ಯಾದಗಿರಿಯ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಕೆಮಿಕಲ್ ಕಂಪನಿಗಳ ವಿಷಕಾರಿ ಹೊಗೆ ಮತ್ತು ತ್ಯಾಜ್ಯದಿಂದ ಸುತ್ತಮುತ್ತಲಿನ ಗ್ರಾಮಗಳ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಾಜಕಾರಣಿಗಳ ಕಪ್ಪುಹಣದ ಹೂಡಿಕೆಯಿಂದಾಗಿ ಈ ಕೈಗಾರಿಕೆಗಳು ಪರಿಸರ ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂಬ ಆರೋಪಗಳಿವೆ. 

ಯಾದಗಿರಿ (ಜೂ.30): ರಾಜಕಾರಣಿಗಳ ಕಪ್ಪುಹಣವೇ ಕೆಲವು ಕೈಗಾರಿಕೆಗಳಿಗೆ ಬಂಡವಾಳವಾಗಿರುತ್ತದೆ. ಹೀಗಾಗಿ, ಇಂತಹ ಕಂಪನಿಗಳ ವಿರುದ್ಧ ಕ್ರಮಕ್ಕೆ ಅಧಿಕಾರಿಗಳು ಮೀನಾಮೇಷ ಎಣಿಸುವುದರಿಂದ, ವಿಷಗಾಳಿ ದುರ್ನಾತಕ್ಕೆ ಕಾರಣವಾಗುವ ಕೈಗಾರಿಕೋದ್ಯಮಿಗಳ ಅಟ್ಟಹಾಸ ಮುಂದುವರೆದಿರುತ್ತದೆ.

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಅನಾರೋಗ್ಯಕರ ವಾತಾವರಣ ಕುರಿತು ನೋವು ಹೊರಹಾಕುವ ಸೈದಾಪುರದ ವೆಂಕಟೇಶ, ಇಲ್ಲಿ ಜನಸಾಮಾನ್ಯರ ಬದುಕು ಹೀನಾಯವಾಗಿದೆ. ಇದ ತಡೆಗಟ್ಟಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದರೆ ರಾಜಕೀಯ ಪರೋಕ್ಷ ಅಥವಾ ನೇರವಾದ ಪಾಲುದಾರಿಕೆ ಅಧಿಕಾರಿಗಳ ಕೈಕಟ್ಟಿ ಹಾಕಿದಂತಿದೆ. ಇಂಡಸ್ಟ್ರಿಯಲ್‌ ಫ್ರೆಂಡ್ಲೀ ರಾಜಕಾರಣಿಗಳು, ಅಭಿವೃದ್ಧಿ ಹೆಸರಲ್ಲಿ ಜನರ ಸಾವುನೋವುಗಳಿಗೆ ಸದ್ದಿಲ್ಲದೆ ಕಾರಣರಾಗಿ, ತಮ್ಮ ಆಸ್ತಿಪಾಸ್ತಿ ಹೆಚ್ಚಿಸಿಕೊಳ್ಳುತ್ತಾರೆ ಅವರ ಅಂಬೋಣ.

-ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಿದ ಬಹುಪಾಲು ಕಂಪನಿಗಳು ರಾಜಕಾರಣಿಗಳ ಸಂಬಂಧಿಕರ ಮತ್ತು ಹಿಂಬಾಲಕರ ಕಂಪನಿಗಳಾಗಿವೆ ಎನ್ನುತ್ತಿದ್ದಾರೆ. ಅದಕ್ಕಾಗಿ ಈ ಕಂಪನಿಗಳು ಪರಿಸರದ ನಿಯಮಗಳನ್ನು ಗಾಳಿಗೆ ತೂರಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಈ ಅನುಮಾನಕ್ಕೆ ಪುಷ್ಟಿ ನೀಡಿದೆ. ಎಲ್ಲ ಪಕ್ಷದ ನಾಯಕರು ಇಲ್ಲಿ‌ನ ಜನರ ಪ್ರಾಣದ ಮೇಲೆ ಹಣ ಗಳಿಸುವ ಕಾರ್ಯಕ್ಕೆ ಮುಂದುಗಾಗಿರುವುದು ದುರದೃಷ್ಟಕರ ಸಂಗತಿ. ದಯವಿಟ್ಟು ಈ ಭಾಗದ ಸಾಮಾಜಿಕ ಹೋರಾಟಗಾರರು, ಪರಿಸರವಾದಿಗಳು, ಕನ್ನಡಪರ ಸಂಘಟನೆಕಾರರು ಹಾಗೂ ರೈತರು ಒಗ್ಗೂಡಿ ಹೋರಾಟ ಮಾಡಿದಾಗ ಮಾತ್ರ ನಮಗೆ ಶಾಶ್ವತ ಪರಿಹಾರ ಸಿಗುವುದು ಖಚಿತ, ಇಲ್ಲದಿದ್ದರೆ ನಮ್ಮ ಪ್ರಾಣ ಕಳೆದುಕೊಳ್ಳುವುದು ಖಂಡಿತ.- ಮಹೇಶ ಬಾಗ್ಲಿ, ಸೈದಾಪುರ

