ಕೊರೋನಾ ವಿರುದ್ಧ ಹಗಲಿರುಳು ಹೋರಾಡುತ್ತಿರುವ ಕಲಬುರಗಿ ಜಿಲ್ಲಾಧಿಕಾರಿ ದಿಢೀರ್ ಎತ್ತಂಗಡಿ...!
ದಿನದಿಂದ ದಿನಕ್ಕೆ ಕಲಬುರಗಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು,ಇದನ್ನು ತಡೆಗಟ್ಟುಲು ಜಿಲ್ಲಾಧಿಕಾರಿ ಶರತ್ ಹಗಲು ರಾತ್ರಿ ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಡಿಸಿ ಶರತ್ ಅವರನ್ನು ರಾಜ್ಯ ಸರ್ಕಾರ ದಿಢೀರ್ ಎತ್ತಂಗಡಿ ಮಾಡಿದೆ.
ಬೆಂಗಳೂರು, (ಏ.28): ಕಲಬುರಗಿಯಲ್ಲಿ ಕೊರೋನಾ ರಣಕೇಕೆ ಹಾಕುತ್ತಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಿ. ಶರತ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜಿಲ್ಲಾಧಿಕಾರಿ ಬಿ. ಶರತ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ ಇಂದು (ಮಂಗಳವಾರ) ರಾಜ್ಯ ಸರ್ಕಾರ ದಿಢೀರ್ ಆದೇಶ ಹೊರಡಿಸಿದೆ.
ಕೊರೋನಾ ಕಂಟ್ರೋಲ್ ಹೇಗೆ ಮಾಡ್ಬೇಕು? ಕಲಬುರಗಿ ಡಿಸಿ ನೋಡಿ ಕಲಿತುಕೊಳ್ಳಿ
ಇನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಸುರಾರ್ಲಕರ್ ವಿಕಾಸ್ ಕಿಶೋರ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಲಬುರಗಿ ಜಿಲ್ಲಾಧಿಕಾರಿಯನ್ನಾಗಿ ನೇಮಿಸಲಾಗಿದೆ.
ಶರತ್ ಅವರನ್ನು ಮುಂದಿನ ಆದೇಶದವೆರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಿಸಲಾಗಿದೆ ಎಂದು ರಾಜ್ಯ ಸರಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ದೇಶದಲ್ಲಿ ಮೊದಲ ಸಾವಾಗಿರುವ ಜಿಲ್ಲೆಯಲ್ಲಿ ಕೊರೋನಾ ತಡೆಗಟ್ಟಲು ಶರತ್ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದ್ರೆ, ಇದರ ನಡುವೆಯೂ ರಾಜ್ಯ ಸರ್ಕಾರ ಶರತ್ ಅವರನ್ನು ಏಕಾಏಕಿ ಟ್ರಾನ್ಸ್‌ಫರ್ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.
ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು,ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಶರತ್ ಹಗಲು ರಾತ್ರಿ ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಡಿಸಿ ಶರತ್ ಅವರನ್ನು ವರ್ಗಾವಣೆಗೊಳಿಸಿದ್ದು, ಎಷ್ಟರ ಮಟ್ಟಿಗೆ ಸರಿ ಎಂದು ಕಲಬುರಗಿ ಜನತೆ ಅಸಮಾಧಾನ ಹೊರ ಹಾಕಿದ್ದಾರೆ.