ಬೆಂಗಳೂರು: ಕಲಾಸಿಪಾಳ್ಯ ನೂತನ ಬಸ್ ನಿಲ್ದಾಣ ಸೇವೆಗೆ ಸಿದ್ಧ
ನಿರ್ಮಾಣಕ್ಕೆ ಆರು ವರ್ಷಗಳಿಗೂ ಅಧಿಕ ಸಮಯ ತೆಗೆದುಕೊಂಡಿರುವ ಕಲಾಸಿಪಾಳ್ಯ ಸಂಚಾರ ಸಾರಿಗೆ ನಿರ್ವಹಣಾ ಕೇಂದ್ರ(ಟಿಟಿಎಂಸಿ) ಕೊನೆಗೂ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ನಾಲ್ಕು ದಿನಗಳಲ್ಲಿ (ಫೆ.24) ಸಾರ್ವಜನಿಕ ಸೇವೆ ಆರಂಭಿಸಲಿದೆ.
ಬೆಂಗಳೂರು (ಫೆ.21) : ನಿರ್ಮಾಣಕ್ಕೆ ಆರು ವರ್ಷಗಳಿಗೂ ಅಧಿಕ ಸಮಯ ತೆಗೆದುಕೊಂಡಿರುವ ಕಲಾಸಿಪಾಳ್ಯ ಸಂಚಾರ ಸಾರಿಗೆ ನಿರ್ವಹಣಾ ಕೇಂದ್ರ(ಟಿಟಿಎಂಸಿ) ಕೊನೆಗೂ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ನಾಲ್ಕು ದಿನಗಳಲ್ಲಿ (ಫೆ.24) ಸಾರ್ವಜನಿಕ ಸೇವೆ ಆರಂಭಿಸಲಿದೆ.
ನಾಲ್ಕು ಮಹಡಿಗಳ ಟಿಟಿಎಂಸಿ ಬಸ್ ಟರ್ಮಿನಲ್(TTMC Bus Terminal) ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಕೆ.ಆರ್.ಮಾರುಕಟ್ಟೆ(KR market)ಮತ್ತು ಸುತ್ತಮುತ್ತಲ ಜನದಟ್ಟಣೆ ನಿವಾರಣೆಗೆ ಹೆಚ್ಚು ಸಹಕಾರಿಯಾಗಲಿದೆ. ಈ ಟಿಟಿಎಂಸಿ ಟರ್ಮಿನಲ್‌ನಲ್ಲಿ ಬಿಎಂಟಿಸಿ ಮತ್ತು ದೂರದೂರಿಗೆ ಪ್ರಯಾಣಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಈ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಲಿವೆ. ಜೊತೆಗೆ ಬೆಂಗಳೂರು(Bengaluru) ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಸಂಚರಿಸುವ ಖಾಸಗಿ ಬಸ್‌ಗಳು ಸಹ ಇದರ ಸೌಲಭ್ಯ ಪಡೆಯಲಿವೆ. ನೂತನವಾಗಿ ನಿರ್ಮಿಸಿರುವ ಕಲಾಸಿಪಾಳ್ಯ ಬಸ್ ನಿಲ್ದಾಣದ ಸಮೀಪವೇ ನಮ್ಮ ಮೆಟ್ರೋ ರೈಲ್ವೆ ನಿಲ್ದಾಣವೂ ಇದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಮಾರ್ಚ್‌ನಿಂದ ಬೆಂಗಳೂರಿನಲ್ಲಿ ಎಸಿ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ ಸೇವೆ, ದರ ಮತ್ತು ಮಾರ್ಗ ಮಾಹಿತಿ
2016ರಲ್ಲಿ ಟಟಿಎಂಸಿ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ನಿಗದಿಯಂತೆ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಹಣಕಾಸಿನ ತೊಂದರೆ ಮತ್ತು ಕೋವಿಡ್ 19ರ ಹಿನ್ನೆಲೆಯಲ್ಲಿ ಕಾಮಗಾರಿ ತಡವಾಗಿಯಿತು. ಇದೀಗ ಉದ್ಘಾಟನೆಗೆ ಸಿದ್ಧಗೊಂಡಿದೆ. ಬಣ್ಣ ಹಚ್ಚುವುದು ಸೇರಿದಂತೆ ಇತರ ಕೆಲಸಗಳು ಪೂರ್ಣಗೊಳ್ಳಬೇಕಿದ್ದು, ಫೆ.24ರಂದು ಸಂಜೆ 5ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನೂತನ ಟಿಟಿಎಂಸಿ ಬಸ್ ಟರ್ಮಿನಲನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಸಾರಿಗೆ ಸಚಿವ ಶ್ರೀರಾಮುಲು, ಸ್ಥಳೀಯ ಶಾಸಕ ಉದಯ್ ಬಿ.ಗರುಡಾಚಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿರುವರು ಎಂದು ಬಿಎಂಟಿಸಿ ಮೂಲಗಳು ಮಾಹಿತಿ ನೀಡಿವೆ.
