡು ವರ್ಷಗಳಲ್ಲಿ ಸದಸ್ಯತ್ವ ಪಡೆದವರಿಗೆ ಮತದಾನದ ಅವಕಾಶ ಇಲ್ಲ ಎಂದು ಕಸಾಪ ಮೂಲಗಳು ಮಾಹಿತಿ ನೀಡಿವೆ.