ಪ್ರಧಾನಿ ನರೇಂದ್ರ ಮೋದಿಯವರು ಉಡುಪಿಯ ಲಕ್ಷಕಂಠ ಭಗವದ್ಗೀತಾ ಸಮಾವೇಶದಲ್ಲಿ ಪಾಲ್ಗೊಂಡು ಕೃಷ್ಣ ದರ್ಶನ ಪಡೆದರು. ಈ ಸಂದರ್ಭದಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಮೋದಿಯವರಿಗೆ 'ಭಾರತ ಭಾಗ್ಯವಿದಾತ' ಎಂಬ ಬಿರುದು ನೀಡಿ ಸನ್ಮಾನಿಸಿದರು.
ಉಡುಪಿ (ನ.28): ಲಕ್ಷಕಂಠ ಭಗವದ್ಗೀತಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಕರಾವಳಿಯ ಪುಣ್ಯಭೂಮಿ ಉಡುಪಿಗೆ ಆಗಮಿಸಿ ಕೃಷ್ಣದರ್ಶನ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ 'ಭಾರತ ಭಾಗ್ಯವಿದಾತ' ಬಿರುದು ನೀಡಿ ಸನ್ಮಾನ ಮಾಡಿದ್ದಾರೆ. ಲಕ್ಷಕಂಠ ಪಾರಾಣದಲ್ಲಿ ಭಾಗವಹಿಸಿ 7 ನಿಮಿಷಗಳ ಕಾಲ ಶ್ಲೋಕ ಪಠಣ ಮಾಡಿದ ನರೇಂದ್ರ ಮೋದಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವೇದಿಕೆ ಕಾರ್ಯಕ್ರಮದಲ್ಲಿಯೇ ಸುಗುಣೇಂಧ್ರ ಶ್ರೀ ಈ ಬಿರುದು ನೀಡಿ ಗೌರವಿಸಿದ್ದಾರೆ.
ಗೋಪಾಲಕೃಷ್ಣನ ಸೇವೆಗೆ ಗೋರಕ್ಷಣೆಯ ಅಗತ್ಯ ಇದೆ. ನರೇಂದ್ರ ಮೋದಿಯವರಿಂದ ಅದು ಆಗುತ್ತದೆ ಎಂದು ನಂಬಿದ್ದೇನೆ ಎಂದು ಹೇಳುವ ಮೂಲಕ ಗೋ ರಕ್ಷಣೆಯ ಕಾನೂನುಗಳನ್ನು ನೆನಪಿಸಿದರು.
ಶ್ರೀಕೃಷ್ಣನ ಬಳಿ ಮೋದಿ ಅರ್ಜುನನಾಗಿ ಬಂದಿದ್ದಾರೆ.
ಶ್ರೀ ಕೃಷ್ಣನ ಬಳಿ ಪ್ರಧಾನಿ ಮೋದಿ ಅರ್ಜುನನಾಗಿ ಬಂದಿದ್ದಾರೆ. ಅಯೋಧ್ಯೆಯಲ್ಲಿ ರಾಮನನ್ನು ಸ್ಥಾಪಿಸಿ ಕೃಷ್ಣನ ಕ್ಷೇತ್ರಕ್ಕೆ ಮೋದಿ ಆಗಮಿಸಿದ್ದಾರೆ. 14 ವರ್ಷದ ಮೇಲೆ ರಾಮ ಅಯೋಧ್ಯೆಗೆ ಮರಳಿದ್ದ. ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ 14 ವರ್ಷದ ಹಿಂದೆ ನರೇಂದ್ರ ಮೋದಿಯವರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಬಂದಿದ್ದರು ಆಗಲು ನಮ್ಮ ಪರ್ಯಾಯ ನಡೆಯುತ್ತಿತ್ತು. ನಮ್ಮದು ಇಂದ್ರ ಪರ್ಯಾಯ ನಾನು ಸುಗುಣೇಂದ್ರ ಅವರು ನರೇಂದ್ರ ಎಂದು ಹೇಳಿದರು.
