ಬಸವ ತತ್ವದ ಅನುಯಾಯಿಗಳನ್ನು 'ತಾಲಿಬಾನಿಗಳು' ಎಂದು ಕರೆದ ಕನ್ಹೇರಿ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಡಾ. ಚನ್ನಬಸವಾನಂದ ಸ್ವಾಮೀಜಿ, ಕನ್ಹೇರಿ ಶ್ರೀಗಳನ್ನು 'ಕಾಡು ಪ್ರಾಣಿ' ಎಂದು ಜರಿದಿದ್ದು, ಹೇಳಿಕೆ ಹಿಂಪಡೆಯದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಬೀದರ್ (ಡಿ.01): ಬಸವ ತತ್ವದ ಅನುಯಾಯಿಗಳನ್ನು 'ತಾಲಿಬಾನಿಗಳು' ಎಂದು ಕನ್ಹೇರಿ ಕಾಡಸಿದ್ದೇಶ್ವರ ಸ್ವಾಮೀಜಿ ನೀಡಿದ ವಿವಾದಾತ್ಮಕ ಹೇಳಿಕೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅವರನ್ನು ಸ್ವಾಮೀಜಿಗಳು ಅನ್ನಲು ನಮಗೆ ನಾಚಿಕೆ ಆಗುತ್ತದೆ. ಅವರು ಕಾಡಸಿದ್ದೇಶ್ವರ ಸ್ವಾಮೀಜಿ ಅಲ್ಲ, ಅದು ಕಾಡು ಪ್ರಾಣಿ' ಎಂದು ಡಾ. ಚನ್ನಬಸವಾನಂದ ಸ್ವಾಮೀಜಿ ಎಂದು ಹೇಳಿದ್ದಾರೆ.
ಬೀದರ್‌ನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಚನ್ನಬಸವಾನಂದ ಸ್ವಾಮೀಜಿ, ಅವರು ಕಾಡಸಿದ್ದೇಶ್ವರ ಸ್ವಾಮೀಜಿಯವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಆ ಪದ ಬಳಸಲು ಅವರು ಅಯೋಗ್ಯರು. 'ಅವರನ್ನು ಸ್ವಾಮೀಜಿಗಳು ಅನ್ನಲು ನಮಗೆ ನಾಚಿಕೆ ಆಗುತ್ತದೆ. ಅವರು ಕಾಡಸಿದ್ದೇಶ್ವರ ಸ್ವಾಮೀಜಿ ಅಲ್ಲ, ಅದು ಕಾಡು ಪ್ರಾಣಿ. ಅವರ ನಾಲಿಗೆಗೆ ಸಂಸ್ಕಾರ ಇಲ್ಲ. ಬಾಯಿ ಬಿಚ್ಚಿದರೆ ಮುತ್ತುಗಳೇ ಉದುರುತ್ತವೆ. ಆ ತರಹ ಬೈಗುಳಗಳನ್ನು ಬೈಯ್ತಾರೆ. ಇಂತಹವರು ಕಾವಿ ಬಟ್ಟೆ ಹಾಕಲು ಅಯೋಗ್ಯರು, ನಾಲಾಯಕರಾಗಿದ್ದಾರೆ' ಎಂದು ಖಂಡಿಸಿದರು.
ಮನುವಾದಿಗಳನ್ನು ಮೆಚ್ಚಿಸಲು ಬೈಯ್ತಿದ್ದಾರೆ
ಕನ್ಹೇರಿ ಸ್ವಾಮೀಜಿ ಪದೇ ಪದೇ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದರ ಹಿಂದೆ ರಾಜಕೀಯ ದುರುದ್ದೇಶವಿದೆ. ಅವರು ಮನುವಾದಿಗಳನ್ನು ಮೆಚ್ಚಿಸಲು ಬಸವ ತತ್ವದವರಿಗೆ ಬೈಯುತ್ತಿದ್ದಾರೆ. ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದವರು ಮನುವಾದಿಗಳು ಮತ್ತು ಬಸವ ತತ್ವದ ವಿರೋಧಿಗಳು. ಇವರಿಗೆ ಸಂತೋಷಪಡಿಸಲು ಕನ್ಹೇರಿ ಶ್ರೀ ಪದೇ ಪದೇ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಜೊತೆಗೆ, 'ತಾಲಿಬಾನಿ' ಅಂದರೆ ಆ ಸ್ವಾಮೀಜಿಗೆ ಅರ್ಥವೂ ಗೊತ್ತಿಲ್ಲ ಎಂದು ಛೇಡಿಸಿದರು.
ಎಚ್ಚರಿಕೆಯಿಂದ ಇರಿ, ಇಲ್ಲದಿದ್ದರೆ ಹೋರಾಟ
ಈಗಾಗಲೇ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿರುವ ಮತ್ತು ಧಾರವಾಡಕ್ಕೆ ನಿರ್ಬಂಧಕ್ಕೊಳಗಾಗಿರುವ ಕನ್ಹೇರಿ ಸ್ವಾಮೀಜಿ ಈ ಕೂಡಲೇ ತಮ್ಮ ಹೇಳಿಕೆಗಳನ್ನು ಹಿಂಪಡೆಯಬೇಕು. ಬಸವಣ್ಣನವರ ಬಗ್ಗೆ ಮತ್ತೆ ನಾಲಿಗೆ ಹರಿಬಿಟ್ಟರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಜೊತೆಗೆ, ಸ್ವಾಮೀಜಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಬೇಕಾಗುತ್ತದೆ. ಕನ್ಹೇರಿ ಶ್ರೀ ಎಚ್ಚರಿಕೆಯಿಂದ ಇರಬೇಕು. ಬಾಯಿ ಹರಿಬಿಟ್ಟು ಅಶ್ಲೀಲ ಪದ ಬಳಸಿದರೆ, ಅದು ಅವರ ಸ್ವಾಮೀತ್ವಕ್ಕೆ ಹಾಗೂ ಕಾವಿ ಬಟ್ಟೆಗೆ ಮರ್ಯಾದೆ ಅಲ್ಲ' ಎಂದು ಕನ್ಹೇರಿ ಸ್ವಾಮೀಜಿಯವರಿಗೆ ಡಾ. ಚನ್ನಬಸವಾನಂದ ಸ್ವಾಮೀಜಿ ಖಡಕ್ ಎಚ್ಚರಿಕೆ ನೀಡಿದರು.


