Kannada Rajyotsavaವನ್ನು ರಾಜ್ಯದೆಲ್ಲೆಡೆ ನವೆಂಬರ್ ತಿಂಗಳಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಸಂದರ್ಭವನ್ನು ಕನ್ನಡ ನಾಡು, ನುಡಿ, ಪ್ರವಾಸಿ ತಾಣಗಳು, ಜೀವನಶೈಲಿ, ಆಹಾರ ಪದ್ಧತಿ,  ಸಂಗೀತ, ವಸ್ತ್ರ ವಿಶೇಷ ಸೇರಿ ವಿಭಿನ್ನ  ವಿಶೇಷತೆ ತಿಳಿದುಕೊಳ್ಳುವಂತಾಗಬೇಕು. ರಸಪ್ರಶ್ನೆ ಮಾಡೋದು ಹೇಗೆ?

DID YOU
KNOW
?
ಕುವೆಂಪು ಪೂರ್ತಿ ಹೆಸರೇನು?
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

ಬೆಂಗಳೂರು: ನವೆಂಬರ್ ಅಂದರೆ ಸಾಕು ಕರ್ನಾಟಕದೆಲ್ಲೆಡೆ Kannada Rajyotsavaದ ಸಂಭ್ರಮ. ಅದರಲ್ಲಿಯೂ ಬೆಂಗಳೂರಿನ ಅನೇಕ ಅಪಾರ್ಟೆಮೆಂಟ್‌ಗಳೀಗೆ ಮಿನಿ ಭಾರತಕ್ಕೊಂದು ಉದಾಹರಣೆ. ದೇಶದೆ ಎಲ್ಲೆಡೆಯಿಂದ ಬಂದು, ಬೆಂಗಳೂರಲ್ಲಿ ಅವಕಾಶಗಳನ್ನು ಹುಡುಕಿಕೊಂಡು, ನೆಲೆ ಊರಿದವರು ಎಲ್ಲೆಡೆ ಸಿಗುತ್ತಾರೆ. ಅಂಥ ಸಮುಚ್ಛಯಗಳಲ್ಲಿಯೂ ಕನ್ನಡ ರಾಜ್ಯೋತ್ಸವ ಆಚರಿಸುತ್ತಾರೆ. ಆದರೆ, ಅಲ್ಲಿಯೂ ಇಂಗ್ಲಿಷ್‌ಮಯ ಆಗುತ್ತಿರುವುದು ಮಾತ್ರ ದುರಂತ. ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬಂತೆ ಪ್ರತಿಯೊಬ್ಬರೂ ಇಂಥ ಕಾರ್ಯಕ್ರಮಗಳಲ್ಲಿ ಸೇರಿಸಿಕೊಂಡು ಮುನ್ನಡಿ ಇಟ್ಟರೆ, ಕನ್ನಡ ರಾಜ್ಯೋತ್ಸವಕ್ಕೆ ಒಂದು ಅರ್ಥ. ಕನ್ನಡೇತರರನ್ನು ಸೇರಿಸಿಕೊಂಡು, ಕನ್ನಡಾಭಿಮಾನ ಮೆರೆಯುವವರಿಗೆ ರಸಪ್ರಶ್ನೆಯಂಥ ಕಾರ್ಯಕ್ರಮಗಳನ್ನು ಕೇಳುವುದಾದರೆ ಇಲ್ಲಿವೆ ಕೆಲವು ಐಡಿಯಾಗಳು. ಎಲ್ಲೆಡೆ ರಾಜ್ಯೋತ್ಸವದ ಸಂಭ್ರಮ ಹೆಚ್ಚಾಗಲಿ. ಕನ್ನಡ ಡಿಂಡಿಮವ ಬಾರಿಸಲಿ, ತಾಯಿ ಭುವನೇಶ್ವರಿ ಸಂತೃಪ್ತಿಗೊಳ್ಳಲಿ ಎಂಬ ಆಶಯದೊಂದಿಗೆ ಏಷ್ಯಾನೆಟ್ ಸುವರ್ಣನ್ಯೂಸ್ ಇಲ್ಲೊಂದಿಷ್ಟು ಪ್ರಶ್ನೆಗಳನ್ನು ಉತ್ತರದೊಂದಿಗೆ ನೀಡಿವೆ. ಕರ್ನಾಟಕದ ಪ್ರವಾಸೋದ್ಯಮ ಸ್ಥಳಗಳು, ನಮ್ಮ ಒಗಟು, ಗಾದೆ, ಆಹಾರ ಸೇರಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳಿವೆ.

ಎರಡು ಗುಂಪುಗಳಲ್ಲಿ ಎಷ್ಟಾದರೂ ಜನರಿರಲಿ. ಸೇರಿಸಿಕೊಂಡು ಇಂಥ ರಸಪ್ರಶ್ನೆ ಕಾರ್ಯಕ್ರಮಗಳನ್ನು ಮಾಡಬಹುದು. ಅದರಲ್ಲಿ ಯಾರು ಉತ್ತರ ಹೇಳುವುದಿಲ್ಲವೋ ಅವರು ತಂಡದಿಂದ ಒಬ್ಬೊಬ್ಬರೇ ಹೊರ ನಡೆಯಬೇಕು. ಹೆಚ್ಚಿಗೆ ಪ್ರಶ್ನೆಗೆ ಉತ್ತರಿಸಿದ ತಂಡ ಗೆದ್ದೀತೆಂದು ಘೋಷಿಸಬಹುದು. ಒಟ್ಟಿನಲ್ಲಿ ನಿಮ್ಮ ನಿಮ್ಮ ಅನುಕೂಲಕ್ಕೆ ತಕ್ಕಂತೆ, ಕನ್ನಡ ಪ್ರೀತಿ, ಅಭಿಮಾನಕ್ಕೆ ಅನುಗುಣವಾಗಿ ಇಂಥ ರಸಪ್ರಶ್ನೆ ಕಾರ್ಯಕ್ರಮಗಳನ್ನು ಮಾಡಿದರೆ ಕಾರ್ಯಕ್ರಮದ ಕಳೆ ಕಟ್ಟುವುದರೊಂದಿಗೆ, ಪ್ರತಿಯೊಬ್ಬರಿಗೂ ಕನ್ನಡ ನಾಡಿನ ಮೇಲಿನ ಪ್ರೀತಿ, ಗೌರವ ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ.

1. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುತ್ತಾರೆ. ಅಂಥ ಗಾದೆಗಳನ್ನು ತಪ್ಪು ಹೇಳಿ ಸರಿ ಪಡಿಸುವಂತೆ ಹೇಳುವುದಾದರೆ...