ಶ್ರೀ ಕೃಷ್ಣನಲ್ಲಿ ನಾನು ಆರೋಗ್ಯ ಶಕ್ತಿಯನ್ನು ಅವರಿಗೆ ಬೇಡುತ್ತೇನೆ. ರಾಮ ಮಂದಿರವನ್ನು ಕೃಷ್ಣಮಠಕ್ಕೆ ಬಂದು ಕೃಷ್ಣಾರ್ಪಣೆ ಮಾಡಿದ್ದಾರೆ. ಭಗವದ್ಗೀತೆಯ ಎಲ್ಲಾ ಅಂಶವನ್ನು ನರೇಂದ್ರ ಮೋದಿ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಕೃಷ್ಣ ನಿಸ್ವಾರ್ಥ ಸೇವೆಯ ಬಗ್ಗೆ ಗೀತೆಯಲ್ಲಿ ಹೇಳಿದ್ದಾನೆ. ನರೇಂದ್ರ ಮೋದಿಯವರು ತನ್ನ ಕಾರ್ಯ ವೈಖರಿಯಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ಹೇಳಿದರು.
ಶ್ರೀ ಕೃಷ್ಣ ಮಠಕ್ಕೆ ಮೋದಿ ಆಗಮನ ನನಗೆ ಮಹಾನ್ ಸಂತೋಷವಾಗಿದೆ. ಧರ್ಮ ಸಂಸ್ಥಾಪನೆಗೆ ನಾನು ಮತ್ತೆ ಮತ್ತೆ ಅವತಾರಗಳನ್ನು ಎತ್ತಿ ಬರುತ್ತೇನೆ ಎಂದು ಕೃಷ್ಣ ಹೇಳಿದ್. ಶ್ರೀ ಕೃಷ್ಣನ ಸಂದೇಶವನ್ನು ಮೋದಿ ಪಾಲಿಸುತ್ತಾ ಬಂದಿದ್ದಾರೆ. ಧರ್ಮದಿಂದ ಜಗತ್ತು ರಕ್ಷಣೆ ದುಷ್ಟರ ಶಿಕ್ಷೆ ಎಂಬುದನ್ನು ಪಾಲಿಸುತ್ತಿದ್ದಾರೆ. ವಿಶ್ವಗೀತಾ ಪರ್ಯಾಯಕ್ಕೆ ವಿಶ್ವನಾಯಕ ಮೋದಿ ಬಂದಿದ್ದಾರೆ ಎಂದರು.
ಬೆಳ್ಳಿಯ ಕಡಗೋಲು ಉಡುಗೊರೆ
ಇದಕ್ಕೂ ಮುನ್ನ ಮೋದಿ ಅವರಿಗೆ ಶಾಲು ಹೊದಿಸಿ ಮಾಲಾರ್ಪಣೆ ಮಾಡಿ ಪುತ್ತಿಗೆ ಶ್ರೀಗಳು ಕಂಕಣ ಕಟ್ಟಿದರು. ರಾಷ್ಟ್ರ ರಕ್ಷಣೆಯ ಉದ್ದೇಶದಿಂದ ಮೋದಿಗೆ ಶ್ರೀಗಳು ರಕ್ಷೆ ಕಟ್ಟಿದ್ದಾರೆ. ಬೆಳ್ಳಿಯ ಕಡಗೋಲು ಸಹಿತ ಉಡುಪಿ ಕೃಷ್ಣನ ಭಾವಚಿತ್ರ ಉಡುಗೊರೆಯಾಗಿ ನೀಡಿದರು. ಬಳಿಕ ಪೇಟ ತೊಡಿಸಿ ಉಡುಪಿ ಪುತ್ತಿಗೆ ಶ್ರೀ ಗಳಿಂದ ಗೌರವ ನೀಡಲಾಯಿತು.
ವಿಶೇಷ ಪ್ರಸಾದ
ಶ್ರೀಕೃಷ್ಣ ಮಠದ ಒಳಗೆ ಪ್ರಧಾನಿ ನರೇಂದ್ರ ಮೋದಿಗೆ ಪರ್ಯಾಯ ಪುತ್ತಿಗೆ ಶ್ರೀಪಾದರು ವಿಶೇಷ ಪ್ರಸಾದಗಳನ್ನು ನೀಡಿದ್ದಾರೆ. ಮಾಧ್ವ ಸಂಪ್ರದಾಯಸ್ಥರು ಇರಿಸುವ ಅಂಗಾರಕ ಅಕ್ಷತೆ ತಿಲಕವನ್ನು ಮೋದಿಗೆ ಇರಿಸಲಾಯಿತು. ಬೆಳ್ಳಿಯ ತುಳಸಿ ಮಾಲೆಯನ್ನು ನೀಡಿದ ಸ್ವಾಮೀಜಿ, ಶ್ರೀ ಕೃಷ್ಣನ ವಿಶೇಷ ಪ್ರಸಾದ ಮತ್ತು ತೀರ್ಥವನ್ನು ನೀಡಿದರು.


