ಬೆಂಗಳೂರು[ಜ.14]: ಏಸು ಪ್ರತಿಮೆ ವಿವಾದ ಬಿಜೆಪಿಗೆ ರಾಜ್ಯದಲ್ಲಿ ಸಂಘಟನೆ ದುರ್ಬಲವಾಗಿದ್ದ ಮತ್ತೊಂದು ಭಾಗದಲ್ಲಿ ಪಕ್ಷವನ್ನು ಅರಳಿಸಲು ಸಹಕಾರಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಪಾಲ ಬೆಟ್ಟದಲ್ಲಿ ಬೃಹತ್‌ ಏಸು ಪ್ರತಿಮೆ ಸ್ಥಾಪಿಸಲು ಮುಂದಾಗಿರುವ ಸ್ಥಳೀಯ ಶಾಸಕ ಹಾಗೂ ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌ ಅವರ ಕ್ರಮವನ್ನು ವಿರೋಧಿಸಿ ದೊಡ್ಡ ಮಟ್ಟದಲ್ಲಿ ಮತ್ತು ಹಂತ ಹಂತವಾಗಿ ಹೋರಾಟ ನಡೆಸುವ ಮೂಲಕ ಬಿಜೆಪಿಯು ಆ ಭಾಗದಲ್ಲಿ ಪಕ್ಷಕ್ಕೆ ಅಸ್ತಿತ್ವ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ.

ಬಿಜೆಪಿಯು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ತನ್ನ ಸಂಘಟನೆಯನ್ನು ಬಲಪಡಿಸಲು ಪ್ರಯತ್ನಿಸಿ ಯಶಸ್ವಿಯಾಗಿದ್ದರೂ ಹಳೆ ಮೈಸೂರು ಭಾಗದ ಅದರಲ್ಲೂ ಒಕ್ಕಲಿಗ ಪ್ರಾಬಲ್ಯ ಹೊಂದಿರುವ ಕೆಲವು ಜಿಲ್ಲೆಗಳಲ್ಲಿ ಇನ್ನೂ ಯಶಸ್ವಿಯಾಗಿಲ್ಲ. ಹೀಗಾಗಿ ನಿಧಾನವಾಗಿ ಅಲ್ಲೂ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆ ಪೈಕಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾಸನದಲ್ಲಿ ಮತ್ತು ಇತ್ತೀಚಿನ ಉಪಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆಯಲ್ಲಿ ಪಕ್ಷದ ಬಾವುಟ ಹಾರಿಸುವ ಮೂಲಕ ತನ್ನ ನೆಲೆ ಕಂಡುಕೊಂಡಿದೆ.

ಬಿಜೆಪಿ ಪ್ರತಿಭಟನೆಯಿಂದ ಗಡಗಡ ನಡುಗುತ್ತಿದ್ದೇನೆ: ಡಿಕೆಶಿ ವ್ಯಂಗ್ಯ

ಆದರೆ, ರಾಮನಗರದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವಿನ ಅಬ್ಬರದ ನಡುವೆ ಬಿಜೆಪಿಯ ಧ್ವನಿಯೇ ಕೇಳಿಬರುತ್ತಿರಲಿಲ್ಲ. ಕಳೆದ ಉಪ ಚುನಾವಣೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತದಾನಕ್ಕೆ ದಿನಗಣನೆ ಆರಂಭವಾದ ವೇಳೆ ಪಕ್ಷ ತೊರೆದು ವಾಪಸ್‌ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಅಷ್ಟರ ಮಟ್ಟಿಗೆ ಅಲ್ಲಿ ಪಕ್ಷದ ಸಂಘಟನೆ ದುರ್ಬಲವಾಗಿದೆ.

