ಬೆಂಗಳೂರು[ಜ.26]: ಬಳ್ಳಾರಿ ಕಾಂಗ್ರೆಸ್ ಶಾಸಕರಿಬ್ಬರ ಬಡಿದಾಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಮೊದಲು ಜಗಳ ಆರಂಭಿಸಿದ್ದೇ ಹೊಸಪೇಟೆಯ ಶಾಸಕರಾದ ಆನಂದ್ ಸಿಂಗ್ ಎಂದು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರ ಗನ್‌ಮ್ಯಾನ್ (ಖಾಸಗಿ ಅಂಗರಕ್ಷಕ) ಹೇಳಿಕೆ ನೀಡಿದ್ದಾರೆ.

ಅಲ್ಲದೆ, ಆನಂದ್ ಸಿಂಗ್ ಅವರು ಶಾಸಕ ಭೀಮಾನಾಯ್ಕ್ ಅವರ ಮೇಲೂ ಹಲ್ಲೆ ನಡೆಸಿದ್ದು, ಘಟನೆ ವೇಳೆ ಗಣೇಶ್ ಅವರು ನನ್ನಿಂದ ಗನ್ ಕೇಳಿಲ್ಲ ಎಂದೂ ಖಾಸಗಿ ಅಂಗರಕ್ಷಕರಾಗಿರುವ ಶರಣಪ್ಪ ತಿಳಿಸಿದ್ದಾರೆ.

ಗುರುವಾರ ಮಾಧ್ಯಮಗಳ ಜತೆ ಮಾತನಾಡಿದ ಶರಣಪ್ಪ, ಜ.೧೯ರಂದು ಈಗಲ್‌ಟನ್ ರೆಸಾರ್ಟ್ ನಲ್ಲಿ ಪಾರ್ಟಿ ಮಾಡಿದ ಬಳಿಕ ಶಾಸಕ ಗಣೇಶ್ ಅವರು ತಮ್ಮ ಕೊಠಡಿಯಲ್ಲಿ ಇದ್ದರು. ಇದೇ ಕೊಠಡಿಯಲ್ಲಿ ಗಣೇಶ್ ಅವರ ಜತೆ ನಾನು ಕೂಡ ಇದ್ದೆ. ಆಗ ತಾನೇ ಕೊಠ ಡಿಗೆ ಬಂದು ೫ ನಿಮಿಷವಾಗಿತ್ತು. ಈ ವೇಳೆ ಯಾರೋ ಬಂದು ಕೊಠಡಿಯ ಬಾಗಿಲು ತಟ್ಟಿದರು. ನಮ್ಮ ಶಾಸಕರ ಸೂಚನೆಯಂತೆ ಬಾಗಿಲು ತೆರೆದು ಯಾರು ಎಂದು ನೋಡಿದೆ.

