Asianet Suvarna News Asianet Suvarna News

ಬಸ್‌ಗಳಿಗೆ ಭಿತ್ತಿಪತ್ರ ಅಂಟಿಸಿ ಶಿಕ್ಷಕನಿಂದ ಕನ್ನಡ ಜಾಗೃತಿ!

ಇವರ ಹಣೆಯ ಮೇಲಿರುವ ತಿಲಕ ಕೂಡ ಕನ್ನಡ ಬಾವುಟದ ಬಣ್ಣವಾದ ಹಳದಿ, ಕೆಂಪಿನಿಂದ ಕಂಗೊಳಿಸುತ್ತಿದೆ. ಹಾಜರಿ ಪುಸ್ತಕಕ್ಕೂ ಕನ್ನಡದಲ್ಲೇ ಸಹಿ ಹಾಕುತ್ತಾರೆ. ಜೊತೆಗೆ ಬೆಳಗಾವಿ, ವಿಜಯಪುರ, ಬಾಗಲಕೋಟೆಯ ಬಸ್‌ಗಳಲ್ಲಿ ಭಿತ್ತಿಪತ್ರಗಳನ್ನು ಅಂಟಿಸಿ ಕನ್ನಡ ಅಂಕಿಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಇದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದ ಶಿಕ್ಷಕ ಸುರೇಶ ಗೋವಿಂದರಾವ ದೇಸಾಯಿ ಅವರ ಕಥೆ.

Kannada Awareness By A Teacher
Author
Belgaum, First Published Nov 11, 2018, 10:00 AM IST

ಶಾಲೆಯಲ್ಲೂ ಕನ್ನಡ ಕಾಳಜಿ:

ರಾಮದುರ್ಗ ತಾಲೂಕಿನ ರೊಕ್ಕದಕಟ್ಟಿಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಪ್ರಧಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸುರೇಶ ದೇಸಾಯಿ, 1993ರಿಂದ ಕನ್ನಡ ಅಂಕಿ-ಸಂಖ್ಯೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ 4ನೇ ತರಗತಿ ವಿದ್ಯಾರ್ಥಿಗಳವರೆಗೆ ಅವುಗಳನ್ನೇ ಕಲಿಸುತ್ತಿದ್ದಾರೆ. ಸ್ವಂತ ಖರ್ಚಿನಲ್ಲಿ ಭಿತ್ತಿಪತ್ರಗಳನ್ನು ಮುದ್ರಿಸಿ ಕನ್ನಡ ಸಾಹಿತ್ಯ ಸಮ್ಮೇಳನ, ಪುಸ್ತಕ ಬಿಡುಗಡೆ, ಜಾನಪದ ಕಾರ್ಯಕ್ರಮ ಕುರಿತ ಸಮಗ್ರ ಮಾಹಿತಿ ಪ್ರಕಟಿಸಿ ಹಂಚುತ್ತಾರೆ. ಹಲವಾರು ವರ್ಷಗಳಿಂದ ಈ ರೀತಿ ಕನ್ನಡ ಸೇವೆ ಮಾಡಿಕೊಂಡು ಬಂದಿದ್ದಾರೆ.

ಸಂಘಟನೆಯೊಂದಿಗೆ ಕನ್ನಡ ಕಾಳಜಿ:

35 ಶಿಕ್ಷಕರ ಜತೆಗೂಡಿ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ಹೆಸರಿನಲ್ಲಿ ಸಂಘವೊಂದನ್ನು ಸ್ಥಾಪಿಸಿ, ಪ್ರತಿತಿಂಗಳು ನಾಡು, ನುಡಿ, ಭಾಷೆ, ಶಿಕ್ಷಣ ಕುರಿತು ಸಂವಾದ ಆಯೋಜಿಸುತ್ತಾ ಬಂದಿದ್ದಾರೆ. ಅಲ್ಲದೆ ಸಿರಿಗನ್ನಡ ವೇದಿಕೆಯ ಜಿಲ್ಲಾ ಅಧ್ಯಕ್ಷರಾಗಿ ಹಾಗೂ ವಚನ ಸಾಹಿತ್ಯ ಪರಿಷತ್‌ನ ರಾಮದುರ್ಗ ತಾಲೂಕಿನ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್‌ ಸೇವೆ ಸಲ್ಲಿಸುತ್ತಿದ್ದಾರೆ.

