‘ನ.15ರಂದು ದೆಹಲಿಗೆ ತೆರಳುತ್ತಿದ್ದು, ಭೇಟಿಗೆ ಸಮಯ ಕೊಟ್ಟರೆ ಹೈಕಮಾಂಡ್ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಜೊತೆ ಸಂಪುಟ ಪುನಾರಚನೆ ಕುರಿತು ಚರ್ಚೆ ನಡೆಸುವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರು (ನ.12): ‘ನ.15ರಂದು ದೆಹಲಿಗೆ ತೆರಳುತ್ತಿದ್ದು, ಭೇಟಿಗೆ ಸಮಯ ಕೊಟ್ಟರೆ ಹೈಕಮಾಂಡ್ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಜೊತೆ ಸಂಪುಟ ಪುನಾರಚನೆ ಕುರಿತು ಚರ್ಚೆ ನಡೆಸುವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ದೆಹಲಿ ಭೇಟಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಹಿರಿಯ ನಾಯಕ ಕಪಿಲ್ ಸಿಬಲ್ ಅವರ ಕಾರ್ಯಕ್ರಮ ಇದೆ. ಅದಕ್ಕಾಗಿ ನ.15ಕ್ಕೆ ದೆಹಲಿಗೆ ಹೋಗುತ್ತೇನೆ. ಆವತ್ತೇ ಹೋಗಿ, ಅವತ್ತೇ ವಾಪಸ್ ಬರುವ ಪ್ಲ್ಯಾನ್ ಇದೆ. ಒಂದು ವೇಳೆ, ರಾಹುಲ್ ಗಾಂಧಿಯವರು ಭೇಟಿಗೆ ಸಮಯ ಕೊಟ್ಟರೆ ಅಲ್ಲೇ ಉಳಿದುಕೊಂಡು, ಅವರನ್ನು ಭೇಟಿ ಮಾಡಿ ಬರುತ್ತೇನೆ. ಪಕ್ಷದ ಹೈಕಮಾಂಡ್, ರಾಹುಲ್ ಗಾಂಧಿ ಅವರು ಭೇಟಿಗೆ ಸಮಯ ಸಿಕ್ಕರೆ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡುತ್ತೇನೆ. ಇಲ್ಲದಿದ್ದರೆ ಇಲ್ಲ’ ಎಂದು ಹೇಳಿದರು.

ಕೇಂದ್ರವೇ ತನಿಖೆ ಮಾಡಲಿ: ಚುನಾವಣೆ ವೇಳೆಯ ಬಾಂಬ್ ಬ್ಲಾಸ್ಟ್ ಗಳ ಬಗ್ಗೆ ಕೇಂದ್ರ ಸರ್ಕಾರವೇ ಹೇಳಬೇಕು. ಕೇಂದ್ರವೇ ತನಿಖೆ ನಡೆಸಿ ಉತ್ತರಿಸಲಿ‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ದೇಶದಲ್ಲಿ ಚುನಾವಣೆ ವೇಳೆಯಲ್ಲೇ ಏಕೆ ಬಾಂಬ್ ಬ್ಲಾಸ್ಟ್ ಗಳು ಆಗುತ್ತಿವೆ? ದೆಹಲಿ ಬ್ಲಾಸ್ಟ್ ಬಿಹಾರ ಚುನಾವಣೆ ವೇಳೆ ಪ್ರಭಾವ ಬೀರುತ್ತದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೆಹಲಿ ಬ್ಲಾಸ್ಟ್ ಇವತ್ತಿನ ಬಿಹಾರ ಚುನಾವಣೆಯ ಮೇಲೆ ಪ್ರಭಾವ ಬೀರಬಹುದು. ಬಾಂಬ್ ಬ್ಲಾಸ್ಟ್ ಗಳು ಆಗಬಾರದು. ಅಮಾಯಕರ ಜೀವಹಾನಿ ಬೇಸರದ ಸಂಗತಿ. ಬಾಂಬ್ ಸ್ಫೋಟದಲ್ಲಿ ಅಮಾಯಕ ಜನ ಸತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಯಾಕೆ ಆಗುತ್ತೆ ಗೊತ್ತಿಲ್ಲ. ಭದ್ರತಾ ವೈಫಲ್ಯ ಬಗ್ಗೆ ನಂಗೆ ಗೊತ್ತಿಲ್ಲ. ಭದ್ರತಾ ವೈಫಲ್ಯದ ತನಿಖೆಗೆ ಆಗಲಿ. ಇದು ಬಿಜೆಪಿ ವಿರುದ್ಧವಾಗಿ ಚುನಾವಣೆಯಲ್ಲಿ ಪ್ರಭಾವ ಬೀರುತ್ತದೆ ಎಂದು ಅವರು ಹೇಳಿದರು.

ಭಾರತ ಎಂದೂ ಹಿಂದು ರಾಷ್ಟ್ರ ಆಗೋಲ್ಲ

ಭಾರತ ಹಲವಾರು ಭಾಷೆ, ಸಂಸ್ಕೃತಿಯನ್ನು ಒಳಗೊಂಡ ಬಹುತ್ವ ದೇಶ. ಹೀಗಾಗಿ, ಭಾರತ ಹಿಂದೂ ರಾಷ್ಟ್ರವಾಗಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರತಿಪಾದಿಸಿದ್ದಾರೆ. ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ದೇಶದ 140 ಕೋಟಿ ಜನರು ಮನಸ್ಸು ಮಾಡಿದರೆ ಭಾರತ ನಾಳೆ ಬೆಳಗ್ಗೆಯೇ ಹಿಂದೂ ರಾಷ್ಟ್ರ ಆಗುತ್ತದೆ ಎಂಬ ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿಕೆಗೆ ತಿರುಗೇಟು ನೀಡಿ, ಭಾರತ ಬಹುತ್ವದಿಂದ ಕೂಡಿದ ದೇಶ. ಆದರೆ, ಆರ್‌ಎಸ್‌ಎಸ್‌ ಮತ್ತು ಜನಸಂಘ ಹಿಂದಿನಿಂದಲೂ ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕು ಎಂದು ಹೇಳುತ್ತಿವೆ. ಆದರೆ ಅದು ಎಂದಿಗೂ ಸಾಧ್ಯವಿಲ್ಲ ಎಂದರು. ನಮ್ಮ ದೇಶದಲ್ಲಿ ಎಲ್ಲಾ ಜಾತಿ, ಧರ್ಮದವರು ಇದ್ದಾರೆ. ಹಲವಾರು ಭಾಷೆ, ಸಂಸ್ಕೃತಿಯನ್ನು ಒಳಗೊಂಡ ಬಹುತ್ವ ದೇಶ ಇದು. ಇಲ್ಲಿ ಒಂದೇ ತರಹದ ಜನರು ಇಲ್ಲ, ಎಲ್ಲರನ್ನೂ ಒಳಗೊಂಡ ದೇಶ ಇದಾಗಿರುವುದರಿಂದ ಭಾರತ ಒಂದು ಧರ್ಮದ ದೇಶ ಆಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.