ಮಹಾರಾಷ್ಟ್ರದಲ್ಲಿ ಶಿವಸೇನೆ, ತಮಿಳುನಾಡಿನಲ್ಲಿ ಡಿಎಂಕೆ ಹೇಗೆ ಸ್ಥಳೀಯ ಭಾಷೆಯ ಅಸ್ಮಿತೆಯನ್ನು ಎತ್ತಿ ಹಿಡಿದವೋ ಅದೇ ರೀತಿ ಅನ್ಯಭಾಷಿಕರ ಆರ್ಭಟದ ನಡುವೆಯೇ ಕನ್ನಡತನಕ್ಕಾಗಿ ಗಟ್ಟಿ ಧ್ವನಿ ಎತ್ತಿರುವುದು ಕರವೇ. ಇಂತಹ ಗಟ್ಟಿ ಸಂಘಟನೆಗೆ ಈಗ 25ರ ಹರೆಯ.

ಸಂದರ್ಶನ: ಸಂಪತ್‌ ತರೀಕೆರೆ

ಕರುನಾಡಿನಲ್ಲಿ ಕನ್ನಡದ ಅಸ್ಮಿತೆ ಎಂಬುದು ಇನ್ನೂ ಜೀವಂತವಿದ್ದರೆ ಅದಕ್ಕೆ ಕಾರಣವಾದ ಸಂಘಟನೆಗಳ ಪೈಕಿ ಅಗ್ರ ಪಂಕ್ತಿಯಲ್ಲಿದೆ ಕನ್ನಡ ರಕ್ಷಣಾ ವೇದಿಕೆ (ಕರವೇ). ಮಹಾರಾಷ್ಟ್ರದಲ್ಲಿ ಶಿವಸೇನೆ, ತಮಿಳುನಾಡಿನಲ್ಲಿ ಡಿಎಂಕೆ ಹೇಗೆ ಸ್ಥಳೀಯ ಭಾಷೆಯ ಅಸ್ಮಿತೆಯನ್ನು ಎತ್ತಿ ಹಿಡಿದವೋ ಅದೇ ರೀತಿ ಅನ್ಯಭಾಷಿಕರ ಆರ್ಭಟದ ನಡುವೆಯೇ ಕನ್ನಡತನಕ್ಕಾಗಿ ಗಟ್ಟಿ ಧ್ವನಿ ಎತ್ತಿರುವುದು ಕರವೇ. ಇಂತಹ ಗಟ್ಟಿ ಸಂಘಟನೆಗೆ ಈಗ 25ರ ಹರೆಯ. ಈ ಹಿನ್ನೆಲೆಯಲ್ಲಿ ಕನ್ನಡ ನಾಡು ಎದುರಿಸುತ್ತಿರುವ ಸವಾಲುಗಳು, ಕನ್ನಡ ಪರ ಹೋರಾಟ, ಹೋರಾಡಿದ್ದಕ್ಕೆ ದಾಖಲಾದ ಕೇಸುಗಳು, ಸಂಘಟನೆಯ ಮುಂದಿನ ಕಾರ್ಯಕ್ರಮಗಳ ಬಗ್ಗೆ ಕನ್ನಡಪ್ರಭದ ಮುಖಾಮುಖಿಯಲ್ಲಿ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಮಾತನಾಡಿದ್ದಾರೆ.

* ಕನ್ನಡ ಹೋರಾಟಗಾರರ ಬಗ್ಗೆ ಸರ್ಕಾರಗಳ ಧೋರಣೆ ಸರಿಯಿದೆಯೇ?
ಕನ್ನಡಪರ ಹೋರಾಟಗಾರರೆಂದರೆ ಸರ್ಕಾರಗಳಿಗೆ ಅಸಡ್ಡೆ. ನಾನು ಮಾಡಿಲ್ಲದ ತಪ್ಪಿಗೆ ನನ್ನ ವಿರುದ್ಧ ಐಪಿಸಿ 307 ಸೆಕ್ಷನ್‌ ಅಡಿ ಕೇಸು ದಾಖಲು ಮಾಡಿದ್ದರು. ಅದನ್ನು ವಾಪಸ್‌ ಪಡೆಯುವಂತೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರಿಗೆ ಹತ್ತು ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಕೇಳಿಕೊಂಡೇ. ಕುಮಾರಸ್ವಾಮಿ ಅವರಿಗೂ ಮನವಿ ಮಾಡಿದೆ. ಅವರು ಒಂದು ವಾರ ಬ್ರದರ್‌, ಎರಡು ವಾರ, ಮೂರು ವಾರ ಬ್ರದರ್ ವಾಪಸ್‌ ತೆಗೆದುಕೊಳ್ಳುತ್ತೇನೆ ಅಂದರು. ಆದರೆ ಯಾರೂ ವಾಪಸ್‌ ತೆಗೆದುಕೊಳ್ಳಲಿಲ್ಲ. ಏಕೆಂದರೆ, ಕನ್ನಡಪರ ಹೋರಾಟಗಾರರು ಗುಲಾಮರಾಗಿ ಇರಲಿ, ಕೇಸು ಅನ್ನುವ ಭಯ ಅವರಿಗಿರಲಿ. ಹೋರಾಟ ಮಾಡದಿರಲಿ ಎಂಬುದು ಅವರ ಉದ್ದೇಶ.

ಸಂಗೀತಾ ಬಿಗ್‌ಬಾಸ್‌ ಮನೆಯಲ್ಲಿರುವ ದೊಡ್ಡ ನೆಗೆಟಿವ್ ಎನರ್ಜಿ: ಮೈಕಲ್

* ಹಾಗಾದರೆ, ಕರವೇ ಕಾರ್ಯಕರ್ತರ ವಿರುದ್ಧ ಎಷ್ಟು ಕೇಸುಗಳಿವೆ?
ರಾಜ್ಯಾದ್ಯಂತ ಕರವೇ ಕಾರ್ಯಕರ್ತರ ವಿರುದ್ಧ 1332 ಕೇಸುಗಳು ಇವೆ. ನನ್ನ ವಿರುದ್ಧ ಸುಮಾರು 122 ಕೇಸುಗಳು ಇದ್ದವು, ಈ ಪೈಕಿ ಈಗ 48 ಮೊಕದ್ದಮೆಗಳು ಇವೆ. ನಮ್ಮ ಪರವಾಗಿ ವಾದ ಮಂಡಿಸಲು ತಿಂಗಳಿಗೆ ವಕೀಲರ ಫೀಸ್‌ಗೆಂದು 7.5ರಿಂದ 8 ಲಕ್ಷ ಬೇಕಾಗುತ್ತದೆ. ಕಾರ್ಯಕರ್ತರು ಅಥವಾ ಅವರ ಕುಟುಂಬಸ್ಥರು ರಾಜ್ಯದ ಮೂಲೆ, ಮೂಲೆಯಿಂದ ಆಸ್ಪತ್ರೆಗೆಂದು ಬೆಂಗಳೂರಿಗೆ ಬರುತ್ತಾರೆ. ಕೈಲಾದ ಸಹಾಯ ಮಾಡಬೇಕು. ನನಗೆ ಯಾವುದೇ ಅಧಿಕಾರ ಇಲ್ಲ. ಯಾರ ಸಹಾಯವೂ ಇಲ್ಲ.

* ಕನ್ನಡಪರ ಸಂಘಟನೆಗಳಿಗೆ ಆದಾಯ ಚೆನ್ನಾಗಿದೆಯಂತೆ?
ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ. ನಾನು ಯಾರಿಂದಲೂ ರೋಲ್‌ಕಾಲ್‌ ಮಾಡಲ್ಲ. ಈ ಮೊದಲು ತಂಗಿ ಹೆಸರಿನಲ್ಲಿ ಗಾರ್ಮೆಂಟ್ಸ್‌ ಉದ್ಯಮ ಇತ್ತು. ನಾನೊಂದು ಆಡಿಯೋ ಕ್ಯಾಸೆಟ್‌ ಅಂಗಡಿ ಇಟ್ಟುಕೊಂಡಿದ್ದೆ. ಸ್ಟೇಷನರಿ ಸರಬರಾಜು ಮಾಡುತ್ತಿದ್ದೆ. ಸ್ವಲ್ಪ ದಿನ ಚಿಕ್ಕಪೇಟೆಯಲ್ಲಿ ಚಿನ್ನದ ವ್ಯಾಪಾರವನ್ನೂ ಮಾಡಿದ್ದೇನೆ. ಕಳೆದ 25 ವರ್ಷಗಳಲ್ಲಿ 45 ರಿಂದ 50 ಕೋಟಿ ರು.ಗಳನ್ನು ರಕ್ಷಣಾ ವೇದಿಕೆಗಾಗಿ ಖರ್ಚು ಮಾಡಿದ್ದೇನೆ. ಈಗ ನನ್ನ ಹತ್ತಿರ ಯಾವ ಆಸ್ತಿಯೂ ಇಲ್ಲ. ಒಂದು ಸ್ವಂತ ಮನೆ ಇದೆಯಷ್ಟೇ. ಅದರ ಮೇಲೂ ಬ್ಯಾಂಕ್‌ನಲ್ಲಿ ಮೂರು ಕೋಟಿ ಸಾಲ ಇದೆ. ಅದು ಬಿಟ್ಟು ಬೆಂಗಳೂರಿನಲ್ಲಿ ನನಗೆ ಆರಡಿ, ಮೂರಡಿ ಜಾಗವಿಲ್ಲ. ಊರಿನಲ್ಲಿ ನಮ್ಮಪ್ಪ ಮಾಡಿದ 10 ಎಕರೆ ತೋಟ ಬಿಟ್ಟರೆ ಏನು ಇಲ್ಲ. ಅದರಲ್ಲೂ ನನಗೆ 9 ಜನ ಅಣ್ಣ ತಮ್ಮಂದಿರಿದ್ದು ಅವರಿಗೂ ಅದರಲ್ಲಿ ಪಾಲಿದೆ.