ಬಾಗಿಲು ಮುಂದೆ ನಿಂತಿದ್ದ ಆನಂದ್‌ಸಿಂಗ್ ಅವರು ಶಾಸಕ ಗಣೇಶ್ ಅವರನ್ನು ಉದ್ದೇಶಿಸಿ,‘ಏ ಬಾರೋ ಗಣೇಶ, ಭೀಮಾನಾಯ್ಕ್ ಇರುವ ಕೊಠಡಿ ತೋರಿಸು. ಆತ (ಭೀಮಾನಾಯ್ಕ್) ಶಾಸಕಾಂಗ ಸಭೆಯಲ್ಲಿ ನನಗೆ ಬೈದಿದ್ದಾನೆ. ಅವನಿಗೆ ಬುದ್ಧಿ ಕಲಿಸುತ್ತೇನೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಗಣೇಶ್ ಅವರು, ‘ಅಣ್ಣ ಈಗ ಬೇಡ. ಬೆಳಗ್ಗೆ ಶಾಸಕಾಂಗ ಸಭೆ ಇದೆ. ಆಗ ಮಾತನಾಡೋಣ. ಈಗ ಹೋಗಿ ಮಲಗಿ’ ಎಂದರು. ಎಷ್ಟು ಹೇಳಿದರೂ ಕೇಳದ ಆನಂದ್ ಸಿಂಗ್ ಅವರು ಭೀಮಾನಾಯ್ಕ್ ಅವರ ಕೊಠಡಿ ತೋರಿಸುವಂತೆ ಪಟ್ಟು ಹಿಡಿದರು. ಆನಂದ್‌ಸಿಂಗ್ ಅವರ ಮಾತಿಗೆ ಕಟ್ಟು ಬಿದ್ದ ಗಣೇಶ್ ಅವರು ಭೀಮಾನಾಯ್ಕ್ ಅವರಿದ್ದ ಕೊಠಡಿ ಬಳಿ ಕರೆದುಕೊಂಡು ಹೋದರು. ಭೀಮಾನಾಯ್ಕ್ ಅವರನ್ನು ನೋಡಿದ ಕೂಡಲೇ ಆನಂದ್ ಸಿಂಗ್, ‘ಏನೋ ಸಿಎಲ್‌ಪಿ ಸಭೆಯಲ್ಲಿ ನಿಂದಿಸುತ್ತೀಯಾ ಸೂ...ಮಗನೇ’ ಎಂದು ಹಲ್ಲೆಗೆ ಯತ್ನಿಸಿ, ಭೀಮಾನಾಯ್ಕ್ ಅವರ ಕತ್ತು ಹಿಸುಕಲು ಯತ್ನಿಸಿದರು. ಕೂಡಲೇ ಮಧ್ಯ ಪ್ರವೇಶಿಸಿದ ಗಣೇಶ್ ಅವರು ಆನಂದ್‌ಸಿಂಗ್ ಅವರನ್ನು ತಡೆದು ನಿಲ್ಲಿಸಿದರು. ಅಲ್ಲದೆ, ಭೀಮಾನಾಯ್ಕ್ ಅವರಿಗೆ ‘ಏಯ್ ಬಿಡೋ ಭೀಮಣ್ಣ ಹೋಗ್ಲಿ’ ಎಂದು ಗಣೇಶ್ ಸಮಾಧಾನಪಡಿಸಿದರು. ನಂತರ ಆನಂದ್‌ಸಿಂಗ್ ಅವರನ್ನು ಗಣೇಶ್ ಅವರೇ ಸಮಾಧಾನಪಡಿಸಿದ್ದರು.

ಎಲ್ಲವೂ ಸರಿಯಾದ ಮೇಲೆ ಗಣೇಶ್ ಅವರನ್ನು ಕುರಿತು ಆನಂದ್ ಸಿಂಗ್, ‘ಏ ಗಣೇಶ ನಿನ್ನ ಕ್ಷೇತ್ರದಲ್ಲಿ ನನ್ನ ಅಳಿಯ ಸಂದೀಪ್‌ನನ್ನ ಚುನಾವಣೆಗೆ ನಿಲ್ಲಿಸುತ್ತೇನೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಗಣೇಶ್ ಅವರು, ‘ಬ್ಯಾಡಣ್ಣ. ನೀನು ಬೇಕಾದರೆ ಸ್ಪರ್ಧಿಸು. ಅಥವಾ ನಿನ್ನ ಮಗ ಸಿದ್ಧಾರ್ಥ ಅಥವಾ ನಿನ್ನ ಪತ್ನಿ ಸ್ಪರ್ಧೆ ಮಾಡಲಿ. ನಿನಗೆ ತಲೆಬಾಗುತ್ತೇನೆ. ಆದರೆ ಸಂದೀಪ್ ಬೇಡ’ ಎಂದರು. ಅಷ್ಟೊತ್ತಿಗೆ ಏಕಾಏಕಿ ಆನಂದ್‌ಸಿಂಗ್ ಅವರು ಅಲ್ಲಿಯೇ ಇದ್ದ ಬೆಡ್‌ಲೈಟ್ ತೆಗೆದು ಗಣೇಶ್ ಅವರ ಮೇಲೆ ಹಲ್ಲೆ ನಡೆಸಿದರು. ಮೊದಲು ಹಲ್ಲೆ ನಡೆಸಿದವರೇ ಆನಂದ್‌ಸಿಂಗ್ ಎಂದು ಶಾಸಕ ಗಣೇಶ್ ಅವರ ಖಾಸಗಿ ಅಂಗರಕ್ಷಕ ಶರಣಪ್ಪ ವಿವರಿಸಿದರು.