ಕಲಬುರಗಿ ಜಿಲ್ಲೆಯ ತೆಂಗಳಿ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಗ್ರಾಮಸ್ಥರು ಪಂಚಾಯ್ತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಪಂಚಾಯತ್ ಅಧ್ಯಕ್ಷೆ ಮತ್ತು ಪಿಡಿಓ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕಲಬುರಗಿ, (ನ.06): ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ತೆಂಗಳಿ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದಿದ್ದು, ಪಂಚಾಯ್ತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.

ನಕಲಿ ಬಿಲ್ ಸೃಷ್ಟಿ ಲಕ್ಷಾಂತರ ರೂಪಾಯಿ ಹಣ ಗುಳುಂ:

ಪಂಚಾಯತ್ ಅಧ್ಯಕ್ಷೆ ಗುಂಡಿಬಾಯಿ ರಾಠೋಡ್ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಮಲ್ಲಿಕಾರ್ಜುನ ಶರ್ಮಾ ಅವರ ವಿರುದ್ಧ ಗ್ರಾಮಸ್ಥರು ಕೋಪಗೊಂಡಿದ್ದು, ಬೆಳಗ್ಗೆಯಿಂದಲೇ ಪಂಚಾಯತಿ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಚಾಯತಿ ಯೋಜನೆಗಳಲ್ಲಿ ಕೆಲಸ ಮಾಡದೇ, ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿಗಳನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿವೆ.

ಕ್ರಮ ಜರುಗಿಸುವವರೆಗೆ ಪ್ರತಿಭಟನೆ ಮುಂದುವರಿಯುತ್ತೆ:

ನಮ್ಮ ಗ್ರಾಮದ ಅಭಿವೃದ್ಧಿ ಯೋಜನೆಗಳ ಹಣವನ್ನು ನಕಲಿ ದಾಖಲೆ ಸೃಷ್ಟಿಸಿ ಪಂಚಾಯತ್ ಅಧ್ಯಕ್ಷೆ ಗುಂಡಿಬಾಯಿ ರಾಠೋಡ್ ಮತ್ತು ಪಿಡಿಓ ಮಲ್ಲಿಕಾರ್ಜುನ ದೋಚಿದ್ದಾರೆ. ಭ್ರಷ್ಟರ ವಿರುದ್ಧ ತಕ್ಷಣವೇ ಕ್ರಮ ಜರುಗಿಸಬೇಕು. ಇಲ್ಲದಿದ್ರೆ ಹೋರಾಟ ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ, ಪೊಲೀಸ್ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸಲು ಯತ್ನಿಸಿದ್ದಾರೆ. ಆದರೆ ಇಬ್ಬರ ವಿರುದ್ಧ ದೂರು ಕ್ರಮ ಆಗುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದ್ದಾರೆ.