ದಾವಣಗೆರೆ(ಜೂ.16): ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ ಜು.2ರಂದು ಅಧಿಕಾರ ಸ್ವೀಕರಿಸಲಿದ್ದು, ಯಾವುದೇ ಕಾರಣಕ್ಕೂ ಈಗ ನಿಗದಿಯಾದ ಸಮಾರಂಭ ಮಾತ್ರ ಮುಂದಕ್ಕೆ ಹೋಗದು ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಡಿ.ಕೆ.ಶಿವಕುಮಾರ ಪದಗ್ರಹಣ ಸಮಾರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅನುಮತಿ ನೀಡಿದ್ದಾರೆ. ಲಕ್ಷಾಂತರ ಜನ ಸೇರುತ್ತಾರೆ ಎಂಬುದು ಸುಳ್ಳು. ಗ್ರಾಮೀಣ ಮಟ್ಟದಲ್ಲೂ ಕಾರ್ಯಕ್ರಮ ನಡೆಯುವುದರಿಂದ ಹೆಚ್ಚು ಜನರು ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದರು.

ಬಳ್ಳಾರಿ ಜಿಲ್ಲೆ ಲಕ್ಷ್ಮೀಪುರ ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್‌.ಯಡಿಯೂರಪ್ಪ ತುಂಬಾ ಕನಸಿಟ್ಟುಕೊಂಡು ಮುಖ್ಯಮಂತ್ರಿ ಆದರು. ಆದರೆ, ಸರ್ಕಾರದ ಖಜಾನೆಯಲ್ಲಿ ದುಡ್ಡೇ ಇಲ್ಲ. ಕೊರೋನಾದಿಂದಾಗಿ ಆರ್ಥಿಕ ವ್ಯವಸ್ಥೆಯೇ ಹದಗೆಟ್ಟಿದೆ. ಸರ್ಕಾರಿ ನೌಕರರಿಗೆ ವೇತನ ನೀಡುವುದಕ್ಕೂ ಸರ್ಕಾರದ ಬಳಿ ಹಣ ಇಲ್ಲ. ಕೆಲಸ ಮಾಡುತ್ತಿರುವ ಕೆಎಸ್‌ಆರ್‌ಟಿಸಿ ನೌಕರರಿಗೆ ವೇತನ ನೀಡಬೇಕು. ಸಾರಿಗೆ ಇಲಾಖೆ ನಷ್ಟವನ್ನು ಸರ್ಕಾರವೇ ಭರಿಸಬೇಕು ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದರು.

ಮತ್ತೆ ಲಾಕ್‌ಡೌನ್‌ ಸಾಧ್ಯವಿಲ್ಲ: ಸಚಿವ ಶ್ರೀರಾಮುಲು

ಎಂಎಲ್‌ಸಿ ಆಕಾಂಕ್ಷಿಗಳು ಬಹಳ:

ವಿಧಾನ ಪರಿಷತ್‌ಗೆ ಹೋಗುವ ಆಕಾಂಕ್ಷಿಗಳ ಪಟ್ಟಿಕಾಂಗ್ರೆಸ್‌ ಪಕ್ಷದಲ್ಲಿ ದೊಡ್ಡದಿದೆ. ರಾಷ್ಟ್ರೀಯ ಪಕ್ಷದಲ್ಲಿ ಇವೆಲ್ಲಾ ಸಹಜ. ಪಕ್ಷದ ನಾಯಕರೆಲ್ಲರೂ ಕುಳಿತು, ಚರ್ಚಿಸಿ, ಹೈಕಮಾಂಡ್‌ಗೆ ಪಟ್ಟಿಕಳಿಸುತ್ತೇವೆ. ಯಾರನ್ನು ಆಯ್ಕೆ ಮಾಡಬೇಕೆಂಬುದು ಹೈಕಮಾಂಡ್‌ಗೆ ಬಿಟ್ಟವಿಚಾರ ಎಂದು ಸಿದ್ದರಾಮಯ್ಯ ಹೇಳಿದರು.