* ನಿಮ್ಮದು ಹೋರಾಟದ ಹೆಸರಿನಲ್ಲಿ ಹೊಡಿ, ಬಡಿ ಸಂಸ್ಕೃತಿಯಂತೆ?
ಒಂದೊಂದು ಸಲ ಪ್ರೀತಿಯಿಂದ ಗೆಲ್ಲಬೇಕಾಗುತ್ತದೆ. ಒಂದೊಂದು ಸಲ ಭೀತಿಯಿಂದಲೂ ಗೆಲ್ಲಬೇಕಾಗುತ್ತದೆ. ಆದರೆ, ಇಲ್ಲಿ ಕನ್ನಡವೇ ಮುಖ್ಯ ಹೊರತು ಪ್ರೀತಿ, ಭೀತಿಯಲ್ಲ.

* ಕನ್ನಡಪರ ಸಂಘಟನೆಗಳು ಒಗ್ಗೂಡಲು ಇರುವ ಅಡ್ಡಿಯೇನು?
ಯಾರಿಗೆ ಆಚಾರ ಇದೆಯೋ, ನಾಡು, ನುಡಿಯ ಬಗ್ಗೆ ಬದ್ಧತೆ ಕಾಳಜಿ ಇದೆಯೋ, ವಿಚಾರವಿದೆಯೋ ಅವರೊಂದಿಗೆ ಒಂದಾಗಬಹುದು. ಕನ್ನಡದ ಹೆಸರಿನಲ್ಲಿ ರೋಲ್‌ಕಾಲ್‌ ಮಾಡೋಣ, ಮತ್ತೊಬ್ಬರನ್ನು ಹೆದರಿಸೋಣ, ಕನ್ನಡದ ಹೆಸರಿನಲ್ಲಿ ಬದುಕು ಕಟ್ಟಿಕೊಳ್ಳೋಣ ಎಂದು ಬಂದವರ ಜೊತೆಯಲ್ಲಿ ರಾಜಿಯಾಗಲು ಸಾಧ್ಯವಿಲ್ಲ. ನನ್ನಂತಹವರಿಗೆ ಅದನ್ನು ಅರಗಿಸಿಕೊಳ್ಳಲು ಬಹಳ ಕಷ್ಟ. ಅಂತಹವರೊಂದಿಗೆ ಓಡಾಡಲು ಮುಜುಗರ. ಅದಕ್ಕೋಸ್ಕರ ಅಂತಹ ಜನರೊಂದಿಗೆ ಹೋಗಲು ಹಿಂದು-ಮುಂದು ನೋಡುತ್ತೇನೆ.

* ಗೌಡರಿಗೆ ಕಾಂಗ್ರೆಸ್‌ ಪ್ರೇಮ ಶುರುವಾಗಿದೆಯಂತೆ?
ಕಾಂಗ್ರೆಸ್‌ ಪರವಾಗಿ ನಾರಾಯಣಗೌಡ ಅವರು ಇದ್ದಿದ್ದರೆ. ಅವರ್ಯಾಕೆ ನನ್ನ ಮೇಲೆ ಕೇಸು ದಾಖಲಿಸುತ್ತಿದ್ದರು. ನನ್ನ ಮೇಲೆ ಹೆಚ್ಚು ಕೇಸು ಹಾಕಿಸಿದ್ದೇ ಕಾಂಗ್ರೆಸಿನವರು. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ಗಲಾಟೆ ಆರಂಭವಾಗಿತ್ತು. ಮಂಡ್ಯದಲ್ಲಿ ಮಾದೇಗೌಡರೊಂದಿಗೆ ಒಂದು ಇಡೀ ದಿನ ಉಪವಾಸ ಕೂತಿದ್ದೆ. ಆಗ ಬೆಂಗಳೂರಿನಲ್ಲಿ ಗಲಭೆ ಆರಂಭವಾಗಿತ್ತು. ಈ ವಿಚಾರವೇ ನನಗೆ ಗೊತ್ತಿರಲಿಲ್ಲ. ಅದಾಗಿ ಒಂದು ವಾರಕ್ಕೆ ಕೋರ್ಟ್‌ನಿಂದ ನನಗೆ ನೋಟಿಸ್‌ ಬಂದಿತ್ತು. ಮೂರು ಕೇಸುಗಳಲ್ಲಿ ನನ್ನ ವಿರುದ್ಧ 307 ಸೆಕ್ಷನ್‌ ಅಡಿ ಕೇಸು ದಾಖಲಾಗಿಸಿ ಜೈಲಿಗೆ ಹಾಕಿದರು. ಇದು ಕಾಂಗ್ರೆಸ್‌ ಪ್ರೇಮನಾ? ನಮಗೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಯಾರೂ ಸಪೋರ್ಟ್‌ ಮಾಡಿಲ್ಲ. ನಮ್ಮ ರಕ್ತ ಹೀರುತ್ತಿರುವ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ನವರೊಂದಿಗೆ ನಾನು ಯಾವ ಸಂಬಂಧ ಇಷ್ಟುಕೊಳ್ಳಲು ಸಾಧ್ಯ?

* ಸಂಘಟನೆ ಮೈಸೂರು ಭಾಗಕ್ಕೆ ಸೀಮಿತವಂಥಲ್ಲ?
ಕರವೇ ಬೆಂಗಳೂರಿಗೆ ಮಾತ್ರ ಸೀಮಿತವಾಗಬಾರದು ಎಂದು ಬೆಳಗಾವಿ, ಕೆಜಿಎಫ್‌ ನಲ್ಲೂ ಹೋರಾಟ ಆರಂಭಿಸಿದ್ದೆವು. ಬೆಳಗಾವಿಯಲ್ಲಿ ಪ್ರತಿ ಭಾರೀ ಎಂಇಎಸ್‌ನಿಂದ 7 ಶಾಸಕರು ಗೆದ್ದು ಬರುತ್ತಿದ್ದರು. 25 ವರ್ಷ ಇಲ್ಲಿನ ಮಹಾನಗರ ಪಾಲಿಕೆ ಎಂಇಎಸ್‌ ಕೈನಲ್ಲಿತ್ತು. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಘೋಷಣೆ ಕೂಗುತ್ತಿದ್ದರು. ಅಲ್ಲಿ 22 ಮಂದಿ ಕನ್ನಡಿಗರನ್ನು ಗೆಲ್ಲಿಸಿ ನಗರ ಸಭೆಯಲ್ಲಿ ಕನ್ನಡ ಬಾವುಟ ಹಾರಿಸಿದ್ದೇವೆ. ಕೆಜಿಎಫ್‌ ನಗರಸಭೆ ಆಡಳಿತ ಭಾಷೆ ತಮಿಳಾಗಿತ್ತು. ಕನ್ನಡದ ಕಂಪು ಅಲ್ಲಿಯೂ ಹರಡುವಂತೆ ಮಾಡಿದ್ದೇವೆ. ಅದಕ್ಕಾಗಿ ಜೈಲು ಸೇರಿದ್ದೇವೆ. ಹೀಗಿರುವಾಗ ನಮ್ಮನ್ನು ಹಳೆ ಮೈಸೂರು ಸಂಘಟನೆ ಅಂತ ಹೇಗೆ ಹೇಳುತ್ತೀರಿ?

