ಕೊಡಗಿನಲ್ಲಿ ಮಾತನಾಡಿದ ಸಚಿವ ಎನ್.ಎಸ್. ಬೋಸರಾಜು, ಜೆಡಿಎಸ್‌ನವರಿಗೆ ಎಂದಿಗೂ ಒಳ್ಳೆಯ ಕಾಲ ಬರುವುದಿಲ್ಲ ಮತ್ತು ಅವರ ನಾಟಕ ಎಲ್ಲರಿಗೂ ತಿಳಿದಿದೆ ಎಂದು ಟೀಕಿಸಿದರು. ಅಲ್ಲದೆ, ರಾಷ್ಟ್ರಗೀತೆಗೆ ಅಗೌರವ ತೋರಿದ ರಾಜ್ಯಪಾಲರು ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ ಕೊಡಗು
ಕೊಡಗು(ಜ.26) : ರಾಜ್ಯದಲ್ಲಿ ಜೆಡಿಎಸ್ ನವರಿಗೆ ಸರ್ವೈವಲ್ ಕಾಲ, ಹೀಗಿರುವಾಗ ಅವರಿಗೂ ಯಾವಂತೂ ಒಳ್ಳೆಯ ಕಾಲ ಬರಲು ಸಾಧ್ಯವೇ ಇಲ್ಲ ಎಂದು ಸಣ್ಣ ನೀರಾವರಿ ಮತ್ತು ಕೊಡಗು ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಜೆಡಿಎಸ್ ವಿರುದ್ಧ ಕಿಡಿಯಾಗಿದ್ದಾರೆ.
ನಮ್ಮನ್ನು ರಾಜ್ಯ ಸರ್ಕಾರ ಕಣ್ಣೀರು ಹಾಕಿಸಿದೆ, ಮುಂದೆ ನಮಗೂ ಒಳ್ಳೆಯ ಕಾಲ ಬರುತ್ತದೆ. ಆಗ ನಾವು ಹೀಗೆ ಮಾಡುತ್ತೇವೆಂದು ಎಚ್ ಡಿಕೆ ಮತ್ತು ಎಚ್ ಡಿ ಡಿ ಹೇಳಿಕೆ ವಿಚಾರಕ್ಕೆ ಸಚಿವ ಬೋಸರಾಜ್ ಪ್ರತಿಕ್ರಿಯಿಸಿದರು.
ಕೊಡಗು ಜಿಲ್ಲಾಡಳಿತದಿಂದ ನಡೆದ 77 ನೇ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಹಿರಿಯರಾದ ಶ್ರೀಮಾನ್ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ನಾಟಕ ಎಲ್ಲರಿಗೂ ಗೊತ್ತಿರುವಂತಹದ್ದೇ. ಹಾಗಾಗಿ ಕೆಲವು ದಿವಸ ಅವರ ನಾಟಕ ನಡೆಯುತ್ತದೆ. ಸುಮ್ಮನೆ ಹೀಗೆ ಹೇಳಬೇಕು, ಹೇಳುತ್ತಾರೆ ಅಷ್ಟೇ. ಆದರೆ ಯಾವ ಕಾಲಕ್ಕೂ ಅವರಿಗೆ ಒಳ್ಳೆಯ ಕಾಲ ಬರುವುದಕ್ಕೆ ಸಾಧ್ಯವಿಲ್ಲ ಎಂದರು.