ಸಾಹಿತ್ಯದಲ್ಲಿ ಕೃಷಿ:

ವಚನ ಸಾಹಿತ್ಯಲೇಖನವಾದ ‘ಶರಣ ಸನ್ನಿಧಿ’, ಸ್ವಾತಂತ್ರ್ಯ ಹೋರಾಟ ಮತ್ತು ಹೋರಾಟಗಾರರ ‘ಹಸಿರು ಹೆದ್ದಾರಿ’ ಹಾಗೂ ಸಂಪಾದಕೀಯ ಕವನ ಸಂಕಲನಗಳಾದ ಸಿರಿಗನ್ನಡ ದೀಪ, ನಾವೇನು ಕಮ್ಮಿ ಇವರ ಸಾಹಿತ್ಯದ ಕೊಡುಗೆಗಳು.

ಅರಸಿ ಬಂದ ಪ್ರಶಸ್ತಿಗಳು:

2001-02ರಲ್ಲಿ ಜನಮೆಚ್ಚಿದ ಶಿಕ್ಷಕ, 2008ರಲ್ಲಿ ಜಿಲ್ಲಾ ಶಿಕ್ಷಕ ಪ್ರಶಸ್ತಿ, 2007-08 ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ, 2012 ರಾಜ್ಯಮಟ್ಟದ ಮೌಲ್ಯಶಿಕ್ಷಕ ರತ್ನ, 2012 ರಾಜ್ಯಮಟ್ಟದ ಶಿಕ್ಷಕ ಭೂಷಣ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಸುರೇಶ ಭಾಜನರಾಗಿದ್ದಾರೆ.


ಅಡುಗೆ ಮನೆಯಿಂದಲೇ ಕನ್ನಡ ಆರಂಭವಾಗಬೇಕು. ತಾಯಿಯ ಆಸಕ್ತಿಯಿಂದಲೇ ಕನ್ನಡಕ್ಕೆ ಶಕ್ತಿ ಹಾಗೂ ಯುಕ್ತಿ. ತಾಯಿಯ ಕನ್ನಡ ಕಾಳಜಿ ಹೆಚ್ಚು ಶಾಶ್ವತವಾಗುತ್ತದೆ. ಅದಕ್ಕಾಗಿ ತಾಯಿ ಇಂಗ್ಲಿಷ್‌ ವ್ಯಾಮೋಹ ಬಿಟ್ಟು ಕನ್ನಡ ಅಭಿಮಾನ ಮೆರೆಯುವುದರೊಂದಿಗೆ ಕನ್ನಡ ಶ್ರೇಷ್ಠತೆ ಮೆರೆಯಲಿ.