ಕಲಾಸಿಪಾಳ್ಯ ಬಸ್ ನಿಲ್ದಾಣ(Kalasipalya Bus Stand) 4.25 ಎಕರೆ ವಿಸ್ತೀರ್ಣವಿದ್ದು, 1.7 ಲಕ್ಷ ಚದರ ಅಡಿಗಳ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣಗೊಂಡಿದೆ. ಕಟ್ಟಡವು ನಾಲ್ಕು ಮಹಡಿಗಳನ್ನು ಒಳಗೊಂಡಿದ್ದು ನೆಲಮಹಡಿ, ಮಧ್ಯದ ಅಂತಸ್ತು, ಮೊದಲ ಮಹಡಿಯಿದೆ. ಮೇಲಂತಸ್ತನ್ನು ವಾಹನಗಳ ಪಾರ್ಕಿಂಗ್‌ಗೆ ಮೀಸಲಿಡಲಾಗಿದೆ. ಟಿಟಿಎಂಸಿ ಟರ್ಮಿನಲ್‌ನಿಂದ ಕೆ.ಆರ್.ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗವನ್ನು ಒಳಗೊಂಡಿದೆ. ಇದರೊಂದಿಗೆ ವಿಶ್ರಾಂತಿ ಕೊಠಡಿಗಳು, ಶೌಚಾಲಯಗಳು, ವ್ಹೀಲ್‌ಚೇರ್ ರಾರಯಂಫ್ಸ್ ಮತ್ತು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ.
ಕಲಾಸಿಪಾಳ್ಯ ಬಸ್ ನಿಲ್ದಾಣದಿಂದ 18 ಬಿಎಂಟಿಸಿ(BMTC) ಬಸ್‌ಗಳು ಮತ್ತು ಆರು ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಬಹುದಾಗಿದೆ. ದಿನಕ್ಕೆ 1047 ಬಸ್‌ಗಳ ವೇಳಾಪಟ್ಟಿಅಥವಾ 6 ಸಾವಿರ ಟ್ರಿಪ್‌ಗಳನ್ನು ಟಿಟಿಎಂಸಿ ಬಸ್ ನಿಲ್ದಾಣದಿಂದ ಮಾಡಬಹುದಾಗಿದೆ. ಇಲ್ಲಿ ಕೆಎಸ್‌ಆರ್‌ಟಿಸಿ ಬಸ್ ಕಾಯ್ದಿರಿಸುವ ಕೌಂಟರ್‌ಗಳು, ಬಿಎಂಟಿಸಿ ವ್ಯವಸ್ಥಾಪಕ ಮತ್ತು ಸಿಬ್ಬಂದಿ ಹಾಗೂ ವಿಚಾರಣೆ ಕೇಂದ್ರಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.
7 ವರ್ಷಗಳ ನಂತರ ಉದ್ಘಾಟನೆಗೆ ಸಿದ್ಧಗೊಂಡ ಕಲಾಸಿಪಾಳ್ಯ ಬಸ್ ಟರ್ಮಿನಲ್: ಹೆಚ್ಚುವರಿ ಸೌಲಭ್ಯ ಕಾಮಗಾರಿ ಬಾಕಿ
ಬಿಎಂಟಿಸಿ ಬಸ್ ಕಾರ್ಯಾಚರಣೆ
- ಟಿಟಿಎಂಸಿ ಬಸ್ ನಿಲ್ದಾಣ: ಹೊಸೂರು, ಸರ್ಜಾಪುರ, ಬನ್ನೇರುಘಟ್ಟ, ಕನಕಪುರ ರಸ್ತೆ, ಜಂಬೋ ಸವಾರಿ ದಿಣ್ಣೆ, ಹುಳಿಮಾವು ಮತ್ತು ಜಯನಗರ ಕಡೆಗೆ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ.
- ಮೇಲ್ಸೇತುವೆ ಕೆಳಭಾಗದ ಬಸ್ ನಿಲ್ದಾಣ: ಯಲಹಂಕ, ನೆಲಮಂಗಲ, ಆರ್‌ಟಿ ನಗರ, ಶಿವಾಜಿನಗರ, ಮಾರತ್ತಹಳ್ಳಿ ಮತ್ತು ಹೊಸಕೋಟೆ ಕಡೆಗೆ ಸಂಚರಿಸಲಿವೆ.
- ವಿಕ್ಟೋರಿಯ ಆಸ್ಪತ್ರೆ ನಿಲ್ದಾಣ: ಮೈಸೂರು ರಸ್ತೆ, ಮಾಗಡಿ ರಸ್ತೆ ಕಡೆಗೆ ಬಸ್‌ಗಳು ಸಂಚರಿಸಲಿವೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ.