* ಜೂ.22ರಿಂದ ದೆಹಲಿಯಲ್ಲಿ ತರಬೇತಿ* ಪ್ರೈಡ್‌ ಕಲಿಕಾ ಕಾರ್ಯಾಗಾರದಲ್ಲಿ ಕನ್ನಡಕ್ಕೆ ಆದ್ಯತೆ ನೀಡಿರಲಿಲ್ಲ* ರಾಜ್ಯದ ಸಂಸದರೊಂದಿಗೆ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದ ನಾಗಾಭರಣ  

ಬೆಂಗಳೂರು(ಜೂ.21): ಲೋಕಸಭೆ ಸಚಿವಾಲಯದ ಭಾಷೆಗಳ ಕಲಿಕಾ ತರಬೇತಿಯಲ್ಲಿ ಕನ್ನಡವನ್ನು ಕಡೆಗಣಿಸಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕನ್ನಡ ಭಾಷೆಯನ್ನು ಸೇರ್ಪಡಿಸಿ ಆದೇಶಿಸಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ದೇಶೀಯ ಮತ್ತು ವಿದೇಶಿ ಭಾಷೆಗಳನ್ನು ಕಲಿಸಲು ಜೂ.22ರಂದು ದೆಹಲಿಯಲ್ಲಿ ಹಮ್ಮಿಕೊಂಡಿರುವ ಪ್ರೈಡ್‌ ಕಲಿಕಾ ಕಾರ್ಯಾಗಾರದಲ್ಲಿ ಕನ್ನಡಕ್ಕೆ ಆದ್ಯತೆ ನೀಡಿರಲಿಲ್ಲ.

ತೆಲುಗು, ಬಂಗಾಳಿ, ಮರಾಠಿ, ತಮಿಳು ಸೇರಿದಂತೆ ಬಹುತೇಕ ಭಾಷೆಗಳನ್ನು ಸೇರ್ಪಡೆ ಮಾಡಿ ಕನ್ನಡವನ್ನು ನಿರ್ಲಕ್ಷ್ಯಿಸಿದ್ದ ಲೋಕಸಭಾ ಸಚಿವಾಲಯದ ಪಾರ್ಲಿಮೆಂಟರಿ ರಿಸಚ್‌ರ್‍ ಆ್ಯಂಡ್‌ ಟ್ರೈನಿಂಗ್‌ ಇನ್ಸ್‌ಟಿಟ್ಯೂಟ್‌ ಫಾರ್‌ ಡೆಮಾಕ್ರಸಿ (ಪ್ರೈಡ್‌) ಸಂಸ್ಥೆಯ ಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್‌ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಚಂದ್ರಶೇಖರ್‌ ಅವರು ಉಪರಾಷ್ಟ್ರಪತಿಗಳಿಗೆ ಈ ಬಗ್ಗೆ ಪತ್ರವನ್ನೂ ಬರೆದಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಸಂಸದರೊಂದಿಗೆ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದರು. ಇದರ ಬೆನ್ನಲ್ಲೇ ಕನ್ನಡ ಭಾಷೆಯನ್ನು ಸೇರ್ಪಡೆ ಮಾಡಿ ಸಚಿವಾಲಯವು ಆದೇಶ ಹೊರಡಿಸಿದೆ.

ಭಾಷೆ ಕಲಿಸುವ ಕೇಂದ್ರ ಸರ್ಕಾರದ ಕಾರ್ಯಾಗಾರದಲ್ಲಿ ಕನ್ನಡವೇ ಇಲ್ಲ..!