ಅವರು ಮಾಡಿರುವಂತಹ ತಪ್ಪುಗಳಿಗೆ ಒಳ್ಳೆಯ ಕಾಲ ಬರುವುದಿಲ್ಲ. ಕಾಂಗ್ರೆಸ್ ನಿಂದ ಪ್ರಧಾನ ಮಂತ್ರಿಯಾಗಿ ಕಾಂಗ್ರೆಸನ್ನೇ ತುಳಿಯುವುದಕ್ಕೆ ನೋಡಿದರು. ಹಾಗಾಗಿ ಅವರನ್ನು ಹಿಂದಕ್ಕೆ ಕಳುಹಿಸಿದ್ದು. ಕುಮಾರಸ್ವಾಮಿ ಅವರಿಗೂ ಕಾಂಗ್ರೆಸ್ ನವರು ಸಪೋರ್ಟ್ ಮಾಡಿದ್ರು. ಸಿಎಂ ಆದ ಮೇಲೆ ಅವರು ಕೂಡ ಅದೇ ರೀತಿ ನಡೆದುಕೊಂಡಿದ್ರು. ಹಾಗಾಗಿಯೇ ಅವರಿಂದ ವಿತ್ ಡ್ರಾ ಮಾಡಿ ಮನೆಗೆ ಕಳುಹಿಸಬೇಕಾಯಿತು. 2028 ಕ್ಕೆ ನೂರಕ್ಕೆ ನೂರಷ್ಟು ನಮ್ಮ ಸರ್ಕಾರ ಮತ್ತೆ ಬರುತ್ತದೆ. ಈಗ 140 ಇದ್ದೇವೆ ಮುಂದಿನ ಚುನಾವಣೆಯಲ್ಲಿ 148 ಸ್ಥಾನ ಪಡೆಯಲಿದ್ದೇವೆ, ಇದು ನಮ್ಮ ಸಮೀಕ್ಷೆ ಎಂದು ಸಚಿವ ಬೋಸರಾಜ್ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ಜಂಟಿ ಅಧಿವೇಶನದಲ್ಲಿ ಭಾಷಣ ಮಾಡದೆ ಹೊರಟ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ರಾಷ್ಟ್ರಗೀತೆ ಹಾಡುತ್ತಿರುವಾಗಲೇ ರಾಜ್ಯಪಾಲರು ಅದನ್ನು ಗೌರವಿಸದೆ ಅಲ್ಲಿಂದ ಹೊರಟಿದ್ದು ಸಂವಿಧಾನಕ್ಕೆ ಮಾಡಿರುವ ಅಪಮಾನ ಎಂದು ಸಣ್ಣ ನೀರಾವರಿ ಸಚಿವ ಬೋಸರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ಉಭಯ ಸದನ ಗಳಲ್ಲಿ ರಾಷ್ಟ್ರಗೀತೆ ಹಾಡಲಾಗುತಿತ್ತು, ಈ ವೇಳೆ ಅವರು ನಿಲ್ಲದೆ ಹೊರಟು ಹೋದರು. ಇದು ಸಂವಿಧಾನಕ್ಕೆ ತೋರಿದ ಅಗೌರವ. ಇದರ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಯುತ್ತಿದೆ ಎಂದಿದ್ದಾರೆ. ಮನ್ರೇಗಾ ಕುರಿತು ಪ್ರಧಾನಿ ಮೋದಿಯವರು ಯಾವುದೇ ರಾಜ್ಯಗಳೊಂದಿಗೆ ಚರ್ಚಿಸಲಿಲ್ಲ. ಎನ್ ಡಿ ಎ ಭಾಗವಾಗಿರುವ ರಾಜ್ಯಗಳೊಂದಿಗೂ ಚರ್ಚೆ ಮಾಡಿಲ್ಲ. ಹೀಗಾಗಿಯೇ ಚಂದ್ರಬಾಬು ನಾಯ್ಡು ಅವರು ಕೂಡ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿ ತಮ್ಮ ಸರ್ವಾಧಿಕಾರಿ ಧೋರಣೆಯನ್ನು ಮುಂದುವರಿಸಿದ್ದಾರೆ. 2005 ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದರು. ಕಾಯ್ದೆ ಜಾರಿಗೆ ತರುವಾಗ ಎಲ್ಲಾ ರಾಜ್ಯಗಳೊಂದಿಗೆ ಚರ್ಚಿಸಿದ್ದರು. 6 ತಿಂಗಳ ಕಾಲ ವಿಸ್ತೃತ ಚರ್ಚೆ ಬಳಿಕ ಕಾಯ್ದೆ ಜಾರಿಗೆ ತಂದರು. ಆದರೆ ಪ್ರಧಾನಿ ಮೋದಿ ಅವರು ಹಾಗೆ ಮಾಡುತ್ತಿಲ್ಲ. ರಾಜ್ಯಗಳು 40 ರಷ್ಟು ಅನುದಾನ ಕೊಡಬೇಕಾದರೆ ಚರ್ಚಿಸಬೇಕಾಗಿತ್ತು. ಇಂತಹ ವಿಷಯಗಳನ್ನು ರಾಜ್ಯಪಾಲರ ಭಾಷಣದಲ್ಲಿ ಬರೆಯಲಾಗಿತ್ತು. ಆದರೆ ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ನಡೆದುಕೊಂಡರು.
ಸಂವಿಧಾನದ 163 ಮತ್ತು 176 ನಿಯಮಗಳ ಪ್ರಕಾರ ರಾಜ್ಯಪಾಲರು ಭಾಷಣ ಓದಬೇಕಾಗಿತ್ತು. ಅದನ್ನು ಅವರು ಉಲ್ಲಂಘನೆ ಮಾಡಿದರು. ಇದಕ್ಕೆ ಉತ್ತರಿಸುವಂತೆ ಆಗ್ರಹಿಸಿದ್ದೇವೆ, ಇದುವರೆಗೆ ಉತ್ತರಿಸಿಲ್ಲ ಎಂದು ಸಚಿವ ಭೋಸರಾಜ್ ಹೇಳಿದರು.