1. ಹಾಡ್ತಾ ಹಾಡ್ತಾ ರೋಗ ಉಗುಳ್ತಾ ಉಗುಳ್ತಾ ರಾಗ

ಸರಿಯಾದ ಗಾದೆ: ಹಾಡ್ತಾ ಹಾಡ್ತಾ ರಾಗ, ಉಗುಳ್ತಾ ಉಗುಳ್ತಾ ರೋಗ

2. ರಾತ್ರಿ ಕಂಡ್ ಬಾವಿಯಲ್ಲಿ ಹಗಲು ಬಿದ್ದಂತೆ

ಹಗಲು ಕಂಡ ಬಾವಿಯಲ್ಲಿ ರಾತ್ರಿ ಬಿದ್ದಂತೆ

3.ಆನೆಗೆ ಹೋದ ಮಾನ ಅಡಿಕೆ ಕೊಟ್ಟರೂ ಬಾರದು

ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು

4. ಮಾತು ಒಲೆ ಕೆಡಿಸಿತು, ತೂತು ಮನೆ ಮುರೀತು

ಮಾತು ಮನೆ ಮುರೀತು, ತೂತು ಒಲೆ ಕೆಡಿಸಿತು

5. ಮಾತು ಬಂಗಾರ, ಮೌನ ಬೆಳ್ಳಿ

ಮಾತು ಬೆಳ್ಳಿ ಮೌನ ಬಂಗಾರ

ಜಾನಪದದಿಂದ ಹಿಡಿದು, ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾದದ್ದು. ಭಾವಗೀತೆಯೂ ಕನ್ನಡದಲ್ಲಿ ಸುಪ್ರಸಿದ್ಧ. ಅಂಥ ಕೆಲವು ಪ್ರಸಿದ್ಧ ಗೀತೆಗಳ ಮಧ್ಯ ಬಾಗದಿಂದ ಹಾಡಿ, ಮೊದಲ ಸಾಲುಗಳನ್ನು ಹೇಳುವಂತೆ ಕೇಳಬಹುದು.

1.

ಮುಂದೆ ಬಂದರೆ ಹಾಯದಿರಿ ಹಿಂದೆ ಬಂದರೆ ಒದೆಯದಿರಿ

ನಿಮ್ಮ ಕಂದನೆಂದು ಕಂಡಿರಿ ತಬ್ಬಲಿಯ ಕಂದನನು

ತಬ್ಬಲಿಯು ನೀನಾದೆ ಮಗನೆ ಹೆಬ್ಬುಲಿಯ ಬಾಯನ್ನು ಹೊಗೆವೆನು

ಇಬ್ಬರಾ ಋಣ ತೀರಿತೆಂದು ತಬ್ಬಿಕೊಂಡಿತು ಕಂದನ

ಉತ್ತರ: ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟಕ ದೇಶದಿ

ಇರುವ ಕಾಳಿಂಗನೆಂಬ ಗೊಲ್ಲನು ಪರಿಯನಾನೆಂತು ಪೇಳ್ವೆನು

ಉದಯಕಾಲದೊಳೆದ್ದು ಗೊಲ್ಲನು ನದಿಯ ಸ್ನಾನವ ಮಾಡಿಕೊಂಡು

ಮದನತಿಲಕವ ಹಣೆಯೊಳಿಟ್ಟು ಚದುರಶಿಕೆಯನು ಹಾಕಿದ

ಪುಣ್ಯಕೋಟಿ ಜನಪದ ಗೀತೆ.

2.

ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಾಲ ನವಿನ ಜನನ

ನಮಗೆ ಏಕೆ ಬಾರದೋ?

ಎಲೆ ಸನತ್ಕುಮಾರ ದೇವ ಎಲೆ ಸಾಹಸಿ ಚಿರಂಜೀವ

ನಿನಗೆ ಲೀಲೆ ಸೇರದೋ

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ

ಹೊಸ ವರುಷಕೆ ಹೊಸ ಹರುಷವ ಹೊಸೆತು ಹೊಸೆತು ತರುತಿದೆ ||

ಕವಿ: ಅಂಬಿಕಾನತಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ದತ್ತಾತ್ರೆಯ ರಾಮಚಂದ್ರ ಬೇಂದ್ರೆ

3.

ಕೋಪ ಬರಲು ಗಟ್ಟಿಯಾಗಿ ಕಿರಿಚಿಕೊಳುವುದು

ಕಿರಿಚಿಕೊಂಡು ತನ್ನ ಮೈಯ ಪರಚಿಕೊಳುವುದು

ಮೈಯ ಪರಚಿಕೊಂಡು ಪಾಪ ಅತ್ತು ಕರೆವುದು

ಅಳಲು ಕಣ್ಣಿನಿಂದ ಸಣ್ಣ ಮುತ್ತು ಸುರಿವುದು

ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು

ಎತ್ತಿಕೊಳಲು ಹೋದರದಕೆ ಕೋಪ ಬರುವುದು

ಕವಿ: ಜೆ.ಪಿ.ರಾಜರತ್ನಂ

4.

ಹತ್ತಿರವಿದ್ದೂ ದೂರ ನಿಲ್ಲುವೆವು

ನಮ್ಮ ಅಹಂಮಿನ ಕೋಟೆಯಲಿ

ಎಷ್ಟು ಕಷ್ಟವೋ ಹೊಂದಿಕೆಯೆಂಬುದು

ನಾಲ್ಕು ದಿನದ ಈ ಬದುಕಿನಲ್ಲಿ || ಎಲ್ಲೋ ||

ಉತ್ತರ: ಎಲ್ಲೋ ಹುಡುಕಿದೆ ಇಲ್ಲದ ದೇವರ

ಕಲ್ಲು ಮಣ್ಣುಗಳ ಗುಡಿಯೊಳಗೆ

ಇಲ್ಲೇ ಇರುವ ಪ್ರೀತಿ ಸ್ನೇಹಗಳ

ಗುರುತಿಸದಾದೆವು ನಮ್ಮೊಳಗೆ || ಎಲ್ಲೋ ||

ಕವಿ: ಜಿ.ಎಸ್ ಶಿವರುದ್ರಪ್ಪ

5.

ಸತ್ತಂತಿಹರನು ಬಡಿದೆಚ್ಚರಿಸು!

ಕಚ್ಚಾಡುವರನು ಕೂಡಿಸಿ ಒಲಿಸು!

ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು!

ಒಟ್ಟಿಗೆ ಬಾಳುವ ತೆರದಲಿ ಹರಸು!

ಉತ್ತರ: ಬಾರಿಸು ಕನ್ನಡ ಡಿಂಡಿಮವ

ಓ ಕರ್ನಾಟಕ ಹೃದಯ ಶಿವ!

ಕವಿ ಕುವೆಂಪು

ಕರುನಾಡು ಜಾನಪದ ಕ್ರೀಡೆಯಿಂದ ಹಿಡಿದು, ಅಥ್ಲೀಟ್‌ವರೆಗೂ ಪ್ರಸಿದ್ಧಿ. ಚನ್ನಮಣೆ, ಪಗಡೆ, ಲಗೋರಿ, ಚೌಕಾಬಾರ, ಕುಂಟೆಬಿಲ್ಲೆಯಿಂದ ಹಿಡಿದು ಕ್ರಿಕೆಟನ್ನೂ ಆಡುವವರಿದ್ದಾರೆ. ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಅರ್ಧದಷ್ಟು ಜನರು ಕರ್ನಾಟಕದವರೇ ಇದ್ದರೆಂದು ಹೇಳಿಕೊಳ್ಳಲು ಹೆಮ್ಮೆ. ಫೀಲ್ಡಿನಲ್ಲಿ ಅವರೆಲ್ಲ ಕನ್ನಡದಲ್ಲಿ ಮಾತನಾಡಿಕೊಂಡರೆ ಕನ್ನಡಿಗರ ಮೈ ರೋಮಾಂಚನ ಎನ್ನುವಂತೆ ಫೀಲ್ ಆಗುತ್ತಿದೆ. ಅಂತ ಕ್ರೀಡೆ, ಕರ್ನಾಟಕದ ಕ್ರೀಡಾಳುಗಳ ಬಗ್ಗೆ ಹತ್ತು ಹಲವು ಪ್ರಶ್ನೆಗಳನ್ನು ರೆಡಿ ಮಾಡಿಟ್ಟುಕೊಳ್ಳಬಹುದು.