ಈ ಪ್ರದೇಶದ ಸುತ್ತಮುತ್ತಲಿನ ಸುಮಾರು 10 ರಿಂದ 15 ಕಿ.ಮೀ ವರೆಗಿನ ಗ್ರಾಮಗಳ ಜನರಿಗೆ, ಇಲ್ಲಿರುವ ಕೆಮಿಕಲ್ ಕಂಪನಿಗಳು ಹೊರಬಿಡುತ್ತಿರುವ ವಿಷಗಾಳಿ ಮತ್ತು ತ್ಯಾಜ್ಯ ದುರ್ನಾತದಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ, ಈ ಬಗ್ಗೆ ಅನೇಕರು ಅಧಿಕಾರಿಗಳ ಗಮನಕ್ಕೂ ತಂದರೂ‌ ಯಾವುದೇ ಪ್ರಯೋಜನವಾಗುತ್ತಿಲ್ಲ. ಮತ್ತು ಇದ್ಯಾವುದಕ್ಕೂ ಕ್ಯಾರೆ ಎನ್ನವ ಮನಸ್ಥಿತಿಗೆ ಇಲ್ಲಿನ ಉದ್ಯಮಿಗಳು ಹೋಗಿದ್ದಾರೆ. ಏಕೆಂದರೆ ಕೆಲ ರಾಜಕಾರಣಿಗಳ ಸಂಬಂಧಿಕರು ಇವುಗಳಲ್ಲಿ ಭಾಗಿಯಾಗಿದ್ದಾರೆ, ಇಲ್ಲಿನ ಜನರು ಎಷ್ಟೇ ಪ್ರಯತ್ನ ಪಟ್ಟುರು ಯಾವುದೇ ಪ್ರಯೋಜನವಾಗುವುದಿಲ್ಲ ಎನ್ನುತ್ತಾರೆ ಕೆಲ ಅಧಿಕಾರಿಗಳು.

- ಬಸವಲಿಂಗಪ್ಪ ಗೊಬ್ಬೂರು, ಸೈದಾಪುರ

ಕಡೇಚೂರು -ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಿದ ಸುಮಾರು 27 ಕಂಪನಿಗಳಿಗೆ ಕಾರಣ ಕೇಳಿ ಜಿಲ್ಲಾಡಳಿತ ನೋಟಿಸ್ ನೀಡಿತ್ತು. ಒಂದು ಕಂಪನಿಗೆ ಮಾತ್ತ ಬೀಗ ಹಾಕಿರುವುದು ಸ್ವಾಗತ. ಆದರೆ, ಇಲ್ಲಿಯವರೆಗೂ ಇನ್ನುಳಿದ ಕಂಪನಿಗಳಿಗೆ ಏನು ಮಾಡಿದೆ ಎಂಬುವುದನ್ನು ಜನರಿಗೆ ತಿಳಿಸುವ ಕಾರ್ಯ ಮಾಡಬೇಕು. ಅಲ್ಲದೆ, ಇನ್ನೂ ಸುಮಾರು 30ಕ್ಕೂ ಹೆಚ್ಚು ಕೆಮಿಕಲ್ ಕಂಪನಿಗಳು ಬರುತ್ತದೆ ಎಂದು ಹೇಳುತ್ತಿದ್ದಾರೆ , ಅವುಗಳು ಬಂದರೆ ಸರಿ ಸುಮಾರು 10 ರಿಂದ15 ಗ್ರಾಮಗಳ ಜನರು ಬದುಕುವದಕ್ಕೆ ಆಗುವುದಿಲ್ಲ. ದಯವಿಟ್ಟು ನಮ್ಮ ಜನರು ಈಗಾಲಾದರೂ ಎಚ್ಚೆತುಕೊಳ್ಳಬೇಕು. ಇವುಗಳ ಬಗ್ಗೆ ನಮ್ಮ ಭಾಗದ ಎಲ್ಲ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ‌ ಸೇರಿ ಉಗ್ರವಾದ ಹೋರಾಟ ಸಿದ್ದರಾಗಬೇಕು.. ಜನರ ಇಲ್ಲದಿದ್ದರೆ ನಿಮ್ಮ ಭವಿಷ್ಯವು ಇಲ್ಲದಾಗುತ್ತದೆ.

- ದಾವಿದ್ ಸದಸ್ಯ, ಗ್ರಾ.ಪಂ ಬೆಳಗುಂದಿ.