Asianet Suvarna News Asianet Suvarna News

ರಾಜ್ಯದಲ್ಲಿ 200ಕ್ಕೂ ಹೆಚ್ಚು ಕಂಬಳ ಓಟಗಾರರು!

ರಾಜ್ಯದಲ್ಲಿ 200ಕ್ಕೂ ಹೆಚ್ಚು ಕಂಬಳ ಓಟಗಾರರು!| ತರಬೇತಿ ಸಿಕ್ಕರೆ ಜಾಗತಿಕ ಮಟ್ಟದಲ್ಲಿ ಮಿಂಚುವ ಸಾಧ್ಯತೆ| ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್‌ಗೆ ಕಂಬಳ ಪ್ರಿಯರ ಬೇಡಿಕೆ

Kambala More Than 200 Buffalo Jokes In Karnataka Who May Shine In World Wide
Author
Bangalore, First Published Feb 22, 2020, 7:59 AM IST

ಸಂದೀಪ್‌ ವಾಗ್ಲೆ

ಮಂಗಳೂರು[ಫೆ.22]: ಕಂಬಳ ಓಟಗಾರರಿಗೆ ಸೂಕ್ತ ತರಬೇತಿ ದೊರೆತು ಸಿಂಥೆಟಿಕ್‌ ಟ್ರ್ಯಾಕ್‌ ರೇಸ್‌ಗೇನಾದರೂ ಅವರು ಬಂದರೆ ಅವಿಭಜಿತ ದಕ್ಷಿಣ ಕನ್ನಡ (ದ.ಕ., ಉಡುಪಿ) ಜಿಲ್ಲೆ ದೇಶದ ಓಟಗಾರರ ತವರೂರಾಗುವ ಎಲ್ಲ ಸಾಧ್ಯತೆಗಳಿವೆ. ಕರಾವಳಿಯಲ್ಲಿ ಪ್ರಸ್ತುತ ಏನಿಲ್ಲವೆಂದರೂ 200ರಷ್ಟುಕಂಬಳ ಓಟಗಾರರ ಬಹುದೊಡ್ಡ ಪಡೆಯೇ ಇದ್ದು, ಒಬ್ಬರ ದಾಖಲೆಯನ್ನು ಮತ್ತೊಬ್ಬರು ಮುರಿಯುತ್ತಿರುವುದು ಬೆಳಕಿಗೆ ಬರುತ್ತಿದೆ. ಈ ಹಳ್ಳಿ ಹುಡುಗರಿಗೆ ಆಧುನಿಕ ತರಬೇತಿ ದೊರೆತರೆ ಇವರಲ್ಲಿ ಅನೇಕರು ಜಾಗತಿಕ ಮಟ್ಟದಲ್ಲಿ ಮಿಂಚುವ ಸಾಧ್ಯತೆ ಇದ್ದು, ಇದಕ್ಕಾಗಿ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎನ್ನುವ ಒತ್ತಾಸೆ ಕೇಳಿಬಂದಿದೆ.

ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಹಾಗೂ ಉಡುಪಿ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿಗಳ ಮೂಲಕ ಕಂಬಳ ಕ್ರೀಡೆಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಪ್ರತಿವರ್ಷ 17 ಕಂಬಳ ಕೂಟಗಳು ನಡೆಯುತ್ತಿದ್ದು, ವಿವಿಧ ವಿಭಾಗಗಳಲ್ಲಿ ಸುಮಾರು 140ರಿಂದ 150 ಸ್ಪರ್ಧೆಗಳು ಜರುಗುತ್ತವೆ. ಈ ಸಮಿತಿ ಅಧೀನದಲ್ಲೇ ಸುಮಾರು 100-120ರಷ್ಟುಓಟಗಾರರು ಕೋಣ ಓಡಿಸುತ್ತಾರೆ. ಇನ್ನು ಉಡುಪಿ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿ ನೇತೃತ್ವದಲ್ಲಿ ವರ್ಷಕ್ಕೆ ಸುಮಾರು 100ರಷ್ಟುಕಂಬಳ ಸ್ಪರ್ಧೆಗಳು ನಡೆಯುತ್ತಿದ್ದು, 90-100ರಷ್ಟುಓಟಗಾರರು ಇದ್ದಾರೆ. ಉಭಯ ಜಿಲ್ಲೆಗಳಲ್ಲಿ ಏನಿಲ್ಲವೆಂದರೂ ಕನಿಷ್ಠ 200 ಮಂದಿಯಾದರೂ ಕಂಬಳ ಓಟಗಾರರಿದ್ದು, ಅವರಲ್ಲಿ ಶೇ.30ರಷ್ಟುಮಂದಿ 25 ವರ್ಷದ ಒಳಗಿನ ಯುವಕರೇ ಆಗಿದ್ದಾರೆ. ಕೋಣ ಓಡಿಸುವವರ ಸಾಮರ್ಥ್ಯ ಕಡಿಮೆಯಾದಂತೆ ಹೊಸ ಹೊಸ ಓಟಗಾರರನ್ನು ತಯಾರು ಮಾಡಲಾಗುತ್ತದೆ ಎನ್ನುವುದು ವಿಶೇಷ.