- ಚೌಕಾಕಾರದ ಕೆಲವು ಮನೆಗಳನ್ನು ಮಾಡಿಕೊಂಡು ಕಲ್ಲಿನೊಂದಿಗೆ ಆಡುವ ಕರ್ನಾಟಕದ ಜನಪ್ರಿಯ ಜಾನಪದ ಆಟ ಯಾವುದು?

ಉತ್ತರ: ಕುಂಟೆಬಿಲ್ಲೆ

- ಚನ್ನೆಮಣೆಯಲ್ಲಿ ಒಟ್ಟು ಎಷ್ಟು ಮನೆಗಳಿರುತ್ತವೆ?

ಉತ್ತರ: 7 + 7. ಒಂದು ಮನೆಯಲ್ಲಿ 4 ಬೀಜಗಳು.

- ಪಾಕಿಸ್ತಾನದ ವಿರುದ್ಧದ ಪಂದ್ಯವೊಂದರಲ್ಲಿ ಹತ್ತಕ್ಕೆ ಹತ್ತೂ ವಿಕೆಟ್ ಪಡೆದಿದ್ದ ಕರ್ನಾಟಕದ ಕ್ರಿಕೆಟಿಗ ಯಾರು?

ಉತ್ತರ: ಅನಿಲ್ ಕುಂಬ್ಳೆ

- ರಾಹುಲ್ ದ್ರಾವಿಡ್‌ಗೆ ಕ್ರಿಕೆಟ್ ವಲಯದಲ್ಲಿ ಏನೆಂದು ಕರೆಯುತ್ತಾರೆ?

ಉತ್ತರ: The wall

- ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದ ವೇದಾ ಕೃಷ್ಣಮೂರ್ತಿ ಯಾವ ಊರಿನವರು?

ಉತ್ತರ: ವೇದಾ ಕೃಷ್ಣಮೂರ್ತಿ

- ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗಳನ್ನು ಗೆದ್ದ ಮೊದಲ ಭಾರತೀಯ ಯಾರು?

ಉತ್ತರ: ಪ್ರಕಾಶ್ ಪಡುಕೋಣೆ (ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಂದೆ)

- ಮಹೇಶ್ ಭೂಪತಿ ಯಾವ ಕ್ರೀಡೆಯೊಂದಿಗೆ ಗುರುತಿಸಿಕೊಂಡಿದ್ದರು?

ಎರಡು ದಶಕಗಳ ಕಾಲ ಭಾರತೀಯ ಟೆನಿಸ್‌ ಧ್ವಜಧಾರಿಗಳಲ್ಲಿ ಒಬ್ಬರಾದ ಭೂಪತಿ ಗ್ರ್ಯಾಂಡ್‌ಸ್ಲಾಮ್ ಯಶಸ್ಸಿನ ರುಚಿಯನ್ನು ಅನುಭವಿಸಿದ ಮೊದಲ ಭಾರತೀಯ.

ಎಲ್ಲೆಡೆ ಸ್ವಲ್ಪ ಸ್ವಲ್ಪ ಕನ್ನಡ್ ಗೊತ್ತು ಅನ್ನೋರು, ಇಲ್ಲವೇ ಇಲ್ಲಿಯೇ ಇದ್ದು ಸಂಪೂರ್ಣ ಕನ್ನಡಿಗರಾದೋರು, ಇಲ್ಲವೇ ಕಲಿಯಲು ಇಚ್ಛಿಸೋರು ಇರುತ್ತಾರೆ. ಅವರನ್ನು ಗಮನದಲ್ಲಿಟ್ಟುಕೊಂಡು ಕೆಲವು ಇಂಗ್ಲಿಷ್ ಪದಗಳಿಗೆ ಕನ್ನಡ ಅರ್ಥ ಅಥವಾ ಕನ್ನಡ ಪದಗಳಿಗೆ ಇಂಗ್ಲಿಷ್ ಪದ ಹೇಳುವಂತೆ ಹೇಳಬಹುದು.

Forest:ಕಾಡು

Love: ಪ್ರೀತಿ

Nation: ದೇಶ

State: ರಾಜ್ಯ

ಕಾಂತಾರ: Deep Forest

Life:ಜೀವನ

Beautiful:ಸುಂದರ

Home: ಮನೆ

Compassion:ಅನುಕಂಪ

ಅನುಬಂಧ: Bonding, Connection

Harmony: ಸೌಹಾರ್ದ

ಆಪ್ತ: One who connected with the soul

ವಿರಹ: Sweet Pain with love being seperated

ಸಿಲಿಕಾನ್ ಸಿಟಿ ಎಂದೇ ಹೆಸರಾದ ಬೆಂಗಳೂರು ಎಲ್ಲರನ್ನೂ ಅವಕಾಶಗಳೊಂದಿಗೆ ಸ್ವಾಗತಿಸುತ್ತದೆ. ಇಲ್ಲಿಯೇ ಇದ್ದ ಕನ್ನಡಿಗರು ಕಾವೇರಿ ನೀರು ಕುಡಿದು, ಬೆಂಗಳೂರಿನ ಹವೆಯ ಸೇವಿಸಿ ಬೆಂಗಳೂರಿಗರೇ ಆಗಿರುತ್ತಾರೆ. ಅವರಿಗೆ ದಿನ ನಿತ್ಯ ಟ್ರಾಫಿಕ್‌ನಲ್ಲಿ ಓಡಾಡಿ, ಬೆಂಗಳೂರಿನ ಬಗ್ಗೆ ಸಾಕಷ್ಟು ಜ್ಞಾನ ಇರುತ್ತದೆ. ಈ ಪ್ರಶ್ನೆಗಳನ್ನು ಕೇಳಬಹುದು.

1. ಬೆಂಗಳೂರಿನ ಮೂಲ ಹೆಸರು 'ಬೆಂದಕಾಳೂರು' ಎಂದು ಬರಲು ಕಾರಣವೇನು?

* ಉತ್ತರ: ಒಬ್ಬ ವೃದ್ಧೆ ಹಸಿವಿನಿಂದಿದ್ದ ಹೊಯ್ಸಳ ರಾಜನಿಗೆ ಬೇಯಿಸಿದ ಬೇಳೆಗಳನ್ನು (ಕನ್ನಡದಲ್ಲಿ 'ಬೆಂದ ಕಾಳು') ನೀಡಿದಳು, ಇದರಿಂದ ಈ ಹೆಸರು ಬಂದಿತು.

2. ಬೆಂಗಳೂರನ್ನು ನಿರ್ಮಿಸಿದವರು ಯಾರು?

* ಉತ್ತರ: ನಾಡಪ್ರಭು ಕೆಂಪೇಗೌಡ.

3. ಬೆಂಗಳೂರನ್ನು 'ಭಾರತದ ಉದ್ಯಾನ ನಗರಿ' ಎಂದು ಏಕೆ ಕರೆಯಲಾಗುತ್ತದೆ?

* ಉತ್ತರ: ಇಲ್ಲಿರುವ ಅನೇಕ ಸುಂದರವಾದ ಉದ್ಯಾನವನಗಳು ಮತ್ತು ಹಸಿರು ಪ್ರದೇಶಗಳಿಂದಾಗಿ, ಉದಾಹರಣೆಗೆ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್.

4. ಬೆಂಗಳೂರಿನಲ್ಲಿರುವ ಭಾರತದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಯಾವುದು?

* ಉತ್ತರ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO).