- ಸುರೇಶ ಗೋವಿಂದರಾವ ದೇಸಾಯಿ

ಪುತ್ರನ ಮದುವೆಯಲ್ಲೂ ಕನ್ನಡಪ್ರೇಮ

ಸುರೇಶ ದೇಸಾಯಿ ಅವರ ಕನ್ನಡಾಭಿಮಾನ ಇಲ್ಲಿಗೆ ನಿಂತಿಲ್ಲ. 2018ರ ಜೂ.18ರಂದು ನಡೆದ ಅವರ ಪುತ್ರ ಮದುವೆಯೂ ಸಂಪೂರ್ಣ ಕನ್ನಡಮಯವಾಗಿತ್ತು. ಕನ್ನಡ ಧ್ವಜದ ವರ್ಣದಲ್ಲೇ ವೇದಿಕೆಯನ್ನು ಶೃಂಗರಿಸಿದ್ದರು. ಮೂರು ದ್ವಾರಗಳನ್ನು ನಿರ್ಮಿಸಿ, ರಾಮದುರ್ಗ ತಾಲೂಕಿನ ಸಾಹಿತಿಗಳಾದ ಹುಸಿ ಕವನ ಸಂಕಲನ ಖ್ಯಾತಿಯ ದಿ.ಬಾಪುರಾವ ಚಂದುರಾವ ದೇಸಾಯಿ, ಮಹಾಕಾವ್ಯವಾದ ಅಜಿತ ಪುರಾಣ ಬರೆದ ಮಹಾಕವಿ ರತ್ನಾಕರವರ್ಣಿ ಹಾಗೂ ಹಚ್ಚೇವು ಕನ್ನಡದ ಬರೆದ ಡಿ.ಎಸ್‌. ಕರ್ಕಿ ಹೆಸರನ್ನಿಟ್ಟಿದ್ದರು. ಅಷ್ಟೇ ಅಲ್ಲ, ವಿವಾಹಕ್ಕೆ ಬಂದ ಬಂಧುಗಳಿಗೆ ಹಳದಿ-ಕೆಂಪು ವರ್ಣದ ಶಾಲನ್ನು ಹಾಕಿ ಸ್ವಾಗತಿಸಿದ್ದರು. ಹಳದಿ ಹಾಗೂ ಕೆಂಪು ಬಲೂನ್‌ಗಳನ್ನು ಜೋಡಿಸುವುದರೊಂದಿಗೆ ವೇದಿಕೆ ಸುತ್ತಲೂ 100ಕ್ಕೂ ಹೆಚ್ಚು ಬಾವುಟಗಳನ್ನು ನೆಟ್ಟು, ಕನ್ನಡಾಭಿಮಾನ ಮೆರೆದಿದ್ದರು. ಮದುವೆಗೆ ಬಂಧುಗಳಿಗಿಂತ ವಿಶೇಷವಾಗಿ ಸಾಹಿತಿಗಳಿಗೆ ವಿಶೇಷ ಆಹ್ವಾನ ನೀಡಿದ್ದರು.

ಕನ್ನಡ ಧ್ವಜ ಹಣೆ ತಿಲಕ!

ಸಣ್ಣವರಿದ್ದಾಗ ಭಕ್ತಿಗಾಗಿ ಬಳಸುತ್ತಿದ್ದ ಅರಿಷಿಣ ಹಾಗೂ ಕುಂಕುಮವನ್ನು ಈಗ ನಾಡು- ನುಡಿಗಾಗಿ ಬಳಸುತ್ತಿದ್ದಾರೆ. ಕನ್ನಡ ಬಾವುಟ ವರ್ಣವಾಗಿ ತಿಲಕದ ರೂಪದಲ್ಲಿ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇಂದಿಗೂ ಹಣೆಯಲ್ಲಿ ಹಳದಿ-ಕೆಂಪು ಇಲ್ಲದಿರುವುದೇ ಇಲ್ಲ ಎಂದು ಅಭಿಮಾನದಿಂದ ಹೇಳುತ್ತಾರೆ ಸುರೇಶ. ದ್ವಿಚಕ್ರ ವಾಹನದಲ್ಲಿ ಕನ್ನಡ ಸತ್ಯ, ಹೃದಯ ಮೀಡಿತ ಕನ್ನಡ, ಕನ್ನಡಮ್ಮ, ಕನ್ನಡ ಜಾಣ, ಕನ್ನಡ ರತ್ನ ಸೇರಿದಂತೆ ಕನ್ನಡದ ಪದಗಳನ್ನು ಬರೆಸುವುದರೊಂದಿಗೆ ಬೈಕ್‌ ಅನ್ನು ಕನ್ನಡವಾಗಿಸಿದ್ದಾರೆ.
 

Follow Us:
Download App:
  • android
  • ios