ಸಿಕ್ಸ್‌ ಪ್ಯಾಕ್‌ ದೇಹ:

ಅಂತಾರಾಷ್ಟ್ರೀಯ ಮಟ್ಟದ ಓಟಗಾರರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲದಂತಹ ದೇಹ ದಾಢ್ರ್ಯತೆಯನ್ನು ಕಂಬಳ ಕೋಣ ಓಡಿಸುವ ಯುವಕರು ಹೊಂದಿದ್ದಾರೆ. ವಿಶ್ವದ ದಾಖಲೆ ಓಟಗಾರ ಉಸೇನ್‌ ಬೋಲ್ಟ್‌ನಂತೆಯೇ ಹೆಚ್ಚಿನವರದ್ದು ಕಟ್ಟುಮಸ್ತಾದ ಸಿಕ್ಸ್‌ ಪ್ಯಾಕ್‌ ಬಾಡಿ. ಕೆಲವರು 40 ವರ್ಷ ದಾಟಿದವರಿದ್ದರೂ ದೇಹ ದಾಢ್ರ್ಯತೆಯಲ್ಲಿ ಮಾತ್ರ ಯಾರಿಗೂ ಕಡಿಮೆಯಿಲ್ಲ.

ವಿಶೇಷ ಪ್ಯಾಕೇಜ್‌ ಬೇಡಿಕೆ:

ಪ್ರಸ್ತುತ ವಿಧಾನ ಮಂಡಲ ಅಧಿವೇಶನ ನಡೆಯುತ್ತಿದ್ದು ಮಾ.5ರಂದು ಬಜೆಟ್‌ ಮಂಡನೆಯಾಗುವುದರಿಂದ ಕಂಬಳ ಓಟಗಾರರಿಗೆ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ತರಬೇತಿ ನೀಡಲು .1 ಕೋಟಿ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂದು ಕಂಬಳ ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ ಮನವಿ ಮಾಡಿದ್ದಾರೆ. ಸರ್ಕಾರವೇ ತರಬೇತಿಯ ಜವಾಬ್ದಾರಿ ವಹಿಸಿದರೂ ಸ್ವಾಗತ. ಇಲ್ಲದಿದ್ದರೆ ಅಕಾಡೆಮಿ ವತಿಯಿಂದಲೇ ಕಂಬಳ ಓಟಗಾರರಿಗೆ ಸಿಂಥೆಟಿಕ್‌ ತರಬೇತಿ ನೀಡುತ್ತೇವೆ ಎನ್ನುತ್ತಾರವರು.

100 ಮೀ. ಓಟಕ್ಕೆ ಫಿಟ್‌

ಕರಾವಳಿಯಲ್ಲಿರುವ ಕಂಬಳ ಓಟಗಾರರು ಸರಾಸರಿ 130ರಿಂದ 148 ಮೀ. ಕಂಬಳ ಸ್ಪರ್ಧೆಯಲ್ಲಿ ಓಡುತ್ತಾರೆ. ಏಕೆಂದರೆ ಆಧುನಿಕ ಕಂಬಳ ಗದ್ದೆಗಳು ಇಷ್ಟುಉದ್ದವನ್ನು ಹೊಂದಿರುತ್ತವೆ. ಇಷ್ಟುಉದ್ದವನ್ನು ಒಂದೇ ವೇಗದಲ್ಲಿ ಓಡುವವರು ಸೂಕ್ತ ತರಬೇತಿ ಸಿಕ್ಕಲ್ಲಿ 100 ಮೀ. ಓಟದಲ್ಲಿ ಇನ್ನೂ ಉತ್ತಮ ಸಾಧನೆ ಮಾಡಬಹುದು ಎನ್ನುತ್ತಾರೆ ಕಂಬಳ ತಜ್ಞರು.

ಕಂಬಳ ಓಟಗಾರರಲ್ಲಿ ಹೆಚ್ಚಿನವರು ಇದುವರೆಗೂ ಶೂ ಹಾಕಿಲ್ಲ. ಅಂಥವರನ್ನು ತರಬೇತಿಗೊಳಿಸಬೇಕು. ಸರ್ಕಾರ ಕನಿಷ್ಠ 1 ಕೋಟಿ ರು. ವಿಶೇಷ ಪ್ಯಾಕೇಜ್‌ ಘೋಷಿಸಬೇಕು. ಸರ್ಕಾರ ಅನುದಾನ ನೀಡದಿದ್ದರೂ ಪರವಾಗಿಲ್ಲ, ಅಕಾಡೆಮಿಯಿಂದಲೇ ಕಂಬಳ ಓಟಗಾರರಿಗೆ ತರಬೇತಿ ನೀಡುತ್ತೇವೆ.

- ಗುಣಪಾಲ ಕಡಂಬ, ಕಂಬಳ ಅಕಾಡೆಮಿ ಸಂಚಾಲಕ

Follow Us:
Download App:
  • android
  • ios