ಒಂದು ಕಡೆ ಜೆಡಿಎಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ. ಮತ್ತೊಂದು ಕಡೆ ಕಾಂಗ್ರೆಸ್ಸಿನ ಡಿ.ಕೆ.ಶಿವಕುಮಾರ್‌. ಇವರಿಬ್ಬರ ನಡುವೆ ಪಕ್ಷದ ನಾಯಕರು ನುಸುಳಿ ಸಂಘಟನೆ ಮಾಡುವುದೇ ದುಸ್ತರ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಬಲಗೊಳಿಸಲು ಸೂಕ್ತವಾದ ಸಂದರ್ಭ ಮತ್ತು ಪರಿಸ್ಥಿತಿಗಾಗಿ ಬಿಜೆಪಿ ನಾಯಕರು ಕಾಯುತ್ತಿದ್ದರು. ಹಿಂದೆ ಚಿಕ್ಕಮಗಳೂರು ಜಿಲ್ಲೆ ಹಾಗೂ ಸುತ್ತಲಿನ ಭಾಗದಲ್ಲಿ ದತ್ತಪೀಠದ ವಿಷಯ ಮುಂದಿಟ್ಟುಕೊಂಡು ಸತತ ಹೋರಾಟ ನಡೆಸಿದ್ದರಿಂದ ಮುಂದೆ ಆ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿಯೇ ಗೆದ್ದುಕೊಂಡಿತ್ತು. ಅಂಥದ್ದೇ ಸೂಕ್ಷ್ಮ ವಿಷಯ ಇದೀಗ ಬಿಜೆಪಿಗೆ ಲಭ್ಯವಾಗಿದೆ.

ಡಿಕೆ ಸಹೋ​ದ​ರ​ರ ವಿರುದ್ಧ ಮತಾಂತರದ ಗಂಭೀರ ಆರೋಪ

ಶಿವಕುಮಾರ್‌ ಅವರು ಕಪಾಲಬೆಟ್ಟದಲ್ಲಿ ಬೃಹತ್‌ ಏಸು ಪ್ರತಿಮೆ ಸ್ಥಾಪಿಸಲು ಕ್ರೈಸ್ತ ಸಂಘಟನೆಗೆ ಬೆಂಬಲ ನೀಡಿ ಒತ್ತಾಸೆಯಾಗಿ ನಿಂತ ಬೆನ್ನಲ್ಲೇ ಬಿಜೆಪಿ ನಾಯಕರು ವಾಗ್ದಾಳಿ ನಡೆಸುವ ಮೂಲಕ ವಿಷಯಕ್ಕೆ ಗಾಂಭೀರ್ಯ ನೀಡಿದರು. ಕೆಂಪೇಗೌಡ ಆಳ್ವಿಕೆ ನಡೆಸಿದ ಬೆಟ್ಟದಲ್ಲಿ ಏಸು ಬೇಕಾಗಿತ್ತಾ ಎಂಬ ಚರ್ಚೆಗೆ ನಾಂದಿ ಹಾಡಿದರು. ಅಲ್ಲಿಂದಾಚೆಗೆ ಅದು ಹಂತ ಹಂತವಾಗಿ ಬೆಳೆದು ಇದೀಗ ದೊಡ್ಡಮಟ್ಟದ ಹೋರಾಟಕ್ಕೆ ಚಾಲನೆ ಸಿಕ್ಕಂತಾಗಿದೆ. ಹಿಂದೂ ಪರ ಸಂಘಟನೆಗಳು ಇದನ್ನು ಗಂಭೀರವಾಗಿ ಪರಿಗಣಿಸಿ ವ್ಯಾಪಕ ಅಭಿಯಾನ, ಹೋರಾಟ ಆರಂಭಿಸಿವೆ. ಈ ಮೂಲಕ ರಾಮನಗರ ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರ ನೆಲೆ ಕಂಡುಕೊಳ್ಳುವ ಪ್ರಯತ್ನಕ್ಕೆ ವ್ಯವಸ್ಥಿತವಾಗಿ ಚಾಲನೆ ಸಿಕ್ಕಂತಾಗಿದೆ.