5. ಬೆಂಗಳೂರಿನ ಐತಿಹಾಸಿಕ ಕೋಟೆ ಎಲ್ಲಿದೆ?

* ಉತ್ತರ: ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ ಚಾಮರಾಜಪೇಟೆಯಲ್ಲಿದೆ.

6. ಬೆಂಗಳೂರಿನಲ್ಲಿರುವ ಪ್ರಸಿದ್ಧ ಗಣೇಶ ದೇವಾಲಯ ಯಾವುದು?

* ಉತ್ತರ: ದೊಡ್ಡ ಗಣೇಶ ದೇವಾಲಯ.

7. ಬೆಂಗಳೂರಿನ ಯಾವ ಪ್ರಸಿದ್ಧ ಉದ್ಯಾನವನವು ಪ್ರಪಂಚದಾದ್ಯಂತದ ಸಸ್ಯ ಪ್ರಭೇದಗಳನ್ನು ಹೊಂದಿದೆ?

* ಉತ್ತರ: ಲಾಲ್ ಬಾಗ್.

8. ಯಾವ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಿಂದ ಬೆಂಗಳೂರನ್ನು 'ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ' ಎಂದು ಕರೆಯಲಾಗುತ್ತದೆ?

* ಉತ್ತರ: ಮಾಹಿತಿ ತಂತ್ರಜ್ಞಾನ (IT) ಕ್ಷೇತ್ರ.

9. ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡಲಾಗಿದೆ?

* ಉತ್ತರ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

10. BTM full form: Byrasandra, Tavarekere, and Madiwala Layout

11. HSR Layout: Hosuru Sarjapur Road

12.ವಿಧಾನಸೌಧ ನಿರ್ಮಿಸಿದವರು ಯಾರು?

ಕೆಂಗಲ್ ಹನುಮಂತರಾಯ

13. ರಂಗ ಶಂಕರ ಯಾರ ನನಪಿಗೆ ಕಟ್ಟಿದ ಥಿಯೇಟರ್?

ನಟ ಶಂಕರ್ ನಾಗ್

ಈ ಚಲನ ಚಿತ್ರ ಗೀತೆಗಳ ಮೊದಲ ಚರಣ ಹೇಳಬೇಕು.

1.

ಬಾಳಿನ ಬೆನ್ನು ಹತ್ತಿ.. ನೂರಾರು ಊರು ಸುತ್ತಿ..

ಏನೇನೋ ಕಂಡ ಮೇಲೂ.. ನಮ್ಮೂರೇ ನಮಗೆ ಮೇಲೂ..

ಕೈಲಾಸಂ ಕಂಡ ನಮಗೆ.. ಕೈಲಾಸ ಯಾಕೆ ಬೇಕು..

ದಾಸರ ಕಂಡ ನಮಗೆ.. ವೈಕುಂಟ ಯಾಕೆ ಬೇಕು..

ಮುಂದಿನ ನನ್ನ ಜನ್ಮ.. ಬರದಿಟ್ಟನಂತೆ ಬ್ರಹ್ಮ..

ಇಲ್ಲಿಯೇ ಇಲ್ಲಿಯೇ ಎಂದಿಗೂ ನಾನ್ ಇಲ್ಲಿಯೇ…

ಉತ್ತರ: ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು..

ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು..

ಬದುಕಿದು ಜಟಕಾ ಬಂಡಿ. ಇದು ವಿಧಿಯೋಡಿಸುವ ಬಂಡಿ2

ಚಿತ್ರ: ಡಾ.ರಾಜಕುಮಾರ್ ನಟನೆಯ ಆಕಸ್ಮಿಕ. ಸಾಹಿತ್ಯ: ಹಂಸಲೇಖ

2.

ವೀರ ಧೀರರಾಳಿದ ನಾಡು ನಿನ್ನದು

ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು

ವರ ಸಾಧು ಸಂತರ ನೆಲೆ ನಿನ್ನದು

ಮಹಾ ಶಿಲ್ಪಕಾರರ ಕಲೆ ನಿನ್ನದು

ಸಂಗೀತ ಸಾಹಿತ್ಯ ಸೆಲೆ ನಿನ್ನದು

ಉತ್ತರ: ಕರುನಾಡ ತಾಯಿ ಸದಾ ಚಿನ್ಮಯಿ

ಈ ಪುಣ್ಯ ಭೂಮಿ ನಮ್ಮ ದೇವಾಲಯ

ಪ್ರೇಮಾಲಯ ಈ ದೇವಾಲಯ

ಕರುನಾಡ ತಾಯಿ ಸದಾ ಚಿನ್ಮಯಿ

ಚಿತ್ರ: ರವಿಚಂದ್ರನ್ ನಟಿಸಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿದ್ದು, ನಾನು ನನ್ನ ಹೆಂಡ್ತಿ ಚಿತ್ರದ್ದು. ರಚನೆ ಹಂಸಲೇಖ

3.

ಬೆಳ್ಳಿ ತೆರೆಯ ಮೊದಲ ಸಾಹಿತಿ

ಬೆಳ್ಳಾವೆಯವರಿಗೆ ವಂದಿಸುವೆ

ಬೆಳ್ಳಿ ಮೋಡದಿ ಖ್ಯಾತಿಯ ಪಡೆದ

ತ್ರಿವೇಣಿಗೆ ತಲೆ ಬಾಗಿಸುವೆ

ಉತ್ತರ: ಕನ್ನಡ ಹೊನ್ನುಡಿ ದೇವಿಯನು

ನಾ ಪೂಜಿಸುವೆ ಆರಾಧಿಸುವೆ

ಚಿತ್ರ: ಹಾಡು: ಕನ್ನಡ ಹೊನ್ನುಡಿ ದೇವಿಯನ್ನು

ಚಿತ್ರ: ಅನಂತ್ ನಾಗ್ ನಟನೆಯ ಒಂದು ಸಿನಿಮಾ ಕಥೆ (೧೯೯೨)

ನಿರ್ದೇಶಕ: ರಾಮಚಂದ್ರ

ನಿರ್ಮಾಪಕ: ರಾಮಚಂದ್ರ

ಸಂಗೀತ: ರಾಜನ್-ನಾಗೇಂದ್ರ

4.

ಉತ್ತರ: ಕೇಳಿಸದೆ ಕಲ್ಲು ಕಲ್ಲಿನಲಿ

ಕನ್ನಡ ನುಡಿ......ಕನ್ನಡ ನುಡಿ......

ಕಾಣಿಸದೆ ಹೊನ್ನ ಚರಿತೆಯಲಿ

ಹಂಪೆಯ ಗುಡಿ......ಹಂಪೆಯ ಗುಡಿ.....

ವೈಭವದ ತವರು ಕೂಗಿದೆ

ಪ್ರೀತಿಸುವ ಹೃದಯ ಬೇಡಿದೆ,

ಕೇಳು ನೀನು......ಊ.....

ಇಂದಿಗು ಜೀವಂತ ಶಿಲೆಯೊಳಗೆ ಸಂಗೀತ

ಸ್ವರ ಸ್ವರದ ಏರಿಳಿತ ತುಂಗೆಯಲಿ ಶ್ರಿಮಂತ

ಕಣ ಕಣ ಕಣ ಕರೆ ನೀಡಿದೆ.....ಏ......

ನೀನೊಮ್ಮೆ ಬಂದಿಲ್ಲಿ ಹಿತವಾ...ಗಿ

ಚಿತ್ರ: ಬೆಳ್ಳಿ ಕಾಲುಂಗುರ, ಎಸ್.ಪಿ.ಬಿ, ಚಿತ್ರಾ

5.