* ಮಾರ್ವಾಡಿ, ಗುಜರಾತಿಗಳೇ ನಿಮ್ಮ ಗುರಿಯೇ?
ನಾನೇನಿದ್ದರೂ ಕನ್ನಡಿಗರ ಪರ. ಸತತ 25 ವರ್ಷಗಳ ಕಾಲ ಮರಾಠಿಗರು, ತಮಿಳರು, ಗುಜರಾತಿಗಳು, ಮಾರ್ವಾಡಿಗಳು ಹೀಗೆ ಅನ್ಯ ರಾಜ್ಯಗಳಿಂದ ಇಲ್ಲಿಗೆ ಬಂದು ಕನ್ನಡಿಗರ ಬದುಕು ಕಸಿದುಕೊಂಡವರ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿದ್ದೇವೆ. ಕನ್ನಡಿಗರ ಹೊರತುಪಡಿಸಿ ಯಾರ ಪರವೂ ಸಾಫ್ಟ್‌ ಕಾರ್ನರ್‌ ತೋರುವ ಪ್ರಶ್ನೆಯೇ ಇಲ್ಲ.

* ಕರವೇ ಹುಟ್ಟುಹಾಕಬೇಕು ಅನಿಸಿದ್ದು ಏಕೆ?
ನಾನು ಮುಂಬೈನಲ್ಲಿ ಇದ್ದೆ. ಅಲ್ಲಿಂದ ಬೆಂಗಳೂರಿಗೆ ಬಂದಾಗ ಇಡೀ ಬೆಂಗಳೂರು ತಮಿಳುಮಯವಾಗಿತ್ತು. ಆಗ ನಾನು ಮತ್ತು ಏಳೆಂಟು ಜನರು ಸೇರಿ ಕನ್ನಡಿಗರ ರಕ್ಷಣಾ ವೇದಿಕೆ ಎಂಬ ಹೆಸರಿನಲ್ಲಿ ಸಂಘಟನೆ ಮಾಡಿದೆವು. ಅದು ಆ ನಂತರ ಕರ್ನಾಟಕ ರಕ್ಷಣಾ ವೇದಿಕೆಯಾಯಿತು.

* ಕರವೇಗೆ 25ರ ಸಂಭ್ರಮದಲ್ಲಿ ಮುಂದಿನ ಕಾರ್ಯ ಯೋಜನೆಗಳೇನು?
ಈ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ಆದರೆ, ಇದೇ ಡಿ.27ರಂದು ಬೃಹತ್‌ ಜನಜಾಗೃತಿ ಪ್ರತಿಭಟನೆ ಆಯೋಜಿಸಲಾಗಿದ್ದು ಬೆಳಗ್ಗೆ 10ಕ್ಕೆ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟೋಲ್‌(ಸಾದಹಳ್ಳಿ ಗೇಟ್‌) ಬಳಿಯಿಂದ ಕಬ್ಬನ್‌ಪಾರ್ಕ್‌ವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಕನ್ನಡ ಬಳಸಿ, ಇಲ್ಲವೇ ಕರ್ನಾಟಕ ಬಿಟ್ಟು ತೊಲಗಿ, ಅಂಗಡಿ-ಮುಂಗಟ್ಟುಗಳ ಹೆಸರು ಕನ್ನಡದಲ್ಲಿರಬೇಕು. ಉದ್ಯಮಿಗಳು, ವ್ಯಾಪಾರಸ್ಥರಿಗೆ ಇದು ಕೊನೆಯ ಎಚ್ಚರಿಕೆ ಎಂಬ ಘೋಷಣೆಗಳು ಮೊಳಗಲಿದ್ದು ಬೆಂಗಳೂರು ಸಂಪೂರ್ಣ ಕನ್ನಡಮಯ ಆಗುವಂತ ಕಾರ್ಯಕ್ರಮ ನಡೆಯಲಿದೆ.

* ಇನ್ನು ಎಷ್ಟು ದಿನ ನಿಮ್ಮ ಈ ಹೋರಾಟ?
ದೇಹದಲ್ಲಿ ಒಂದೊಂದು ಹನಿ ರಕ್ತ ಇರುವವರೆಗೆ ನಾನು ಈ ನಾಡಿಗಾಗಿ ಹೋರಾಡಿ ಸಾಯಬೇಕು. ದೇವರಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ ಭಗವಂತ ನಾನು ಯಾವುದೋ ಕಾಯಿಲೆ ಬಂದು ಸಾಯಬಾರದು, ಹೋರಾಟದಲ್ಲಿ ಸತ್ತೆ ಎಂದು ಹೆಸರು ಬರಬೇಕು. ಅಲ್ಲಿಯವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ. ಕನ್ನಡ ಉಳಿಯಬೇಕು, ಬೆಳೆಯಬೇಕು. ಎಲ್ಲರೂ ಬಳಸುವಂತಾಗಬೇಕು. ಅಲ್ಲಿಯವರೆಗೂ ಮುಂದುವರೆಯುತ್ತಿರುತ್ತದೆ.

