ಬಜೆಟ್ ಅಧಿವೇಶನಕ್ಕೆ ಅತೃಪ್ತರು ಹಾಜರಾಗುತ್ತಾರೋ ಇಲ್ಲವೋ ಎನ್ನುವ ವಿಚಾರ ಹೆಚ್ಚು ಕುತೂಹಲ ಸೃಷ್ಟಿಸಿದ್ದು, ಇದೀಗ ಕಂಪ್ಲಿ ಶಾಸಕ ಗಣೇಶ್ ಗೆ ಬಂಧನ ಭೀತಿ ಎದುರಾಗಿದೆ. 

ಬೆಂಗಳೂರು :  ತಮ್ಮದೇ ಪಕ್ಷದ ಶಾಸಕ ಆನಂದ್‌ ಸಿಂಗ್‌ ಅವರ ಮೇಲೆ ಮಾರಣಾಂತಿಕ ಹಲ್ಲೆ ಎಸಗಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ನ ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ ಅವರು ಬುಧವಾರದಿಂದ ಆರಂಭವಾಗಲಿರುವ ವಿಧಾನಮಂಡಲದ ಉಭಯ ಸದನಗಳ ಅಧಿವೇಶನಕ್ಕೆ ಹಾಜರಾಗುತ್ತಾರೆಯೇ ಅಥವಾ ಇಲ್ಲವೇ ಎಂಬುದು ಕುತೂಹಲಕರವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅತ್ತ ದರಿ, ಇತ್ತ ಪುಲಿ ಎಂಬಂತೆ ಸದನಕ್ಕೆ ಹಾಜರಾದರೆ ಪೊಲೀಸರು ಬಂಧಿಸಬಹುದು, ಹಾಜರಾಗದಿದ್ದರೆ ಸದಸ್ಯತ್ವ ಅನರ್ಹಗೊಳ್ಳಬಹುದು ಎಂಬ ಪರಿಸ್ಥಿತಿ ಗಣೇಶ್‌ ಅವರಿಗೆ ಎದುರಾಗಿದೆ.

ಬುಧವಾರದಿಂದ ಅಧಿವೇಶನ ಮುಗಿಯುವವರೆಗಿನ ಕಾರ್ಯಕಲಾಪದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಈಗಾಗಲೇ ಗಣೇಶ್‌ ಸೇರಿದಂತೆ ಎಲ್ಲ ಕಾಂಗ್ರೆಸ್‌ ಶಾಸಕರಿಗೂ ಕಾಂಗ್ರೆಸ್‌ ವಿಪ್‌ ಜಾರಿಗೊಳಿಸಿದೆ. ಮತ್ತೊಂದೆಡೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಾಪ ವೇಳೆಯೇ ಗಣೇಶ್‌ ಅವರನ್ನು ವಿಧಾನಸೌಧದಲ್ಲಿಯೇ ವಶಕ್ಕೆ ತೆಗೆದುಕೊಳ್ಳುವ ಸಂಬಂಧ ರಾಮನಗರ ಪೊಲೀಸರು ಸ್ಪೀಕರ್‌ ಅನುಮತಿ ಕೋರಿದ್ದಾರೆ.

ಹಲ್ಲೆ ಘಟನೆ ನಡೆದ ಬಳಿಕ ಗಣೇಶ್‌ ನಾಪತ್ತೆಯಾಗಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಾಗಿ ಪೊಲೀಸರು ಹಲವು ತಂಡಗಳಾಗಿ ಹುಡುಕಾಟ ನಡೆಸಿದರೂ ಸಿಕ್ಕಿಲ್ಲ. ಇದೀಗ ಅಧಿವೇಶನ ಆರಂಭವಾಗುವುದರಿಂದ ಗಣೇಶ್‌ ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.