ಕಂಡೆ ಅವಳ ಮಾತಿನಲ್ಲಿ ಶಾರದಾಂಬೆ ವೀಣೆಯ

ಅವಳ ನಡೆಯ ಲಾಸ್ಯದಲ್ಲಿ ತುಂಗೆ ಅಲೆಯ ನಾಟ್ಯವ

ಅವಳ ಛಲವೇ ಕಿತ್ತೂರಿನ ಮಹಿಮೆ

ಅವಳ ಸೊಬಗೇ ಬೇಲೂರಿನ ಪ್ರತಿಮೆ

ಎಲ್ಲೆಡೆ ಆ ರೂಪವೆ ಮನೆಬೆಳಗುವ ಆ ದೀಪವೆ

ಉತ್ತರ: ಕನ್ನಡಮ್ಮನ ದೇವಾಲಯ ಕಂಡೆ ಹೆಣ್ಣಿನ ಕಂಗಳಲಿ

ಕನ್ನಡ ನಾಡಿನ ಚರಿತೆಯನೇ ಕಂಡೆ ಆಕೆಯ ಹೃದಯದಲಿ

ವಂದನೆ ಆ ಹೆಣ್ಣಿಗೆ, ಅಭಿನಂದನೆ ಆ ಕಣ್ಣಿಗೆ

ಚಿತ್ರ: ಬ್ರಹ್ಮಾಸ್ತ್ರ

ಸಾಹಿತ್ಯ: ಆರ್. ಎನ್. ಜಯಗೋಪಾಲ್

ಸಂಗೀತ: ಸತ್ಯಂ

ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ.ಎಸ್. ಜಾನಕಿ

ಲಕ್ಷ್ಮಿ, ವಜ್ರಮುನಿ ನಟನೆ

ಕರ್ನಾಟಕ ರಾಜಕಾರಣ

1. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಜಿಲ್ಲೆಯವರು?

ಮೈಸೂರು

2.ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ಯಾವುದು?

ಕನಕಪುರ

3. ನಿಮ್ಮ ನಿಮ್ಮ ಯಾವ ವಿಧಾನಸಭಾ ಕ್ಷೇತ್ರದಡಿ ಬರುತ್ತದೆ?

4 . ನಿಮ್ಮ ಲೋಕಸಭಾ ಕ್ಷೇತ್ರದ ಎಂಪಿ ಯಾರು?

5. ಬೆಂಗಳೂರನ್ನು ಐಟಿ, ಬಿಟಿ ಹಬ್ ಮಾಡಿದ ಮುಖ್ಯಮಂತ್ರಿ ಯಾರು? ಎಸ್.ಎಂ.ಕೃಷ್ಣ

ಕರ್ನಾಟಕದ ರಾಜ್ಯದ ಹಬ್ಬ, ಪಕ್ಷಿ, ಹಣ್ಣು ಯಾವುದು?

Karnataka State Bird: ನೀಲಕಂಠ (Indian Roller)

State Animal: Asian Elephant

Karnataka Capital City: Bengaluru

Karnataka State Festival: Dasara

State Song: ಜಯ ಭಾರತ ಜನನಿಯ ತನುಜಾತೆ (ರಚನೆ: ಕುವೆಂಪು)

State Flower: Lotus

State Tree: ಶ್ರೀಗಂಧ

State Fruit: Mango

ಭೌಗೋಳಿಕ ಸೂಚ್ಯಂಕ ಸಿಕ್ಕಿರುವ ನಂಜನಗೂಡು ಬಾಳೆ, ರಸಬಾಳೆ

ದಕ್ಷಿಣ ಭಾರತದ ಜೀವಾಳವೇ ಆಗಿರುವ, ಸುಹಾಸನೆಯುಕ್ತ ಮೈಸೂರು ಮಲ್ಲಿಗೆ

ಬಿಟ್ಟ ಸ್ಥಳ ತುಂಬಿರಿ ಎಂದು ಹೇಳಿ ಈ ಗಾದೆಗಳನ್ನು ಹೇಳಬಹುದು.

1. ಕತ್ತೆ ಬಾಲ ಕುದುರೆ ಜುಟ್ಟು

2. ರೋಗಿ ಬಯಸಿದ್ದೂ ಹಾಲು ಅನ್ನು, ವೈದ್ಯ ಹೇಳಿದ್ದೂ ಹಾಲು ಅನ್ನ

3. ಕೈ ಕೆಸರಾದರೆ ಬಾಯಿ ಮೊಸರು

4. ಮಾಡಿದ್ದುಣ್ಣೋ ಮಹಾರಾಯ

5.ಹಾಡ್ತಾ ಹಾಡ್ತಾ ರಾಗ, ಉಗುಳ್ತಾ ಉಗುಳ್ತಾ ರೋಗ

6.ಎರಡು ಕೈ ಸೇರಿದರೆ ಚಪ್ಪಾಳೆ

7.ಬೆಳೆಯುವ ಸಿರಿ ಮೊಳಕೆಯಲ್ಲಿ

8. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ

9. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ

10. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

11. ದೇಶ ಸುತ್ತಿ ನೋಡು ಕೋಶ ಓದಿ ನೋಡು

12. ತಾಳಿದವನು ಬಾಳಿಯಾನು

13. ಆತಿ ಆಸೆ ಗತಿಗೇಡು

14. ಬೆಳ್ಳಗಿರುವುದೆಲ್ಲ ಹಾಲಲ್ಲ

15. ಆಕಾಶ ನೋಡಲು ನೂಕು ನುಗ್ಗಲೇಕೆ?

16. ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ


ಗ್ರಾಮೀಣ ಪ್ರದೇಶಗಳಲ್ಲಿ ಒಗಟು ಬಿಡಿಸುವುದು ಇನ್ನೂ ಚಾಲ್ತಿಯಲ್ಲಿದೆ. ಭಾಷೆ ಮೇಲಿನ ಹಿಡಿತ ಹಾಗೂ ಜನರ ಕಾಮನ್ ಸೆನ್ಸ್ ಇವುಗಳಲ್ಲಿ ಕಾಣಬಹುದು?


1.ಅಪ್ಪನ ಹಾಸಿಗೆ ಹಾಸಲಾರೆ, ಅವ್ವನ ಕಡಬು ಎಣಿಸಲಾರೆ

ಉತ್ತರ: ಆಕಾಶ, ನಕ್ಷತ್ರಗಳು

2. ಸಂತ್ಯಾಗಿಂದ ತರೋದು, ಮುಂದಿಟುಕೊಂಡು ಅಳೋದು

ಈರುಳ್ಳಿ, ಉಳ್ಳಾಗಡ್ಡಿ

3. ಅರಳುತ್ತೆ, ಹೂವಲ್ಲ! ಬಿಸಿಲಿಗೆ ಬಾಡುವುದಿಲ್ಲ- ಛತ್ರಿ

4. ನಾಲಿಗೆಯುಂಟು, ಮಾತಾಡುವುದಿಲ್ಲ, ಮುಳ್ಳುಂಟು, ಪೊದೆಯಲ್ಲ- ಪೆನ್ನು

5. ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ ಏನಿದು?- ಮೊಟ್ಟೆ

6. ಇದ್ದಲು ನುಂಗುತ್ತ , ಗದ್ದಲ ಮಾಡುತ್ತಾ, ಉದ್ದಕ್ಕೂ ಓಡುತ್ತಾ ಮುಂದಕ್ಕೆ ಸಾಗುವ ನಾನ್ಯಾರು?- ರೈಲು