* ನಾಡು, ನುಡಿ ಉಳಿವಿಗೆ ಕನ್ನಡಿಗರಿಗೆ ನಿಮ್ಮ ಕಿವಿ ಮಾತೇನು?
ಕನ್ನಡಿಗರು ಸ್ವಾಭಿಮಾನಿಗಳೂ ಎನ್ನುವುದಾದರೆ ನೀವು ಇನ್ನೊಬ್ಬರನ್ನು ಸಹಿಸಿಕೊಳ್ಳಬೇಡಿ. ನಿಮ್ಮ ಜಾಗದಲ್ಲಿ ಇನ್ನೊಬ್ಬರು ಬಂದು ರಾಜಕಾರಣ ಮಾಡಲು ಬಿಡಬೇಡಿ. ಇನ್ನೊಂದು ಭಾಷೆ ರಾಜ್ಯಭಾರ ಮಾಡಲು ಬಿಡಬೇಡಿ. ನಿಮ್ಮ ಜೀವ ಹೋದರು ಸರಿ ಇನ್ನುಮೇಲೆ ಇಲ್ಲಿ ಕನ್ನಡಿಗರೇ ವ್ಯಾಪಾರ ಮಾಡಬೇಕು. ಎಲ್ಲಿಂದಲೋ ಬಂದು ಆಕ್ರಮಿಸುತ್ತಿರುವ ಮಾರ್ವಾಡಿಗಳು, ಸಿಂಧಿಗಳು, ಗುಜರಾತಿಗಳು, ರಾಜಸ್ಥಾನಿಗಳದ್ದೇ ದರ್ಬಾರು ಅನ್ನುವಂತಾಗಿದೆ. ಹೋಬಳಿ ಮಟ್ಟದಿಂದ ರಾಜ್ಯಮಟ್ಟದ ವರೆಗೆ ಕಟಿಂಗ್‌ ಶಾಪ್‌ನಿಂದ ಜ್ಯುವೆಲರಿ ಶಾಪ್‌ವರೆಗೆ ಕನ್ನಡಿಗರ ಬದುಕು ಕಿತ್ತುಕೊಂಡು ಖಾಲಿ ಮಾಡಿಸುತ್ತಿದ್ದಾರೆ. ಕನ್ನಡಿಗರಿಗೆ ಶೌರ್ಯವಿದ್ದರೆ ನಿಮ್ಮ ಹೋಬಳಿಯಲ್ಲಿ ಎಲ್ಲ ವ್ಯಾಪಾರ ವ್ಯವಹಾರವನ್ನು ನೀವೆ ಮಾಡಿ. ಬೆಂಗಳೂರು ನಗರವನ್ನು ವಾಪಸ್‌ ನಿಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕು. ಕನ್ನಡಿಗರು ಯಾರಿಗೂ ತಲೆ ಬಾಗಬಾರದು.

ನಟಿ ತಾರಾ ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿ ನಕಲಿ ಪೋಸ್ಟ್: ದೂರು ದಾಖಲು!

* ಕನ್ನಡಿಗರಿಗಾಗಿ ರಾಜಕೀಯಕ್ಕೆ ಬರುತ್ತೇನೆ ಎಂದು ಹೇಳಿದ್ರಿ?
ಚುನಾವಣೆ ಮಾಡೋಕೆ ಕನಿಷ್ಠ 50 ಕೋಟಿ ರು. ಬೇಕಂತೆ, ಎಲ್ಲಿಂದ ತರೋದು. ಎಲೆಕ್ಷನ್‌ಗೆ ನಿಂತರೂ ಯಾರು ನನಗೆ ವೋಟ್‌ ಹಾಕ್ತಾರೆ ಹೇಳಿ. ಎರಡ್ಮೂರು ಸಾವಿರ ರು.ಗಳಿಗೆ ಮತ ಮಾರಿಕೊಳ್ಳುವ ಜನರೇ ಹೆಚ್ಚಿರುವಾಗ ಕನ್ನಡ, ಕನ್ನಡ ಪರ ಹೋರಾಟಗಾರರಿಗೆ ಯಾರು ತಾನೇ ವೋಟು ಹಾಕುತ್ತಾರೆ.