ಇದಕ್ಕೂ ಮೊದಲು ಟ್ವೀಟರ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದ ಎಚ್‌.ಡಿ. ಕುಮಾರಸ್ವಾಮಿ, ‘ಕನ್ನಡಾಭಿಮಾನವಿಲ್ಲದ 25 ಮಂದಿಯನ್ನು ಲೋಕಸಭೆಗೆ ಆರಿಸಿ ಕಳಿಸಿದ್ದರ ಫಲವಿದು. ಇದೇ 22ರಿಂದ ಭಾಷೆಗಳ ಕಲಿಕಾ ತರಬೇತಿ ಆನ್‌ಲೈನಲ್ಲಿ ಆರಂಭವಾಗುತ್ತಿದೆ. ಇದರಲ್ಲಿ ಫ್ರೆಂಚ್‌, ಜರ್ಮನ್‌, ಜಪಾನೀಸ್‌, ಪೋರ್ಚುಗೀಸ್‌, ರಷ್ಯನ್‌, ಸ್ಪ್ಯಾನಿಷ್‌ ಅನ್ನು ಕಲಿಸಲಾಗುತ್ತಿದೆ. ಇದರಲ್ಲಿ ಕನ್ನಡವನ್ನು ಸೇರಿಸಬೇಕು. ಇಲ್ಲವೇ ನಾವೆಲ್ಲರೂ ಇದನ್ನು ಧಿಕ್ಕರಿಸಬೇಕು ಕೇಂದ್ರ ಪ್ರತಿ ಬಾರಿ ಕನ್ನಡ ನಿರ್ಲಕ್ಷಿಸುತ್ತಿದೆ. ಅವರು ನಿರ್ಲಕ್ಷಿಸುವುದು ನಾವು ಎಚ್ಚರಿಸುವುದು, ಅತ್ತು ಕರೆದು ಔತಣ ಪಡೆಯುವುದು ನಿಲ್ಲಬೇಕು. ಕನ್ನಡ ಮರೆತರೆ ಕಷ್ಟ ಎಂಬ ಸಂದೇಶ ರವಾನಿಸಬೇಕು’ ಎಂದು ಕರೆ ನೀಡಿದ್ದರು. ಕೇಂದ್ರದ ಆದೇಶದ ಬಳಿಕ ಟ್ವೀಟ್‌ ಮಾಡಿರುವ ಜಿ.ಸಿ. ಚಂದ್ರಶೇಖರ್‌, ಲೋಕಸಭಾ ಪ್ರೈಡ್‌ನಲ್ಲಿ ಕನ್ನಡ ಸೇರಿಸಿದ್ದಾರೆ. ಇದು ಸಾಧ್ಯವಾಗಿದ್ದು ಸಾಮಾನ್ಯ ಕನ್ನಡಿಗರಿಂದ. ನಮ್ಮ ಮನವಿ ಪುರಸ್ಕರಿಸಿದ ಸಚಿವಾಲಯಕ್ಕೆ ಧನ್ಯವಾದ ಎಂದಿದ್ದಾರೆ.

ಏನಿದು ವಿವಾದ?

- ಜೂ.22ರಿಂದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ದೆಹಲಿಯಲ್ಲಿ ಭಾಷಾ ತರಬೇತಿ ಕಾರ್ಯಾಗಾರ
- ತೆಲುಗು, ತಮಿಳು, ಮರಾಠಿ, ಬಂಗಾಳಿ ಸೇರಿಸಿ ಕನ್ನಡ ನಿರ್ಲಕ್ಷಿಸಿದ್ದ ಲೋಕಸಭೆ ಸಚಿವಾಲಯ
- ಈ ಬಗ್ಗೆ ಕನ್ನಡಿಗರಿಂದ ತೀವ್ರ ಆಕ್ರೋಶ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಹೋರಾಟ ಎಚ್ಚರಿಕೆ
- ಎಚ್‌.ಡಿ. ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್‌ರಿಂದ ಭಾರಿ ಪ್ರತಿರೋಧ
- ಉಪರಾಷ್ಟ್ರಪತಿಗೆ ಪತ್ರ ಬರೆದಿದ್ದ ಜಿ.ಸಿ. ಚಂದ್ರಶೇಖರ್‌. ಬೆನ್ನಲ್ಲೇ ಕನ್ನಡ ಸೇರ್ಪಡೆ ಮಾಡಿ ಆದೇಶ