7. ಊಟಕ್ಕೆ ಕುಳಿತವರು ಹನ್ನೆರಡು ಜನರು, ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ ಬಡಿಸುವಸ್ಟರಲ್ಲಿ ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ- ಗಡಿಯಾರ

8. ಸಾಗರ ಪುತ್ರ , ಸಾರಿನ ಮಿತ್ರ.-ಉಪ್ಪು

9. ಕಣ್ಣಿಲ್ಲ, ಕಾಲಿಲ್ಲ, ಆದರೂ ಚಲಿಸುತಿದೆ ಯಾವುದು ಎಲ್ಲಿದೆ ಬಲ್ಲಿದನ ಹೇಳಿರಲ.-ನದಿ

10. ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ-ಮಲ್ಲಿಗೆ

11, ಅಂಗೈ ಅಗಲದ ರೊಟ್ಟಿಗೆ ಲೆಕ್ಕವಿಲ್ಲದಷ್ಟು ಉಪ್ಪಿನಕಾಯಿ-ಆಕಾಶ, ನಕ್ಷತ್ರ

12. ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ- ಬಾಳೆ ಹಣ್ಣು

13. ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿಕೊಂಡು ನುಂಗಣ್ಣ- ಬಾಳೆಹಣ್ಣು

14. ಬಿಳಿ ಸರದಾರನಿಗೆ ಕರಿ ಟೋಪಿ-ಬೆಂಕಿಕಡ್ಡಿ

15. ಕಾಲಿಲ್ದ ಹುಡುಗಿಗೆ ಮಾರುದ್ದ ಕಡಿವಾಣ – ಸೂಜಿ

ಕನ್ನಡ ಸಿನಿಮಾದ ಬಗ್ಗೆ ಎಷ್ಟು ಬಗ್ಗೆ ಬೇಕಾದರೂ ಪ್ರಶ್ನೆ ಕೇಳಬಹುದು. ಅದರಲ್ಲಿಯೂ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅನಂತ್‌ನಾಗ್, ಶಂಕರ್‌ನಾಗ್ ಹಾಗೂ ಅಂಬರೀಷ್‌ಗೆ ಸಂಬಂಧಿಸಿದ ಚಿತ್ರಗಳ ಬಗ್ಗೆ ಪ್ರಶ್ನಿಸಿದರೆ 80 ಹಾಗೂ 90ರ ದಶಕದವರು ಉತ್ಸಾಹದಿಂದ ಉತ್ತರಿಸುವಲ್ಲಿ ಅನುಮಾನವೇ ಇಲ್ಲ. ಜೊತೆಗೆ ಇತ್ತೀಚಿನ ಕೆಲವು ನಟ, ನಟಿಯರು, ಚಿತ್ರಗಳ ಬಗ್ಗೆಯೂ ಪ್ರಶ್ನಿಸಬಹುದು.

1. 2025ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಸ್ಯಾಂಡಲ್‌ವುಡ್ ಹಿರಿಯ ನಟ ಯಾರು?

ಅನಂತ್ ನಾಗ್

2. 2025ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾದ ಕನ್ನಡ ಚಿತ್ರನಟರು ಯಾರು:

ಡಾ.ವಿಷ್ಣುವರ್ಧನ್, ಬಿ. ಸರೋಜಾದೇವಿ

3. ಕಾಂತಾರಾ ಚಾಪ್ಟರ್ 1ರಲ್ಲಿ ನಟಿ ರುಕ್ಮಿಣಿ ವಸಂತ್ ಪಾತ್ರದ ಹೆಸರೇನು? - ಕನಕವತಿ

4. ರಾಜ್ ಬಿ ಶೆಟ್ಟಿ ನಿರ್ಮಾಣದ, ಜೆ.ಪಿ.ತುಮಿನಾಡು ನಿರ್ದೇಶನದ ಸು ಫ್ರಂ ಸೋ ಚಿತ್ರದ ಪೂರ್ತಿ ಹೆಸರೇನು?

5. ವಂಶವೃಕ್ಷ, ತಬ್ಬಲಿ ನೀನಾದೆ ಮಗನೇ, ಮತದಾನ ಮುಂತಾದ ಕಾದಂಬರಿ ಆಧಾರಿತ ಚಲನಚಿತ್ರಗಳು. ಇದರ ಕರ್ತೃ ಯಾರು?

ಎಸ್.ಎಲ್.ಭೈರಪ್ಪ

ಐತಿಹಾಸಿಕ ಸ್ಮಾರಕಗಳು, ನಿತ್ಯ ಹರಿದ್ವರ್ಣ ಕಾಡು ಸೇರಿ ಕರ್ನಾಟಕ ಹುಚ್ಚೆಬ್ಬಿಸುವಂಥ ಪ್ರಕೃತಿ ಸೌಂದರ್ಯವನ್ನು ಇಟ್ಟುಕೊಂಡಿರುವ ರಾಜ್ಯ. ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿರುವ ಈ ರಾಜ್ಯದಲ್ಲಿರುವ ಪ್ರದೇಶಗಳ ಬಗ್ಗೆ ಎಷ್ಟು ಬೇಕಾದರು ಪ್ರಶ್ನಿಸಬಹುದು.

1. ಜೋಗ ಜಲಪಾತ ಯಾವ ಜಿಲ್ಲೆಯಲ್ಲಿದೆ? ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು.

2. ಕೃಷ್ಣ ನಗರಿ ಎಂದು ಕರ್ನಾಟಕದ ಯಾವ ನಗರವನ್ನು ಕರೆಯುತ್ತಾರೆ? ಉಡುಪಿ

3. ರಾಜ್ಯದ ಸಂಪ್ರದಾಯಿಕ ಸೀರಿಗೆ ಪ್ರಸಿದ್ಧವಾದ ಇಳಕಲ್ ಯಾವ ಜಿಲ್ಲೆಯಲ್ಲಿದೆ: ಬಾಗಲಕೋಟೆ

4. ಶಿವರಾಜ್ ಕುಮಾರ್, ಪ್ರೇಮಾ, ರಮೇಶ್ ಅರವಿಂದ ನಟಿಸಿರುವ ನಮ್ಮೂರ ಮಂದಾರ ಹೂವೇಯಲ್ಲಿ ತೋರಿಸಿದ ಯಾಣ ಯಾವ ಜಿಲ್ಲೆಯಲ್ಲಿದೆ? ಉತ್ತರ ಕನ್ನಡ

5. ಶಿಕ್ಷಣ ಕಾಶಿ, ಪೇಡಾ ನಗರಿ ಎಂದು ಯಾವ ನಗರವನ್ನು ಕರೆಯುತ್ತಾರೆ: ಧಾರವಾಡ

ಎಂಟು ಜ್ಞಾನಪೀಠ ಪ್ರಶಸ್ತಿ ಪುರುಸ್ಕೃತರನ್ನು ಪಡೆದಿರುವ ಕರ್ನಾಟಕವೇ ಧನ್ಯ. ಕನ್ನಡ ಸಾಹಿತ್ಯಕ್ಕೆ ಸರಿಸಾಟಿ ಯಾವುದೂ ಇಲ್ಲ. ಪಂಪ, ರನ್ನರಿಂದ ಹಿಡಿದು ಇತ್ತೀಚಿನ ಸಾಹಿತಿಗಳಾದ ರೇಶ್ಮೆ ಬಟ್ಟೆ, ತೇಜೋ ತುಂಬಾ ಭದ್ರಾ ಲೇಖಕ ವಸುಧೇಂದ್ರ, ಕಶೀರ ಲೇಖಕಿ ಸಹನಾ ಕುಮಾರ್‌ವರೆಗೂ ಬರೆದ ಕೃತಿಗಳ ಬಗ್ಗೆ ಭಿನ್ನಭಿನ್ನವಾಗಿ ಪ್ರಶ್ನೆಗಳನ್ನು ಕೇಳಿ, ಕನ್ನಡ ಸಾಹಿತ್ಯ ಓದುವ ಹುಚ್ಚನ್ನು ಹೆಚ್ಚಿಸಬಹುದು.

1. ಇರಬೇಕು ಇರುವಂತೆ ಇರಲಿ ಸಾವಿರ ಚಿಂತೆ, ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ|

ಬೇವ ಅಗಿವ ಸವಿಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ||, ಸಂಜೆಯಾಗುತ್ತಿದೆ ನಡಿ ನಡಿ ಗೆಳೆಯಾ ಬೃಂದಾವನದ ಕಡೆಗೆ...ಮುಂತಾದ ಅದ್ಭುತ ಭಾವಗೀತೆಗಳನ್ನು ಬರೆದ ಕವಿ ಯಾರು: ಡಾ.ಎಚ್.ಎಸ್.ವೆಂಕಟೇಶ ಮೂರ್ತಿ

2. “ಬರೀ ಸಾಧನೆ ಮಾಡಿದರೆ ಸಂಗೀತ ಒಲಿಯುಲ್ಲ. ಹೆಣಗಬೇಕು. ಒದ್ದಾಡಬೇಕು. ಹಪಹಪಿಸಬೇಕು. ಅಯ್ಯೋ ದೇವರೇ ಅಂತ ಆರ್ತವಾಗಿ ಮೊರೆ ಇಡುವ ಸ್ಥಿತಿಯಲ್ಲಿ ಬೇಯಬೇಕು. ಇಲ್ಲದಿದ್ದರೆ ರಾಗಗಳ ಭಾವ ಎಲ್ಲಿ ತಿಳಿಯುತ್ತೆ.”- ಇದು ಎಸ್.ಎಲ್. ಭೈರಪ್ಪ ಅವರ ಯಾವ ಕಾದಂಬರಿಯ ಸಾಲುಗಳು?

ಮಂದ್ರ

3. ಎಷ್ಟು ದಿನದ ಋಣಾನುಬಂಧವೋ ಅಷ್ಟೇ ದಿನ ಪ್ರತಿಯೊಬ್ಬರೂ ನಮ್ಮ ಜೊತೆ ಇರ್ತಾರೆ. ಅದು ಮುಗಿದ ಮೇಲೆ ದೂರ ಹೋಗ್ತಾರೆ. ಕೆಲವರು ಸತ್ತು ದೂರ ಹೋದರೆ, ಮತ್ತೆ ಕೆಲವರು ಬದುಕಿರುವಾಗಲೇ ದೂರ ಹೋಗ್ತಾರೆ. ಅದನ್ನು ನಾವು ಯಾವಾಗಲೂ ಸ್ವೀಕರಿಸಬೇಕು, ದುಃಖಿಸಬಾರದು- ಎಸ್.ಎಲ್.ಭೈರಪ್ಪ ಅವರ ವಂಶವೃಕ್ಷದ ಸಾಲುಗಳು.

3. 2025ರ ದಸರಾ ಉದ್ಘಾಟಿಸಿದ ಭಾನು ಮುಷ್ತಾಕ್ ಬರೆದು, ದೀಪಾ ಬಸ್ತಿ ಅನುವಾದಿಸಿದ ಯಾವ ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿತು? ಎದೆಯ ಹಣತೆ, ಹಾರ್ಟ್ ಲ್ಯಾಂಪ್.

4. ಶಿವರಾಜ್ ಕುಮಾರ್ ನಟನೆಯ ಚಿಗುರಿದ ಕನಸು, ಶಾರುಖ್ ಖಾನ್ ನಟಿಸಿದ ಸ್ವದೇಶ್ ಡಾ. ಶಿವರಾಮ ಕಾರಂತರ ಯಾವ ಕೃತಿಯನ್ನಾಧರಿಸಿದೆ? ಮರಳಿ ಮಣ್ಣಿಗೆ.

5. ನಮ್ಮ ನಾಡಗೀತೆ ಜಯ ಭಾರತ ಜನನಿಯ ತನುಜಾತೆ ಬರೆದ ಕುವೆಂಪು ಬರೆದ ಎರಡು ಕಾದಂಬರಿಗಳು ಹೆಸರೇನು? ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು.

ಕರುನಾಡು ಸಿರಿವಂತ ಸಂಗೀತ ಕಲೆಯ ಬೀಡೂ ಹೌದು. ಭಾರತ ರತ್ನ ಭೀಮಸೇನ ಜೋಶಿ, ಗಂಗೂಬಾಯಿ ಹಾನ್‌ಗಲ್ ಸೇರಿ ಈ ರಾಜ್ಯ ಪ್ರಖ್ಯಾತ ಸಂಗೀತಗಾರರನ್ನು ನೀಡಿದೆ. ಶಾಸ್ತ್ರೀಯ ಸಂಗೀತವಲ್ಲದೇ ಭಾವಗೀತೆ, ಜಾನಪದ ಸಂಗೀತ, ದಾಸ ಸಂಗೀತವೂ ನಮ್ಮ ರಾಜ್ಯದ ವಿಶೇಷಗಳು. ಈ ಬಗ್ಗೆ ಏನು ಬೇಕಾದರೂ ಕೇಳಬಹುದು. ಎಲ್ಲಿಯವರೇ ಆಗಿರಲಿ ಸ್ವರ ಲಾಲಿತ್ಯ ಗೊತ್ತಿರೋರು ಸುಲಭವಾಗಿ ಉತ್ತರಿಸುತ್ತಾರೆ.

1. 2008ರಲ್ಲಿ ಭಾರತ ರತ್ನ ಗೌರವಕ್ಕೆ ಪಾತ್ರರಾದ ಕರ್ನಾಟಕದ ಹಿಂದೂಸ್ತಾನಿ ಗಾಯಕ ಯಾರು: ಡಾ.ಭೀಮಸೇನ ಜೋಶಿ

2. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರ ಕಥೆ ಆಧಾರಿತ ಚಿತ್ರದ ಹಾಡಿಗೆ ಶಿವಮೊಗ್ಗ ಸುಬ್ಬಣ್ಣ ಅವರು ಕನ್ನಡಕ್ಕೆ ಮೊದಲ ಸ್ವರ್ಣ ಕಮಲ ತಂದು ಕೊಟ್ಟರು. ಆ ಚಿತ್ರದ ಹೆಸರೇನು: ಕಾಡು ಕುದುರೆ.

3. ಕನ್ನಡದ ಮೊದಲ ಧ್ವನಿ ಸುಳಿ ನಿತ್ಯೋತ್ಸವ. ಈ ಕ್ಯಾಸೆಟ್‌ನ ಕವಿತೆಗಳ ಕವಿ ಯಾರು? ನಿಸಾರ್ ಅಹ್ಮದ್

4.ಡಾ.ರಾಜ್‌ಕುಮಾರ್ ಹಾಡಿದ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ. ಮತದಲ್ಲಿ ಮೇಲ್ಯಾವುದೋ. ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ. ಕೀಳ್ಯಾವ್ದು ಮೇಲ್ಯಾವುದೋ ಯಾವ ಚಿತ್ರದ ಗೀತೆ? ಸತ್ಯ ಹರಿಶ್ಚಂದ್ರ

5. ಕರ್ನಾಟಕ ಸಂಗೀತ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಪುರಂದರದಾಸರು

ವಾಂಗೀಬಾತ್, ಬಿಸಿಬೇಳೆ ಬಾತ್, ಮೈಸೂರು ಪಾಕ್ ಸೇರಿ ಅದೆಷ್ಟೋ ಆಹಾರ ಪದಾರ್ಥಗಳಿಗೆ ಕರ್ನಾಟಕ ತವರೂರು. ಇಲ್ಲಿನ ಆಹಾರ, ವಿಶ್ವ ಪ್ರಸಿದ್ಧ ರೆಸ್ಟೋರೆಂಟ್ಸ್, ಐತಿಹಾಸಿಕ ಹೊಟೇಲ್ಸ್, ಆಯಾ ಪ್ರದೇಶಕ್ಕೆ ತಕ್ಕಂತ ತಿಂಡಿ ತಿನಿಸುಗಳ ಬಗ್ಗೆ ಎಷ್ಟು ಬೇಕಾದರೂ ಪ್ರಶ್ನೆಗಳನ್ನು ಕೇಳಬಹುದು.

- ರಾಜ್ಯದ ಪ್ರಸಿದ್ಧ ಹೊಟೇಲ್ ಎಂಟಿಆರ್ ಫುಲ್ ಫಾರ್ಮ್ ಏನು? ಮಾವಳ್ಳಿ ಟಿಫನ್ ರೂಂ

- ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟೆ ಜೊತೆ ಕೊಡುವ ಎಣ್ಣೆಗಾಯಿಯನ್ನು ಯಾವ ತರಕಾರಿಯಿಂದ ಮಾಡಲಾಗುತ್ತದೆ? ಬದನೆಕಾಯಿ

- ಬೆಂಗಳೂರಲ್ಲಿ ಬೋಂಡ ಅಂದ್ರೆ ಆಲೂಗಡ್ಡೆ ಉಂಡೆ, ಮಂಗಳೂರಲ್ಲಿ ಬೋಂಡ ಅಂದ್ರೆ ಏನು? ಎಳನೀರು

- ರಾಗಿ ಮುದ್ದೆಯನ್ನು ಕರ್ನಾಟಕದ ಯಾವ ಭಾಗದಲ್ಲಿ ಹೆಚ್ಚಾಗಿ ಬಳಸುತ್ತಾರೆ? ಮಂಡ್ಯ, ಹಳೇ ಮೈಸೂರು

- ಕೃಷ್ಣ ರಾಜ ಒಡೆಯರ್ 4ರ ಆಡಳಿತದಲ್ಲಿದ್ದ ಕಾಕಾಸುರ ಮಾದಪ್ಪ ತಯಾರಿಸಿದ ಖಾದ್ಯವೊಂದು ಕರ್ನಾಟಕ ಪ್ರಸಿದ್ಧ ಸಿಹಿ ತಿನಿಸು. ಅದರ ಹೆಸರೇನು?

ಮೈಸೂರು ಪಾಕ್

ಯಾವುದೋ ಕಾದಂಬರಿಯ ಸಾಲು ಅಥವಾ ಕವನದ ಸಾಲು ಹೇಳಿ, ಅದು ಯಾವ ಕೃತಿಯದ್ದು, ಬರೆದಿದ್ದು ಯಾರೆದು ಕೇಳಬಹುದು.

ಉಳ್ಳವರು ಶಿವಾಲಯ ಮಾಡುವರು

ನಾನೇನು ಮಾಡಲಿ ಬಡವನಯ್ಯ

ಎನ್ನ ಕಾಲೇ ಕಂಬ, ದೇಹವೇ ದೇಗುಲ

ಶಿರವೇ ಹೊನ್ನ ಕಳಶವಯ್ಯ

ಕೂಡಲಸಂಗಮದೇವಾ ಕೇಳಯ್ಯ

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ... ಬಸವಣ್ಣ

ಸಂಗೀತ ನಮ್ಮನ್ನು ನೇರವಾಗಿ ಶುದ್ಧ ಭಾವಸ್ಥಿತಿಗೆ ಒಯ್ಯುವಷ್ಟು ಬೇರೆ ವ ಕಲೆಯೂ ಒಯ್ಯಲಾರದು ~ ಡಾ. S L ಭೈರಪ್ಪ (ಮಂದ್ರ)

ಎಷ್ಟು ದಿನದ ಋಣಾನುಬಂಧವೋ ಅಷ್ಟೇ ದಿನ ಪ್ರತಿಯೊಬ್ಬರೂ ನಮ್ಮ ಜೊತೆ ಇರ್ತಾರೆ. ಅದು ಮುಗಿದ ಮೇಲೆ ದೂರ ಹೋಗ್ತಾರೆ. ಕೆಲವರು ಸತ್ತು ದೂರ ಹೋದರೆ, ಮತ್ತೆ ಕೆಲವರು ಬದುಕಿರುವಾಗಲೇ ದೂರ ಹೋಗ್ತಾರೆ. ಅದನ್ನು ನಾವು ಯಾವಾಗಲೂ ಸ್ವೀಕರಿಸಬೇಕು, ದುಃಖಿಸಬಾರದು-ವಂಶವೃಕ್ಷ

- ಪ್ರೀತಿ ಇಲ್ಲದ ಮೇಲೆ-

ಹೂವು ಅರಳೀತು ಹೇಗೆ ?

ಮೋಡ ಕಟ್ಟೀತು ಹೇಗೆ ?

ಹನಿಯೊಡೆದು ಕೆಳಗಿಳಿದು

ನೆಲಕ್ಕೆ ಹಸಿರು ಮೂಡೀತು ಹೇಗೆ ?- ಜಿ.ಎಸ್. ಶಿವರುದ್ರಪ್ಪ

ಸಂಜೆಯಾಗುತಿದೆ ನಡೆ ನಡೆ ಗೆಳೆಯಾ ಬೃಂದಾವನದ ಕಡೆ... 

ತಾಳೆಯ ಮರಗಳು ತಲೆಯ ತೂಗುತಿವೆ ಕೆದರುತ ಇರುಳ ಜಡೆ 

ಅಂಜಿಕೆಯಾಗುವ ಮುನ್ನವೇ ಸಾಗುವ ಬೃಂದಾವನದ ಕಡೆ... 

ಕವಿ:ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ

ಈ ಕನ್ನಡ ಗೀತೆಗಳನ್ನು ಕಾರ್ಯಕ್ರಮದಲ್ಲಿ ಪ್ಲೇ ಮಾಡಿದರೆ ಕಾರ್ಯಕ್ರಮದ ಅಂದ ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ.

https://www.youtube.com/watch?v=xYlfiRuMhJI

https://www.youtube.com/watch?v=EnddNPFnzSA

https://www.youtube.com/watch?v=ceKvyYE9G1s

https://www.youtube.com/watch?v=WD2MlG0Q4bI

https://www.youtube.com/watch?v=YO7B4imH0zU

https://www.youtube.com/watch?si=ZRv8H6mxCH24GnJZ&v=5-11QGpygYQ&feature=youtu.be

https://www.youtube.com/watch?v=48T3gr4AFJo